ಹುಳ ಸಹಿತ ಅನ್ನ: ಅಧಿಕಾರಿಗಳ ಡಬಲ್ ರೋಲ್! ಸೊಗಲದ್ ಮೌನ, ಶರಣಪ್ಪಗೆ ‘ಪ್ರಭಾರ’ ಮೋಹ; ಸಮಾಜ ಕಲ್ಯಾಣ ಇಲಾಖೆಯ ನಿರ್ಲಕ್ಷ್ಯ.
ರಣಬೇಟೆ ನ್ಯೂಸ್ ಕೊಪ್ಪಳ ಅ:25
ಕೊಪ್ಪಳ: ಪರಿಶಿಷ್ಟ ಜಾತಿ-1ರ ಬಾಲಕಿಯರ ವಸತಿ ನಿಲಯದಲ್ಲಿ ಇತ್ತೀಚೆಗೆ ಕಂಡುಬಂದ ‘ಬಾಲು ಹುಳ’ ಸಹಿತ ಊಟದ ಅನಾಚಾರವು ಸಮಾಜ ಕಲ್ಯಾಣ ಇಲಾಖೆಯ ಆಡಳಿತವನ್ನು ನಗೆಪಾಟಲಿಗೀಡು ಮಾಡಿದೆ. ಟೆಂಡರ್‌ದಾರ ಮತ್ತು ವಸತಿ ನಿಲಯದ ಅಧಿಕಾರಿಗಳ ನಡುವಿನ ‘ಅಕ್ರಮ ಒಳ ಒಪ್ಪಂದ’ದ ಬೃಹತ್ ಜಾಲ ಅಡಗಿದೆ ಎಂಬ ಗಂಭೀರ ಅನುಮಾನ ವ್ಯಕ್ತವಾಗಿದೆ. ಈ ಅನಾಚಾರವು ಕೇವಲ ಆಡಳಿತಾತ್ಮಕ ನಿರ್ಲಕ್ಷ್ಯವಲ್ಲ, ಬದಲಾಗಿ ವ್ಯವಸ್ಥಿತ ಭ್ರಷ್ಟಾಚಾರದ ಸಂಕೇತವಾಗಿದೆ ಎಂದು ಸಾರ್ವಜನಿಕರು ತೀವ್ರವಾಗಿ ಟೀಕಿಸಿದ್ದಾರೆ.ಈ ಗಂಭೀರ ಲೋಪಕ್ಕೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಉನ್ನತ ಅಧಿಕಾರಿಗಳ ‘ಜವಾಬ್ದಾರಿ ರಹಿತ’ ವರ್ತನೆಯೇ ಮೂಲ ಕಾರಣ ಎಂಬುದು ಈಗ ಸ್ಪಷ್ಟವಾಗಿದೆ.

ವಾರ್ಡನ್ ಸರಸ್ವತಿ ಜೋಶಿ ಮತ್ತು ಸಹಾಯಕ ನಿರ್ದೇಶಕರತ್ತಲೇ ಅನುಮಾನದ ಸೂಜಿ:
ವಸತಿ ನಿಲಯಕ್ಕೆ ಆಹಾರ ಸಾಮಗ್ರಿಗಳನ್ನು ಪೂರೈಸುವ ಟೆಂಡರ್‌ದಾರರು ಕಳಪೆ ಗುಣಮಟ್ಟದ ಸರಕನ್ನು ಪೂರೈಸಲು ಪ್ರಮುಖ ಕಾರಣ, ಹಾಸ್ಟೆಲ್‌ನ ವಾರ್ಡನ್/ಮೇಲ್ವಿಚಾರಕರು ಹಾಗೂ ತಾಲೂಕು ಸಹಾಯಕ ನಿರ್ದೇಶಕ ಶರಣಪ್ಪ ಚೌಹಾಣ್ ಅವರ ಸಕಾಲಿಕ ಪರಿಶೀಲನೆಯ ಸಂಪೂರ್ಣ ವೈಫಲ್ಯ.
ವಸತಿ ನಿಲಯಕ್ಕೆ ದಾಸ್ತಾನಾಗುವ ದಿನಸಿ ಮತ್ತು ಆಹಾರ ಸಾಮಗ್ರಿಗಳ ಗುಣಮಟ್ಟ ಮತ್ತು ಪ್ರಮಾಣವನ್ನು ಸರಿಯಾದ ಸಮಯಕ್ಕೆ ಪರಿಶೀಲಿಸಿ ದೃಢೀಕರಿಸುವ ಪ್ರಾಥಮಿಕ ಜವಾಬ್ದಾರಿ ವಾರ್ಡನ್ ಮೇಲಿದ್ದರೂ, ಈ ಹುಳ ಸಹಿತ ಊಟದ ಘಟನೆ ಅವರ ಸಂಪೂರ್ಣ ನಿರ್ಲಕ್ಷ್ಯ ಅಥವಾ ಅಕ್ರಮ ಒಳ ಒಪ್ಪಂದದ ಭಾಗವಾಗಿರುವ ಸಾಧ್ಯತೆಯನ್ನು ಬಲಪಡಿಸಿದೆ.

ಶರಣಪ್ಪ ಚೌಹಾಣ್‌ರ ‘ಸಕಾಲಿಕ’ ಲೋಪದ ಅನುಮಾನ:
ಅತ್ಯಂತ ಗಂಭೀರವಾಗಿ ಟೀಕೆಗೆ ಒಳಗಾಗಿರುವ ಅಂಶವೆಂದರೆ, ಸಹಾಯಕ ನಿರ್ದೇಶಕ ಶರಣಪ್ಪ ಚೌಹಾಣ್ ಅವರು ಟೆಂಡರ್‌ದಾರರು ಸರಬರಾಜು ಮಾಡುವ ಆಹಾರ ಸಾಮಗ್ರಿಗಳು ಹಾಸ್ಟೆಲ್‌ಗೆ ಬಂದಾಗ ಸರಿಯಾದ ಸಮಯಕ್ಕೆ ಅದನ್ನು ಪರಿಶೀಲಿಸುವ ಕನಿಷ್ಠ ಜವಾಬ್ದಾರಿಯನ್ನು ಸಹ ನಿಭಾಯಿಸಿಲ್ಲ.
ಸಮಯಕ್ಕೆ ಸರಿಯಾಗಿ, ಅಂದರೆ ದಿನಸಿಗಳು ಹಾಸ್ಟೆಲ್‌ಗೆ ಬಂದ ಕೂಡಲೇ, ಅವುಗಳ ಗುಣಮಟ್ಟವನ್ನು ಪರಿಶೀಲಿಸಿ ವರದಿಯನ್ನು ಪಡೆಯದ ಕಾರಣ, ಕಳಪೆ ಆಹಾರ ಸಾಮಗ್ರಿಗಳು ನೇರವಾಗಿ ವಿದ್ಯಾರ್ಥಿಗಳ ತಟ್ಟೆ ಸೇರುವಂತಾಗಿದೆ. ಶರಣಪ್ಪ ಚೌಹಾಣ್ ಅವರ ಈ ‘ಸಕಾಲಿಕ ಪರಿಶೀಲನಾ ಲೋಪ’ವು ಕೇವಲ ಕರ್ತವ್ಯ ಲೋಪವಲ್ಲ, ಬದಲಾಗಿ ಟೆಂಡರ್‌ದಾರರೊಂದಿಗೆ ಅಕ್ರಮ ಲಾಭಕ್ಕಾಗಿ ಕೈಜೋಡಿಸಿರುವ ಪ್ರಬಲ ಅನುಮಾನಕ್ಕೆ ಎಡೆಮಾಡಿದೆ. ಇತ್ತ ಮೂಲ ಕೆಲಸವನ್ನು ನಿರ್ಲಕ್ಷಿಸಿ, ಅತ್ತ ಜಿಲ್ಲಾ ಪ್ರಾಧಿಕಾರದ ಆಯುಕ್ತರ ಪ್ರಭಾರ ಹುದ್ದೆಯ ಪ್ರಭಾವಳಿಯಲ್ಲಿ ಮುಳುಗಿರುವುದು ಈ ಅನುಮಾನವನ್ನು ಮತ್ತಷ್ಟು ಬಲಗೊಳಿಸಿದೆ.

ಸಹಾಯಕ ನಿರ್ದೇಶಕ ಶರಣಪ್ಪರ ‘ಪ್ರಭಾರ ವಹನ’ದ ರಾಜಕೀಯ:
ಘಟನೆಗೆ ನೇರವಾಗಿ ಜವಾಬ್ದಾರರಾದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶರಣಪ್ಪ ಅವರ ಕಾರ್ಯವೈಖರಿ ಮತ್ತಷ್ಟು ಅಚ್ಚರಿ ಮತ್ತು ಟೀಕೆಗೆ ಕಾರಣವಾಗಿದೆ. ತಮ್ಮ ಮೂಲ ಇಲಾಖೆಯ ವಸತಿ ನಿಲಯಗಳಲ್ಲಿ ವಿದ್ಯಾರ್ಥಿನಿಯರು ಹುಳ ಸಹಿತ ಊಟ ತಿನ್ನುವ ದುಸ್ಥಿತಿ ಇದ್ದರೂ, ಇವರು ಸಮಾಜ ಕಲ್ಯಾಣ ಇಲಾಖೆಯಂತಹ ಜವಾಬ್ದಾರಿಯುತ ಕೆಲಸದ ಕಡೆಗೆ ಗಮನ ಕೊಡದೆ, ಕೊಪ್ಪಳ ಜಿಲ್ಲಾ ಪ್ರಾಧಿಕಾರದ ಆಯುಕ್ತರ ಹುದ್ದೆಗೆ ಪ್ರಭಾರ ವಹಿಸಿಕೊಂಡು ಅಧಿಕಾರದ ಪ್ರಭಾವಳಿ ಬೆಳೆಸಿಕೊಳ್ಳುತ್ತಿದ್ದಾರೆ.
ಬಡ ವಿದ್ಯಾರ್ಥಿನಿಯರ ಮೂಲಭೂತ ಅವಶ್ಯಕತೆ ಮತ್ತು ಸುರಕ್ಷತೆಯನ್ನು ಖಾತರಿಪಡಿಸುವ ಕೆಲಸವನ್ನು ನಿರ್ಲಕ್ಷಿಸಿ, ಶರಣಪ್ಪರವರು ಕೇವಲ ಹೆಚ್ಚು ಪ್ರಭಾವ ಮತ್ತು ಪ್ರತಿಷ್ಠೆ ನೀಡುವ ಪ್ರಭಾರ ಹುದ್ದೆಯ ಕಡೆಗೆ ತಮ್ಮ ಚಿತ್ತ ನೆಟ್ಟಿರುವುದು ಅವರ ಆದ್ಯತೆಗಳು ಯಾವ ಕಡೆ ಇವೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಸಮಾಜ ಕಲ್ಯಾಣ ಇಲಾಖೆಯ ಅತಿ ಮುಖ್ಯ ಕೆಲಸವಾದ ವಸತಿ ನಿಲಯಗಳ ನಿರ್ವಹಣೆಗೆ ಶರಣಪ್ಪರವರು ಸಮಯ ಮೀಸಲಿಡದೆ, ‘ಡಬಲ್ ರೋಲ್’ನ ರಾಜವೈಭವ ಅನುಭವಿಸಲು ಹೋಗುತ್ತಿರುವುದು, ಅವರ ಕರ್ತವ್ಯ ಲೋಪದ ಸ್ಪಷ್ಟ ಸೂಚನೆಯಾಗಿದೆ. ಸಮಾಜ ಕಲ್ಯಾಣದಂತಹ ಸೂಕ್ಷ್ಮ ಇಲಾಖೆಯಲ್ಲಿ ಕರ್ತವ್ಯ ನಿರ್ಲಕ್ಷಿಸಿ, ಇನ್ನೊಂದು ಅಧಿಕಾರ ಸ್ಥಾನದ ಅಲಂಕಾರದಲ್ಲಿ ತೊಡಗಿರುವುದು ಯಾವ ಮಟ್ಟದ ಆಡಳಿತಾತ್ಮಕ ಅಪಹಾಸ್ಯ?

ಉಪ ನಿರ್ದೇಶಕ ಅಜ್ಜಪ್ಪ ಸೊಗಲದ್ ಅವರ ‘ಮೌನ ಆಡಳಿತ’:
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಅಜ್ಜಪ್ಪ ಸೊಗಲದ್ ಅವರು ಇಷ್ಟೊಂದು ಗಂಭೀರ ಅಸ್ವಾಸ್ಥ್ಯಕರ ಘಟನೆ ನಡೆದರೂ ಇದುವರೆಗೂ ಯಾವುದೇ ಕಠಿಣ ನಿಲುವು ತೆಗೆದುಕೊಂಡಿಲ್ಲ ಅಥವಾ ಹಾಸ್ಟೆಲ್ ಅವ್ಯವಹಾರದ ಬಗ್ಗೆ ಸಮರ್ಥನೆಯ ಉತ್ತರ ನೀಡಿಲ್ಲ. ಇವರ ಈ ‘ಸಮರ್ಥನೀಯ ಮೌನ’ವು, ಜಿಲ್ಲಾ ಮಟ್ಟದಲ್ಲಿ ಇಲಾಖೆಯ ಮೇಲ್ವಿಚಾರಣಾ ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎಂಬುದನ್ನು ತೋರಿಸುತ್ತದೆ. ಉಪ ನಿರ್ದೇಶಕ ಅಜ್ಜಪ್ಪ ಸೊಗಲದ್ ಅವರು ಸಹಾಯಕ ನಿರ್ದೇಶಕರ ಮತ್ತು ವಾರ್ಡನ್‌ಗಳ ಮೇಲೆ ಸೂಕ್ತ ನಿಯಂತ್ರಣ ಸಾಧಿಸದೆ ಮೌನ ವಹಿಸಿರುವುದು, ಇಡೀ ಇಲಾಖೆಯ ಮೇಲ್ವಿಚಾರಣಾ ವ್ಯವಸ್ಥೆ ಕುಸಿದು ಬಿದ್ದಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ. ಈ ಒಳ ಒಪ್ಪಂದದ ಜಾಲದಲ್ಲಿ ಮೇಲ್ಮಟ್ಟದ ಅಧಿಕಾರಿಗಳ ಪಾತ್ರವೇನಿದೆ ಎಂಬುದರ ಬಗ್ಗೆ ತೀವ್ರ ತನಿಖೆಯ ಅಗತ್ಯವಿದೆ.ವಿದ್ಯಾರ್ಥಿನಿಯರ ಆರೋಗ್ಯದ ಕುರಿತು ಚಿಂತಿಸದೆ, ಕೇವಲ ಕಡತ ವಿಲೇವಾರಿಗೆ ಸೀಮಿತವಾಗಿರುವ ಸೊಗಲದ್ ರವರ ಆಡಳಿತ ಶೈಲಿ ತೀವ್ರ ಟೀಕೆಗೆ ಒಳಗಾಗಿದೆ.

ಇಬ್ಬರೂ ಅಧಿಕಾರಿಗಳಾದ ಅಜ್ಜಪ್ಪ ಸೊಲಗದ್ ಮತ್ತು ಶರಣಪ್ಪ ರವರು ಕರ್ತವ್ಯ ನಿರ್ಲಕ್ಷ್ಯದ ಪರಾಕಾಷ್ಠೆ ತೋರಿಸಿದ್ದಾರೆ. ಟೆಂಡರ್‌ದಾರ, ವಾರ್ಡನ್ ಮತ್ತು ಸಹಾಯಕ ನಿರ್ದೇಶಕ ಶರಣಪ್ಪ ಚೌಹಾಣ್ ಅವರ ನಡುವಿನ ಸಂಪರ್ಕ ಮತ್ತು ಹಣಕಾಸು ವ್ಯವಹಾರಗಳ ಕುರಿತು ತನಿಖೆ ನಡೆಸಿ, ಬಡ ಮಕ್ಕಳ ಆರೋಗ್ಯದೊಂದಿಗೆ ಚೆಲ್ಲಾಟವಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು.ಕೂಡಲೇ ಜಿಲ್ಲಾಡಳಿತವು, ಸಹಾಯಕ ನಿರ್ದೇಶಕ ಶರಣಪ್ಪ ರವರನ್ನು ಪ್ರಭಾರ ಹುದ್ದೆಯಿಂದ ಬಿಡುಗಡೆಗೊಳಿಸಿ, ವಸತಿ ನಿಲಯಗಳ ಸುಧಾರಣೆಯ ಕಡೆಗೆ ನಿಯೋಜಿಸಬೇಕು ಹಾಗೂ ಉಪ ನಿರ್ದೇಶಕ ಅಜ್ಜಪ್ಪ ಸೊಲಗದ್ ಅವರ ಸಮಗ್ರ ಮೇಲ್ವಿಚಾರಣಾ ವ್ಯವಸ್ಥೆಯ ವೈಫಲ್ಯದ ಕುರಿತು ಕಠಿಣ ತನಿಖೆ ನಡೆಸಬೇಕು. ಈ ಇಬ್ಬರ ನಿರ್ಲಕ್ಷ್ಯದ ಕುರಿತು ಲೋಕಾಯುಕ್ತ ಸಭೆಯಲ್ಲಿ ಗಂಭೀರ ಚರ್ಚೆಯನ್ನು ರಣಬೇಟೆ ತಂಡ ನಡೆಸುಡುತ್ತದೆ

