ಇದ್ದರೆ ಪಟ್ಟ, ಸತ್ತರೆ ಚಟ್ಟ ಎಂಬ ಅಮಲಿನಲ್ಲಿರುವ ಯುವಕರ ಪಡೆ

ಗಂಗಾವತಿಯಲ್ಲಿ ಆರಂಭವಾದ ರಕ್ತಚರಿತ್ರೆಗೆ ಮುನ್ನುಡಿ ಬರೆದವರು ಯಾರು…?

ರಣಬೇಟೆ ನ್ಯೂಸ್ (ಕೊಪ್ಪಳ)

ಭತ್ತದ ಕಣಜ ಎಂದೇ ಪ್ರಖ್ಯಾತಿ ಹೊಂದಿದ್ದ ಗಂಗಾವತಿ ನಗರವು ಲಾಂಗು, ಮಚ್ಚುಗಳ ಅಬ್ಬರದಿಂದಾಗಿ ಮತ್ತೊಮ್ಮೆ ದೇಶದಾದ್ಯಂತ ಸದ್ದು ಮಾಡುತ್ತಿದೆ. ಅಕ್ಟೋಬರ್ 8ರ ಮುಂಜಾವು 2.30ರ ವೇಳೆ ನಡೆದ ಕೊಲೆಯೊಂದು ಗ್ಯಾಂಗ್‍ವಾರ್‍ನ ಅಂತಿಮ ಹಂತವೋ ಅಥವಾ ಆರಂಭವೋ ಎಂಬ ಗೊಂದಲ ಸಾರ್ವಜನಿಕ ವಲಯದಲ್ಲಿ ಮೂಡುವಂತೆ ಮಾಡಿದೆ. ಈ ಪ್ರಕರಣವು ಗಂಗಾವತಿಯಲ್ಲಿ ಕಾನೂನು ಸುವ್ಯವಸ್ಥೆ ಯಾವ ಮಟ್ಟದಲ್ಲಿ ಇದೆ ಎಂಬುವುದನ್ನು ಸಾರಿ ಹೇಳುವಂತಿದೆ. ಅಷ್ಟಕ್ಕೂ ಈ ಕೊಲೆ ಹಿಂದಿನ ಅಸಲಿ ಕಥೆ ಏನು ಎಂದು ಹುಡುಕುತ್ತಾ ಹೋದರೆ ಕೊನೆಗೆ ಬಂದು ನಿಲ್ಲುವುದು ಪೊಲೀಸರ ವೈಫಲ್ಯ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿ ಪುಡಾರಿಗಳ ಪಾರುಪತ್ಯದ ಪುಂಡಾಟಿಕೆ ಎಂಬ ಸತ್ಯ ಬಯಲಿಗೆ ಬೀಳುತ್ತದೆ.
ಅಕ್ಟೋಬರ್ 8ರಂದು ಕೊಲೆಯಾದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ ಕುರುಬರ ಈ ಹಿಂದೆ ಸ್ಥಳೀಯ ಚಾನೆಲ್‍ವೊಂದರಲ್ಲಿ ಕ್ಯಾಮೆರಾಮೆನ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಮಧ್ಯಮ ವರ್ಗದಿಂದ ಬಂದಿದ್ದ ಈ ಯುವಕ ಬದುಕು ಕಟ್ಟಿಕೊಳ್ಳಲು ಸಾಕಷ್ಟು ಪರಿಪಾಟಲು ಪಟ್ಟಿದ್ದ. ಆದರೆ ಶ್ರಮಕ್ಕೆ ತಕ್ಕ ಫಲ ದೊರಕದಿದ್ದಾಗ ಅನಾಯಸವಾಗಿ ದೊರೆಯುವ ಹಣದ ಹಿಂದೆ ಬಿದ್ದಿದ್ದ. ಈ ವೇಳೆಯೇ ಈತನ ಜೊತೆಗೂಡಿದ್ದು ರವಿ ಎಂಬ ಹುಡುಗ. ಈ ವೆಂಕಟೇಶನ ಕೊಲೆಗೆ ಮುಹೂರ್ತ ಇಟ್ಟಿದ್ದೇ ಈ ರವಿ ಎಂಬುವುದು ಸದ್ಯಕ್ಕೆ ಜಗಜ್ಜಾಹೀರಾಗಿದೆ. ಒಂದು ಕಾಲದಲ್ಲಿ ಇವರಿಬ್ಬರು ಒಂದಾಗಿ ಜುವಾರಿ ಅಡ್ಡೆಗಳನ್ನು ನಡೆಸುತ್ತಿದ್ದರು. ಇಬ್ಬರ ನಡುವೆ ಗಾಢ ಸ್ನೇಹವಿತ್ತು. ಜೊತೆಗೆ ನಂಬಿಕೆಯೂ ಇತ್ತು. ಜುವಾರಿ ಅಡ್ಡೆಗಳಿಂದ ಯಾವಾಗ ಲಕ್ಷ ಲಕ್ಷ ಹಣ ಹರಿದುಬರತೊಡಗಿತ್ತೋ ಅವಾಗಲೇ ಇವರಿಬ್ಬರ ಜೀವನ ಶೈಲಿ ಬದಲಾಗುವುದರ ಜೊತೆಗೆ ನಾನು ಎಂಬ ಅಹಂ ಕೂಡ ಬೆಳೆಯತೊಡಗಿತು. ಸಣ್ಣಮಟ್ಟದ ಆಂತರಿಕ ಕಲಹ ಹಾಗೂ ಬಿನ್ನಾಭಿಪ್ರಾಯದಿಂದಾಗಿ ಇವರಿಬ್ಬರು ಬೇರೆ ತಂಡಗಳನ್ನು ರಚಿಸಿಕೊಂಡು ಸ್ವತಂತ್ರವಾಗಿ ಜುವಾರಿ ಅಡ್ಡೆಗಳನ್ನು ನಡೆಸತೊಡಗಿದರು. ಅದೇ ರೀತಿ ಲಕ್ಷ ಲಕ್ಷ ದುಡ್ಡು ಎಣಿಸತೊಡಗಿದರು. ನಂತರ ವೆಂಕಟೇಶ ಮೆಲ್ಲನೆ ರಾಜಕೀಯ ಕಡೆ ವಾಲಿದರೆ, ರವಿ ಎಂಬ ಯುವಕ ಸೆಟ್ಲಮೆಂಟ್‍ಗೆ ನಿಂತುಬಿಟ್ಟ. ಅಷ್ಟೇ ಆಗಿದ್ದರೆ ಇಂದು ವೆಂಕಟೇಶನ ಕೊಲೆ ನಡೆಯುತ್ತಿರಲಿಲ್ಲ. ಇತ್ತ ರಾಜಕೀಯವಾಗಿ ಸಣ್ಣಗೆ ಬೆಳೆಯತೊಡಗಿದ್ದ ವೆಂಕಟೇಶ, ಅತ್ತ ರವಿಯ ನಿಯಂತ್ರಣಕ್ಕೂ ತೆರೆಮರೆಯ ಹಿಂದೆ ಪ್ರಯತ್ನ ಆರಂಭಿಸಿದ್ದ. ಹೀಗೆ ಎರಡು ಗ್ಯಾಂಗ್‍ಗಳ ನಡುವೆ ಆರಂಭವಾದ ಮುಸುಕಿನ ಗುದ್ದಾಟ ಈಗ ವೆಂಕಟೇಶನ ಕೊಲೆಯಲ್ಲಿ ಅಂತ್ಯಗೊಂಡಿದೆಯಾ…? ಯಾಕೋ ಆ ಲಕ್ಷಣಗಳು ಯಾವು ಕಂಡುಬರುತ್ತಿಲ್ಲ.
ಅಷ್ಟಕ್ಕೂ ಗಂಗಾವತಿಯಲ್ಲಿ ಏನೆಲ್ಲಾ ವಹಿವಾಟುಗಳು ನಡೆಯುತ್ತವೆ ಎಂದು ಸಾಕಷ್ಟು ಜನರಿಗೆ ಗೊತ್ತಿಲ್ಲ. ಅಕ್ಕಿ ವ್ಯಾಪಾರದಿಂದ ಮಣ್ಣು ದಂಧೆಯವರೆಗೂ ಇಲ್ಲಿ ಎಲ್ಲವೂ ನಡೆಯುತ್ತವೆ. ಆದರೆ, ಇಲ್ಲಿ ಸರಕಾರಕ್ಕೆ ತೆರಿಗೆ ವಂಚನೆಯಾಗುತ್ತದೆ ಎಂಬುವುದು ಬಿಟ್ಟರೆ ಅಪರಾಧ ಚಟುವಟಿಕೆಗಳಿಗೆ ಕಾರಣವಾಗುವಂತಹ ದಂಧೆಗಳೇನಲ್ಲ. ಆದರೆ, ಕಳೆದ ಒಂದು ದಶಕದಿಂದ ಇಂತಹ ಅಪರಾಧ ಚಟುವಟಿಕೆಗಳಿಗೆ ಕಾರಣವಾಗುವಂತಹ ದಂಧೆಗಳ ಆರಂಭಕ್ಕೆ ಕಾರಣವಾಗಿದ್ದೇ ಪೊಲೀಸರು ಎಂಬ ಆರೋಪಗಳಿವೆ. ದೀಪಾವಳಿ ಆರಂಭದಲ್ಲಿ ಹಬ್ಬದ ನಂತರ ಕೆಲ ದಿನಗಳ ಮಟ್ಟಿಗೆ ಮಾತ್ರ ನಡೆಯುತ್ತಿದ್ದ ಇಸ್ಪೇಟ್ ದಂಧೆಯು ನಂತರ ವರ್ಷ ಪೂರ್ತಿ ನಡೆಯಲು ರತ್ನಗಂಬಳಿ ಹಾಸಿಕೊಟ್ಟಿದ್ದೇ ಪೊಲೀಸ್ ಇಲಾಖೆ ಎಂಬ ಆರೋಪಗಳಿವೆ. ಯಾಕೆಂದರೆ ಪೊಲೀಸರಿಗೆ ದೊಡ್ಡ ಮಟ್ಟದ ಇಡಿಗಂಟು ಸಿಗುತ್ತಿದ್ದದ್ದು ಇಂತಹ ಅಡ್ಡೆಗಳಿಂದಲೆ. ಅಕ್ರಮ ಮರಳು, ಮರಮ್ಮು, ಕಲ್ಲು ಸಾಗಾಣಿಕೆ ಪ್ರಕರಣದಲ್ಲಿ ದಂಧೆಕೋರರಿಗೆ ಸಾಕಷ್ಟು ಪಾಲುದಾರರಿತ್ತಾರೆ. ಅವರೆಲ್ಲರಿಗೂ ಹಂಚಿ ನಂತರ ಹಂಚಬೇಕಾದದ್ದು ಪೊಲೀಸರಿಗೆ. ಹೀಗಾಗಿ ಅವರಿಂದ ಅಂತಹ ದೊಡ್ಡಮಟ್ಟದ ಆದಾಯ ನಿರೀಕ್ಷಿಸುವಂತಿಲ್ಲ. ಆದರೆ, ಮಟ್ಕಾ, ಇಸ್ಪೇಟ್‍ನಂತಹ ದಂಧೆಗಳಲ್ಲಿ ನೇರವಾಗಿ ಪೊಲೀಸರೊಬ್ಬರೇ ಪಾಲುದಾರರು. ಇಂತಹ ದಂಧೆಗಳನ್ನು ನಿಯಂತ್ರಿಸುವವನು ಒಬ್ಬ ನಿಯತ್ತಾಗಿದ್ದರೆ ಸಾಕು ಪೊಲೀಸರ ತಿಂಗಳ ಮಾಮೂಲು ನಿಗದಿತ ಸಮಯಕ್ಕೆ ಮನೆಗೆ ತಲುಪುತ್ತದೆ. ಅಂತಹ ನಿಯತ್ತಿನ ಗಿರಾಕಿಗಳಲ್ಲಿ ಈ ವೆಂಕಟೇಶ ಹಾಗೂ ರವಿ ಮೊದಲಿಗರು. ಹೀಗಾಗಿ ಇವರಿಬ್ಬರಿಗೂ ಪೊಲೀಸರ ಭಯವಿಲ್ಲದಂತಾಗಿದೆ. ಹಾಗೇನಾದರೂ ಇವರಿಬ್ಬರು ಹೊಂದಾಣಿಕೆಯಿಂದ ಕೂಡಿಕೊಂಡು ಹೋಗಿದ್ದರೆ ಇಂದು ರಕ್ತಪಾತ ನಡೆಯುತ್ತಿದ್ದಿಲ್ಲ. ಆದರೆ, ಅನಾಯಸವಾಗಿ ಬಂದ ಹರಾಮಿ ಹಣ ಇವರನ್ನು ಹಠಕ್ಕೆ ಬೀಳಿಸಿ ಹೆಣ ಕೆಡುವುವಂತೆ ಮಾಡಿಸಿದೆ.
ಇಲ್ಲಿ ಕೇವಲ ಪೊಲೀಸರನ್ನಷ್ಟೇ ದೂಷಿಸುವುದು ಸರಿಯಲ್ಲ. ಯಾಕೆಂದರೆ, ಕರ್ತವ್ಯನಿಷ್ಠೆಯಿಂದ ಕಾರ್ಯನಿರ್ವಹಿಸುವ ಅಧಿಕಾರಿಗಳು ಈ ಭಾಗದಲ್ಲಿ ಬಹಳಷ್ಟು ದಿನ ಉಳಿಯಲು ಸಾಧ್ಯವಿಲ್ಲ. ವರ್ಗಾವಣೆಗೆ ಹೆದರದೇ ನಿಷ್ಠೆಯಿಂದ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನು ವಿನಾಃಕಾರಣ ಕೆಲಸಕ್ಕೆ ಬಾರದ ಪ್ರಕರಣಗಳಲ್ಲಿ ಸಿಲುಕಿಸಿ ಅಮಾನತುಗೊಳಿಸುವುದು ಅಥವಾ ಸ್ಥಳ ನಿಗದಿಗೊಳಿಸದೇ ವರ್ಗಾವಣೆಗೊಳಿಸುವ ಮೂಲಕ ಪೊಲೀಸರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕಾರ್ಯವನ್ನು ಇಲ್ಲಿನ ಜನಪ್ರತಿನಿಧಿಗಳು ಈ ಹಿಂದಿನಿಂದಲೂ ಮಾಡುತ್ತಾ ಬಂದಿದ್ದಾರೆ. ಸಣ್ಣಪುಟ್ಟ ಪ್ರಕರಣಗಳಿಂದ ಹಿಡಿದು ಕೊಲೆಗಳಂತಹ ಪ್ರಕರಣಗಳಲ್ಲೂ ಮಧ್ಯೆ ಪ್ರವೇಶಿಸುವ ಜನಪ್ರತಿನಿಧಿಗಳು, ಪುಢಾರಿಗಳು ಕೆಲ ಸಂಘಟನೆಗಳ ಮುಖಂಡರು ರಾಜಿ ಸಂಧಾನ ನಡೆಸುವಂತೆ ಪೊಲೀಸರಿಗೆ ಒತ್ತಡ ಹೇರುತ್ತಾರೆ. ಸಾಕಷ್ಟು ಜನರಿಗೆ ಪೊಲೀಸ್ ಠಾಣೆ ಎಂಬುವುದು ನಿತ್ಯದ ಹೊಟ್ಟೆಪಾಡು ಎಂಬಂತಾಗಿದೆ. ಕೆಲವರು ಠಾಣೆಗಳಲ್ಲಿ ರಾಜಿ ಸಂಧಾನ ಮಾಡುವ ಮೂಲಕ ಪ್ರತಿನಿತ್ಯ ಏನಿಲ್ಲವೆಂದರೂ 30 ರಿಂದ 40 ಸಾವಿರವರೆಗೂ ಕಮಾಯಿ ಮಾಡುತ್ತಾರೆ ಎಂದರೆ ಪೊಲೀಸ್ ಇಲಾಖೆ ಯಾವ ಮಟ್ಟಕ್ಕೆ ಹಳ್ಳ ಹಿಡಿದಿದೆ ಎಂಬುವುದು ಗೊತ್ತಾಗುತ್ತದೆ.
ಕಳೆದ ಒಂದು ದಶಕದಿಂದ ಇಲ್ಲಿಯೇ ಠಿಕಾಣಿ ಹೂಡಿರುವ ಕೆಲ ಪಿಸಿಗಳು ಗಂಗಾವತಿ ನಗರದ ಅಡ್ಡ ಕಸುಬುಗಳನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ. ಇವರಿಂದಲೇ ಮೇಲಾಧಿಕಾರಿಗಳಿಗೆ ತಿಂಗಳ ಮಾಮೂಲು ನಿಗದಿತ ಸಮಯಕ್ಕೆ ತಲುಪುತ್ತದೆ ಎಂಬ ಆರೋಪಗಳಿವೆ. ಪೊಲೀಸರಿಗೆ ನಾನಾ ಮೂಲಗಳಿಂದ ಹಣದ ಹರಿವು ಇರಬಹುದು. ಆದರೆ ಮಟ್ಕಾ, ಇಸ್ಪೇಟ್, ವೇಶ್ಯಾವಾಟಿಕೆ, ಮಸಾಜ್ ಸೆಂಟರ್‍ಗಳಿಂದಲೂ ಹಣ ಗುಂಜುವ ಮಟ್ಟಕ್ಕೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಇಳಿದಿಲ್ಲ. ಆದರೆ, ಇವರ ಹೆಸರು ಹೇಳಿಕೊಂಡು ದಂಧೆ ನಿಭಾಯಿಸುವ ಕೆಲವು ಪುಢಾರಿಗಳು ಹಾಗೂ ಪಿಸಿಗಳು ಇಂತಹ ಪ್ರಕರಣಗಳಿಗೆ ನಾಂದಿ ಹಾಡಿಬಿಡುತ್ತಾರೆ.
ಒಟ್ಟಿನಲ್ಲಿ ಅಡ್ಡ ಕಸುಬುಗಳ ಆದಾಯ, ಪಾರುಪತ್ಯಕ್ಕಾಗಿ ಬಡಿದಾಡಿಕೊಂಡ ಎರಡು ಗ್ಯಾಂಗ್‍ಗಳಿಗೆ ಈಗಾಗಲೇ ಇಬ್ಬರು ಬಲಿಯಾಗಿದ್ದಾರೆ. ಮುಂದೆ ಇನ್ನೆಷ್ಟು ಹೆಣಗಳು ಬೀಳಲಿವೆಯೋ ಗೊತ್ತಿಲ್ಲ. ಯಾಕೆಂದರೆ, ಹದಿಹರೆಯದ ಯುವಕರಿಗೆ ನಶೆಯ ಅಮಲಿನಲ್ಲಿ ತೇಲಿಸಿ ಪ್ರಚೋದಿಸುವ ಒಂದು ತಂಡವು ಇಂತಹ ಕೃತ್ಯಗಳನ್ನು ಮಾಡಿಸುತ್ತಿದೆ. ಇದ್ದರೆ ಪಟ್ಟ, ಸತ್ತರೆ ಚಟ್ಟ ಎಂಬ ಅಮಲಿನಲ್ಲಿರುವ ಯುವಕರ ಪಡೆಯೂ ಕೂಡ ಪರಸ್ಪರ ಬಡಿದಾಡಿಕೊಂಡು ಸಾಯಲು ಸಿದ್ಧರಾಗಿವೆ. ಇದನೆಲ್ಲ ನಿಯಂತ್ರಿಸಬೇಕಾದ ಜನಪ್ರತಿನಿಧಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಮೌನವಾಗಿ ನೋಡುತ್ತಾ ಕುಳಿತಿದ್ದಾರೆ. ಯಾಕೆಂದರೆ, ಯಾರೇ ಬಂದರೂ ಯಾರೇ ಹೋದರೂ ಇವರಿಗೇನೂ ನಷ್ಟವಿಲ್ಲ. ಆದಾಯ ತಂದುಕೊಡುವ ತಲೆಗಳು ಬದಲಾಗುತ್ತವೆ ಅಷ್ಟೇ. ಕೆಲವೇ ದಿನಗಳಲ್ಲಿ ವೆಂಕಟೇಶನ ಜಾಗದಲ್ಲಿ ಇನ್ನೊಬ್ಬ ಪಟ್ಟಕ್ಕೇರುತ್ತಾನೆ. ಅವನು ಕೂಡ ಅಧಿಕಾರಿಗಳಿಗೆ ಕಪ್ಪ ಸಲ್ಲಿಸುತ್ತಾ ದಂಧೆ ನಿಭಾಯಿಸುತ್ತಾನೆ. ಇದು ಮತ್ತೊಂದು ಹೆಣ ಬೀಳುವವರೆಗೂ ತಣ್ಣಗೆ ಸಾಗುತ್ತಲೇ ಇರುತ್ತದೆ ಅಷ್ಟೇ.

error: Content is protected !!
Scroll to Top