ಡಿ.ಸಿ. ಪ್ರಶಾಂತ್ ಕುಮಾರ್‌ರದ್ದು ‘ಇಲಾಖಾ ಮಮಕಾರ’ವೇ?
ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಅ: 16 (ಸಂಚಿಕೆ-06)
ಕೊಪ್ಪಳ ಅಬಕಾರಿ ಸೀಮೆಯು ಇಂದು ಕಪ್ಪ ಕಾಸಿನ ಕೂಪವಾಗಿ ಪರಿವರ್ತಿತವಾಗಿದೆ ಎಂಬ ಘೋರ ಸತ್ಯವನು ರಣ ಬೇಟೆ ವೆಬ್ ನ್ಯೂಸ್ ಸಂಪಾದಕ ಶ್ರೀ ಮುತ್ತು ದೊಡ್ಮನೆ ಅವರು ದೂರಿನ ಮೂಲಕ ಬಯಲುಗೊಳಿಸಿರುತ್ತಾರೆ. ಈ ದೂರಿನ ಪ್ರಮುಖ ಸಾರಾಂಶವೇನೆಂದರೆ, ಸಾರ್ವಜನಿಕ ವಲಯದಲ್ಲಿ ಅಬಕಾರಿ ತಾಲೂಕು ನಿರೀಕ್ಷಕ ಮಂಜುನಾಥ್ ಗಲಗಲಿ ಅವರು ಈಶ್ವರ್ ದೇವಿ, ವಿಜಯ್, ಮಮತಾ, ರೇಣುಕಾ, ವಾಸು, ವೆಂಕಟೇಶ್ವರ ಮತ್ತು ವಿಶಾಲ್ CL-2 ಮದ್ಯದಂಗಡಿಗಳ ಅಕ್ರಮ ಚಟುವಟಿಕೆಗಳಿಗೆ ಮೌನ ಸಮ್ಮತಿ ನೀಡಿ, ಅವುಗಳಿಂದ ಮಾಸಿಕ ಕಪ್ಪವನು ವಸೂಲಿ ಮಾಡುತ್ತಿರುವ ವಸೂಲಿ ಜಾಲವು ಸಕ್ರಿಯವಾಗಿದೆ ಎಂದು ಆರೋಪಿಸಲಾಗಿರುತ್ತದೆ.

ಉಪ ಆಯುಕ್ತರ ‘ಪರಾಕು ನೀತಿ’ಯ ಮರ್ಮ:
ದೂರುದಾರರಾದ ಮುತ್ತು ದೊಡ್ಮನೆ ಅವರು ಈ ನಿರೀಕ್ಷಕನ ವಿರುದ್ಧ ನಿಷ್ಠುರ ಆಪಾದನೆಯನು ಹೊರಿಸಿದ ನಂತರವೂ, ಅಬಕಾರಿ ಉಪ ಆಯುಕ್ತ (ಡಿ.ಸಿ.) ಶ್ರೀ ಪ್ರಶಾಂತ್ ಕುಮಾರ್ ಕೆ. ಅವರು ಕೈಗೊಂಡ ಕ್ರಮವು ಅತ್ಯಂತ ಶೋಚನೀಯವಾಗಿದೆ.
ಡಿ.ಸಿ. ಪ್ರಶಾಂತ್ ಕುಮಾರ್‌ರದ್ದು ‘ಇಲಾಖಾ ಮಮಕಾರ’ವೇ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸಿದೆ. ಏಕೆಂದರೆ, ಕಾನೂನುಭಂಗ ಮತ್ತು ಭ್ರಷ್ಟಾಚಾರದ ಗಂಭೀರ ಆರೋಪದ ತನಿಖೆಯನ್ನು ಯಾವುದೇ ತಟಸ್ಥ ಸಂಸ್ಥೆಗೆ ವಹಿಸದೆ, ಅದೇ ಇಲಾಖೆಯ ತಮ್ಮ ಅಧೀನಧಿಕಾರಿಯಾದ ಉಪ ಅಧೀಕ್ಷಕರಿಗೆ ವಹಿಸಿರುತ್ತಾರೆ. ಇದು, ದೋಷಿ ಅಧಿಕಾರಿಗೆ ಮೋಕ್ಷ ಕರುಣಿಸುವ ಹಾಗೂ ಸತ್ಯವನು ಹೂತಿಡುವ ರಕ್ಷಣಾ ಜಾಲದ ಸ್ಪಷ್ಟ ಸಂಕೇತವಾಗಿದೆ. ಉಪ ಆಯುಕ್ತರದ್ದು ‘ಕಣ್ಣು ಮುಚ್ಚಿದ’ ಪರಾಕು ನೀತಿ ಎಂಬ ಆಪಾದನೆಯು ನಿಶ್ಚಿತವಾಗಿದೆ.

’ಅತಿ ಜರೂರು’ ಹೆಸರಿನಲ್ಲಿ ಲಂಚದ ಮುಸುಕು:
ಇನ್ನೊಂದೆಡೆ, ಉಪ ಆಯುಕ್ತರು ನಿರೀಕ್ಷಕರ ವ್ಯಾಪ್ತಿಯಲ್ಲಿರುವ ವೈನ್ ಶಾಪ್‌ಗಳ CL-2 ಶರತ್ತುಗಳ ಉಲ್ಲಂಘನೆಯನ್ನು ಮಾತ್ರ ‘ಅತಿ ಜರೂರು’ ಎಂದು ಪರಿಗಣಿಸಿ, ಪರವಾನಗಿ ರದ್ದುಪಡಿಸುವ ತರಾತುರಿ ತೋರಿರುವುದು ಕಪಟ ನೀತಿಯಾಗಿದೆ. ಇದು, ‘ಅತಿ ಜರೂರು’ ಹೆಸರಲಿ ಲಂಚದ ಮುಸುಕು ಹಾಕುವ ಯತ್ನ ಹೊರತು, ಭ್ರಷ್ಟಾಚಾರದ ಮೂಲವನ್ನು ಕಿತ್ತುಹಾಕುವ ಪ್ರಾಮಾಣಿಕ ಪ್ರಯತ್ನವಲ್ಲ.
ವೈನ್ ಶಾಪ್ ಮಾಲೀಕರು ಮತ್ತು ಅಧಿಕಾರಿಗಳ ಕೂಟ:
ದೂರುದಾರರ ದೂರಿನ ಹಿನ್ನೆಲೆಯಲಿ, ವೈನ್ ಶಾಪ್ ಮಾಲೀಕರು ತಮ್ಮ ಅಕ್ರಮಗಳನ್ನು ಮುಂದುವರೆಸಲು ಅಬಕಾರಿ ನಿರೀಕ್ಷಕರಿಗೆ ಪ್ರತಿ ತಿಂಗಳು ಕಪ್ಪ ನೀಡುವ ಈ ಕೊಳಕು ಕೂಟವು ಬಯಲಾಗುವ ಎಲ್ಲಾ ಸಾದ್ಯತೆ ಇದೆ ಈ ಕಾನೂನು ವಿರೋಧಿ ವ್ಯವಸ್ಥೆಗೆ ಉಪ ಆಯುಕ್ತರ ಆಂತರಿಕ ತನಿಖೆಯ ಆಜ್ಞೆಯು ಮತ್ತಷ್ಟು ಕುಮ್ಮಕ್ಕು ನೀಡಿದಂತಿದೆ. ಈ ಕರ್ತವ್ಯ ಲೋಪದ ಪರಿಣಾಮವಾಗಿ, ಕರ್ನಾಟಕ ಲೋಕಾಯುಕ್ತ ದಂತಹ ಸ್ವಾಯತ್ತ ಸಂಸ್ಥೆಯಿಂದ ಸುಮೋಟೊ (Suo Motu) ಗದಾಪ್ರಹಾರವು ಅಧಿಕಾರಿಗಳ ಮೇಲೆ ಬೀಳುವ ಎಲ್ಲಾ ಸಂಭವನೀಯತೆಗಳಿವೆ.
ರಣ ಬೇಟೆಯ ಆಕ್ರೋಶದ ನುಡಿ:
ಡಿ.ಸಿ. ಪ್ರಶಾಂತ್ ಕುಮಾರ್ ಅವರು ತಮ್ಮ ಅಧಿಕಾರದ ಮದವನ್ನು ಬಿಟ್ಟು, ಸತ್ಯನಿಷ್ಠೆ ಮತ್ತು ನ್ಯಾಯದ ದೆಸೆಯಲ್ಲಿ ವರ್ತಿಸಬೇಕು. ತಮ್ಮ ಇಲಾಖೆಯ ಭ್ರಷ್ಟಾಚಾರಕ್ಕೆ ಆಶ್ರಯ ನೀಡುವ ಈ ದುರ್ನಡತೆಯು ಮುಂದುವರೆದರೆ, ಇಲಾಖೆಯ ಗೌರವಕ್ಕೆ ಮಸಿ ಬಳಿದು, ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ.

