ಸಂಕ್ರಾಮಿಕ ರೋಗ ಹರಡುವ ತಾಣಗಳಾದ CL-2 ಮದ್ಯದ ಅಂಗಡಿಗಳು
ರಣಬೇಟೆ ವೆಬ್ ಡೆಸ್ಕ್ ಕೊಪ್ಪಳ ಅ:13 (ಸಂಚಿಕೆ-04)
ಕೊಪ್ಪಳ ನಗರದಲ್ಲಿ ಪರವಾನಗಿ ಹೊಂದಿದ ಮದ್ಯದ ಅಂಗಡಿಗಳು ಕರ್ನಾಟಕ ಅಬಕಾರಿ ಕಾಯ್ದೆ, 1965ರ ನಿಯಮಗಳನ್ನು ಉಲ್ಲಂಘಿಸಿ ಭರ್ಜರಿ ವಹಿವಾಟು ನಡೆಸುತ್ತಿವೆ. ನಗರದಲ್ಲಿ CL-2 ಪರವಾನಗಿ ಹೊಂದಿದ ಆಯಾಕಟ್ಟಿನಲ್ಲಿ ಇರುವ ಈಶ್ವರ್, ದೇವಿ, ವಿಜಯ್, ಮಮತಾ, ರೇಣುಕಾ, ವಾಸು, ವೆಂಕಟೇಶ್ವರ ಮತ್ತು ವಿಶಾಲ್ ವೈನ್ಸ್ ಮದ್ಯದ ಅಂಗಡಿಗಳ ಮಾಲೀಕರಿಗೆ ಅಬಕಾರಿ ಇಲಾಖೆ ಅಧಿಕಾರಿಗಳ ಭಯವಿಲ್ಲದಂತಾಗಿದೆ.
ಸಿ.ಎಲ್-2 ಎಂದರೆ ಮದ್ಯದ ಅಂಗಡಿಗಳಲ್ಲಿ ಮದ್ಯಪ್ರಿಯರಿಗೆ ಯಾವುದೇ ರೀತಿಯ ಆಸನಗಳ ವ್ಯವಸ್ಥೆಯಾಗಲೀ, ಕುಳಿತು ಕುಡಿಯುವ ಸೌಕರ್ಯಗಳಾಗಲೀ ಕಲ್ಪಿಸಬಾರದು. ಕೇವಲ ಮದ್ಯಪ್ರಿಯರು ಕೇಳಿದ ಮದ್ಯವನ್ನು ಪಾರ್ಸಲ್ ಕೊಟ್ಟು ಕಳುಹಿಸಬೇಕು. ಸಿ.ಎಲ್-2 ಪರವಾನಿಗೆ ಹೊಂದಿದ ಮದ್ಯದ ಅಂಗಡಿಗಳು ಮದ್ಯಪ್ರಿಯರಿಗೆ ಎಲ್ಲಾ ಸೌಕರ್ಯವನ್ನು ಕೊಡುವುದು ನಿಯಮ ಬಾಹಿರ. ಆದರೆ ಮೇಲ್ಕಾಣಿಸಿದ ಮದ್ಯದ ಅಂಗಡಿಗಳು ನಿಯಮ ಉಲ್ಲಂಘಿಸಿ ವಹಿವಾಟು ನಡೆಸುತ್ತಿದ್ದರೂ ಅಬಕಾರಿ ಉಪ ಆಯುಕ್ತರ ಕಚೇರಿಯ ಅಧಿಕಾರಿಗಳು ಮದ್ಯದ ಅಂಗಡಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮಕ್ಕೆ ಮುಂದಾಗದಿರುವು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಒಮ್ಮೆ ಈ ಎಲ್ಲಾ ಬಾರ್ ಗಳಿಗೆ ಭೇಟಿ ನೀಡಿದರೆ ಇಲ್ಲಿನ ಅವ್ಯವಸ್ಥೆ ಕಣ್ಣಿಗೆ ರಾಚುತ್ತದೆ. ಗ್ರಾಹಕರಿಗೆ ಪಾರ್ಸೆಲ್ ನೀಡಿ ಕಳಿಸಬೇಕಾದ CL-2 ಮದ್ಯದ ಅಂಗಡಿಗಳಲ್ಲಿ ಕುಡಿದು ಬಿಟ್ಟು ಹೋದ ಮದ್ಯದ ಬಾಟಲಿ, ಟೆಟ್ರಾ ಪಾಕೇಟು, ಪ್ಲಾಸ್ಟಿಕ್ ಲೋಟಗಳು ಸುತ್ತಮುತ್ತಲಿನ ಪರಿಸರವನ್ನು ಗಬ್ಬೆಬ್ಬಿಸಿವೆ. ಈ ಬಾರ್ ಗಳ ಸುತ್ತಮುತ್ತಲಿನ ನಾಗರಿಕರು, ಶಾಲಾ ಮಕ್ಕಳು, ಮಹಿಳೆಯರು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಬಾರ್ ಗಳಲ್ಲಿ ಆಸನ ಹಾಗೂ ಆಹಾರ ಪೂರೈಕೆ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಇವುಗಳಲ್ಲಿ ಶುದ್ದತೆ ಎಂಬುದು ಮರಿಚಿಕೆಯಾಗಿ ಸಂಕ್ರಾಮಿಕ ರೋಗಗಳನ್ನು ಹರಡುವ ತಾಣಗಳಾಗಿ ಮಾರ್ಪಟ್ಟಿವೆ. ಕೊಪ್ಪಳ ವಲಯ ಕಚೇರಿಯ ಅಬಕಾರಿ ನಿರೀಕ್ಷಕ ಮಂಜುನಾಥ್ ಗಲಗಲಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೂ ಕೂಡ ಕ್ರಮಕ್ಕೆ ಮುಂದಾಗುತ್ತಿಲ್ಲ. ತಿಂಗಳ ಮಾಮೂಲು ಇವರ ಕೈಕಟ್ಟಿ ಹಾಕಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಈ ವಲಯದಲ್ಲಿ ಮದ್ಯದ ಅಂಗಡಿಗಳ ಅಕ್ರಮಗಳಿಗೆ ಸಹಕಾರ ನೀಡುತ್ತಿರುವ ಇಲಾಖೆಯ ಎಲ್ಲಾ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು.
ಅಬಕಾರಿ ಉಪ ಆಯುಕ್ತರು ನಿರೀಕ್ಷಕ ಮಂಜುನಾಥ್ ಗಲಗಲಿ ಅವರನ್ನು ಅಮಾನತ್ತಿನಲ್ಲಿಟ್ಟು ಇಲಾಖಾ ತನಿಖೆಗೆ ಒಳಪಡಿಸಬೇಕು. ಕಾನೂನು ಮತ್ತು ಸಾರ್ವಜನಿಕ ಶಾಂತಿಯನ್ನು ಉಲ್ಲಂಘಿಸಿರುವ ಈ ಎಂಟು ವೈನ್ ಶಾಪ್‌ಗಳ (CL-2) ಪರವಾನಗಿಗಳನ್ನು ಅಬಕಾರಿ ಕಾಯ್ದೆಯ ಅಡಿಯಲ್ಲಿ ರದ್ದುಪಡಿಸಬೇಕು ಎಂಬುದು ಸಮಾಜಿಕ ಹೋರಾಟಗಾರರ ಒತ್ತಾಯವಾಗಿದೆ.

