ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರ ವ್ಯಾಪ್ತಿಯಲ್ಲಿ ವಿಕೃತಿ.
ರಣಬೇಟೆ ವೆಬ್ ನ್ಯೂಸ್ ಕೊಪ್ಪಳ : 07
ಜಿಲ್ಲೆಯಲ್ಲಿ ಭೂಕಬಳಿಕೆ ಮಾಫಿಯಾವು ಸರ್ಕಾರಿ ಸ್ವತ್ತಿನ ಮೇಲೆ ಎಸಗುತ್ತಿರುವ ಘೋರ ಅತಿಕ್ರಮಣದ ಕೃತ್ಯವು ಇದೀಗ ಬೆಳಕಿಗೆ ಬಂದಿದೆ. ಕೊಪ್ಪಳ ತಾಲೂಕಿನ ಇರ್ಕಲ್ಗಡ ಹೋಬಳಿಯ ಅಬ್ಬಿಗೇರಿ ಗ್ರಾಮದ ಜೀವನಾಡಿ ಎನಿಸಿದ ಸಣ್ಣ ನೀರಾವರಿ ವ್ಯಾಪ್ತಿಯ ಕೆರೆಯನ್ನೇ ಅಕ್ರಮ ಬಳಕೆದಾರರು ಸಂಪೂರ್ಣವಾಗಿ ದುರಾಕ್ರಮಣ ಮಾಡಿ, ಅಲ್ಲಿ ಲಾಭದಾಯಕ ಕೃಷಿ ಚಟುವಟಿಕೆಯ ನೆಪದಲ್ಲಿ ವಿಕೃತಿ ಮೆರೆದಿದ್ದಾರೆ.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದ ನೇರ ಅಧೀನಕ್ಕೆ ಒಳಪಡುವ ಈ ಕೆರೆಯ ಒಟ್ಟು 7 ಎಕರೆ 25 ಗುಂಟೆ ಪ್ರದೇಶವು ಅಕ್ರಮ ಭೂಗಳ್ಳರ ಅಧೀನವಾಗಿದೆ.

ಒತ್ತುವರಿ ಮತ್ತು ದುರುಪಯೋಗದ ವಿವರಗಳು:
ಸರ್ವೆ ನಂ. 11: ಈ ಒಟ್ಟು 25 ಎಕರೆ 11 ಗುಂಟೆ ಜಮೀನಿನಲ್ಲಿರುವ 4 ಎಕರೆ 20 ಗುಂಟೆ ಕೆರೆ ಪ್ರದೇಶವನ್ನು ಒತ್ತುವರಿ ಸಾಮ್ರಾಟರು ಕಬಳಿಸಿ ಅನಧಿಕೃತವಾಗಿ ಕೃಷಿ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದಾರೆ.
ಸರ್ವೆ ನಂ. 05: ಪಕ್ಕದ ಸರ್ವೆ ನಂ. 05ರ ಒಟ್ಟು 17 ಎಕರೆ 30 ಗುಂಟೆ ಜಮೀನಿನ ಪೈಕಿ, ಕೆರೆಗೆ ಮೀಸಲಾಗಿದ್ದ 3 ಎಕರೆ 05 ಗುಂಟೆ ಜಮೀನಿನಲ್ಲಿಯೂ ಸಹ ಅಕ್ರಮ ಬಳಕೆದಾರರು ಕೆರೆಯ ಸಂಪನ್ಮೂಲವನ್ನು ದುರ್ಬಳಕೆ ಮಾಡಿಕೊಂಡು ಕೃಷಿ ಚಟುವಟಿಕೆಗಾಗಿ ಬಳಸಿಕೊಂಡಿರುತ್ತಾರೆ.
ಈ ಮೂಲಕ ರಾಜಕೀಯ ಕುಮ್ಮಕ್ಕು ಮತ್ತು ಆರ್ಥಿಕ ಅಹಮಿಕೆಯ ಬಲದಿಂದ, ಒಟ್ಟು ಏಳೂವರೆ ಎಕರೆಗೂ ಅಧಿಕ ಸಾರ್ವಜನಿಕ ಜಲಸಂರಕ್ಷಣಾ ಸ್ವತ್ತನ್ನು ಖಾಸಗಿ ಲಾಭದ ಕೃಷಿ ಭೂಮಿಯನ್ನಾಗಿ ಪರಿವರ್ತಿಸಿರುವುದು ಸಂಪೂರ್ಣ ಕಾನೂನು ಉಲ್ಲಂಘನೆಯಾಗಿದೆ. ಒಟ್ಟಾರೆಯಾಗಿ, ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ಈ ಕೆರೆಯ ಒಟ್ಟು 7 ಎಕರೆ 25 ಗುಂಟೆ ಜಲಾನಯನ ಪ್ರದೇಶವು ಪ್ರಭಾವಿ ವಲಯದ ಹಪಾಹಪಿತನಕ್ಕೆ ಬಲಿಯಾಗಿದೆ. ಇದು ಸ್ಥಳೀಯ ರೈತರು ಮತ್ತು ಜನಸಾಮಾನ್ಯರಿಗೆ ಜೀವಜಲ ಒದಗಿಸುವ ಕೆರೆಯ ಅಸ್ತಿತ್ವಕ್ಕೇ ಕಂಟಕಪ್ರಾಯವಾಗಿದೆ.
ತಾಲೂಕಿನ ಸಾಮಾಜಿಕ ಕಾರ್ಯಕರ್ತರು ಈ ಘೋರ ಅನ್ಯಾಯದ ವಿರುದ್ಧ ದನಿ ಎತ್ತಿದ್ದು, ಕೂಡಲೇ ಕಾರ್ಯಪಾಲಕ ಅಭಿಯಂತರರು, ಜಿಲ್ಲಾಧಿಕಾರಿಗಳು, ಮತ್ತು ತಾಲೂಕು ದಂಡಾಧಿಕಾರಿಗಳು ಗಾಂಭೀರ್ಯತೆಯನ್ನು ಅರಿತು, ಸ್ಥಳವನ್ನು ಸರ್ವೇ ಮಾಡಿಸಿ, ಅಕ್ರಮ ಬಳಕೆದಾರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅನಧಿಕೃತ ಕೃಷಿ ಚಟುವಟಿಕೆಗೆ ಬಳಸಿಕೊಂಡಿರುವ ಕೆರೆ ಜಮೀನನ್ನು ತೆರವುಗೊಳಿಸಿ ಸಾರ್ವಜನಿಕ ಆಸ್ತಿಯನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗ ಕೊಪ್ಪಳದ ಕಾರ್ಯಪಾಲಕ ಅಭಿಯಂತರಾದ ಬಿ,ಎಸ್, ಪಾಟೀಲ್ ಈ ಪ್ರಬಲ ಭೂಗಳ್ಳರ ಪಿತೂರಿಯ ವಿರುದ್ಧ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುವರೋ? ಅಥವಾ ಪ್ರಭಾವದ ಒತ್ತಡಕ್ಕೆ ಮಣಿದು ಮೌನಕ್ಕೆ ಶರಣಾಗುವರೋ? ಎಂಬುದು ಸಾರ್ವಜನಿಕರ ಮುಖ್ಯ ಜಿಜ್ಞಾಸೆಯಾಗಿದೆ. ಸಾರ್ವಜನಿಕ ಆಸ್ತಿಯ ಈ ಹತ್ಯಾಕಾಂಡದ ವಿರುದ್ಧ ಆಡಳಿತ ವ್ಯವಸ್ಥೆಯ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ರಣಬೇಟೆ ಸೂಕ್ಷ್ಮವಾಗಿ ಗಮನಿಸಲಿದೆ.
ಸಂಚಿಕೆ ಮುಂದುವರೆಯುತ್ತದೆ…..

