ಮಚ್ಚು, ಲಾಂಗುಗಳ ಅಬ್ಬರಕ್ಕೆ ಭತ್ತದ ನಾಡು ಗಂಗಾವತಿ ಗಢಗಢ

ಬಿಜೆಪಿ ಯುವ ಮುಖಂಡನನ್ನು ಮಧ್ಯರಾತ್ರಿ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು

ರಣಬೇಟೆ ವೆಬ್ ಡೆಸ್ಕ್, ಕೊಪ್ಪಳ

ಗಂಗಾವತಿ.ಅ.08: ನಗರವು ‌ಬುಧುವಾರದ ಮುಂಜಾನೆಯ ನಿದ್ದೆಯಿಂದ ಏಳುವ ಮೊದಲೇ ಬೆಚ್ಚಿ ಬಿದ್ದಿದೆ. ಮಧ್ಯರಾತ್ರಿ ದುಷ್ಕರ್ಮಿಗಳು ಬೀಸಿದ ಮಚ್ಚಿನೇಟಿಗೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ ಹತನಾಗಿದ್ದಾನೆ. ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಮ್ಮೆ ಮಚ್ಚು ಲಾಂಗುಗಳ ಅಬ್ಬರ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.


ನಗರದ ಕೊಪ್ಪಳ ರಸ್ತೆಯ ಲೀಲಾವತಿ ಆಸ್ಪತ್ರೆಯ ಬಳಿ ಮಧ್ಯರಾತ್ರಿ ಸ್ಕೂಟಿಯಲ್ಲಿ ಹೊರಟಿದ್ದ ವೆಂಕಟೇಶನನ್ನು ಕಾರಿನಲ್ಲಿ ಹಿಂಬಾಲಿಸಿದ್ದ ದುಷ್ಕರ್ಮಿಗಳ ತಂಡ ಕಾರಿನಿಂದ ಗುದ್ದಿ ವೆಂಕಟೇಶನನ್ನು ನೆಲಕ್ಕೆ ಕೆಡವಿದೆ. ನಂತರ ನಾಲ್ಕು ಜನರ ತಂಡ ಮಚ್ಚು, ಲಾಂಗುಗಳಿಂದ ಆತನ ಮೇಲೆ ಹಲ್ಲೆ ಮಾಡಿ ಕತ್ತರಿಸಿ ಹಾಕಿದೆ. ಇದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹತ್ಯೆ ಮಾಡಿದ್ದಾರೆ ಎನ್ನಲಾಗುತ್ತಿರುವ ವಿಜಯ್, ಭೀಮಾ, ಸಲೀಂ , ಮೈಲಾರಿ ಎಂಬ ಯುವಕರು ನಗರ ಠಾಣೆ ಪೋಲಿಸರಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಸದ್ಯಕ್ಕೆ ನಗರದಲ್ಲೇ ಠಿಕಾಣಿ ಹೂಡಿರುವ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ರಾಮ್.ಎಲ್. ಅರಸಿದ್ದಿ ಅವರು ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಅವರ ನೇತೃತ್ವದಲ್ಲಿ ತಂಡ ರಚಿಸಿ ಪ್ರಕರಣದ ತನಿಖೆ ನಡೆಸಿದ್ದಾರೆ.
ಕೆಲ ತಿಂಗಳ ಹಿಂದೆ ಕೊಪ್ಪಳದ ಗಡಿಯಾರ ಕಂಬ ವೃತ್ತದಲ್ಲಿ ನಡೆದ ಕೊಲೆಯು ರಾಜಕೀಯ ತಿರುವು ಪಡೆದುಕೊಂಡು ರಾಜ್ಯದ ಗಮನ ಸೆಳೆದಿತ್ತು. ಕಳೆದ ಕೆಲ ವರ್ಷಗಳಿಂದ ಇಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಹೆಚ್ಚಿಸಿದೆ. ಇನ್ನಾದರೂ ಪೋಲಿಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ ಎಂಬುದು ಪ್ರಜ್ಞಾವಂತರ ಒತ್ತಾಯವಾಗಿದೆ.

error: Content is protected !!
Scroll to Top