ನಿಮ್ಮ ಮನೆ ವೈರಿಂಗ್ ಸ್ಕಿಮ್ಮು ಇಲ್ಲಿ ಬೇಡ!
ಕೆಲವೇ ತಿಂಗಳ ಹಿಂದೆ ಲಕ್ಷಾಂತರ ರೂಪಾಯಿ ಸುರಿದು ಮಾಡಿಸಲಾದ ಕೊಪ್ಪಳ ಜಿಲ್ಲಾ ಪಂಚಾಯಿತಿ (ZP) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಕಚೇರಿಯ ‘ಅಭಿವೃದ್ಧಿ ಮತ್ತು ಸೌಂದರ್ಯೀಕರಣ’ ಕಾಮಗಾರಿಯ ವೈಭವವನ್ನು ಕಂಡರೆ, “ಅಂದಕ್ಕೆ ಕನ್ನ ಹಾಕುವವರು ಬೇಕೆ” ಎಂದು ಕೇಳುವಂತಾಗಿದೆ. ಕಚೇರಿಯ ಒಳಾಂಗಣ ಗೋಡೆಗೆ ಹೊದಿಸಿರುವ ಹೊಸ ನಯನ ಮನೋಹರ ಮರದ ಪ್ಯಾನೆಲಿಂಗ್ (wood paneling) ನಡುವೆ, ಕೆಂಪು-ಕಪ್ಪು ತಂತಿಯ ಕರುಳುಗಳು ಬಯಲಾಗಿರುವ ದೃಶ್ಯ ಈಗ ಸಾರ್ವಜನಿಕರ ವ್ಯಂಗ್ಯಕ್ಕೆ ಆಹಾರವಾಗಿದೆ!

ಕೊಪ್ಪಳ ZP ಗುತ್ತಿಗೆದಾರ: ‘ಪ್ಯಾಚ್‌ವರ್ಕ್’ ಆರ್ಟಿಸ್ಟ್‌ಗಳ ಕೈಚಳಕ, ಸೌಂದರ್ಯಕ್ಕೆ ಟೇಪ್ ಪಟ್ಟಿ!
ಹೊಸದಾಗಿ ಮರದ ಪ್ಯಾನೆಲಿಂಗ್ ಹಾಕಿಸಿ ಕಚೇರಿ ಗೋಡೆಗೆ ಒಂದು ‘ಕಾರ್ಪೊರೇಟ್ ಲುಕ್’ ನೀಡಲಾಗಿತ್ತು. ಆದರೆ, ಆ ಸೌಂದರ್ಯ ಶಾಶ್ವತವಾಗಿರಲಿಲ್ಲ. ಕಚೇರಿಯೊಳಗೆ ವೈರಿಂಗ್‌ಗೆ ಸಂಬಂಧಿಸಿದ ಯಾವುದೋ ತುರ್ತು “ಶಸ್ತ್ರಚಿಕಿತ್ಸೆ” ನಡೆದಿರಬೇಕು. ಈ ಶಸ್ತ್ರಚಿಕಿತ್ಸೆಗೆ ನಮ್ಮ ಕುಶಲಕರ್ಮಿಗಳು ಆರಿಸಿಕೊಂಡ ದಾರಿ ಎಂದರೆ- ಸುಂದರ ಮರದ ಫಲಕಗಳನ್ನೇ ಸೀಳಿ, ಸೀಳು ಜಾಗದಲ್ಲಿ ವೈರಿಂಗ್ ತಂತಿಯನ್ನು ತುರುಕಿ, ನಂತರ ಟೇಪ್ ಹಚ್ಚಿ “ಗಾಯ” ಮುಚ್ಚುವ ಯತ್ನ! ಚಿತ್ರದಲ್ಲಿ ಕಾಣುವಂತೆ ,ಫಲಕದ ನಡುವಿನ ಸೀಳಿನಲ್ಲಿ ಕೆಂಪು ಮತ್ತು ಕಪ್ಪು ತಂತಿಗಳು ತಮ್ಮ ಅಸ್ತಿತ್ವವನ್ನು ಅಸಹಾಯಕವಾಗಿ ತೋರಿಸುತ್ತಿವೆ. ಈ ‘ವೈರಿಂಗ್ ವೈಭವ’ ನೋಡಿದರೆ, “ಮರದಿಂದ ಪ್ಯಾನೆಲಿಂಗ್ ಮಾಡಿಸಿದ್ದೇವೆ, ವೈರಿಂಗ್‌ಗೆ ಗೋಡೆ ಒಡೆಯುವ ಸಂಪ್ರದಾಯ ಮುಂದುವರಿಸಿದ್ದೇವೆ” ಎಂದು ಪಂಚಾಯಿತಿಯವರು ಸಾರ್ವಜನಿಕರಿಗೆ ಒಂದು ಸಂದೇಶ ನೀಡಿದಂತಿದೆ.

ಸೌಂದರ್ಯ ಮುಖ್ಯವೋ, ತಂತಿ ಮುಖ್ಯವೋ?
ಕೆಲವೇ ತಿಂಗಳ ಹಿಂದೆ ನಡೆದ ದುಬಾರಿ ಕಾಮಗಾರಿಯಲ್ಲಿ ಈ ವೈರಿಂಗ್ ವ್ಯವಸ್ಥೆಗಳ ಬಗ್ಗೆ ದೂರದೃಷ್ಟಿ ಇರಲಿಲ್ಲವೇ?
ಮರದ ಪ್ಯಾನೆಲಿಂಗ್ ಹಾಕಿಸುವ ಮುನ್ನ ವೈರಿಂಗ್‌ಗಳನ್ನು ಗೋಡೆಯೊಳಗೇ (concealed) ಹಾಕುವ ಯೋಜನೆಯೇ ಇರಲಿಲ್ಲವೇ?
ಇಷ್ಟು ಸುಂದರವಾದ ವಿನ್ಯಾಸವನ್ನು, ಬರೀ ಟೇಪ್ ಹಚ್ಚಿ ಮುಚ್ಚುವಂತಹ “ಕೆಲಸ ಮಾಡಿದ್ದೇವೆ-ಮುಗೀತು” ಎಂಬ ಮನಸ್ಥಿತಿ ಯಾಕೆ?
ಈ ವಿದ್ಯುತ್ ತಂತಿಗಳು ಬರೀ ಸೌಂದರ್ಯಕ್ಕೆ ಕೊಕ್ಕೆ ಮಾತ್ರವಲ್ಲ. ಇದು ಕೆಲಸದ ಗುಣಮಟ್ಟ ಮತ್ತು ಸಾರ್ವಜನಿಕ ಹಣದ ಬಳಕೆ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹೊಸದಾಗಿ ಕೆಲಸ ಮಾಡಿಸುವಾಗಲೂ ಹಳೇ ಚಾಳಿ ಏಕೆ? ಕಾಮಗಾರಿಗೆ ಹಣ ಖರ್ಚು ಮಾಡಿದವರು ಮತ್ತು ಅದನ್ನು ಅನುಮೋದಿಸಿದವರು ಈಗ ಈ ‘ವೈರಿಂಗ್ ಲೀಲಾವಿಲಾಸ’ಕ್ಕೆ ಏನು ಉತ್ತರ ಕೊಡುತ್ತಾರೆ ಎಂಬುದು ರಣ ಬೇಟೆ ವೆಬ್ ಡೆಸ್ಕ್‌ನ ಪ್ರಶ್ನೆಯಾಗಿದೆ.
ಅಂತೂ, ಬಡಾವಣೆಯ ಮನೆಗಳಲ್ಲಿ ನಾವು ನೋಡುವ ವೈರಿಂಗ್ ‘ಜಾಣ್ಮೆ’ಯನ್ನು ಈಗ ಜಿಲ್ಲಾ ಪಂಚಾಯಿತಿ ಸಿಇಓ ಕಚೇರಿಗೂ ವಿಸ್ತರಿಸಿದ ಕೊಪ್ಪಳದ ಕಲಾಕಾರರಿಗೆ ಒಂದು ದೊಡ್ಡ ನಮಸ್ಕಾರ!

