ಕರ್ತವ್ಯಲೋಪ ಹಿನ್ನಲೆಯಲ್ಲಿ ಸಗಟು ಮಳಿಗೆ ವ್ಯವಸ್ಥಾಪಕ ಸೋಮಶೇಖರ ಅಮಾನತು

ರಣಬೇಟೆ ನ್ಯೂಸ್

ಗಂಗಾವತಿ, ಆ.27: ನಗರದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಸಗಟು ಮಳಿಗೆಯ ಕಿರಿಯ ಸಹಾಯಕ ಹಾಗೂ ವ್ಯವಸ್ಥಾಪಕ ಸೋಮಶೇಖರ ಅವರನ್ನು ಕರ್ತವ್ಯಲೋಪ ಹಾಗೂ ಬೇಜವಾಬ್ದಾರಿ ನಡೆ ಹಿನ್ನಲೆಯಲ್ಲಿ ಅಮಾನತುಗೊಳಿಸಿ ಕರ್ನಾಟಕ ಸೇವಾ ಆಯೋಗ ಪ್ರಧಾನ ವ್ಯವಸ್ಥಾಪಕ ಹಾಗೂ ಶಿಸ್ತು ಪ್ರಾಧಿಕಾರ ಅಧಿಕಾರಿ ಸಿ.ಎನ್.ಮಂಜುನಾಥ ಅವರು ಮಂಗಳವಾರದಂದು ಆದೇಶ ಹೊರಡಿಸಿದ್ದಾರೆ.
2022ರ ಜೂನ್ 15ರಂದು ಗಂಗಾವತಿ ತಾಲೂಕಿನ ವಿದ್ಯಾನಗರ ಬಡಾವಣೆಯ ಗೌರಿಶಂಕರ ರೈಸ್‍ಮಿಲ್‍ನಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದೆ ಎಂದು ಬಂದ ದೂರಿನ ಮೇರೆಗೆ ಅಂದಿನ ಉಪನಿರ್ದೇಶಕರು ಮತ್ತು ಗಂಗಾವತಿ ತಹಸೀಲ್ದಾರ್ ಕಚೇರಿ ಆಹಾರ ಇಲಾಖೆ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಯಾವುದೇ ದಾಖಲೆ ಇಲ್ಲದೆ ಅಕ್ರಮವಾಗಿ ಸಂಗ್ರಹಿಸಿದ್ದ 168.40 ಕ್ವಿಂಟಾಲ್ ಅಕ್ಕಿಯನ್ನು ಅಗತ್ಯ ವಸ್ತುಗಳ ಕಾಯ್ದೆ 1955 ಅಡಿ ವಶಪಡಿಸಿಕೊಂಡು ಕಾಯ್ದೆಯ ಸೆಕ್ಷನ್ 3 ಮತ್ತು 7ರಂತೆ ಕ್ರಮಕ್ಕಾಗಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿ ಗಂಗಾವತಿ ಸಗಟು ಮಳಿಗೆಯಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಾದಿ-ಪ್ರತಿವಾದಿಗಳ ಹೇಳಿಕೆಯನ್ನು ಆಲಿಸಿ ಹಾಗೂ ಅರ್ಜಿದಾರರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ ಜಪ್ತಿ ಮಾಡಲಾದ 168.40 ಕ್ವಿಂಟಾಲ್ ಅಕ್ಕಿಯನ್ನು ಬಿಡುಗಡೆಗೊಳಿಸುವಂತೆ 2025 ಫೆಬ್ರುವರಿ 27ರಂದು ಆದೇಶ ಹೊರಡಿಸಲಾಗಿತ್ತು.

ಜಿಲ್ಲಾಧಿಕಾರಿಗಳ ನ್ಯಾಯಾಲಯದ ಆದೇಶದಂತೆ ಅಕ್ಕಿಯನ್ನು ಬಿಡುಗಡೆಗೊಳಿಸುವ ಸಂದರ್ಭದಲ್ಲಿ 168.40 ಕ್ವಿಂಟಾಲ್ ಅಕ್ಕಿಯ ಬದಲಾಗಿ ಲಾರಿಯಲ್ಲಿ ಹೆಚ್ಚುವರಿಯಾಗಿ ಅಕ್ಕಿಯನ್ನು ತುಂಬಿಸಿರುವುದಾಗಿ ಗ್ಯಾರಂಟಿ ತಾಲೂಕು ಅಧ್ಯಕ್ಷ ಹಾಗೂ ಕನ್ನಡಪರ ಸಂಘಟನೆಗಳು ದೂರು ನೀಡಿದ ಮಾಹಿತಿಯನ್ನು ಆಧರಿಸಿ ಸ್ಥಳೀಯ ತಾಲೂಕಿನ ತಹಸೀಲ್ದಾರ್, ಆಹಾರ ಶಿರಸ್ತೆದಾರ ಹಾಗೂ ಆಹಾರ ನಿರೀಕ್ಷಕರು ಸ್ಥಳ ಪರಿಶೀಲನೆ ಮಾಡಲಾಗಿ ಹೆಚ್ಚುವರಿ ಪ್ರಮಾಣದ ಅಕ್ಕಿಯನ್ನು ಲಾರಿಗೆ ತುಂಬಿರುವುದು ನಿಜವೆಂದು ಮೌಖಿಕವಾಗಿ ವರದಿ ನೀಡಿದ ಹಿನ್ನಲೆಯಲ್ಲಿ ಸದರಿ ಗೋದಾಮು ವ್ಯವಸ್ಥಾಪಕ ಸೋಮಶೇಖರ ಇವರು ಕರ್ತವ್ಯಲೋಪ ಎಸಗಿರುವುದು ಹಾಗೂ ಬೇಜವಾಬ್ದಾರಿ ನಡೆ ಮೇಲ್ನೋಟಕ್ಕೆ ಸಾಬೀತಾದ ಹಿನ್ನಲೆಯಲ್ಲಿ ತಕ್ಷಣ ಸದರಿ ಸಿಬ್ಬಂದಿಯನ್ನು ಅಮಾನತುಗೊಳಿಸಿ ಶಿಸ್ತುಕ್ರಮ ಕೈಗೊಳ್ಳುವಂತೆ ಜಿಲ್ಲಾ ವ್ಯವಸ್ಥಾಪಕರು ಕೊಪ್ಪಳ ಇವರು ಉಲ್ಲೇಖಿತ ಪತ್ರದ ಅನ್ವಯ ಕೋರಿರುತ್ತಾರೆ.
ಈ ಹಿನ್ನಲೆಯಲ್ಲಿ ಸೋಮಶೇಖರ ಇವರನ್ನು ಕರ್ನಾಟಕ ಸೇವಾ ಆಯೋಗ ಪ್ರಧಾನ ವ್ಯವಸ್ಥಾಪಕ ಹಾಗೂ ಶಿಸ್ತು ಪ್ರಾಧಿಕಾರ ಅಧಿಕಾರಿ ಸಿ.ಎನ್.ಮಂಜುನಾಥ ಅವರು ಕೆಸಿಎಸ್ (ಸಿ.ಸಿ.ಎ.) ನಿಯಮಗಳು 1957ರ ನಿಯಮ 10 (01)(ಡಿ) ಅನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸಿ ಸೋಮಶೇಖರ ಅವರನ್ನು ತಕ್ಷಣ ಜಾರಿಗೆ ಬರುವಂತೆ ಇಲಾಖೆ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಅಮಾನತ್ತಿನ ಅವಧಿಯಲ್ಲಿ ನಿಯಮಾನುಸಾರ ಜೀವನಾಧಾರ ಭತ್ಯೆಯನ್ನು ಪಡೆಯಲು ಅರ್ಹರಾಗಿರುತ್ತಾರೆ ಹಾಗೂ ಸಕ್ಷಮ ಪ್ರಾಧಿಕಾರಿಯವರ ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ ಎಂದು ಆದೇಶ ಹೊರಡಿಸಲಾಗಿದೆ.

error: Content is protected !!
Scroll to Top