ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಕ್ರಮದ ‘ಅಗ್ನಿ ಪರೀಕ್ಷೆ’

ಕೊಪ್ಪಳ ವಸತಿ ನಿಲಯಗಳಲ್ಲಿ ‘ಅನ್ನದಾನ’ಕ್ಕೆ ಕತ್ತರಿ!

ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಅ:04 (ಸಂಚಿಕೆ-06)

ಕೊಪ್ಪಳ: ರಾಜ್ಯ ಮತ್ತು ಕೇಂದ್ರದ ಸಮ್ಮಿಲನದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಡ ಮಕ್ಕಳಿಗೆ ವಿದ್ಯಾದಾನದ ಜೊತೆಗೆ ಅನ್ನದಾನ ನೀಡುವ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಕೊಪ್ಪಳ ತಾಲೂಕಿನ ಕೆಲ ವಸತಿ ನಿಲಯಗಳ ವಾರ್ಡನ್‌ರ ಕೃತ್ಯಗಳಿಂದಾಗಿ ಅನ್ನಸಂತರ್ಪಣೆಯೇ ಚರ್ಚೆ ಗ್ರಾಸವಾಗಿದೆ.


​ಸರಕಾರವು ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಬಿಡುಗಡೆ ಮಾಡಿದ ಪಿಡಿಎಸ್ (PDS) ಅಕ್ಕಿ ಮತ್ತು ಗೋಧಿಯನ್ನು ಭ್ರಷ್ಟಾಚಾರದ ಮಸಕು ಆವರಿಸಿದೆ ಎಂಬುದು ಸಾರ್ವಜನಿಕರ ಆಕ್ರೋಶದ ನುಡಿ. ವಾರ್ಡನ್‌ಗಳು ವಿದ್ಯಾರ್ಥಿಗಳ ಸುಳ್ಳು ಹಾಜರಾತಿಯನ್ನು ಸೃಷ್ಟಿಸಿ, ಎಫ್‌ಸಿಐ (FCI) ಗೋಡಾನ್‌ಗಳಿಂದ ಅಧಿಕ ಪ್ರಮಾಣದ ಪಡಿತರವನ್ನು ಎತ್ತುವಳಿ ಮಾಡುತ್ತಿದ್ದಾರೆ.
ನಿಲಯವಾಸಿಗಳಿಗೆ ಪೂರ್ಣ ಪ್ರಮಾಣದ ಅನ್ನ ನೀಡದೆ, ಅರೆಬರೆ ಊಟ ಬಡಿಸಿ, ಉಳಿತಾಯವಾದ ಅಕ್ಕಿ ಮತ್ತು ಗೋಧಿಯನ್ನು ಕಳ್ಳದಾರಿ ಹಿಡಿಸುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಬಿಸಿ ಬಿಸಿ ಚರ್ಚೆಯಾಗಿದೆ. ಬಡ ಮಕ್ಕಳ ಪಾಲಿಗಿರುವ ಅನ್ನವನ್ನು ಕಸಿದು, ಗಂಟುಕಟ್ಟುವ ಈ ನಡೆಯು ಅಕ್ಷರಶಃ ದೌರ್ಭಾಗ್ಯ.


​ಗ್ಯಾಸ್ ಸಿಲೆಂಡರ್‌ಗಳ ‘ಕೀಲು-ಕೈ’: ಕಿಕ್-ಬ್ಯಾಕ್‌ನ ಕರಾಳ ಲೋಕ!
​ಕೇವಲ ಪಡಿತರದಲ್ಲಿ ಮಾತ್ರವಲ್ಲ, ಭೋಜನದ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅಡುಗೆ ಅನಿಲ (ಗ್ಯಾಸ್ ಸಿಲೆಂಡರ್‌) ಬಳಕೆಯಲ್ಲಿಯೂ ಇದೇ ರೀತಿಯ ಹಗರಣದ ಕುಣಿಕೆ ಬಿಗಿಯಲಾಗಿದೆ ಎಂಬ ಆರೋಪಗಳು ಸಾರ್ವಜನಿಕರ ಕಣ್ಣು ಕುಕ್ಕಿವೆ.
ಮಿಥ್ಯಾ ಲೆಕ್ಕದ ಕಂತೆ: ಪ್ರತಿ ತಿಂಗಳಿಗೆ ಇಷ್ಟೇ ಸಿಲೆಂಡರ್‌ಗಳು ಖರ್ಚಾಗುತ್ತವೆ ಎಂದು ಮಿಥ್ಯಾ ಲೆಕ್ಕಾಚಾರ ತೋರಿಸಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಅವರದೇ ಇಲಾಖೆಯ ಅಧಿಕಾರಿಳಿಂದ ಕೇಳಿಬಂದಿವೆ.
​ಕಿಕ್-ಬ್ಯಾಕ್‌ನ ಗುಟ್ಟು: ಈ ರೀತಿ ಉಳಿತಾಯವಾದ ಸಿಲೆಂಡರ್‌ಗಳ ಹಣವನ್ನು ಸಂಬಂಧಪಟ್ಟವರಿಂದ ‘ಕಿಕ್-ಬ್ಯಾಕ್’ (ಗುಪ್ತ ಕಾಣಿಕೆ) ರೂಪದಲ್ಲಿ ಪಡೆಯುತ್ತಿದ್ದಾರೆಂಬ ಮಾತಿನ ಓಡಾಟವು ಎಲ್ಲೆಡೆ ಹಬ್ಬಿದೆ.


​ ‘ರಣಭೇಟಿ’ಯ ನಂತರವೂ ಮೌನ: ಅನುಮಾನದ ಅಲೆ
​ಈ ಎಲ್ಲ ಅಕ್ರಮ ಮತ್ತು ಹಗರಣಗಳ ಬಗ್ಗೆ ‘ರಣಭೇಟಿ ತಂಡ’ದವರು ಸುದ್ದಿ ಮಾಡಿ, ದೂರು ಸಲ್ಲಿಸಿ, ಮಾಹಿತಿ ಹಕ್ಕು ಕಾಯ್ದೆಯಡಿ (RTI) ಅರ್ಜಿ ಮತ್ತು ದೂರನ್ನು ಸಲ್ಲಿಸಿ ಒಂದು ವಾರ ಕಳೆದರೂ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಪ್ರಯತ್ನವನ್ನೂ ಮಾಡದಿರುವುದು ಇನ್ನಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಂತಾಗಿದೆ. ಈ ಮೌನವು ‘ಅಕ್ರಮ ನಡೆದಿದೆ’ ಎಂಬ ಸಾರ್ವಜನಿಕರ ಶಂಕೆಯನ್ನು ದೃಢೀಕರಿಸಿದಂತಿದೆ.
​ವಿದ್ಯಾರ್ಥಿಗಳ ಪೋಷಕರು ಮತ್ತು ಸಮಾಜದ ಹಿತೈಷಿಗಳು ಈ ಭ್ರಷ್ಟಾಚಾರದ ಭೂತವನ್ನು ಕೂಡಲೇ ಸರಕಾರವು ನಿರ್ಮೂಲನ ಮಾಡಬೇಕೆಂದು ಕೈಮುಗಿದು ಬೇಡುತ್ತಿದ್ದಾರೆ.

error: Content is protected !!
Scroll to Top