ಅಕ್ರಮ CL-2 ವೈನ್‌ಶಾಪ್‌ಗಳ ಹಿಂದೆ ಇಲಾಖಾ ಮೌನದ ರಹಸ್ಯ.
ರಣಬೇಟೆ ವೆಬ್ ಡೆಸ್ಕ್ ಅ 10: (ಸಂಚಿಕೆ 03)
ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಈಶ್ವರ್, ದೇವಿ, ವಿಜಯ್, ಮಮತಾ, ರೇಣುಕಾ, ವಾಸು, ವೆಂಕಟೇಶ್ವರ ಮತ್ತು ವಿಶಾಲ್ ವೈನ್ಸ್‌ಗಳೂ ಸೇರಿದಂತೆ ಬರೋಬ್ಬರಿ ಎಂಟು CL-2 ಪರವಾನಗಿ ಹೊಂದಿದ ಮದ್ಯದ ಅಂಗಡಿಗಳು ಪ್ರತ್ಯಕ್ಷವಾಗಿ ಗುಪ್ತ ಬಾರ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಕಚೇರಿಯು ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ. ಕೊಪ್ಪಳ ನಗರದಲ್ಲಿ ನಿಯಮಗಳ ನಗ್ನ ಉಲ್ಲಂಘನೆ ಮುಗಿಲು ಮುಟ್ಟಿದೆ. ಪರವಾನಗಿ ಪಡೆದಿರುವುದು ಕೇವಲ CL-2 ಪಾರ್ಸೆಲ್ ಮಾರಾಟಕ್ಕೆ, ಆದರೆ ಇಲ್ಲಿ ಮದ್ಯವನ್ನು ಕುಡಿಯಲು ಪ್ರತ್ಯೇಕ ವ್ಯವಸ್ಥೆ, ಕುರ್ಚಿ-ಟೇಬಲ್‌ಗಳು ಮತ್ತು ಬಾರ್‌ನಂತಹ ವಾತಾವರಣವನ್ನು ಸೃಷ್ಟಿಸಲಾಗಿದೆ. ಇಂತಹ ಅಕ್ರಮ ದಂಧೆಗಳು ಹಗಲು ಹೊತ್ತಿನಲ್ಲಿ ಜಿಲ್ಲೆಯಾದ್ಯಂತ ಅವ್ಯಾಹತವಾಗಿ ನಡೆಯುತ್ತಿದ್ದರೂ, ಸ್ಥಳೀಯ ಅಬಕಾರಿ ಇಲಾಖೆ ಜಾಣ ಕುರುಡಾಗಿರುವುದು ಇಡೀ ವ್ಯವಸ್ಥೆಯ ಮೇಲೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕಿದೆ.

ಕಾನೂನಿನ ದುರುಪಯೋಗಕ್ಕೆ ಇಲಾಖೆಯ ಔದಾರ್ಯ:
ಈ ಎಂಟು ಅಂಗಡಿಗಳ ಅಕ್ರಮ ಕಾರ್ಯಾಚರಣೆಯು ಕರ್ನಾಟಕ ಅಬಕಾರಿ ಕಾಯ್ದೆ, 1965 ಮತ್ತು ಸಂಬಂಧಿತ ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಾವಳಿಗಳ ಸಾರಾಸಗಟು ಉಲ್ಲಂಘನೆಯಾಗಿದೆ. ಕೇವಲ ‘ಪಾರ್ಸೆಲ್’ ಮಾರಾಟಕ್ಕೆ ಸೀಮಿತವಾದ ಪರವಾನಗಿಗಳನ್ನು ದಂಡನಾತ್ಮಕ ಭೀತಿಯಿಲ್ಲದೆ ಬಾರ್‌ಗಳಾಗಿ ಪರಿವರ್ತಿಸಿರುವುದು, ಅಬಕಾರಿ ಇಲಾಖೆಯ ಕ್ಷೇತ್ರ ಮಟ್ಟದ ಮೇಲ್ವಿಚಾರಣೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಬೃಹತ್ ಪ್ರಮಾಣದ ಅಕ್ರಮ ದಂಧೆಗಳು ಜಿಲ್ಲಾ ಕೇಂದ್ರದಲ್ಲಿ ಅವ್ಯಾಹತವಾಗಿ ನಡೆದರೂ, ಜಿಲ್ಲೆಯ ಮುಖ್ಯ ಅಬಕಾರಿ ಆಡಳಿತಾಧಿಕಾರಿಯಾದ ಉಪ ಆಯುಕ್ತರ ಕಚೇರಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲವೇ? ಮಾಹಿತಿ ಇದ್ದರೂ ಸಂಹಿತೆ ಮತ್ತು ನಿಯಮಗಳ ಅನ್ವಯ ತಕ್ಷಣ ಕ್ರಮ ಕೈಗೊಳ್ಳದಿರುವುದು, ಅಕ್ರಮದ ಹಿಂದಿನ ಪ್ರಭಾವಿ ಹಸ್ತಗಳಿಗೆ ಇಲಾಖೆ ಬೆಂಗಾವಲಾಗಿ ನಿಂತಿದೆ ಎಂಬ ಅನುಮಾನವನ್ನು ಬಲಪಡಿಸುತ್ತದೆ. ಈ ಮೌನವು ಕರ್ತವ್ಯಲೋಪ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗೆ ಪರೋಕ್ಷ ಸಮ್ಮತಿ ನೀಡಿದಂತಾಗಿದೆ.

ಚಿತ್ರಗಳೇ ಅಕ್ರಮಕ್ಕೆ ಸಾಕ್ಷಿ: CL-2 ಅಂಗಡಿಗಳ ಕರಾಳ ರೂಪ
ನಮ್ಮ ತನಿಖೆಯಲ್ಲಿ, ಈಶ್ವರ್, ದೇವಿ, ವಿಜಯ್, ಮಮತಾ, ರೇಣುಕಾ, ವಾಸು, ವೆಂಕಟೇಶ್ವರ ಮತ್ತು ವಿಶಾಲ್ CL-2 ಅಂಗಡಿಗಳಲ್ಲಿ ಮದ್ಯದ ಬಾಟಲಿಗಳನ್ನು ಪಾರ್ಸೆಲ್ ಮಾಡುವುದಕ್ಕಿಂತ ಹೆಚ್ಚಾಗಿ, ಗ್ರಾಹಕರು ಅಂಗಡಿಯ ಒಳಗೆ ಅಥವಾ ಪಕ್ಕದಲ್ಲಿ ವ್ಯವಸ್ಥೆ ಮಾಡಲಾದ ಕೊಠಡಿಗಳಲ್ಲಿ ಟೇಬಲ್-ಕುರ್ಚಿಗಳ ಮೇಲೆ ಕುಳಿತು ಮದ್ಯಪಾನ ಮಾಡುತ್ತಿರುವುದು ಸ್ಪಷ್ಟವಾಗಿ ದಾಖಲಾಗಿದೆ.
ಅನಧಿಕೃತ ‘ಕುಳಿತು ಕುಡಿಯುವ ಸ್ಥಳ’ (Seating Area): ಚಿತ್ರಗಳಲ್ಲಿ ಸ್ಪಷ್ಟವಾಗಿ ಗೋಚರಿಸುವಂತೆ, ಈ ಅಂಗಡಿಗಳ ಹಿಂಭಾಗ ಅಥವಾ ಮೇಲಿನ ಅಂತಸ್ತಿನಲ್ಲಿರುವ ಕೋಣೆಗಳನ್ನು ಹಳೆಯ ಟೇಬಲ್‌ಗಳು, ಪ್ಲಾಸ್ಟಿಕ್ ಮತ್ತು ಮರದ ಕುರ್ಚಿಗಳಿಂದ ತುಂಬಿಸಲಾಗಿದೆ. ಇದು CL-7 (ಬಾರ್ ಪರವಾನಗಿ) ಇಲ್ಲದೆ ನಡೆಸುತ್ತಿರುವ ಸಂಪೂರ್ಣ ಅನಧಿಕೃತ ಬಾರ್ ಆಗಿದೆ.

ಗಬ್ಬುನಾರುತ್ತಿರುವ ಅನೈರ್ಮಲ್ಯ: ಇದಕ್ಕಿಂತಲೂ ಘೋರ ಸಂಗತಿಯೆಂದರೆ, ಈ ಅಂಗಡಿಗಳ ಸುತ್ತಲಿನ ಪರಿಸರವನ್ನು ವೈನ್ ಶಾಪ್‌ಗಳು ಮಾಡಿರುವ ಅತಿಕ್ರಮಣ ಮತ್ತು ಅನೈರ್ಮಲ್ಯದಿಂದಾಗಿ ಶೌಚಾಲಯಕ್ಕಿಂತಲೂ ಹೆಚ್ಚು ಗಬ್ಬುನಾರುತ್ತಿದೆ. ಮದ್ಯಪಾನ ಮಾಡುವವರು ರಸ್ತೆಯಲ್ಲೇ ಮೂತ್ರ ವಿಸರ್ಜನೆ ಮಾಡುವುದು, ಖಾಲಿ ಬಾಟಲಿಗಳು, ಪ್ಲಾಸ್ಟಿಕ್ ಲೋಟಗಳು ಮತ್ತು ತಿಂಡಿಯ ಕಸವನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಸಾರ್ವಜನಿಕರಿಗೆ ಓಡಾಡಲು ಅಸಾಧ್ಯವಾಗಿದೆ. ಈ ವೈನ್‌ಶಾಪ್‌ಗಳು ಸುತ್ತಮುತ್ತಲಿನ ನಿವಾಸಿಗಳ ನೆಮ್ಮದಿಯನ್ನು ಸಂಪೂರ್ಣವಾಗಿ ಕಸಿದುಕೊಂಡಿವೆ.ಈ ಅಂಗಡಿಗಳು ವಾಸ್ತವವಾಗಿ ಪರವಾನಗಿ ಇಲ್ಲದ CL-7 (ಬಾರ್ ಮತ್ತು ರೆಸ್ಟೋರೆಂಟ್) ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೊಪ್ಪಳ ಶೀಘ್ರದಲ್ಲೇ ಒಂದು ‘ಮದ್ಯಪಾನಗಳ ಅಕ್ರಮ ಗೋದಾಮು’ ಎಂಬ ಕುಖ್ಯಾತಿಗೆ ಒಳಗಾಗುವುದರಲ್ಲಿ ಸಂಶಯವಿಲ್ಲ.

ಮೌನಕ್ಕೆ ಕಾರಣವೇನು? ಇನ್‌ಸ್ಪೆಕ್ಟರ್ ಮಂಜುನಾಥ್ ಗಲಗಲಿ ಅವರೇ ಉತ್ತರಿಸಿ!
ಈ ಬಹಿರಂಗ ಅಕ್ರಮಗಳು ಇಂದು ನಿನ್ನೆಯದಲ್ಲ. ಕಳೆದ ಹಲವು ದಿನಗಳಿಂದ ಹಗಲು ಹೊತ್ತಿನಲ್ಲೇ ಕಾನೂನನ್ನು ಅಣಕಿಸಲಾಗುತ್ತಿದೆ. ಹಾಗಿದ್ದರೂ, ಈ ಅಕ್ರಮಗಳನ್ನು ನಿಯಂತ್ರಿಸಬೇಕಾದ ತಾಲೂಕು ಅಬಕಾರಿ ನಿರೀಕ್ಷಕ ಮಂಜುನಾಥ್ ಗಲಗಲಿ ಅವರ ಪಾತ್ರ ತೀವ್ರ ಅನುಮಾನಕ್ಕೆ ಕಾರಣವಾಗಿದೆ.ನಿರ್ಲಕ್ಷ್ಯದ ಪರಾಕಾಷ್ಠೆ ತಮ್ಮ ವ್ಯಾಪ್ತಿಯಲ್ಲಿ ಇಷ್ಟೊಂದು ಬಹಿರಂಗ ಉಲ್ಲಂಘನೆ ನಡೆಯುತ್ತಿದ್ದರೂ, ಶ್ರೀ ಗಲಗಲಿಯವರು ಯಾವುದೇ ಕಠಿಣ ಕ್ರಮಕ್ಕೆ ಮುಂದಾಗದಿರುವುದು ಅವರ ‘ವಿಳಂಬ ನೀತಿ’ ಮತ್ತು ‘ಮೌನ ಸಮ್ಮತಿ’ಯನ್ನು ಸೂಚಿಸುತ್ತದೆ. ಇವರ ಮೌನವು ಅಕ್ರಮ ದಂಧೆಗಳಿಗೆ ನೇರ ಉತ್ತೇಜನ ನೀಡಿದಂತಾಗಿದೆ.
ದಂಧೆ ಹಂಚಿಕೆಯ ಆರೋಪ: ಪ್ರತಿ ಅಕ್ರಮ ಘಟಕದಿಂದ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮಾಸಿಕ ‘ಕಪ್ಪ’ ತಲುಪುತ್ತಿರಬಹುದು ಎಂಬ ಗಂಭೀರ ಆರೋಪಗಳು ಸ್ಥಳೀಯ ವಲಯದಲ್ಲಿ ಬಲವಾಗಿ ಕೇಳಿ ಬರುತ್ತಿವೆ. ಈ ಅಕ್ರಮ ಬಾರ್‌ಗಳು ಪ್ರತಿ ದಿನ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುತ್ತಿವೆ. ಈ ಬೃಹತ್ ಅಕ್ರಮದ ಲಾಭದಲ್ಲಿ ಇಲಾಖೆಗೆ ಪಾಲು ತಲುಪದೆ, ಇಷ್ಟು ದೊಡ್ಡ ಅಕ್ರಮಗಳು ನಡೆಯಲು ಸಾಧ್ಯವೇ ಇಲ್ಲ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಅಬಕಾರಿ ನಿರೀಕ್ಷಕ ಮಂಜುನಾಥ್ ಗಲಗಲಿ ಅವರನ್ನು ತನಿಖೆಗೆ ಒಳಪಡಿಸಿ:
ರಣಭೇಟೆ ವೆಬ್‌ನ ಹಿಂದಿನ ದೂರಿನಲ್ಲಿ ಸ್ಪಷ್ಟವಾಗಿ ಪ್ರಸ್ತಾಪಿಸಲಾದಂತೆ, ಕೊಪ್ಪಳ ವಲಯ ಕಚೇರಿಯ ಅಬಕಾರಿ ನಿರೀಕ್ಷಕ ಶ್ರೀ ಮಂಜುನಾಥ್ ಗಲಗಲಿ ಅವರಿಗೆ ಈ ಅಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಿದ್ದರೂ, ಅವರು ಕ್ರಮ ಜರುಗಿಸಲು ವಿಫಲರಾಗಿದ್ದಾರೆ. ಇದು ಕೇವಲ ಕರ್ತವ್ಯ ಲೋಪವಲ್ಲ, ಬದಲಾಗಿ ಅಕ್ರಮ ಮದ್ಯ ಮಾರಾಟಗಾರರೊಂದಿಗೆ ಅಧಿಕಾರಿಯ ಸಹವರ್ತನೆಯನ್ನು ಸಂಶಯಿಸುವಂತಹ ಗಂಭೀರ ಪರಿಸ್ಥಿತಿಯಾಗಿದೆ.
ಪರವಾನಗಿಗಳ ರದ್ದುಪಡಿಸುವಿಕೆ: ಕಾನೂನು ಮತ್ತು ಸಾರ್ವಜನಿಕ ಶಾಂತಿಯನ್ನು ಉಲ್ಲಂಘಿಸಿರುವ ಈ ಎಂಟು ವೈನ್‌ಶಾಪ್‌ಗಳ (CL-2) ಪರವಾನಗಿಗಳನ್ನು ಅಬಕಾರಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ತಕ್ಷಣವೇ ಅಮಾನತುಗೊಳಿಸಿ ರದ್ದುಪಡಿಸಬೇಕು.

ಅಧಿಕಾರಿಗಳ ವರ್ಗಾವಣೆ: ಈ ವಲಯದಲ್ಲಿ ಅಕ್ರಮಗಳಿಗೆ ಕುಮ್ಮಕ್ಕು ನೀಡಿರುವ ಇಲಾಖೆಯ ಎಲ್ಲಾ ಅಧಿಕಾರಿಗಳನ್ನು ತಕ್ಷಣವೇ ಸ್ಥಳಾಂತರಿಸಿ, ಅವರ ವಿರುದ್ಧವೂ ಶಿಸ್ತು ಕ್ರಮ ಜರುಗಿಸಬೇಕು. ಜಿಲ್ಲೆಯ ಅಬಕಾರಿ ಉಪ ಆಯುಕ್ತರು ತಕ್ಷಣವೇ ಮಧ್ಯ ಪ್ರವೇಶಿಸಿ ಅಕ್ರಮದ ದಂಧೆಕೋರರಿಗೆ ಮತ್ತು ಅವರಿಗೆ ಬೆಂಬಲವಾಗಿ ನಿಂತಿರುವ ಅಧಿಕಾರಿಗಳಿಗೆ ಕಾನೂನಿನ ರುಚಿ ತೋರಿಸದಿದ್ದರೆ, ಈ ವಿಷಯವನ್ನು ಉನ್ನತ ನ್ಯಾಯಾಲಯದ ಮೊರೆ ಹೋಗಿ ಜಿಲ್ಲಾಡಳಿತದ ಸಂಪೂರ್ಣ ವೈಫಲ್ಯವನ್ನು ಬಯಲು ಮಾಡಲು ರಣಭೇಟೆ ವೆಬ್ ಬದ್ಧವಾಗಿದೆ.
ರಣಭೇಟೆ ವೆಬ್‌ನ ದೃಢ ನಿರ್ಧಾರ ಮತ್ತು ಆಗ್ರಹ: CL-2 ಅಂಗಡಿಗಳು ಬಾರ್‌ಗಳಾಗಿ ಪರಿವರ್ತನೆಯಾಗಿರುವುದರಿಂದ ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಸಾರ್ವಜನಿಕರು ಆ ಮಾರ್ಗದಲ್ಲಿ ಓಡಾಡಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕ ನೆಮ್ಮದಿ ಮತ್ತು ಶಾಂತಿ ಸಂಪೂರ್ಣವಾಗಿ ಭಂಗವಾಗಿದೆ. ಅಬಕಾರಿ ಉಪಆಯುಕ್ತರು ಕೂಡಲೇ ಈ ಚಿತ್ರಗಳು ಮತ್ತು GPS ಆಧಾರಿತ ಸಾಕ್ಷ್ಯಗಳನ್ನು ಪರಿಗಣಿಸಿ, ಕೂಡಲೇ ಈ ಅಕ್ರಮ ಬಾರ್‌ಗಳನ್ನು ಸೀಜ್ ಮಾಡಬೇಕು. ಕೇವಲ ಮಾಲೀಕರ ವಿರುದ್ಧವಲ್ಲದೆ, ಈ ಸಂಪೂರ್ಣ ಅಕ್ರಮ ಜಾಲವನ್ನು ನಿಯಂತ್ರಿಸಲು ವಿಫಲರಾಗಿರುವ ಅಬಕಾರಿ ಇನ್‌ಸ್ಪೆಕ್ಟರ್ ಮಂಜುನಾಥ್ ಗಲಗಲಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಮತ್ತು ಇಲಾಖಾತ್ಮಕ ಶಿಸ್ತು ಕ್ರಮ ಜರುಗಿಸಬೇಕೆಂದು ‘ರಣಬೇಟೆ’ ವೆಬ್ ಡೆಸ್ಕ್ ಆಗ್ರಹಿಸುತ್ತದೆ.
ಮುಂದುವರೆಯುತ್ತದೆ…..

