Koppal KRIDL ಜಾಲದಂತೆ: ಸಮಾಜ ಕಲ್ಯಾಣ ಇಲಾಖೆಯಲ್ಲೂ ಅಕ್ರಮದ ಮುನ್ನುಡಿ!
ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಅ:31 (ಸಂಚಿಕೆ-5)
ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ (ಡಿಡಿ) ಶ್ರೀ ಅಜ್ಜಪ್ಪ ಸೊಗಲದ ಅವರ ಕೃಪಾಕಟಾಕ್ಷದಡಿಯಲ್ಲಿ ಅನಧಿಕೃತವಾಗಿ ಮೆರೆಯುತ್ತಿದ್ದ ಸಚಿನ್ ಯಾದವ್ ಕುರಿತ ‘ರಣ ಬೇಟೆ’ಯ ಸರಣಿ ವರದಿಯ ಪ್ರಭಾವ ಇದೀಗ ಸ್ಪಷ್ಟವಾಗಿದೆ. ದಿನಾಂಕ 29.10.2025ರ ಮಧ್ಯಾಹ್ನ 2:37ಕ್ಕೆ ‘ರಣ ಬೇಟೆ ತಂಡ’ವು ಸಚಿನ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಆತ ತನ್ನ ಅಕ್ರಮ ಕರ್ತವ್ಯವನ್ನು ಕಾನೂನಾತ್ಮಕವಾಗಿ ಒಪ್ಪಿಕೊಂಡಿರುತ್ತಾನೆ!

ಡಿಡಿ ಅಜ್ಞಾಪಾಲಕನ ಬಾಯಲ್ಲಿ ಹೊರಬಿದ್ದ ಸತ್ಯ: ನಾನಿನ್ನು ಕಚೇರಿಗೆ ಬರುವುದಿಲ್ಲ!
ರಣ ಬೇಟೆ ತಂಡದವರು ಕರೆ ಮಾಡಿ, ಸಚಿನ್ ಅವರ ಅಕ್ರಮ ಕರ್ತವ್ಯದ ಕುರಿತು ಕೆಸಿಎಸ್‌ಆರ್ ನಿಯಮಗಳು (KCSR Rules) ಮತ್ತು ಹಲವು ಸರ್ಕಾರಿ ನಿಯಮಗಳ ಬಗ್ಗೆ ಪ್ರಶ್ನಿಸಿದಾಗ ಆರಂಭದಲ್ಲಿ ವಾದ ಮಾಡಿದರೂ, ಸತ್ಯದ ಮುಂದೆ ಮಂಡಿಯೂರಿರುವುದನ್ನು ಕಾಣಬಹುದು:
“ನನಗೆ ಕಚೇರಿಯ ಯಾವುದೇ ಆದೇಶವಿಲ್ಲ. ನಾನು ಸರ್ಕಾರಿ ನೌಕರನೂ ಅಲ್ಲ. ಸಾಹೇಬರು (ಅಜ್ಜಪ್ಪ ಸೊಗಲದ) ಹೇಳಿದ ಕೆಲಸವನ್ನು ಆಗಾಗ ಬಂದು ಮಾಡಿಕೊಡುತ್ತಿದ್ದೆ. ಇನ್ನು ಮುಂದೆ ನಾನು ಸರ್ಕಾರಿ ಕಚೇರಿಗೆ ಬರುವುದಿಲ್ಲ ಮತ್ತು ಕುಳಿತುಕೊಳ್ಳುವುದಿಲ್ಲ. ಅವರು ಕರೆದರೂ ಹೋಗುವುದಿಲ್ಲ ಹಾಗೂ ಮತ್ತೆ ಕೆಲಸ ಮಾಡುವುದಿಲ್ಲ” ಎಂದು ಆತ ಸ್ಪಷ್ಟವಾಗಿ ದೂರವಾಣಿ ಮೂಲಕ ಮಾಹಿತಿ ನೀಡಿರುತ್ತಾರೆ.
ಇದು ಉಪ ನಿರ್ದೇಶಕ ಶ್ರೀ ಅಜ್ಜಪ್ಪ ಸೊಗಲದ ಅವರ ಕಾನೂನು ಬಾಹಿರ ಕ್ರಮವನ್ನು ಸಚಿನ್ ಅವರೇ ಸ್ವತಃ ದೃಢಪಡಿಸಿದಂತಾಗಿದೆ!

ಗೋಪ್ಯತೆಗೆ ಯಾರು ಹೊಣೆ?
ಸಚಿನ್‌ನ ಬಾಯಿಂದ ಹೊರಬಿದ್ದ ಈ ಸತ್ಯಾಂಶವು ನೇರವಾಗಿ ಉಪ ನಿರ್ದೇಶಕ ಶ್ರೀ ಅಜ್ಜಪ್ಪ ಸೊಗಲದ ಅವರ ‘ಕರ್ತವ್ಯ ಲೋಪ’ ಮತ್ತು ‘ನಿರ್ಲಕ್ಷ್ಯ’ವನ್ನು ಎತ್ತಿ ಹಿಡಿಯುತ್ತದೆ. ಕೆಸಿಎಸ್‌ಆರ್ ನಿಯಮಗಳನ್ನು ಗಾಳಿಗೆ ತೂರಿ, ಆದೇಶವಿಲ್ಲದ ವ್ಯಕ್ತಿಯನ್ನು ಕಚೇರಿಗೆ ಕರೆಸಿ, ಪ್ರಮುಖ ಕಡತಗಳನ್ನು ಕೈಗೆ ನೀಡುವ ಈ ಕ್ರಮ ಕಾನೂನಾತ್ಮಕವಾಗಿ ಸಮರ್ಥನೀಯವೇ?
ಸಚಿನ್‌ನಂತಹ ಆದೇಶವಿಲ್ಲದ ವ್ಯಕ್ತಿಗಳು ಕಚೇರಿಯಲ್ಲಿ ಮುಕ್ತವಾಗಿ ಓಡಾಡುವುದರಿಂದ, ಇಲಾಖೆಯ ಮತ್ತು ಫಲಾನುಭವಿಗಳ ವೈಯಕ್ತಿಕ ಮತ್ತು ಕಚೇರಿಯ ಗೌಪ್ಯತೆಗೆ ಭಾರಿ ಧಕ್ಕೆಯಾಗಿದೆ. ಈ ಗೌಪ್ಯತೆ ಭಂಗಕ್ಕೆ ಹೊಣೆಗಾರರು ಯಾರು?
ಅನಧಿಕೃತ ನೌಕರನ ಕೈಯಲ್ಲಿ ಪ್ರಮುಖ ಕಡತಗಳಿರುವಾಗ, ಅವು ದುರುಪಯೋಗವಾದರೆ ಅಥವಾ ನಾಶವಾದರೆ ಅದರ ಸಂಪೂರ್ಣ ಹೊಣೆ ಮತ್ತು ಪರಿಣಾಮವನ್ನು ಮಾನ್ಯ ಉಪ ನಿರ್ದೇಶಕರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ?

Koppal KRIDL ಜಾಲದಂತೆ: ಸಮಾಜ ಕಲ್ಯಾಣ ಇಲಾಖೆಯಲ್ಲೂ ಅಕ್ರಮದ ಮುನ್ನುಡಿ!
ಈ ಪ್ರಕರಣವು ಕೇವಲ ಒಬ್ಬ ಹೊರಗುತ್ತಿಗೆ ನೌಕರನನ್ನು ಕಚೇರಿಗೆ ಕರೆಸಿದ್ದಲ್ಲ. ಹಿಂದಿನ ಸಂಚಿಕೆಗಳಲ್ಲಿ ವರದಿಯಾದಂತೆ, ಕೊಪ್ಪಳದಲ್ಲಿ KRIDL (ಕರ್ನಾಟಕ ರಾಜ್ಯ ಮೂಲಭೂತ ಸೌಕರ್ಯ ಇಲಾಖೆ) ಯಲ್ಲಿನ ವ್ಯವಸ್ಥಿತ ಭ್ರಷ್ಟಾಚಾರದ ಜಾಲದ ಮಾದರಿಯಲ್ಲೇ, ಸಮಾಜ ಕಲ್ಯಾಣ ಇಲಾಖೆಯಲ್ಲೂ ಒಂದು ವ್ಯವಸ್ಥಿತ ಭ್ರಷ್ಟಾಚಾರದ ‘ಮುನ್ನುಡಿ’ಯನ್ನು ಉಪ ನಿರ್ದೇಶಕರು ಬರೆಯುತ್ತಿದ್ದಾರೆ ಎಂಬ ಅನುಮಾನಗಳು ಮತ್ತು ತೀವ್ರ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿವೆ.
ಸಾರ್ವಜನಿಕರ ಏಕೈಕ ಆಗ್ರಹ:
ಮಾನ್ಯ ಉಪ ನಿರ್ದೇಶಕ ಶ್ರೀ ಅಜ್ಜಪ್ಪ ಸೊಗಲದ ಅವರು ತಮ್ಮ ಕರ್ತವ್ಯ ಲೋಪಕ್ಕೆ ಮತ್ತು ಕಾನೂನು ಬಾಹಿರ ಕೃತ್ಯಕ್ಕೆ ತಕ್ಷಣವೇ ಸಾರ್ವಜನಿಕ ಸಮರ್ಥನೆಯನ್ನು ನೀಡಬೇಕು. ತಪ್ಪಿತಸ್ಥರ ವಿರುದ್ಧ ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸಿ, ಇಂತಹ ಗೋಮುಖ ವ್ಯಾಘ್ರ ಲೀಲೆಗಳಿಗೆ ಶಾಶ್ವತವಾಗಿ ಅಂತ್ಯ ಹಾಡಬೇಕು.

