ಮಂಜುನಾಥ್ ಗಲಗಲಿ ರವರೇ, ಈ ಅಕ್ರಮಕ್ಕೆ ಮೌನವೇ ನಿಮ್ಮ ಉತ್ತರವೇ?
ರಣಬೇಟೆ ವೆಬ್ ಡೆಸ್ಕ ಅ.೦೮ (ಸಂಚಿಕೆ ೦೧)
ಕೊಪ್ಪಳ:: ನಗರದ ಹೃದಯ ಭಾಗದಲ್ಲಿ ಈಶ್ವರ್, ದೇವಿ ಮತ್ತು ವಿಜಯ್ ಟ್ರೇಡರ್ಸ್ ಹೆಸರಿನ CL-2 ಪರವಾನಗಿ ಪಡೆದ ಅಂಗಡಿಗಳು ಗುಪ್ತ ಬಾರ್‌ಗಳಂತೆ ಅವ್ಯಾಹತವಾಗಿ ದಂಧೆ ನಡೆಸುತ್ತಿದ್ದರೂ, ಅಬಕಾರಿ ಇಲಾಖೆಯು ನಿಷ್ಕ್ರಿಯವಾಗಿದೆಯೇ? ಎಂಬ ತೀವ್ರ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ.
ಈ ಅಕ್ರಮ ದಂಧೆಯು ಅಬಕಾರಿ ನಿಯಮಗಳ ಸಾರಾಸಗಟು ಉಲ್ಲಂಘನೆ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುತ್ತಿರುವುದು ಸ್ಪಷ್ಟವಾಗಿದ್ದರೂ, ವಲಯ ಕಚೇರಿ ಕೊಪ್ಪಳದ ಅಬಕಾರಿ ನಿರೀಕ್ಷಕರಾದ ಶ್ರೀ ಮಂಜುನಾಥ್ ಗಲಗಲಿ ರವರು ಈವರೆಗೆ ಯಾಕೆ ಮೌನವಾಗಿದ್ದಾರೆ?

ರಣಭೇಟೆ ವೆಬ್ ವತಿಯಿಂದ ಇಂದು ಗಲಗಲಿ ರವರಿಗೆ ಲಿಖಿತ ದೂರನ್ನು ಸಲ್ಲಿಸಲಾಗಿದ್ದು, ಈ ದೂರನ್ನು ಆಧಾರಿಸಿ ಇಲಾಖೆಯ ನಿಷ್ಕ್ರಿಯತೆಯ ಬಗ್ಗೆ ಕೆಲವು ತೀಕ್ಷ್ಣ ಪ್ರಶ್ನೆಗಳನ್ನು ಎತ್ತಲಾಗಿದೆ:
ನಿಮಗೆ ಮಾಹಿತಿ ಇತ್ತೇ?: ಈ ಮೂರು ವೈನ್‌ಶಾಪ್‌ಗಳು ದೀರ್ಘಕಾಲದಿಂದ ನಿಯಮ ಉಲ್ಲಂಘಿಸಿ ಬಾರ್‌ಗಳಂತೆ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಅಬಕಾರಿ ನಿರೀಕ್ಷಕರಾದ ಶ್ರೀ ಮಂಜುನಾಥ್ ಗಲಗಲಿ ಅವರಿಗೆ ಇದುವರೆಗೆ ಮಾಹಿತಿ ಇರಲಿಲ್ಲವೇ? ಮಾಹಿತಿ ಇದ್ದರೂ ಕ್ರಮ ಕೈಗೊಳ್ಳದಿರಲು ಕಾರಣವೇನು?
ಶಿಸ್ತು ಕ್ರಮ ಏಕೆ ಇಲ್ಲ?: ಅಬಕಾರಿ ಕಾಯ್ದೆಯ ಉಲ್ಲಂಘನೆ ಸ್ಪಷ್ಟವಾಗಿ ಗೋಚರಿಸುತ್ತಿದ್ದರೂ, CL-2 ಪರವಾನಗಿಯನ್ನು ತಕ್ಷಣ ಅಮಾನತುಗೊಳಿಸುವಂತಹ ಶಿಸ್ತು ಕ್ರಮವನ್ನು ಏಕೆ ಜರುಗಿಸಲಾಗಿಲ್ಲ? ಯಾವುದರ ಪ್ರಭಾವಕ್ಕೆ ಮಣಿದು ಇಲಾಖೆ ತಟಸ್ಥ ನಿಲುವು ತೆಗೆದುಕೊಂಡಿದೆ?
ಅಧಿಕಾರಿಗಳ ಕರ್ತವ್ಯ ಲೋಪವೇ?: ಅಕ್ರಮ ಚಟುವಟಿಕೆಗಳು ಸಾರ್ವಜನಿಕ ಶಾಂತಿಗೆ ಬಂಗ ತರುವ ಹಂತಕ್ಕೆ ತಲುಪಿದ್ದರೂ, ನಿಯಮಿತ ತಪಾಸಣೆಗಳನ್ನು ನಡೆಸುವಲ್ಲಿ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದಾರೆಯೇ?
ಪಾರದರ್ಶಕತೆ ಕೊರತೆ ಇದೆಯೇ?: ರಣಭೇಟೆ ವೆಬ್ ಇಂದು ಖಚಿತ ದೂರು ಸಲ್ಲಿಸಿದ ನಂತರವಾದರೂ ಶ್ರೀ ಮಂಜುನಾಥ್ ಗಲಗಲಿ ಅವರು ಈ ಅಕ್ರಮದ ವಿರುದ್ಧ ಖಡಕ್ ನಿರ್ಧಾರ ತೆಗೆದುಕೊಂಡು, ಎಷ್ಟು ದಿನದೊಳಗೆ ಮತ್ತು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಸಾರ್ವಜನಿಕವಾಗಿ ಪ್ರಕಟಿಸುವರೇ?
ಕೊಪ್ಪಳದ ನಾಗರಿಕರು ಈಗ ಅಬಕಾರಿ ಇಲಾಖೆಯ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ. ಗಲಗಲಿ ರವರ ನಿರ್ಧಾರ ಇಲಾಖೆಯ ದಕ್ಷತೆ ಮತ್ತು ಸಾರ್ವಜನಿಕರ ಮೇಲಿನ ಕಾಳಜಿಯನ್ನು ಬಿಂಬಿಸಲಿದೆ. ಈ ಕಾನೂನು ವಿರೋಧಿ ದಂಧೆಯನ್ನು ನಿಲ್ಲಿಸಿ, ಅಬಕಾರಿ ಇಲಾಖೆ ತನ್ನ ದಂಡಾಧಿಕಾರದ ಶಕ್ತಿಯನ್ನು ಪ್ರದರ್ಶಿಸುತ್ತದೆಯೇ ಅಥವಾ ಮೌನವಾಗಿ ಈ ಅಕ್ರಮಕ್ಕೆ ಸಮ್ಮತಿ ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕು
ಮುಂದಿನ ಸಂಚಿಕೆ :ರಣಭೇಟೆ ದೂರ ನಂತರವೂ ಗಲಗಲಿ ಕಚೇರಿಯಿಂದ ಕ್ರಮವಿಲ್ಲವೇಕೆ? ಕೊಪ್ಪಳದ ಅಕ್ರಮ CL-2 ಬಾರ್‌ಗಳ ವಿರುದ್ಧ ಇಲಾಖೆಯ ನಿರ್ಧಾರವೇನು?

