ಸ್ವಾಹಾ’ ಪರ್ವ ಶಿಕ್ಷಣ ಇಲಾಖೆಯಲ್ಲಿ ಈ ವರ್ಷವೂ ಮುಂದುವರೆಯುತ್ತಾ ಹಪ್ತಾ ಪಯಣ?

50 ಸಾವಿರದ ಅಮಲು ಇಂದಿನ ಅಧಿಕಾರಿಗಳೂ ಅದೇ ‘ದಕ್ಷಿಣೆ’ಗೆ ಶರಣಾಗುವರೇ?

ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಪೆ:26

ನೋಡಿ, ಕಾನೂನು ಅನ್ನೋದು ಬಡವನಿಗೆ ಮಾತ್ರ ಬೆತ್ತ ಹಿಡಿಯುತ್ತೆ, ದುಡ್ಡಿರೋ ದಂಧೆಕೋರರಿಗೆ ರತ್ನಗಂಬಳಿ ಹಾಸುತ್ತೆ ಅನ್ನೋದಕ್ಕೆ ಕೊಪ್ಪಳದ ಶಿಕ್ಷಣ ಇಲಾಖೆಯೇ ಸಾಕ್ಷಿ. ಅಜೂರೈಟ್ ಕ್ಲಾಸಸ್‌ನಂತಹ ಅಕ್ರಮ ಕೇಂದ್ರಗಳು ಈಗ ಬೀಗ ಹಾಕಿ ಪತ್ರ ನೀಡಿರಬಹುದು, ಆದರೆ ಅದರ ಹಿಂದೆ ಅಡಗಿರೋ ‘ಮಾಮೂಲಿ’ ದಂಧೆಯ ವಾಸನೆ ಇಡೀ ಜಿಲ್ಲೆಯನ್ನೇ ಆವರಿಸಿದೆ. ಡಿಡಿಪಿಐ ಸೋಮಶೇಖರ್ ಬಿ. ಪಾಟೀಲ್ ಮತ್ತು ಬಿಇಒ ಹನುಮಂತಪ್ಪನವರೇ.. ನಿಮ್ಮ ಇಲಾಖೆಯ ಪಾವಿತ್ರ್ಯತೆ ಈ ‘ಹಫ್ತಾ’ ಸಂಸ್ಕೃತಿಯಲ್ಲಿ ಹರಾಜಾಗುತ್ತಿರೋದು ನಿಮಗೆ ಹೆಮ್ಮೆ ತರುತ್ತಿದೆಯೇ?


​ದಾಖಲೆಗಳು ಬಿಚ್ಚಿಟ್ಟ ದಗಾ ಲೈಸೆನ್ಸ್ ಇಲ್ಲದ ‘ಅಕ್ಷರ’ ವ್ಯಾಪಾರ!
​ನಮ್ಮ ಕೈಯಲ್ಲಿರೋ ಈ ಸ್ಫೋಟಕ ದಾಖಲೆಗಳನ್ನು ನೋಡಿ. ಹೂವಿನಹಾಳದ ಈ ಸಂಸ್ಥೆಯು ಯಾವುದೇ ಅಧಿಕೃತ ಪರವಾನಗಿ ಇಲ್ಲದೆ, ಅಗ್ನಿ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ ಮಕ್ಕಳನ್ನು ಕೂರಿಸಿಕೊಂಡಿತ್ತು. ಆಶ್ಚರ್ಯ ಅಂದ್ರೆ, ವರ್ಷಕ್ಕೆ 50 ಸಾವಿರ ರೂಪಾಯಿ ‘ನಡೆ’ ತಲುಪಿಸಿದರೆ ಸಾಕು, ಈ ಅಕ್ರಮವೂ ಸಕ್ರಮವಾಗಿ ಬಿಡುತ್ತಿತ್ತು! ಹಿಂದಿನ ಅಧಿಕಾರಿಗಳ ಕಾಲದಿಂದಲೂ ನಡೆದುಕೊಂಡು ಬಂದಿರೋ ಈ ‘ಕಪ್ಪ’ ಕಾಣಿಕೆಯ ಸಂಪ್ರದಾಯ ಈಗಲೂ ಮುಂದುವರಿಯುತ್ತಿದೆಯೇ ಎಂಬುದು ಸಾರ್ವಜನಿಕರ ಯಕ್ಷಪ್ರಶ್ನೆ.


ದೊಡ್ಡವರಿಗೆ ಅಭಯ, ಸಣ್ಣವರಿಗೆ ಕೆಂಗಣ್ಣು: ಇದು ಎಂತಹ ನ್ಯಾಯ?
​ಸಂಸ್ಥೆಯವರೇ ಬಾಯಿಬಿಟ್ಟಿರೋ ಆ ಮಾತುಗಳು ವ್ಯವಸ್ಥೆಯ ಅಣಕದಂತಿವೆ. “ದೊಡ್ಡ ದೊಡ್ಡ ಕೋಚಿಂಗ್ ಸೆಂಟರ್‌ಗಳು ಲಕ್ಷಾಂತರ ರೂಪಾಯಿ ಮಾಮೂಲಿ ಕೊಡ್ತಾರೆ, ರಾಜಕೀಯ ಪವರ್ ತೋರಿಸ್ತಾರೆ, ಅವರನ್ನ ಮುಟ್ಟೋಕೆ ಈ ಅಧಿಕಾರಿಗಳಿಗೆ ಧೈರ್ಯವಿಲ್ಲ” ಅನ್ನೋದು ಕಹಿ ಸತ್ಯ. ಸೋಮಶೇಖರ್ ಸಾಹೇಬ್ರೇ, ರಾಜಕೀಯ ಒತ್ತಡಕ್ಕೆ ಮಣಿದು ಅಕ್ರಮಕ್ಕೆ ಸಾಥ್ ಕೊಡೋದು ‘ಕರ್ತವ್ಯ ಲೋಪ’ ಅನ್ಸಲ್ವಾ? ಕೇವಲ ಸಣ್ಣ ಪುಟ್ಟ ಸಂಸ್ಥೆಗಳ ಮೇಲೆ ಪ್ರತಾಪ ತೋರಿಸೋದು ಬಿಟ್ಟು, ಆ ದೊಡ್ಡ ತಿಮಿಂಗಿಲಗಳಿಗೂ ಕಾನೂನಿನ ರುಚಿ ತೋರಿಸುವ ತಾಕತ್ತು ನಿಮಗಿದೆಯೇ?


ಜೂನ್-ಜುಲೈಗೆ ಮತ್ತೆ ‘ಅಕ್ರಮ’ದ ಸಿದ್ಧತೆ?
​ಈಗ ತಾತ್ಕಾಲಿಕವಾಗಿ ಕ್ಲಾಸುಗಳನ್ನು ಸ್ಥಗಿತಗೊಳಿಸಿರುವ ಈ ಸಂಸ್ಥೆಗಳು, ಜೂನ್ ಬರ್ತಿದ್ದಂತೆ ಮತ್ತೆ ಬಣ್ಣ ಬಣ್ಣದ ಪಾಂಪ್ಲೆಟ್‌ಗಳೊಂದಿಗೆ ಪೋಷಕರ ದಾರಿ ತಪ್ಪಿಸಲು ಸಜ್ಜಾಗಿವೆ. ಅಧಿಕಾರಿಗಳೇ, ಈ ಬಾರಿಯೂ ನಿಮ್ಮ ಜೇಬಿಗೆ ಆ ‘ಗರಿಗರಿ’ ನೋಟುಗಳು ತಲುಪಿದರೆ ನೀವು ಕುರುಡರಾಗುತ್ತೀರಾ? ಅಥವಾ ಈ ಅಕ್ರಮ ಶಿಕ್ಷಣ ಮಾಫಿಯಾದ ಬೇರು ಸವರಲು ಮುಂದಾಗ್ತೀರಾ? ಸೋಮಶೇಖರ್ ಮತ್ತು ಹನುಮಂತಪ್ಪನವರೇ.. ನೀವು ಜನಸಾಮಾನ್ಯರ ತೆರಿಗೆ ಹಣದಲ್ಲಿ ಸಂಬಳ ಪಡೀತಿರೋದು ನಿಯಮಗಳನ್ನು ಜಾರಿಗೆ ತರಲು, ಅಕ್ರಮಗಳಿಗೆ ರಕ್ಷಣೆ ಕೊಡಲಿಕ್ಕಲ್ಲ. ಈ ದಾಖಲೆಗಳು ಈಗ ಲೋಕಾಯುಕ್ತದ ಮೆಟ್ಟಿಲೇರಿದರೆ ನಿಮ್ಮ ಕುರ್ಚಿಗಳು ಉಳಿಯುತ್ತವೆಯೇ? ಯೋಚಿಸಿ ಸಾಹೇಬ್ರೇ.. ಸತ್ಯ ಯಾವತ್ತೂ ಸುಮ್ಮನಿರಲ್ಲ!

ಮುಂದುವರೆಯುತ್ತದೆ….

error: Content is protected !!
Scroll to Top