ಕುಕನೂರು ತಾಲೂಕು ಗ್ರಾ.ಪಂ. ವ್ಯಾಪ್ತಿಯ ಅಧಿಕಾರಿಗಳ ಎದೆಯಲ್ಲಿ ಢವಢವ
ರಣಬೇಟೆ ನ್ಯೂಸ್
ಕೊಪ್ಪಳ, ಸೆ.10: ಜಿಲ್ಲೆಯ ಕುಕನೂರು ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಯಲ್ಲಿ ದುಡಿಯುವ ಕೈಗಳಿಗೆ ಕೆಲಸ ಕೊಡಬೇಕಾದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿ 2020ರಿಂದ 2024ರ ಡಿಸೆಂಬರ್ 10ರ ವರೆಗೆ ಸಾಮಾಜಿಕ ಲೆಕ್ಕ ಪರಿಶೋಧನೆ ಅಡಿಯಲ್ಲಿ ವಸೂಲಾತಿ ಮತ್ತು ಆಕ್ಷೇಪಣೆ ಮೊತ್ತವನ್ನು ಸರಕಾರಕ್ಕೆ ಜಮಾ ಮತ್ತು ತಿರುವಳಿ ಮಾಡದೇ ಸರಕಾರಕ್ಕೆ ವಂಚಿಸಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಇನ್ನಿತರ ಸಿಬ್ಬಂದಿಗಳ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಂಡು ಸರಕಾರಕ್ಕೆ ಜಮೆ ಮಾಡುವಂತೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ಮುತ್ತು ತಂದೆ ಶರಣಪ್ಪ ದೊಡ್ಡಮನಿ ನೀಡಿರುವ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣೀತ್ ನೇಗಿ ಅವರು ತಾಲೂಕಿನ 15 ಗ್ರಾಮ ಪಂಚಾಯಿತಿಗಳ ವಿರುದ್ಧದ ದೂರು ಕುರಿತಂತೆ ನಿಯಮಾನುಸಾರ ಪರಿಶೀಲಿಸಿ ವಸೂಲಾತಿ ಮತ್ತು ಆಕ್ಷೇಪಣಾ ಮೊತ್ತವನ್ನು ಸರಕಾರಕ್ಕೆ ಭರಣ ಮಾಡಲು ಅಗತ್ಯಕ್ರಮ ಕೈಗೊಳ್ಳುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಬಿರಾದಾರ್ ಅವರಿಗೆ ಆದೇಶ ಹೊರಡಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಈ ಆದೇಶದಿಂದಾಗಿ ಕುಕನೂರು ತಾಲೂಕಿನ ಒಟ್ಟು 15 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ತಾಂತ್ರಿಕ ಸಹಾಯಕರು ಮತ್ತು ಸಹಾಯಕ ನಿರ್ದೇಶಕರು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಎದೆಯಲ್ಲಿ ಢವಢವ ಶುರುವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಕನೂರು ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಯ ಮಾಜಿ ಮತ್ತು ಹಾಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಾಂತ್ರಿಕ ಸಹಾಯಕರು ಮತ್ತು ಸಹಾಯಕ ನಿರ್ದೇಶಕರು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕಪರಿಶೋಧನೆ ವರದಿಯಿಂದ 2020ರಿಂದ ಡಿಸೆಂಬರ್ 19, 2024ರ ವರೆಗೆ ವಸೂಲಾತಿ ಮತ್ತು ಆಕ್ಷೇಪಣಾ ಮೊತ್ತವನ್ನು ಸರಕಾರಕ್ಕೆ ಜಮಾ ಮತ್ತು ತಿರುವಳಿ ಮಾಡಿರುವುದಿಲ್ಲ. ಸದರಿ ಬನ್ನಿಕೊಪ್ಪ ಗ್ರಾಮ ಪಂಚಾಯಿತಿ ರೂ.91,20,360, ರಾಜೂರು ಗ್ರಾಮ ಪಂಚಾಯಿತಿ ರೂ.35,06,807, ತಳಕಲ್ ಗ್ರಾಮ ಪಂಚಾಯಿತಿ ರೂ.9,69,601, ಶಿರೂರು ಗ್ರಾಮ ಪಂಚಾಯಿತಿ ರೂ.24,58,285, ಮಸಬಹಂಚಿನಾಳ ಗ್ರಾಮ ಪಂಚಾಯಿತಿ ರೂ.1,37,27,148, ನೆಲಜೇರಿ ಗ್ರಾಮ ಪಂಚಾಯಿತಿ ರೂ.81,61,781, ಮಂಗಳೂರು ಗ್ರಾಮ ಪಂಚಾಯಿತಿ ರೂ.91,72,026, ಮಂಡಲಗೇರಿ ಗ್ರಾಮ ಪಂಚಾಯಿತಿ ರೂ.56,69,542, ಕುದರಿಮೋತಿ ಗ್ರಾಮ ಪಂಚಾಯಿತಿ ರೂ.1,51,22,333, ಇಟಗಿ ಗ್ರಾಮ ಪಂಚಾಯಿತಿ ರೂ.34,49,881, ಬಾನಾಪುರ ಗ್ರಾಮ ಪಂಚಾಯಿತಿ ರೂ.72,30,525, ಹಿರೇಬೀಡನಾಳ ಗ್ರಾಮ ಪಂಚಾಯಿತಿ ರೂ.62,04,284, ಬೆಣಕಲ್ ಗ್ರಾಮ ಪಂಚಾಯಿತಿ ರೂ.42,39,351, ಬಳಗೇರಿ ಗ್ರಾಮ ಪಂಚಾಯಿತಿ ರೂ.17,10,658, ಯರೇಹಂಚಿನಾಳ ಗ್ರಾಮ ಪಂಚಾಯಿತಿ ರೂ.15,09,880 ಹೀಗೆ ವಿವಿಧ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು, ತಾಂತ್ರಿಕ ಸಹಾಯಕರು, ಗ್ರಾಮ ಪಂಚಾಯಿತಿ ಹಂತದಲ್ಲಿ ಈ ಮೂರು ಹಂತದ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಾಜ್ಯ ಸರಕಾರದ ಬೊಕ್ಕಸಕ್ಕೆ ಸೇರಬೇಕಾದ ಕೋಟ್ಯಂತರ ರೂಪಾಯಿ ಹಣ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಒಳಗೊಂಡಂತೆ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು (ನರೇಗಾ) ಮತ್ತು ತಾಲೂಕು ಸಹಾಯಕ ಲೆಕ್ಕಾಧಿಕಾರಿಗಳು, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಮತ್ತು ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು, ಸಾಮೂಹಿಕ ಲೆಕ್ಕಪರಿಶೋಧನೆ ಇವರ ಜೇಬು ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಸದರಿ ಕೋಟ್ಯಂತರ ರೂಪಾಯಿ ಹಣವನ್ನು ಇವರು ಕಾಮಗಾರಿ ನಿರ್ವಹಿಸದೇ ಹಣ ಪಾವತಿ, ನಿಗದಿಗಿಂತ ಹೆಚ್ಚುವರಿ ಸತ್ತವರ ಹೆಸರಿನಲ್ಲಿ ಕೂಲಿ ಹಣ ಪಾವತಿ, ಬೇರೆ ಯೋಜನೆಗೆ ಮನರೇಗಾ ಹಣ ಬಳಕೆ, ದೋಷಗಳಿದ್ದರೂ ಮಾಡಿದ ಪಾವತಿ, ಲೆಕ್ಕಪರಿಶೀಲನೆಗೆ ಒದಗಿಸಿದ ಕಡತಗಳು, ಪ್ರಕ್ರಿಯೆ ಉಲ್ಲಂಘನೆ ಪ್ರಕರಣಗಳು, ದೋಷಪೂರಿತ ವರದಿಗಳು ಈ ರೀತಿಯಾಗಿ ಹಲವಾರು ಹಂತಗಳಿಂದ ಸರಕಾರದ ಹಣವನ್ನು ಕೊಳ್ಳೆ ಹೊಡೆದಿದ್ದಾರೆ. ಸದರಿ ಆಕ್ಷೇಪಣೆ, ವಸೂಲಾತಿ ಹಣ ಬಂದರೆ ಜಿಲ್ಲಾ ಪಂಚಾಯಿತಿ ಬೊಕ್ಕಸಕ್ಕೆ ಸಮೃದ್ಧಿಯಾಗುತ್ತದೆ. ರಾಜ್ಯ ಸರಕಾರಕ್ಕೆ ಸೇರಬೇಕಾದ ಹಣ ವಸೂಲಿ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.

ಸದರಿ ಮೊತ್ತವನ್ನು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಸೆಕ್ಷನ್ 246 (1) ರಿಂದ (10)ರನ್ವಯ ಕ್ರಮಗಳನ್ನು ಕೈಗೊಂಡು ಅಡಹಾಕ್‍ನಲ್ಲಿ ವಸೂಲಿಯಾಗದ ಹಣವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಮತ್ತು ಇನ್ನಿತರ ಅಧಿಕಾರಿಗಳಿಂದ ಭೂ ಕಂದಾಯ ಬಾಕಿಯೆಂದು ವಸೂಲಿ ಮಾಡಬೇಕು. ವ್ಯವಹಾರದಲ್ಲಿ ಭಾಗಿಯಾದ ಗುತ್ತಿಗೆ ಆಧಾರದ ಸಿಬ್ಬಂದಿಗಳ ವಿರುದ್ಧ ಮನರೇಗಾ ಅಡಿಟ್ ಆಫ್ ಸ್ಟೀಮ್ ನಿಯಮಗಳು 2011, ನಿಯಮ 7(3)(ಸಿ)(ಎಫ್) ಅಡಿಯಲ್ಲಿ ಕ್ರಮಕೈಗೊಳ್ಳಬೇಕು. ಗಂಭೀರ ಸ್ವರೂಪ ಆರ್ಥಿಕ ಅವ್ಯವಹಾರದಲ್ಲಿ ಭಾಗಿಯಾಗಿದ್ದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಆಸ್ತಿ ವಿವರವನ್ನು ಬಹಿರಂಗಗೊಳಿಸಬೇಕು ಮತ್ತು ಅಡಹಾಕ್ ಸಮಿತಿಯ ಅಧ್ಯಕ್ಷರಿಂದ ಗ್ರಾಮ ಪಂಚಾಯಿತಿ ಅಧಿಕಾರಿ, ಸಿಬ್ಬಂದಿಗಳಿಗೆ 2020ರಿಂದ 2024ರ ಡಿಸೆಂಬರ್ ವರೆಗೆ ವಸೂಲಾತಿ ಆದೇಶವನ್ನು ಹಾಗೂ ನೋಟೀಸ್‍ಗಳನ್ನು ಹೊರಡಿಸಲಾದ ಮಾಹಿತಿಯನ್ನು ಬಹಿರಂಗಪಡಿಸಬೇಕು. ಇದರ ಜೊತೆಗೆ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ವಸೂಲಿಗೆ ಸೂಚಿಸಿರುವ ಹಾಗೂ ವಸೂಲಾತಿಯಾಗಿರುವ ಮತ್ತು ಇನ್ನೂ ವಸೂಲಿ ಆಗಬೇಕಿರುವ ಮೊತ್ತದ ವಿವರವನ್ನು ಬಹಿರಂಗಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ, ಪತ್ರಕರ್ತ ಮುತ್ತು ಶರಣಪ್ಪ ದೊಡ್ಡಮನಿ ದೂರು ಸಲ್ಲಿಸಿದ್ದರು. ಇದನ್ನು ಪರಿಗಣಿಸಿರುವ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಸದರಿ ದೂರಿನಲ್ಲಿ ತಿಳಿಸಿದ ಅಂಶಗಳ ಮೇಲೆ ನಿಯಮಾನುಸಾರ ಪರಿಶೀಲಿಸಿ ವಸೂಲಾತಿ ಮತ್ತು ಆಕ್ಷೇಪಣಾ ಮೊತ್ತವನ್ನು ಸರಕಾರಕ್ಕೆ ಭರಣ ಮಾಡಲು ಅಗತ್ಯಕ್ರಮ ವಹಿಸುವಂತೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶವನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕಾರ್ಯರೂಪಕ್ಕೆ ತರುತ್ತಾರೋ…? ಅಥವಾ ಮೇಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿ ದುಂಡಾವರ್ತನೆ ತೋರುತ್ತಾರೋ…? ಕಾದುನೋಡಬೇಕಿದೆ.

