ಹಾಸ್ಟೆಲ್ ಮಕ್ಕಳ ಅನ್ನಕ್ಕೆ ಕನ್ನ ಹಾಕಿದ ಅಧಿಕಾರಿಗಳು…!

ಟೆಂಡರ್ ಕರಾರುಗಳ ‘ಉಲ್ಲಂಘನೆ’: ಸಹಾಯಕ ನಿರ್ದೇಶಕರೇ, ದಾಖಲೆಗಳೇ ನಿಮ್ಮ ‘ಕಾನೂನಾತ್ಮಕ ಜವಾಬ್ದಾರಿ’!

ರಣ ಬೇಟೆ ನ್ಯೂಸ್ ಕೊಪ್ಪಳ ಅ:27(ಸಂಚಿಕೆ-2)

ಕೊಪ್ಪಳ ಜಿಲ್ಲೆಯ ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಆಹಾರ ಸಾಮಗ್ರಿಗಳ ಸರಬರಾಜಿನ ಕುರಿತ ಘೋರ ಅಕ್ರಮಗಳು ಇಂದು ಬಯಲಾಗಿವೆ. ದಿನಾಂಕ 05/04/2025 ರಿಂದ ಎರಡು ವರ್ಷಗಳ ಅವಧಿಗೆ ಗುತ್ತಿಗೆ ಪಡೆದ ಕೆ.ಎಸ್.ಸಿ.ಸಿ.ಎಫ್., ಬೆಂಗಳೂರು ಸಂಸ್ಥೆಯು, ಕಾರ್ಯಾದೇಶದ ಅಧಿನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ವಿದ್ಯಾರ್ಥಿಗಳ ಹಕ್ಕನ್ನು ಕಗ್ಗೊಲೆ ಮಾಡಿದೆ ಎಂಬುದು ರಣ ಬೇಟೆ ತಂಡದ ತನಿಖೆಯಲ್ಲಿ ದೃಢಪಟ್ಟಿದೆ.
​ಈ ಸರಣಿ ಅಕ್ರಮಗಳ ಕೇಂದ್ರಬಿಂದುವಾಗಿರುವ ಸಹಾಯಕ ನಿರ್ದೇಶಕ ಶರಣಪ್ಪ ಚೌಹಾಣ್ ಅವರ “ಈ ವಿಷಯವು ನನ್ನ ಅರಿವಿಗೆ ಇಲ್ಲ” ಎಂಬ ಹೊಣೆಗೇಡಿ ಉತ್ತರವು ಇಲಾಖೆಯ ಆಡಳಿತವು ಸಂಪೂರ್ಣ ಅಂಧಕಾರದಲ್ಲಿ ಮುಳುಗಿರುವುದನ್ನು ಸಾರುತ್ತದೆ.


ಅಧಿನಿಯಮಗಳ ಅರಿವಿಲ್ಲದ ಅಧಿಕಾರಿಗಳ ಆಡಳಿತ:
​ಕಾರ್ಯಾದೇಶದ ಪ್ರಮುಖ ಷರತ್ತುಗಳ ವ್ಯವಸ್ಥಿತ ಉಲ್ಲಂಘನೆ ಮತ್ತು ಅದಕ್ಕೆ ಅಧಿಕಾರಿಗಳ ಮೌನ ಸಮ್ಮತಿ ಈ ಕೆಳಕಂಡಂತಿದೆ:
​ಜಿಪಿಎಸ್ ಕರಾರಿನ ಭಂಗ: ಸರಬರಾಜು ಮಾಡಿದ ಪ್ರತಿ ಬಿಲ್ಲನ್ನು ಕಡ್ಡಾಯವಾಗಿ ಜಿಪಿಎಸ್ ಛಾಯಾಚಿತ್ರ ಸಮೇತ ಸಲ್ಲಿಸಬೇಕೆಂಬ ಮೂಲಭೂತ ಕರಾರು ಈ ವರೆಗೆ ಪಾಲನೆಯಾಗಿಲ್ಲ. ಟೆಂಡರ್ದಾರರ ದುರ್ನಡತೆಯು ಸ್ಪಷ್ಟವಾಗಿದ್ದರೂ, ಸಹಾಯಕ ನಿರ್ದೇಶಕರು ಮತ್ತು ವಾರ್ಡನ್‌ಗಳು ಈ ಅಪೂರ್ಣ ದಾಖಲೆಗಳ ಆಧಾರದ ಮೇಲೆ ಹಣಕಾಸು ಪಾವತಿಯನ್ನು ಅನುಮೋದಿಸಿದ್ದಾರೆ ಎಂಬುದು ತನಿಖೆಯಾಗಬೇಕು. ಇದು ಸಾರ್ವಜನಿಕ ಹಣದ ವಂಚನೆಯಲ್ಲದೆ ಮತ್ತೇನು?


​ಆಹಾರ ಸಾಮಗ್ರಿ ಗುಣಮಟ್ಟದ ಆಹುತಿ: ಕೊಪ್ಪಳ ನಗರದ ಪರಿಶಿಷ್ಟ ಜಾತಿ-1 ಬಾಲಕಿಯರ ವಸತಿ ನಿಲಯದಲ್ಲಿ ಮೊನ್ನೆಯ ದಿನ ಅನ್ನ-ಸಾಂಬಾರಿನಲ್ಲಿ (ಬಾಲು ಹುಳು) ಪತ್ತೆಯಾದ ಘಟನೆಯು ಸರಬರಾಜಾದ ಆಹಾರವು ಮನುಷ್ಯನ ಭಕ್ಷಣೆಗೆ ಅರ್ಹವಲ್ಲ ಎಂಬುದನ್ನು ಸಾರುತ್ತದೆ. ಕರಾರು 12 ರಂತೆ ತಕ್ಷಣವೇ ಮಾದರಿಗಳನ್ನು ಪರೀಕ್ಷೆಗಾಗಲಿ ಅಥವಾ ಸಾಮಗ್ರಿಗಳನ್ನು ಬದಲಾಯಿಸಲು ಕ್ರಮವಹಿಸದ ಅಧಿಕಾರಿಗಳ ನೀಚತನವು ಇಲ್ಲಿ ಬಯಲಾಗಿದೆ. ಕಳಪೆ ಸಾಮಗ್ರಿ ಗಮನಕ್ಕೆ ಬಂದರೂ ಟೆಂಡರ್ದಾರರ ಮೇಲೆ ಶಾಸನಬದ್ಧ ಕ್ರಮ ಕೈಗೊಳ್ಳಲು ಈ ಅಧಿಕಾರಿಗಳು ಹಿಂದೆಮುಂದೆ ನೋಡುತ್ತಿರುವುದರ ಗುಟ್ಟೇನು?
​ಅನಧಿಕೃತ ಉಪಗುತ್ತಿಗೆಯ ದುರಾಡಳಿತ: ಟೆಂಡರ್‌ನ ಪ್ರಮುಖ ಷರತ್ತು 22 ರ ಪ್ರಕಾರ ಗುತ್ತಿಗೆಯನ್ನು ಬೇರೆಯವರಿಗೆ ವರ್ಗಾಯಿಸಬಾರದು ಅಥವಾ ಉಪಗುತ್ತಿಗೆ ನೀಡಬಾರದು. ಆದರೂ, ಕೆ.ಎಸ್.ಸಿ.ಸಿ.ಎಫ್. ಸಂಸ್ಥೆಯು ಈ ಕಾರ್ಯವನ್ನು ಕೊಪ್ಪಳದ ‘ವೈಷ್ಣವಿ ಸಪ್ಲಾಯರ್ಸ್’ ಅವರಿಗೆ ಗುಪ್ತವಾಗಿ ಹಸ್ತಾಂತರಿಸಿದೆ ಎಂಬ ಸಂಶಯವು ದೃಢವಾಗುತ್ತಲಿದೆ. ಈ ಕರಾರು ಉಲ್ಲಂಘನೆಯು ಸಾಬೀತಾದಲ್ಲಿ, ನಿಯಮಾವಳಿ 32 ರ ಪ್ರಕಾರ ತಕ್ಷಣವೇ ಗುತ್ತಿಗೆಯನ್ನು ರದ್ದುಪಡಿಸಿ, ಭದ್ರತಾ ಠೇವಣಿಯನ್ನು ರಾಜಸ್ವಾಧೀನ ಮಾಡಿಕೊಂಡು, ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸುವ ಅಧಿಕಾರ ಇಲಾಖೆಗೆ ಇದೆ. ಈ ಅನಿವಾರ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳು ಇಚ್ಛಾಶಕ್ತಿಯ ಕೊರತೆ ಪ್ರದರ್ಶಿಸಿರುವುದು ನಾಚಿಕೆಗೇಡಿನ ವಿಷಯ.


ಸಹಾಯಕ ನಿರ್ದೇಶಕರೇ, ದಾಖಲೆ ಕೊಟ್ಟು ಆಡಳಿತ ಸಮರ್ಥಿಸಿಕೊಳ್ಳಿ!
​ರಣ ಬೇಟೆ ತಂಡದ ಪ್ರಕಾರ, ಸಹಾಯಕ ನಿರ್ದೇಶಕ ಶರಣಪ್ಪ ಚೌಹಾಣ್ ಅವರು ತಮ್ಮ ಆಡಳಿತಾತ್ಮಕ ಪಾರದರ್ಶಕತೆ ಮತ್ತು ನಿರ್ವಂಚನೆಯ ಕರ್ತವ್ಯ ನಿರ್ವಹಣೆಯನ್ನು ಸಾಬೀತುಪಡಿಸಬೇಕಾದರೆ, ಅವರು ಕೊಪ್ಪಳ ನಗರದ ಪರಿಶಿಷ್ಟ ಜಾತಿ-1 ಬಾಲಕಿಯರ ವಸತಿ ನಿಲಯಕ್ಕೆ ಸಂಬಂಧಿಸಿದ ತಕ್ಷಣವೇ ಈ ಕೆಳಗಿನ ಅಕ್ಷರಶಃ ದಾಖಲೆಗಳನ್ನು ಪ್ರಕಟಿಸಬೇಕು:
ಜಿಪಿಎಸ್ ಸಮೇತ ವಿತರಣಾ ಪತ್ರಗಳು: ಪ್ರತಿ ಸರಬರಾಜಿನ ಜಿಪಿಎಸ್ ದತ್ತಾಂಶ, ವಾಹನ ದತ್ತಾಂಶ ಮತ್ತು ಅಧಿಕೃತ ಟೆಂಡರ್ದಾರರ ಸಹಿ ಇರುವ ದಾಖಲೆಗಳು.
ಹಣಕಾಸು ನಿರ್ವಹಣೆಯ ಕಾಗದಪತ್ರಗಳು: ಉಪಗುತ್ತಿಗೆದಾರರದ್ದಲ್ಲ ಎಂದು ಸಾಬೀತುಪಡಿಸುವ, ಕೆ.ಎಸ್.ಸಿ.ಸಿ.ಎಫ್. ಹೆಸರಿನಲ್ಲಿರುವ ಜಿಎಸ್‌ಟಿ ಬಿಲ್ ಮತ್ತು ಡೆಲಿವರಿ ಚಲನ್‌ಗಳ ಮೂಲ ಪ್ರತಿಗಳು.
ವಾರ್ಡನ್‌ಗಳ ಖಚಿತೀಕರಣ: ಸರಬರಾಜಾದ ಆಹಾರ ಪದಾರ್ಥಗಳು ‘ಉತ್ತಮ ಗುಣಮಟ್ಟ’ದ್ದಾಗಿವೆ ಎಂಬುದರ ಕುರಿತು ನಿಲಯ ಮೇಲ್ವಿಚಾರಕರು ಲಿಖಿತ ರೂಪದಲ್ಲಿ ನೀಡಿದ ದೃಢೀಕರಣ ಪತ್ರಗಳು.
​ಆಡಳಿತ ದಾಖಲೆ: ಸ್ಟಾಕ್ ರಿಜಿಸ್ಟರ್‌ನಲ್ಲಿರುವ ನಮೂದುಗಳ ವಿವರಗಳು ಮತ್ತು 2025ರ ಆರಂಭದಿಂದ ಅಕ್ಟೋಬರ್ ಅಂತ್ಯದವರೆಗೆ ಕಳಿಸಲಾದ ಇಂಡೆಂಟ್‌ಗಳ (ಬೇಡಿಕೆ ಪತ್ರ) ಅಧಿಕೃತ ಪಟ್ಟಿ.
ಎಲ್ಲಾ ದಾಖಲೆಗಳನ್ನು ಒದಗಿಸಲು ವಿಫಲವಾದರೆ, ಅಧಿಕಾರಸ್ಥರ ವಿರುದ್ಧದ ಆಪಾದನೆಗಳು ನಿಶ್ಚಿತ ಎಂದು ಸಾರ್ವಜನಿಕರು ತೀರ್ಮಾನಿಸುತ್ತಾರೆ. ಜಿಲ್ಲಾಡಳಿತವು ತಕ್ಷಣವೇ ಶಿಸ್ತುಕ್ರಮಕ್ಕೆ ಅಳವಡಿಸಿ, ಈ ಭ್ರಷ್ಟಾಚಾರದ ಜಾಲವನ್ನು ಬೇರುಸಹಿತ ಕಿತ್ತೊಗೆಯಲು ಮುಂದಾಗಬೇಕು.

​(ಇದೇ ವಿಷಯವನ್ನು ಮುಂದಿನ ಸಂಚಿಕೆಯಲ್ಲಿ ವಿಸ್ತೃತವಾಗಿ ಮುಂದುವರಿಸಲಾಗುವುದು.)

error: Content is protected !!
Scroll to Top