ಅಧಿಕಾರಿಗಳ ಆಪ್ತ ವಲಯದ ಕವಚದಲ್ಲಿ ಲೂಟಿ?
ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಮೇ:21 (ಸಂಚಿಕೆ-02)
ಕೂಕನೂರ: ಬಳಗೇರಿ ಗ್ರಾಮ ಪಂಚಾಯಿತಿಯ ಪಿಡಿಒ ಮಹೇಶ್ ಗೌಡ ನೀಲನಗೌಡ ಮಲ್ಲನಗೌಡ್ರ ಅವರ ಲಂಚದ ಡಿಜಿಟಲ್ ಪುರಾವೆಗಳು ಹೊರಬರುತ್ತಿದ್ದಂತೆ, ಅವರ ದರ್ಪ ಈಗ ‘ದೀನತೆ’ಯಾಗಿ ಬದಲಾಗಿದೆ! ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಗುತ್ತಿಗೆದಾರನಿಂದ ಲಕ್ಷಗಟ್ಟಲೆ ಹಣ ಕೀಳುವಾಗ ಇದ್ದ ಆ ಧೈರ್ಯ, ಈಗ ಸತ್ಯ ಜಗಜ್ಜಾಹೀರಾಗುತ್ತಿದ್ದಂತೆ ಮರೆಯಾಗಿದೆ. ಸುದ್ದಿ ಸದ್ದು ಮಾಡುತ್ತಿದ್ದಂತೆ, ಪಿಡಿಒ ಮಹೇಶಗೌಡ ಅವರು ನೇರವಾಗಿ ರಣಬೇಟೆ ಸಂಪಾದಕರಿಗೆ ಕರೆ ಮಾಡಿದ್ದಾರೆ. ಲಂಚದ ಕಥೆ ಸಾರ್ವಜನಿಕವಾಗಿ ಹರಿದಾಡುತ್ತಿರುವುದನ್ನು ಕಂಡು ಬೆಚ್ಚಿಬಿದ್ದಿರುವ ಮಹೇಶ್ ಗೌಡರು, “ಮೀಟಿಂಗ್‌ನಲ್ಲಿದ್ದೇನೆ, ಆಮೇಲೆ ಸಿಗ್ತೀನಿ” ಎಂದು ಮೊದಲಿಗೆ ಸಬೂಬು ಹೇಳಿದ್ದಾರೆ. ಬಳಿಕ ಶುರುವಾಗುತ್ತದೆ ನೋಡಿ ಅಸಲಿ ಆಟ! “ನನ್ನ ಪರಿಚಯ ಇದೆ ನಿಮಗೆ, ಯಾಕೆ ಹೀಗೆ ಹಾಕ್ತೀರಿ ಭಯ್ಯ? ಏನಿದ್ದರೂ ಮಾತಾಡಿ ಕ್ಲಿಯರ್ ಮಾಡಿಕೊಳ್ಳೋಣ, ಗ್ರೂಪ್‌ನಿಂದ ಸುದ್ದಿ ಡಿಲೀಟ್ ಮಾಡಿ” ಎಂದು ಗೋಗರೆದಿದ್ದಾರೆ.

ಡಿಜಿಟಲ್ ಅಳಿಸುವಿಕೆ – ಇದು ಅಪರಾಧದ ಸಾಕ್ಷಿ ನಾಶವೇ?
ಮಾತು ಕೇಳದಿದ್ದಾಗ, ‘ಅಡ್ಮಿನ್’ ಅಧಿಕಾರವನ್ನು ಬಳಸಿ ವಾಟ್ಸಾಪ್ ಗ್ರೂಪ್‌ಗಳಲ್ಲಿದ್ದ ಸಾಕ್ಷಿಗಳನ್ನು ತಾವೇ ಡಿಲೀಟ್ ಮಾಡಿದ್ದಾರೆ. ಪತ್ರಿಕೋದ್ಯಮದ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುತ್ತಿರುವ ಈ ಪಿಡಿಒ, ತಾವು ಮಾಡಿದ ತಪ್ಪುಗಳನ್ನು ಮುಚ್ಚಿ ಹಾಕಲು ಇಷ್ಟೆಲ್ಲಾ ಕಸರತ್ತು ಮಾಡುತ್ತಿದ್ದಾರೆ. ಪ್ರಶ್ನಿಸಿದವರನ್ನೇ ಗ್ರೂಪ್‌ನಿಂದ ಹೊರಹಾಕುವ ಮೂಲಕ ತನ್ನ ‘ಸರ್ವಾಧಿಕಾರಿ’ ಮನಸ್ಥಿತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಅಧಿಕಾರಿಗಳ ಆಪ್ತ ವಲಯದ ಕವಚದಲ್ಲಿ ಲೂಟಿ? ಬಳಗೇರಿ ಗ್ರಾಮ ಪಂಚಾಯಿತಿಯ ಪಿಡಿಒ ಮಹೇಶ್ ಗೌಡ ನೀಲನಗೌಡ ಮಲ್ಲನಗೌಡ್ರ. ಇವರ ಲಂಚದ ಕಥೆ ಇದೀಗ ಹೊಸ ತಿರುವು ಪಡೆದಿದೆ. ಕೇವಲ ಗುತ್ತಿಗೆದಾರರಿಂದ ಕಮಿಷನ್ ಪಡೆಯುವುದಷ್ಟೇ ಅಲ್ಲ, ಇವರ ಭ್ರಷ್ಟಾಚಾರದ ಬೇರುಗಳು ಎಲ್ಲಿಯವರೆಗೆ ಹಬ್ಬಿವೆ ಎಂದರೆ, ಇವರು ಉನ್ನತ ಅಧಿಕಾರಿಗಳ ಆಪ್ತ ವಲಯದಲ್ಲೇ ಗುರುತಿಸಿಕೊಂಡಿದ್ದಾರೆ ಎಂದು ಅವರದ್ದೆ ಸಿಬ್ಬಂದಿಗಳು ಹೇಳಿಕೊಂಡಿದ್ದಾರೆ. ಕೊಪ್ಪಳ ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿ ಟಿ. ಕೃಷ್ಣಮೂರ್ತಿ ಮತ್ತು ಕುಕನೂರು ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಬಿರಾದಾರ್ ಅವರ ‘ಆಪ್ತ’ ಎಂಬ ಹಣೆಪಟ್ಟಿ ಹೊತ್ತು, ಮಹೇಶ್ ಗೌಡ್ರು ಆಡಳಿತದ ಸವಲತ್ತುಗಳನ್ನು ತನ್ನ ಜಹಗೀರು ಎಂಬಂತೆ ಬಳಸಿಕೊಳ್ಳುತ್ತಿದ್ದಾರೆ! ಇಂತಹ ಭ್ರಷ್ಟಾಚಾರದ ಆರೋಪ ಹೊತ್ತ ಅಧಿಕಾರಿ, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕ ಪಂಚಾಯಿತಿಯ ಉನ್ನತ ಅಧಿಕಾರಿಗಳ ಕೃಪಾಕಟಾಕ್ಷದಲ್ಲಿ ಮೆರೆಯುತ್ತಿದ್ದಾರೆ ಎಂದರೆ, ವ್ಯವಸ್ಥೆ ಎಷ್ಟು ಕೊಳೆತಿದೆ? ಈ ಭ್ರಷ್ಟಾಚಾರದ ಜಾಲಕ್ಕೆ ಯಾರೆಲ್ಲಾ ಬೆಂಬಲ ನೀಡುತ್ತಿದ್ದಾರೆ? ಮಹೇಶ್ ಗೌಡ್ರ ಮೇಲೆ ಕ್ರಮ ಕೈಗೊಳ್ಳುವ ಬದಲು, ಇವರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆಯೇ ಎಂಬ ಅನುಮಾನ ಈಗ ಸಾರ್ವಜನಿಕರನ್ನು ಕಾಡುತ್ತಿದೆ. ಇವರೆಲ್ಲರೂ ಒಂದಾಗಿ, ಈ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆಯೇ?

ಬಾಪೂಜಿ ಸೇವಾ ಕೇಂದ್ರದಲ್ಲಿ ‘ಬಹಿರಂಗ ಲೂಟಿ’
ಅಷ್ಟೇ ಅಲ್ಲ, ಪಂಚಾಯಿತಿಯ ಸಿಬ್ಬಂದಿಯೊಬ್ಬರೇ ಸ್ಫೋಟಕ ಮಾಹಿತಿಯೊಂದನ್ನು ‘ರಣಬೇಟೆ’ಗೆ ನೀಡಿದ್ದಾರೆ. “ಮಹೇಶ್ ಗೌಡ್ರು ಕೇವಲ ಕಮಿಷನ್ ದಂಧೆಯಲ್ಲ, ಬಳಗೇರಿ ಗ್ರಾಮ ಪಂಚಾಯಿತಿಯ ಬಾಪೂಜಿ ಸೇವಾ ಕೇಂದ್ರದ ಹಣಕಾಸಿನಲ್ಲೂ ಲಕ್ಷಾಂತರ ರೂಪಾಯಿ ಗೋಲ್ಮಾಲ್ ಮಾಡಿತ್ತಿದ್ದಾರೆ” ಎಂದು ದಾಖಲೆ ಸಮೇತ ಆರೋಪಿಸಿದ್ದಾರೆ. ಸಾರ್ವಜನಿಕರ ಸೇವೆಗಾಗಿ ಇರಬೇಕಾದ ಆ ಖಾತೆಯು, ಇದೀಗ ಮಹೇಶ್ ಗೌಡ್ರ ವೈಯಕ್ತಿಕ ‘ಎಟಿಎಂ’ ಆಗಿ ಬದಲಾಗಿದೆಯೇ? ಪಿ.ಡಿ.ಒ ಅವರು ತಮ್ಮ ಪ್ರಭಾವವನ್ನು ಬಳಸಿ ಆರ್ಥಿಕ ದಾಖಲೆಗಳನ್ನು ತಿರುಚುವ ಸಾಧ್ಯತೆ ಇರುವುದರಿಂದ, ಬಾಪೂಜಿ ಸೇವಾ ಕೇಂದ್ರದ ಸಂಪೂರ್ಣ ಫಾರ್ ಶೀಟ್ ಓಚರ್‌ಗಳು ಮತ್ತು ಆಯಾ ಅವಧಿಯ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ತಕ್ಷಣವೇ ವಶಕ್ಕೆ ಪಡೆದು, ಸಿಇಒ ಅವರು ಪರಿಶೀಲಿಸಬೇಕಿದೆ.

ಸಿಇಒ ವರ್ಣಿತಾ ನೇಗಿಯವರಿಗೆ ಸವಾಲು: ಕೊಪ್ಪಳ ಜಿಲ್ಲಾ ಪಂಚಾಯಿತಿಯ ಸಿಇಒ ವರ್ಣಿತಾ ನೇಗಿ ಮತ್ತು ಕುಕನೂರು ತಾಲೂಕು ಪಂಚಾಯಿತಿಯ ಇಒ ಸಂತೋಷ್ ಬಿರಾದರ್ ಅವರ ಮುಂದೆ ಇದೀಗ ಸ್ಪಷ್ಟ ಸಾಕ್ಷ್ಯಾಧಾರಗಳ ಸಹಿತ ದೂರು ಸಲ್ಲಿಕೆಯಾಗಿದೆ. ಪಿಡಿಒ ಮಹೇಶ್ ಗೌಡರು ಗುತ್ತಿಗೆದಾರನಿಂದ ಪಡೆದ 99,000 ರೂಪಾಯಿಗಳ ವಹಿವಾಟಿನ ಪ್ರತಿಯೊಂದು ಡಿಜಿಟಲ್ ಸಾಕ್ಷಿಯೂ ನಿಮ್ಮ ಮೇಜಿನ ಮೇಲಿದೆ. ಇನ್ನು ವಿಳಂಬವೇಕೆ? ಇಂತಹ ಭ್ರಷ್ಟಾಧಿಕಾರಿಯ ಮೇಲೆ ಕೂಡಲೇ ಅಮಾನತಿನ ಅಸ್ತ್ರವನ್ನು ಪ್ರಯೋಗಿಸಿ. ಕಡತಗಳ ಕಳ್ಳಾಟಕ್ಕೆ ಬ್ರೇಕ್ ಹಾಕುವ ಸಮಯ ಬಂದಿದೆ. ವರ್ಗಾವಣೆ ಎಂಬುದು ಈ ಭ್ರಷ್ಟರಿಗೆ ಬಹುಮಾನದಂತಾಗುತ್ತದೆ, ಅಮಾನತ್ತೇ ಇವರಿಗೆ ಸಿಗುವ ಸರಿಯಾದ ಶಿಕ್ಷೆ.

ಲೋಕಾಯುಕ್ತದ ಕದ ತಟ್ಟಲಿರುವ ‘ರಣಬೇಟೆ’ ಇನ್ನು ಪಿಡಿಒ ಸಾಹೇಬರೇ, ಎಚ್ಚರ! ಸುದ್ದಿಯನ್ನು ಅಳಿಸಿ ಹಾಕಿದ್ರೆ ಸಾಕ್ಷ್ಯ ಮಾಯವಾಗುತ್ತದೆಂದು ಭ್ರಮಿಸಬೇಡಿ. ನಿಮ್ಮ ಈ ಲಂಚದ ದಂಧೆಯ ಆಳ ಅಗಲವನ್ನು ಅಗೆಯಲು ‘ರಣಬೇಟೆ’ ನ್ಯೂಸ್ ನಿರ್ಧರಿಸಿದೆ. ನಿಮ್ಮ ಅಧಿಕಾರಾವಧಿಯಲ್ಲಿ ನಡೆದ ಕಾಮಗಾರಿಗಳು, ನಿಮ್ಮ ಆಸ್ತಿಪಾಸ್ತಿಗಳ ಲೆಕ್ಕಾಚಾರ ಮತ್ತು ಈ ಕಮಿಷನ್ ದಂಧೆಯ ಜಾಲದ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಕರ್ನಾಟಕ ಲೋಕಾಯುಕ್ತದಂತಹ ಸಾಂವಿಧಾನಿಕ ಸಂಸ್ಥೆಗೆ ದೂರು ನೀಡಲು ಸಂಪಾದಕರು ಸಜ್ಜಾಗಿದ್ದಾರೆ. 99,000 ರೂಪಾಯಿ ಲಂಚಕ್ಕೆ ಕೈಯೊಡ್ಡುವ ಅಧಿಕಾರಿ, ಗ್ರಾಮದ ಅಭಿವೃದ್ಧಿಗೆ ಎಷ್ಟು ಮೀಸಲಿಟ್ಟಿರಬಹುದು? ಇವರ ಆಸ್ತಿಯ ಮೂಲವೇನು? ಇವುಗಳ ಬಗ್ಗೆ ತನಿಖೆಯಾದಾಗ ಇವರ ‘ಡಿಜಿಟಲ್ ಲಂಚ’ದ ಸಾಮ್ರಾಜ್ಯವೇ ಕುಸಿಯಲಿದೆ. ರಣಬೇಟೆ ಸಂಪಾದಕರು ಇದೀಗ ನಿಮ್ಮ ಆಸ್ತಿಪಾಸ್ತಿಗಳ ದಾಖಲೆಗಳನ್ನು ಶೋಧಿಸುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧದ ಈ ಸಮರದಲ್ಲಿ ನಿಮ್ಮ ಬಣ್ಣ ಸಂಪೂರ್ಣವಾಗಿ ಬಯಲಾಗುವ ದಿನಗಳು ಹತ್ತಿರದಲ್ಲಿವೆ. ಸಿಇಒ ವರ್ಣಿತ್ ನೇಗಿಯವರೇ, ಕುಕನೂರು ತಾಲೂಕಿನಾದ್ಯಂತ ಪಸರಿಸಿರುವ ಇಂತಹ ಭ್ರಷ್ಟ ಪಿಡಿಒಗಳ ಹಾವಳಿಯನ್ನು ತಡೆಯಲು, ಮಹೇಶ್ ಗೌಡರ ಮೇಲೆ ಕೂಡಲೇ ಕಠಿಣ ಕ್ರಮ ಕೈಗೊಂಡು ಜಿಲ್ಲಾಡಳಿತದ ನೈತಿಕತೆಯನ್ನು ಉಳಿಸಿಕೊಳ್ಳಿ.
ಸತ್ಯದ ವಿರುದ್ಧದ ನಿಮ್ಮ ಈ ಡಿಲೀಟ್ ಆಟ ಇನ್ನು ನಡೆಯದು. ಲೋಕಾಯುಕ್ತದ ಕತ್ತಿ ನಿಮ್ಮ ಮೇಲೆ ತೂಗುತ್ತಿದೆ.
ಸಂಚಿಕೆ ಮುಂದುವರೆಯುತ್ತದೆ…

