ಪುಷ್ಪಾ..ಪುಷ್ಪಲತಾ…ಪ್ಲವರ್ ನಹೀ ಫೈಯರ್…!! ನಕಲಿ ಫೈಯರ್ ಹಿಂದಿನ ಅಸಲಿ ಕಹಾನಿ…!!

ರಣಬೇಟೆ ನ್ಯೂಸ್ ಕೊಪ್ಪಳ ಜೂ.20:

ತಾಲೂಕಿನ ಹಿರೇಸಿಂಧೋಗಿ ಬಳಿಯ ಮರಳು ಅಕ್ರಮ ಗಣಿಗಾರಿಕೆ ಅಡ್ಡೆಗಳ ಮೇಲೆ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳ ನೇತೃತ್ವದಲ್ಲಿ ಬುಧವಾರ ತಡರಾತ್ರಿ ನಡೆದ ದಾಳಿಯು ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬಿಂದಾಸ್ ಆಗಿ ನಡೆಯುತ್ತಿದ್ದ ಈ ಅಕ್ರಮ ದಂಧೆಯ ಬಗ್ಗೆ ಅರಿವು ಇದ್ದರೂ ಕೂಡ ಗಣಿ ಮತ್ತು ಭೂ ವಿಜ್ಞಾನ, ಅರಣ್ಯ, ಪರಿಸರ, ಕಂದಾಯ ಇಲಾಖೆಯ ಸ್ಯಾಂಡ್ ಮಾನಿಟರಿಂಗ್ ತಂಡ ಹಾಗೂ ಪೊಲೀಸ್ ಇಲಾಖೆಗಳು ಇಲ್ಲಿಯವರೆಗೂ ಕಣ್ಮುಚ್ಚಿ ಕುಳಿತು, ಈಗ ಏಕಾಏಕಿ ದಾಳಿ ಮಾಡಿ ಅಕ್ರಮ ದಂಧೆಕೋರರಿಗೆ ಬಿಸಿಮುಟ್ಟಿಸಿದ್ದು ಅಚ್ಚರಿ ಉಂಟುಮಾಡಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಪುಷ್ಪಲತಾ ಇತ್ತೀಚಿಗಷ್ಟೇ ಕೊಪ್ಪಳಕ್ಕೆ ಬಂದು ಅಧಿಕಾರ ವಹಿಸಿಕೊಂಡಿದ್ದರು. ಇದಕ್ಕೂ ಮುಂಚೆ ರಾಯಚೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪುಷ್ಪಲತಾ ಒಂದು ತಿಂಗಳ ಸುದೀರ್ಘ ರಜೆಯ ನಂತರ ಬೆಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮುಖ್ಯ ಕಚೇರಿಯಲ್ಲಿ ಕಾರ್ಯನಿರ್ವಹಿಸಿ ಕೊಪ್ಪಳಕ್ಕೆ ವರ್ಗವಾಗಿ ಬಂದಿದ್ದಾರೆ ಎನ್ನಲಾಗುತ್ತಿದೆ. ಪುಷ್ಪಲತಾ ಅವರ ಕಾರ್ಯವೈಖರಿಯ ಬಗ್ಗೆ ರಾಯಚೂರಿನಲ್ಲೂ ಕೂಡ ಅಪಸ್ವರ ಕೇಳಿಬಂದಿದ್ದವು. ಹೀಗಾಗಿ ಅವರಿಗೆ ಸುದೀರ್ಘ ರಜೆ ನೀಡಿ ನಂತರ ಕೊಪ್ಪಳಕ್ಕೆ ವರ್ಗಾಯಿಸಲಾಯಿತು. ಪುಷ್ಪಲತಾರ ಕೊಪ್ಪಳ ವರ್ಗಾವಣೆಯ ಹಿಂದೆ ಹಿಟ್ನಾಳ್ ಸಹೋದರರ ಕೃಪಕಟಾಕ್ಷ ಇದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ
.

ಇಲ್ಲಿ ಅಚ್ಚರಿ ವಿಷಯವೇನೆಂದರೆ ಕೊಪ್ಪಳ ಜಿಲ್ಲೆಯಾದ್ಯಂತ ಏನೇ ದಂಧೆ ನಡೆದರೂ ಹಿಟ್ನಾಳ್ ಸಹೋದರರು ಹಾಗೂ ಮಾಜಿ ಸಂಸದ ಸಂಗಣ್ಣ ಕರಡಿಯವರ ಅಭಯಹಸ್ತ ಇರಬಹುದಾ? ಕಲ್ಲು ಗಣಿಗಾರಿಕೆ, ಮರಳು ಅಕ್ರಮ ಸಾಗಾಣಿಕೆ ಇನ್ನಿತರೆ ದಂಧೆಗಳಲ್ಲಿ ಇವರ ಪಾಲುದಾರಿಕೆ ಇದೆ ಎಂದು ಸಾಮಾಜಿಕ ವಲಯದಲ್ಲಿ ಮತ್ತು ಎಲ್ಲಾ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ಇಂತಹ ಅಡ್ಡೆಗಳ ಮೇಲೆ ದಾಳಿ ಮಾಡಲು ಅಧಿಕಾರಿಗಳಿಗೆ ಡಬಲ್ ಗುಂಡಿಗೆ ಬೇಕು. ಆದರೆ, ಅಂತಹ ಗುಂಡಿಗೆ ಪುಷ್ಪಲತಾ ಅವರಿಗೆ ಇಲ್ಲ ಎಂಬುವುದು ರಾಯಚೂರಿನಲ್ಲಿ ಅವರು ನಿರ್ವಹಿಸಿದ ಕಾರ್ಯವೈಖರಿಯಿಂದನೇ ತಿಳಿಯುತ್ತದೆ. ಅಷ್ಟಕ್ಕೂ ಹೆದ್ದಾರಿ ಪಕ್ಕದ ಹಳ್ಳದಲ್ಲಿಯೇ ರಾಜರೋಷವಾಗಿ ನಡೆಯುತ್ತಿದ್ದ ಮರಳು ಅಕ್ರಮ ದಂಧೆಯ ಅಡ್ಡೆಗಳ ಮೇಲೆ ರೈಡ್ ನಡೆದ ಪ್ರಕರಣದ ಹಿಂದೆ ಹಿಟ್ನಾಳ್ ಸಹೋದರರ ಕೈವಾಡ ಇದೆಯಾ…? ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.


ಯಾಕೆಂದರೆ ಬುಧವಾರದಂದು ನಡೆದ ದಾಳಿಯಲ್ಲಿ ಕೇವಲ ಬೋಟ್‍ಗಳನ್ನು ಮಾತ್ರ ಧ್ವಂಸಗೊಳಿಸಲಾಗಿದೆ. ಜೊತೆಗೆ ಸ್ಥಳದಲ್ಲಿದ್ದ ಶೆಡ್‍ಗಳನ್ನು ಮತ್ತು ಮೋಟಾರ್ ಪಂಪ್‍ಗಳನ್ನು ಕಿತ್ತಿಹಾಕಲಾಗಿದೆ. ಆದರೆ ಜೆಸಿಬಿಗಳಾಗಲೀ ಟಿಪ್ಪರ್ ಟ್ರ್ಯಾಕ್ಟರ್‍ಗಳನ್ನಾಗಲೀ ಜಪ್ತಿ ಮಾಡಿದ ಬಗ್ಗೆ ವರದಿಯಾಗಿಲ್ಲ. ಇದೆಲ್ಲದರ ಹಿಂದೆ ನಿಯೋಜಿತ ಫ್ರೀಪ್ಲ್ಯಾನ್ ಇದೆ ಎನ್ನಲಾಗುತ್ತಿದೆ. ಈ ಮರಳು ಅಕ್ರಮ ಅಡ್ಡೆಯ ಮೇಲೆ ಹಿಡಿತಕ್ಕಾಗಿ ಆಂತರಿಕ ಜಗಳ ಶುರುವಾಗಿತ್ತು ಎಂಬ ಆರೋಪಗಳು ಕೇಳಿ ಬರುತ್ತಿದ್ದು ? ಅದನ್ನು ಪುಷ್ಠೀಕರಿಸುವಂತೆ ಕಾಂಗ್ರೆಸ್ ಮುಖಂಡನ ಹಿಂಬಾಲಕನೊಬ್ಬನ “ಪುಷ್ಪಾ ದಂಧೆಮೇ ಮಜಾಕ್ ನಹೀ ಕರ್ತಾ” ಎಂಬ ರೀಲ್ಸ್ ವೈರಲ್ ಆಗಿದ್ದು ದಂಧೆಯಲ್ಲಿನ ಒಳಜಗಳದ ಸೂಚನೆ ನೀಡಿತ್ತು. ಹೀಗಾಗಿ ದಂಧೆಯ ಮೇಲಿನ ಹಿಡಿತಕ್ಕಾಗಿ ಈ ರೈಡ್ ನಡೆದಿದೆ. ಈ ರೈಡ್ ನಾಟಕದ ಹಿಂದೆ ಹಿಟ್ನಾಳ್ ಸಹೋದರರ ಕೈವಾಡವಿದೆಯ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ತೀರಾ ಚರ್ಚಗೆ ಗ್ರಾಸವಾಗಿದೆ.! ಯಾಕೆಂದರೆ ರಿಪಬ್ಲಿಕ್ ಆಫ್ ಕೊಪ್ಪಳದಲ್ಲಿ ಪ್ರತಿ ಇಲಾಖೆಯ ಪ್ರಮುಖ ಸ್ಥಾನದಲ್ಲಿ ಕುಳಿತಿರುವ ಅಧಿಕಾರಿಗಳೆಲ್ಲರೂ ಹಿಟ್ನಾಳ್ ಸಹೋದರರ ಕೃಪಾಶೀರ್ವಾದದ ಫಲಾನುಭವಿಗಳು. ಅವರ ಆಣತಿಯಂತೆ ಕಾರ್ಯನಿರ್ವಹಿಸುವವರು. ಹೀಗಾಗಿ ಅವರ ವಿರುದ್ಧ ಕೆಲಸ ಮಾಡುವ ಭಂಡ ಧೈರ್ಯ ಯಾರೂ ತೋರುವುದಿಲ್ಲ. ಹಾಗೇನಾದರೂ ಎಲ್ಲವನ್ನೂ ಧಿಕ್ಕರಿಸಿ ಕಾರ್ಯಪ್ರವೃತ್ತರಾದರೆ ಬಹಳ ದಿವಸ ಇಲ್ಲಿ ಉಳಿಯುವುದಿಲ್ಲ. ಹೀಗಾಗಿ ಬುಧವಾರದಂದು ನಡೆದ ದಾಳಿ ಪ್ರಕರಣದ ಹಿಂದೆ ಹಿಟ್ನಾಳ್ ಸಹೋದರರ ಇಶಾರೆ ಇದೆ ಎಂದು ಸಾಮಾಜಿಕ ವಲಯದಲ್ಲಿ ಸಂಚಲನ ಉಂಟುಮಾಡಿದೆ.!?


ಪ್ರಕರಣ ತಣ್ಣಗಾಗಿಸುವ ಪ್ರಯತ್ನ: ಹಿರೆಸಿಂದೋಗಿ ಬಳಿಯ ಹಿರೇಹಳ್ಳದಲ್ಲಿ ಮರಳು ಅಕ್ರಮ ಅಡ್ಡೆಯ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಎರಡು ದಿನ ಕಳೆದರೂ ಯಾರೊಬ್ಬರ ಮೇಲೂ ಪ್ರಕರಣ ದಾಖಲಿಸಿಲ್ಲ. ಬದಲಾಗಿ ವರದಿ ಸಿದ್ಧಪಡಿಸುವ ನೆಪದಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಈ ಮೂಲಕ ಅಧಿಕಾರಿಗಳ ತಂಡ ಯಾರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ..?. ಅಷ್ಟೆಲ್ಲ ಅಬ್ಬರಿಸಿ ಬೊಬ್ಬಿರಿದ ಅಧಿಕಾರಿಗಳು ಏಕಾಏಕಿ ತಣ್ಣಗಾಗಿದ್ದು ಯಾಕೆ..? ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಗಣಿ, ಅರಣ್ಯ, ಪರಿಸರ, ಕಂದಾಯ, ಪೋಲಿಸ್ ಇಲಾಖೆಯ ಅಧಿಕಾರಿಗಳ ತಂಡದ ನೇತೃತ್ವದಲ್ಲಿ ನಡೆದ ಈ ದಾಳಿ ಹೊಣೆ ಹೋರಲು ಯಾವೊಬ್ಬ ಅಧಿಕಾರಿಯೂ ಸಿದ್ದನಿಲ್ಲ. ಹೀಗಾಗಿ ಪ್ರಕರಣ ದಾಖಲಾಗಿಲ್ಲ. ವರದಿ ಸಿದ್ದಪಡಿಸುವ ನೆಪದಲ್ಲಿ ದಿನದೂಡಿ ಪ್ರಕರಣವನ್ನು ತಣ್ಣಗಾಗಿಸುವ ಪ್ರಯತ್ನ ನಡೆದಿದೆ ಎನ್ನಲಾಗುತ್ತಿದೆ.

ಆಗಾಗ ಇಂತಹ ಮಜಾಕ್‍ಗಳು ಮುಂದುವರೆಯುತ್ತವೆಯಾ…?

ಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪುಷ್ಪಲತಾ ನಿಜಕ್ಕೂ ದಕ್ಷ ಅಧಿಕಾರಿಯಾಗಿದ್ದರೆ ಮುಂಬರುವ ದಿನಗಳಲ್ಲಿ ಇಂತಹ ದಾಳಿಗಳು ಹೆಚ್ಚಾಗುತ್ತವೆ. ಅದೇ ರೀತಿ ಗಂಗಾವತಿ, ಕಾರಟಗಿ, ಕನಕಗಿರಿ ತಾಲೂಕು ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮರಳು, ಮರಮ್ಮು, ಕಂಕರ್ ಅಕ್ರಮ ದಂಧೆಗಳಿಗೆ ಕಡಿವಾಣ ಬೀಳುತ್ತದೆ. ಕಾರಟಗಿ ಮತ್ತು ಕನಕಗಿರಿ ತಾಲೂಕು ವ್ಯಾಪ್ತಿಯಲ್ಲಿ ಮರಳು ಅಕ್ರಮ ದಂಧೆ ಮಿತಿಮೀರಿದೆ. ಅಲ್ಲಿಯೂ ಇದೇ ಮಾದರಿಯಲ್ಲಿ ಮುಂಬರುವ ದಿನಗಳಲ್ಲಿ ಒಂದೇ ಒಂದು ದಾಳಿ ಆಗುತ್ತದೆಯಾ…? ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಅಕ್ರಮ ಅಡ್ಡೆಗಳ ಮೇಲಿನ ಹಿಡಿತ ಸಾಧನೆಗಾಗಿ ಇವೆಲ್ಲಾ ನಾಟಕಗಳು ನಡೆಯುತ್ತಿರುವುದು ಎಂಬ ಆರೋಪ ನಿಜವೇ ಆಗಿದ್ದರೆ ಪುಷ್ಪಲತಾ ಎಂಬ ಫೈಯರ್ ಕೆಲವೇ ದಿನಗಳಲ್ಲಿ ತಣ್ಣಗಾಗುತ್ತದೆ. ಮುಂಬರುವ ದಿನಗಳೇ “ಪುಷ್ಪಲತಾ ಎಂಬ ಅಧಿಕಾರಿ ಪುಷ್ಪಾನಾ…? ಅಥವಾ ಫೈಯರಾ…?” ಎಂಬುವುದನ್ನು ನಿರ್ಧರಿಸಲಿದೆ. ಅಕ್ರಮ ದಂಧೆಕೋರರು ತಮ್ಮ ದಂಧೆಯಲ್ಲಿ “ಮಜಾಕ್” ಮಾಡುವುದಿಲ್ಲ ಎಂಬುವುದೇನೋ ನಿಜ. ಆದರೆ ಅಧಿಕಾರಿಗಳು ಜನಪ್ರತಿನಿಧಿಗಳ ಇಶಾರೆಯಂತೆಯೇ ಆಗಾಗ ಇಂತಹ ಮಜಾಕ್‍ಗಳನ್ನು ಮುಂದುವರೆಸುತ್ತಾರೋ ಏನೋ ಕಾದುನೋಡಬೇಕಿದೆ.

error: Content is protected !!
Scroll to Top