ರಣಬೇಟೆ ನ್ಯೂಸ್ ಕೊಪ್ಪಳ̤
ಕೊಪ್ಪಳ: ಗಂಗಾವತಿ ಸರಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 68 ಲಕ್ಷ ರೂ. ಅನುದಾನದಲ್ಲಿ ಹೇರಳವಾಗಿ ವಸ್ತುಗಳು ಮತ್ತು ಪೀಠೋಪಕರಣಗಳ ಪೂರೈಕೆಗೆ ನಿಗದಿ ಮಾಡಲಾಗಿದ್ದರೂ ಕಾಮಗಾರಿ ಗುಣಮಟ್ಟ ಹಿನ್ನಡಿದ ಹಿನ್ನೆಲೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಇಬ್ಬರು ಹಿರಿಯ ಅಧಿಕಾರಿಗಳು ಸಸ್ಪೆಂಡ್ ಆಗಿದ್ದಾರೆ.ಸಮಗ್ರ 68 ಲಕ್ಷ ರೂ. ವೆಚ್ಚದ ಈ ಯೋಜನೆಯಡಿ ಲ್ಯಾಬ್, ಡಿಜಿಟಲ್ ಲೈಬ್ರರಿ, ಪೀಠೋಪಕರಣ, ಅಲಮೇರಾ, ಕಂಪ್ಯೂಟರ್ ಮತ್ತು ಪಾರ್ಕಿಂಗ್ ಸೌಲಭ್ಯಗಳ ಕಾಮಗಾರಿ ಕೈಗೊಳ್ಳಲಾಗಿತ್ತು. ಈ ಗುತ್ತಿಗೆ ಕಾರ್ಯವನ್ನು ಗುತ್ತಿಗೆದಾರ ಕಿರಣ್ ಕುಮಾರ ಅವರಿಗೆ ಹಸ್ತಾಂತರಿಸಲಾಗಿತ್ತು. ಆದರೆ ಪರಿಶೀಲನೆ ನಡೆಸಿದಾಗ ಒಟ್ಟು 90 ಐಟಂಗಳ ಪೈಕಿ ಕೇವಲ 82 ಐಟಂಗಳನ್ನು ಮಾತ್ರ ಪೂರೈಕೆ ಮಾಡಲಾಗಿದ್ದು, ಅದರಲ್ಲಿ 18 ಐಟಂಗಳು ಕಡಿಮೆ ಗುಣಮಟ್ಟದ್ದಾಗಿದ್ದು, 7 ಐಟಂಗಳು ಅಗತ್ಯವಿಲ್ಲದವಾಗಿದ್ದವು. ಹೆಚ್ಚಿನ ತೊಂದರೆ ಎಂದರೆ ತಳಪಾಯವಿಲ್ಲದೆ ಕಂಪ್ಯೂಟರ್ ಅಳವಡಿಸಲಾಗಿದ್ದು, ಅವು ಬಳಕೆಗೆ ಅಸಾಧ್ಯವಾಗಿವೆ. ಈ ಅರೆಬರೆ ಕಾಮಗಾರಿ ಹಾಗೂ ಗುಣಮಟ್ಟದ ಲೋಪಗಳ ನಡುವೆಯೂ ಕಾಮಗಾರಿ ಪೂರ್ಣಗೊಂಡಂತೆ ಹಣ ಪಾವತಿಸಿದ ಬಗ್ಗೆ ಗಂಭೀರ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕೊಪ್ಪಳ ವಿಭಾಗದ ಕಾರ್ಯಪಾಲಕ ಅಭಿಯಂತರ ಹೆಚ್. ಸತ್ಯಪ್ಪ ಹಾಗೂ ಗಂಗಾವತಿ ಉಪ ವಿಭಾಗದ ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತರ ವಿಜಯಕುಮಾರ್ ಅವರನ್ನು ಬುಧವಾರದಂದು ಸೇವೆಯಿಂದ ಅಮಾನತು ಮಾಡಲಾಗಿದೆ. ಪ್ರಸ್ತುತ ಈ ಪ್ರಕರಣ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.

