ದಲಿತ ಯುವಕರ ದಾರಿದೀಪ, ಸರ್ವ ಸಮುದಾಯದ ಸ್ನೇಹಿತ
ರಣಬೇಟೆ ನ್ಯೂಸ್ ಕೊಪ್ಪಳ.ಆ.25: ಕೆಲವರು ಇರುತ್ತಾರೆ, ಯಾವುದೇ ಸ್ವಾರ್ಥ ಮನೋಭಾವ, ಲಾಭ, ನಷ್ಟದ ಹಂಗಿಲ್ಲದೇ ಥಟ್ಟಂತ ನೆರವಿಗೆ ಧಾವಿಸಿ ಬಿಡುತ್ತಾರೆ. ಅವರಿದ್ದಲಿ ಬೆಟ್ಟದಂತಹ ಸಮಸ್ಯೆಗಳು ಮಂಜಿನಂತೆ ಕರಗಿಬಿಡುತ್ತವೆ. ಅವರ ಸುತ್ತಮುತ್ತಲಿನ ವಾತಾವರಣ ಆಹ್ಲಾದಕರ ಹಾಗೂ ನೆಮ್ಮದಿಯ, ಸಾಂತ್ವನದ, ಭರವಸೆಯ ತಾಣದಂತಾಗಿ ಬಿಡುತ್ತವೆ. ಅಂತಹ ಅಪರೂಪದ ಗುಣ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿ ಸರ್ವ ಸಮುದಾಯದ ಸ್ನೇಹಜೀವಿ ದಲಿತ ಮುಖಂಡ ಗೂಳಪ್ಪ ಹಲಗೇರಿ.
ಪಾದರಸದಂತೆ ಸದಾ ಲವಲವಿಕೆಯಿಂದ ಹಸನ್ಮುಖದೊಂದಿಗೆ ಜನಸಾಮಾನ್ಯರೊಂದಿಗೆ ಬೆರೆಯುವ ಈ ಗೂಳಪ್ಪ ಹಲಗೇರಿ ಎಂದರೆ ಯುವಕರಿಗೆ ಒಂದು ಪ್ರೇರಣಾ ಶಕ್ತಿ, ದುರ್ಬಲರಿಗೆ ಭರವಸೆಯ ಬೆಳಕು. ದಲಿತ ಸಮುದಾಯದಲ್ಲಿ ಹುಟ್ಟಿದ ಇವರು, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶ ಚಿಂತನೆಗಳನ್ನು ಮೈಗೂಡಿಸಿಕೊಂಡ ಬೆಳೆದವರು. ಹೀಗಾಗಿಯೇ ಇವರು ಸದಾ ಶೋಷಿತ ವರ್ಗದ ಪರ ಸದಾ ನಿಲ್ಲುತ್ತಾರೆ. ಸಾಮಾಜಿಕ ನ್ಯಾಯದಡಿ ಕಾರ್ಯನಿರ್ವಹಿಸುವ ಇವರ ಸದ್ಗುಣವೇ ಇಂದು ಈ ಹಂತದ ಬೆಳವಣಿಗೆಗೆ ಕಾರಣವಾಗಿದೆ. ಸದಾ ಒಂದಿಲ್ಲೊಂದು ಹೋರಾಟದ ಮೂಲಕವೇ ಜನಮಾನಸದಲ್ಲಿ ಗುರುತಿಸಿಕೊಂಡಿರುವ ಗೂಳಪ್ಪನವರು ನಡೆದು ಬಂದ ಹಾದಿ ಹೂವಿನ ಹಾಸಿಗೆಯೇನಲ್ಲ. ನೂರಾರು ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಂತು ಬೆಳೆದ ಇವರದು ಹೋರಾಟದ ಬದುಕು.

ಬಡತನದಲ್ಲಿಯೇ ಬೆಳೆದು ಬಂದ ಇವರು ಇತ್ತೀಚೆಗೆ ಆರ್ಥಿಕವಾಗಿ ಸ್ಥಿತಿವಂತರಾಗಿರಬಹುದು. ಆದರೆ ಅಂದಿನ ಬಡತನದ ದಿನಗಳನ್ನು ಇವರು ಮರೆತಿಲ್ಲ. ಹೀಗಾಗಿಯೇ ಇವರಲ್ಲಿ ಇನ್ನೂ ದಯೆ, ದಾನ, ಧರ್ಮ, ಮಾನವೀಯತೆ ಗುಣಗಳು ಮನೆ ಮಾಡಿವೆ. ಅಹಂನ್ನು ಹತ್ತಿರಕ್ಕೂ ಸುಳಿಯಗೊಡದ ಇವರ ವಿನಯತನ ಇಂದಿನ ಯುವಕರಿಗೆ ಪ್ರೇರಣೆಯಾಗಿದೆ. ಎಡಗೈಯಲ್ಲಿ ಮಾಡಿದ ಸಹಾಯ ಬಲಗೈಗೂ ತಿಳಿಯಗೊಡದ ಇವರ ಸರಳತೆ ಹಾಗೂ ಜನಸಾಮಾನ್ಯರ ಸಣ್ಣ ಸಮಸ್ಯೆಗೂ ಸ್ಪಂದಿಸುವ ಗುಣವೇ ಇಂದು ಜನರಲ್ಲಿ ಯಾವುದೇ ಸಮಸ್ಯೆ ಎದುರಾದರೂ ಹಲಗೇರಿ ಗೂಳಪ್ಪ ಇದ್ದಾರೆ ಎಂಬ ಭರವಸೆ ಮೂಡಿಸಿದೆ. ಹೀಗಾಗಿಯೇ ಇವರು ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ ಹಿಂದುಳಿದ ವರ್ಗದ ಪ್ರಭಾವಿ ನಾಯಕರಾಗಿ ಜನಪ್ರಿಯತೆ ಗಳಿಸುತ್ತಿದ್ದಾರೆ. ಕಠಿಣ ಪರಿಶ್ರಮ, ಸಂಘಟನಾ ಚತುರತೆ ಜೊತೆಗೆ ಸರ್ವ ಸಮುದಾಯದ ಜೊತೆಗಿನ ಒಡನಾಟ ಹಾಗೂ ಜಾತ್ಯಾತೀತ ಮನೋಭಾವವೇ ಇವರನ್ನು ಉನ್ನತ ಸ್ಥಾನಕ್ಕೇರುವಂತೆ ಮಾಡಿದೆ. ಹೋರಾಟದ ಬದುಕನ್ನೇ ತಮ್ಮ ಉಸಿರಾಗಿಸಿಕೊಂಡು ಬಂದುದರ ಫಲವಾಗಿ ರಾಜಕಾರಣದಲ್ಲಿ ಬಲವಾದ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಈ ಹಿಂದೆ ಗೊಂಡಬಾಳ ಕ್ಷೇತ್ರದ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿದ್ದ ಇವರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಶಾಶ್ವತ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕಳೆದ ಬಾರಿ ಇವರ ಧರ್ಮಪತ್ನಿಯೂ ಕೂಡ ಗಿಣಿಗೇರಿ ಕ್ಷೇತ್ರದ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿ ನಂತರ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ಹಲವಾರು ಜನಪರ ಕಾರ್ಯಗಳನ್ನು ಮಾಡಿದ್ದಾರೆ.

ಕೊಪ್ಪಳದ ವ್ಹೈಟ್ ಹೌಸ್ ಎಂದೇ ಖ್ಯಾತಿ ಪಡೆದ ರಾಜಕೀಯ ನಾಯಕರ ಪವರ್ ಹೌಸ್ ಹಿಟ್ನಾಳ್ ಫ್ಯಾಮಿಲಿಯ ಗರಡಿಯಲ್ಲಿ ಪಳಗಿರುವ ಗೂಳಪ್ಪ ಹಲಗೇರಿ ಅವರಿಗೆ ರಾಜಕೀಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ರಾಜಕೀಯ ಗುರು. ರಾಜಕೀಯ ತಂತ್ರಗಾರಿಕೆಯಲ್ಲಿ ಪಳಗಿರುವ ಹಾಗೂ ಕ್ಷೇತ್ರದ ಮತದಾರರ ನಾಡಿಮಿಡಿ ಬಲ್ಲ ಗೂಳಪ್ಪ ಸೋಲಿಲ್ಲದ ಸರದಾರರಾಗಿ ಮುನ್ನುಗ್ಗುತ್ತಿದ್ದಾರೆ. ನಿರಂತರ ಪರಿಶ್ರಮದಿಂದ ಜಿಲ್ಲಾ ಪಂಚಾಯತಿ ಸದಸ್ಯ ಹಾಗೂ ಜಿಲ್ಲಾಡಳಿತ ಕೃಷಿ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಇವರು ಪ್ರಸ್ತುತ ಶಿರಟ್ಟಿ ಕ್ಷೇತ್ರದ ಶಾಸಕ ಸ್ಥಾನದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ನಿರಂತರ ಸರ್ವ ಸಮುದಾಯದ ಜನರೊಂದಿಗೆ ಬೆರೆತು, ದಲಿತ ಸಮುದಾಯದ ಹೋರಾಟಗಳಲ್ಲಿ ತೊಡಗಿಕೊಂಡು ಯುವ ಸಮೂಹವನ್ನು ಬೆನ್ನುತಟ್ಟಿ ಪ್ರೋತ್ಸಾಹಹಿಸುತ್ತಿರುವ ಗೂಳಪ್ಪ ಹಲಗೇರಿ ಅವರು ಅಜಾತ ಶತ್ರು. ಇವರ ರಾಜಕೀಯ ಜೀವನ ಉತ್ತುಂಗಕ್ಕೆ ಏರಲಿ. ಇನ್ನೂ ಹೆಚ್ಚಿನ ಸ್ಥಾನಮಾನಗಳು ಇವರದಾಗಲಿ ಎಂಬುದು ಪತ್ರಿಕೆಯ ಸದಾಶಯ.