ಉದ್ಯಮಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡರಾ ಕಂದಾಯ ಅಧಿಕಾರಿಗಳು..!?
ರಣಬೇಟೆ ನ್ಯೂಸ್ ಕೊಪ್ಪಳ, ಜು.26: ತಾಲೂಕಿನ ಕೊಪ್ಪಳ ಹೊಬಳಿಯ ಮಂಗಳಾಪೂರ ಗ್ರಾಮದ ಸರ್ವೆ ನಂ.19ರ ಜಮೀನಿನ ಅಕ್ಕ ಪಕ್ಕದ ಸರ್ಕಾರದ ಎರಡು ಎಕರೆ ಜಮೀನು ಹಾಗೂ ಬೆಟ್ಟ, ಗುಡ್ಡಗಳನ್ನು ಒತ್ತುವರಿ ಮಾಡಿರುವ ಉದ್ಯಮಿ ಜಿತೇಂದ್ರ ತಾಲೇಡಾ ಅವರಿಂದ ಜಮೀನನ್ನು ವಶಪಡಿಸಿಕೊಂಡು ಸರ್ಕಾರಿ ಜಮೀನಿಗೆ ಹಾಕಿಕೊಂಡಿರುವ ತಂತಿ ಬೇಲಿ ತೆರವುಗೊಳಿಸಬೇಕು. ಸರ್ಕಾರಿ ಜಮೀನು ಒತ್ತುವರಿ ಮಾಡಿರುವ ತಾಲೇಡಾ ವಿರುದ್ಧ ಶಿಸ್ತುಕ್ರಮ ಕೈಗೊಂಡು ಪ್ರಕರಣ ದಾಖಲಿಸುವಂತೆ ಸಾಮಾಜಿಕ ಹೋರಾಟಗಾರ ಮುತ್ತಪ್ಪ ದೊಡ್ಮನಿ ತಹಶಿಲ್ದಾರರಿಗೆ ದೂರು ಸಲ್ಲಿಸಿದ್ದರು.
ಈ ಬಗ್ಗೆ ದೂರಿನಲ್ಲಿ ಕೊಪ್ಪಳ ಹೊಬಳಿಯ ಮಂಗಳಾಪೂರ ಗ್ರಾಮದ ಸರ್ವೆ ನಂ.19ರ ಜಮೀನಿನ ಮಾಲೀಕ ಜಿತೇಂದ್ರ ತಾಲೇಡಾ ರೀಯಲ್ ಎಸ್ಟೇಟ್ ಉದ್ಯಮಿಯಾಗಿದ್ದು ಇವರು ಮಂಗಳಾಪುರ ಗ್ರಾಮದ ಸರ್ವೇ ನಂಬರ್ 19ರ 9 ಎಕರೆ 20 ಗುಂಟೆ ಜಮೀನನ್ನು ಕೊಂಡು ಕೊಂಡಿದ್ದಾರೆ. ಅದರ ಪಕ್ಕದ ಸರ್ವೇ ನಂ 18 ಮತ್ತು ಇವರ ಜಮೀನಾದ ಸರ್ವೇ 19 ರ ಜಮೀನಿಗೆ ಹೊಂದಿಕೊಂಡಂತೆ ಸರ್ಕಾರಕ್ಕೆ ಮತ್ತು ಅರಣ್ಯ ಇಲಾಖೆಯವರಿಗೆ ಸೇರಿದ ಬೆಟ್ಟ, ಗುಡ್ಡವಿದ್ದು ಜಿತೇಂದ್ರ ತಾಲೇಡಾ ಅಂದಾಜು 2 ಎಕರೆಗೂ ಅಧಿಕ ಗುಡ್ಡವನ್ನು ಒತ್ತುವರಿ ಮಾಡಿ ತಂತಿಯಿಂದ ಬೇಲಿಯನ್ನು ಹಾಕಿಕೊಂಡಿದ್ದಾರೆ. ಸಾಲದೆಂಬಂತೆ ಜೆಸಿಬಿ ಯಂತ್ರಗಳಿಂದ ಗುಡ್ಡದಲ್ಲಿ ಹಲವಾರು ಕಡೆಗಳಲ್ಲಿ ಸ್ವಚ್ಚ ಮಾಡಿಸಿ ಹತ್ತಾರು ಟ್ರಕ್‍ಗಳಿಂದ ಗರಸು ಹಾಕಿಸಿಕೊಂಡಿದ್ದಾರೆ. ಈ ಮೂಲಕ ಜಿತೇಂದ್ರ ತಾಲೇಡಾ ಅವರು ಸರ್ಕಾರದ ಜಮೀನನ್ನು ಕೊಳ್ಳೆ ಹೊಡೆಯಲು ಈ ರೀತಿಯ ಸಂಚನ್ನು ಹೂಡಿದ್ದಾರೆ ಎಂದು ವಿವರಿಸಿ ಮಾರ್ಚ್ 29ರಂದು ದೂರು ಸಲ್ಲಿಸಲಾಗಿತ್ತು.

ಈ ದೂರಿಗೆ ಸ್ಪಂದಿಸಿದ ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮದ ಪಂಚರು ಹಾಗೂ ದೂರುದಾರರ ಸಮ್ಮುಖದಲ್ಲಿ ಸರ್ವೆ ನಡೆಸಿ ಜಿತೇಂದ್ರ ತಲೇಡಾ ಅವರು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ತಂತಿ ಬೇಲಿ ಹಾಕಿದ್ದರ ಬಗ್ಗೆ ವರದಿ ನೀಡಿದ್ದರು. ಅದರಂತೆ ಕಂದಾಯ ಅಧಿಕಾರಿಗಳು ಕೂಡಾ ಎರಡು ಎಕರೆ ಸರ್ಕಾರಿ ಭೂಮಿಯನ್ನು ತೆರವುಗೊಳಸಲು ತಲೇಡಾ ಅವರಿಗೆ ನೋಟೀಸ್ ಕಳಿಸಿತ್ತು. ಆದರೆ ಕಂದಾಯ ಅಧಿಕಾರಿಗಳ ನೋಟೀಸ್ ಗೆ ಸ್ಪಂದಿಸಿದಂತೆ ನಾಟಕವಾಡಿದ ತಲೇಡಾ ಎರಡು ಎಕರೆ ಜಮೀನಿನಲ್ಲಿ ರೈತರಿಗೆ ಬಹುಪಯೋಗಿಯಾಗಿದ್ದ ನೀರಿನ ಹಳ್ಳವನ್ನು ಮುಚ್ಚಿ 38 ಗುಂಟೆ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾನೆ. ಈ ಬಗ್ಗೆ ಕಂದಾಯ ಅಧಿಕಾರಿಗಳ ಗಮನಕ್ಕೆ ತಂದ ದೂರುದಾರ, ಸಾಮಾಜಿಕ ಹೋರಾಟಗಾರ ಮುತ್ತಪ್ಪ ದೊಡ್ಮನಿ ಅವರು ಹಳ್ಳ ಒತ್ತುವರಿಯನ್ನೂ ತರವುಗೊಳಿಸಬೇಕು ಎಂದು ಒತ್ತಾಯಿಸಿದ್ದರು.

ಸದ್ಯಕ್ಕೆ ಹಳ್ಳದ ಒತ್ತುವರಿಗೆ ಸಂಬಂಧಿಸಿದಂತೆ ತಹಶೀಲ್ದಾರ ವಿಠಲ್ ಚೌಗಲೆ ಅವರು 22 ಜುಲೈ ರೊಳಗೆ ಹಳ್ಳದ ಒತ್ತುವರಿಯನ್ನು ತೆರವುಗೊಳಸಲು ತಲೇಡಾಗೆ ನೋಟೀಸ್ ನೀಡಿದ್ದಾರೆ. ಆದರೆ ಗಡವು ಮುಗಿದು ಐದಾರು ದಿನಗಳು ಕಳೆದರೂ ಹಳ್ಳ ಒತ್ತುವರಿ ತೆರವು ಕಾರ್ಯ ಆರಂಭವಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ತಲಾಟಿ ನಿಂಗಮ್ಮ, ಕಂದಾಯ ನಿರೀಕ್ಷಕ ಸುರೇಶ ಹಾಗೂ ತಹಶೀಲ್ದಾರ ವಿಠಲ್ ಚೌಗಲೆ ಅವರು ಒತ್ತುವರಿಯಾದ 38 ಗುಂಟೆ ಹಳ್ಳದ ಜಾಗವನ್ನು ತೆರವುಗೊಳಿಸದೇ ವಿಳಂಭ ನೀತಿ ಅನುಸರಿಸುತ್ತಿದ್ದಾರೆ. ಜಿತೇಂದ್ರ ತಲೇಡಾ ವಿರುದ್ದ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಹಿಂದೇಟು ಹಾಕುತ್ತಿರುವು ಶಂಕೆ ಮೂಡಿಸಿದೆ.
ಹೀಗಾಗಿ ಈ ಅಧಿಕಾರಿಗಳಿಂದ ನ್ಯಾಯ ಸಿಗುವ ಭರವಸೆ ಕಾಣದ ಕಾರಣ ಈ ಮೂವರು ಅಧಿಕಾರಿಗಳನ್ನು ಈ ಪ್ರಕರಣದಲ್ಲಿ ಪ್ರಮುಖ ಹೊಣೆಗಾರರನ್ನಾಗಿಸಿ ಕರ್ತವ್ಯ ಲೋಪದಡಿ ನ್ಯಾಯಾಲಯದಲ್ಲಿ ದಾವೆ ಹೂಡಿ ಕಾನೂನು ಹೋರಾಟ ಮಾಡಲಾಗುವುದು ಎಂದು ದೂರುದಾರ, ಸಾಮಾಜಿಕ ಹೋರಾಟಗಾರ ಮುತ್ತಪ್ಪ ದೊಡ್ಮನಿ ಎಚ್ಚರಿಸಿದ್ದಾರೆ.
ಸರ್ವೆ ನಂ.19ರ ಜಮೀನಿಗೆ ಹೊಂದಿಕೊಂಡಂತೆ ನೈಸರ್ಗಿಕ ಹಳ್ಳ ಇದ್ದು, ಈ ಹಳ್ಳವನ್ನು ಒತ್ತುವರಿ ಮಾಡಿ ಮಣ್ಣು, ಮರಮ್ ನಿಂದ ಮುಚ್ಚಿ ಅದಕ್ಕೂ ಕೂಡ ತಂತಿ ಬೇಲಿಯನ್ನು ಹಾಕಲಾಗಿದೆ. ಸದರಿ ಹಳ್ಳವು ಕರಾಬು ಜಾಗವಾಗಿದ್ದು, ಇದನ್ನು ಕೂಡ ಮುಚ್ಚಿಹಾಕಿ ತಲೇಡಾ ಅವರು ಹೊಲವನ್ನು ನಿರ್ಮಿಸಿಕೊಂಡಿದ್ದಾರೆ. ಇದರಿಂದ ಮಳೆಗಾಲದಲ್ಲಿ ಅಕ್ಕ ಪಕ್ಕ ಜಮೀನಿನ ರೈತರಿಗೆ, ಜಾನುವಾರುಗಳಿಗೆ ನೀರಿನ ಆಸರೆಯಾಗಿದ್ದ ಹಳ್ಳವು ಈಗ ಇಲ್ಲದಂತಾಗಿದೆ. ನೀರಿನ ಮೂಲ ಹರಿವನ್ನು ಕಳೆದಿಕೊಂಡಿರುವುದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ ಎಂಬುದು ದೂರುದಾರ, ಸಾಮಾಜಿಕ ಹೋರಾಟಗಾರ ಮುತ್ತಪ್ಪ ದೊಡ್ಮನಿ ಅವರ ಗಂಭೀರ ಆರೋಪವಾಗಿದೆ.