ಮಾನ್ಯ ಸೋಮಶೇಖರ ಬಿರಾದರ ಸಾಹೇಬರು ಆ ನಿಟ್ಟಿನಲ್ಲಿ ಶ್ರಮಿಸಲಿ.
ಕೊಪ್ಪಳ.ಜುಲೈ.26: ಜಿಲ್ಲೆಯಾದ್ಯಂತ ನಡೆಯುತ್ತಿರುವ ಪಡಿತರ ಅಕ್ಕಿಯ ಕಳ್ಳ ದಂಧೆಯ ಕುರಿತಂತೆ ನಮ್ಮ ರಣಬೇಟೆ ಪತ್ರಿಕೆಯು ಜುಲೈ 15ರಂದು “ಜಿಲ್ಲೆಯಾದ್ಯಂತ ಮತ್ತೆ ಆರಂಭವಾಗಿದೆ ಪಡಿತರ ಅಕ್ಕಿ ಕಳ್ಳರ ಅಬ್ಬರ”. “ಹೊಸ ಮುಖವಾಡ ತೊಟ್ಟು ಮತ್ತೆ ದಂಧೆಗಿಳಿದ ಹಳೆಯ ದಂಧೆಕೋರರು” ಎಂಬ ತಲೆಬರಹದಡಿ ಪ್ರಕಟವಾದ ವಿಸ್ತೃತ ಸುದ್ದಿಗೆ ಸ್ಪಂದಿಸಿರುವ ಆಹಾರ ಇಲಾಖೆಯ ಉಪನಿರ್ದೇಶಕ ಸೋಮಶೇಖರ ಬಿರಾದರ ಅವರು ಕ್ರಮವಹಿಸಿದ ಕುರಿತು ಮಾಹಿತಿ ನೀಡಿದ್ದಾರೆ. ಅವರ ಪತ್ರದ ವಿವರ ಇಂತಿದೆ.
ವಿಷಯ:- ತಮ್ಮ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ಕುರಿತು ಕ್ರಮವಹಿಸಿದ ಕುರಿತು ಮಾಹಿತಿ.

ಮೇಲ್ಕಾಣಿಸಿದ ವಿಷಯದ ಕುರಿತು ತಮ್ಮ ರಣಬೇಟೆ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಕುರಿತು ಈಗಾಗಲೇ ಎಲ್ಲಾ ತಾಲ್ಲೂಕಿನ ತಹಶೀಲ್ದಾರರು ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ಅಕ್ರಮ ಅಕ್ಕಿ ಸಾಗಾಣಿಕೆ ಕುರಿತು ಸೂಕ್ತ ಕಾನೂನು ಕ್ರಮವಹಿಸಲು ನಿರ್ದೇಶನ ನೀಡಿ ಪತ್ರ ಬರೆಯಲಾಗಿದೆ. ಅದರ ಪ್ರತಿ ತಮಗೂ ಕಳುಹಿಸಲಾಗಿದೆ. ಮುಂದುವರೆದು ತಮ್ಮ ವರದಿಯಲ್ಲಿ ಉಪನಿರ್ದೇಶಕರು ಕುರಿತಾಗಿ ಕೆಲವು ತಪ್ಪಾದ ಮತ್ತು ಆಕ್ಷೇಪಾರ್ಹ ವಿಷಯ ಪ್ರಕಟಿಸಲಾಗಿದ್ದು ಸಮಂಜಸವಲ್ಲ. ನನ್ನ 5 ತಿಂಗಳ ಸೇವಾ ಅಧಿಯಲ್ಲಿ ಈಗಾಗಲೇ ಒಟ್ಟು 07 ದೂರು ದಾಖಲಾಗಿದ್ದು, ಯಾವುದೇ/ಯಾರದೇ ಒತ್ತಡವಿಲ್ಲದೇ ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮುಂದುವರೆದು ಅಂತಹ ಕೃತ್ಯಗಳನ್ನು ಕಂಡುಬಂದಲ್ಲಿ ತಾವು ನೇರವಾಗಿ ತಾಲ್ಲೂಕು ತಹಶೀಲ್ದಾರರು/ಆಹಾರ ಶಿರಸ್ತೆದಾರರನ್ನು ಸಮಪರ್ಕಿಸಿ ದೂರು ದಾಖಲಿಸಿ ಆಥವಾ ನೇರವಾಗಿ ಉಪನಿರ್ದೇಶಕರಿಗೆ ಸೂಕ್ತ ಮಾಹಿತಿ ನೀಡಿದಲ್ಲಿ ಸಂಬಂಧಿಸಿದವರ ಮೇಲೆ ಕೇಸ್ ದಾಖಲಿಸಲು ಕ್ರಮವಹಿಸಲಾಗುವುದು.
ಈ ರೀತಿಯ ಪತ್ರ ಬರೆದು ಕೈ ತೊಳೆದುಕೊಂಡಿರುವ ಮಾನ್ಯ ಸೋಮಶೇಖರ ಬಿರಾದರ ಸಾಹೇಬರು ನಮ್ಮ ವರದಿಯಲ್ಲಿ ಉಲ್ಲೇಖಿಸಲಾದ ಗೋಡೌನ್ ಅಥವಾ ಗಲ್ಲಿಗಳಲ್ಲಿರುವ ಪಡಿತರ ಅಕ್ಕಿ ಅಕ್ರಮ ಸಂಗ್ರಹ ಅಡ್ಡೆಯ ಮೇಲೆ ಒಂದೇ ಒಂದು ದಾಳಿ ಮಾಡಿಲ್ಲ. ಕೊನೆ ಪಕ್ಷ ನಾವು ಬರೆದ ಸ್ಥಳಗಳಿಗೆ ನಾಮಕಾವಸ್ತೆಯಾದರೂ ಭೇಟಿ ನೀಡಿಲ್ಲ. ಹೋಗಲಿ ಸ್ಥಳೀಯ ಅಧಿಕಾರಿಗಳಾದರೂ ಆ ಕೆಲಸ ಮಾಡಿದ್ದಾರಾ ಎಂದು ವಿಚಾರಿಸಿದರಾ ಅಂದರೆ ಅದೂ ಇಲ್ಲ. ಈ 05 ತಿಂಗಳ ಹಿಂದೆ ಮಾಡಿದ ಸಾಧನೆ ಹೇಳಿ ನಮ್ಮ ಮೇಲೆ ವಿನಾಕಾರಣ ತಪ್ಪಾದ ಮತ್ತು ಆಕ್ಷೇಪಾರ್ಹ ವರದಿ ಬರೆದಿದ್ದೀರಿ ಎಂದು ಅವಲತ್ತುಕೊಂಡಿದ್ದಾರೆಯೇ ಹೊರತು. ಒಂದೇ ಒಂದು ಪ್ರಕರಣ ದಾಖಲಿಸಿಲ್ಲ. ಹೋಗಲಿ ಈ ಪಡಿತರ ಅಕ್ಕಿ ಅಕ್ರಮ ಸಾಗಣೆ ದಂಧೆಗೆ ಅಲ್ಪ, ಸ್ವಲ್ಪ ವಾದರೂ ಕಡಿವಾಣ ಬಿದ್ದಿದೆಯಾ ಅಂದರೆ ಅದೂ ಇಲ್ಲ. ಸದ್ಯಕ್ಕೆ ದಂಧೆಕೋರರು ಇನ್ನೂ ನಿರ್ಭಯವಾಗಿ ಬಿಂದಾಸಾಗಿ ದಂಧೆ ನಡೆಸುತ್ತಿದ್ದಾರೆ.
ಇನ್ನಾದರೂ ಮಾನ್ಯ ಸೋಮಶೇಖರ ಬಿರಾದರ ಸಾಹೇಬರು ಜಿಲ್ಲಾ ಸಂಚಾರ ಆರಂಭಿಸಲಿ. ಕೊನೆ ಪಕ್ಷ ಅಕ್ಕಿ ದಂಧೆಕೋರರಾದರೂ ಈ ದೊಡ್ಡ ಸಾಹೇಬರಿಗೆ ಹೆದರುತ್ತಾರೋ ಇಲ್ಲವೋ ಗೊತ್ತಾಗಲಿ. ಹುದ್ದೆ ಯಾವುದೇ ಇರಲಿ ಆ ಹುದ್ದೆಗೆ ಒಂದು ಘನತೆ ತಂದು ಕೊಡುವವನೇ ನಿಜವಾದ ನಿಷ್ಠಾವಂತ ಅಧಿಕಾರಿ ಎನಿಸಿಕೊಳ್ಳುತ್ತಾನೆ. ಆ ನಿಟ್ಟಿನಲ್ಲಿ ಮಾನ್ಯ ಸೋಮಶೇಖರ ಬಿರಾದರ ಸಾಹೇಬರು ಶ್ರಮಿಸಲಿ ಎಂಬುದು ಸಾರ್ವಜನಿಕರ ಹಾಗೂ ಪತ್ರಿಕೆಯ ಆಶಯ.