ಬಳಗೇರಿ ಪಂಚಾಯಿತಿಯಲ್ಲಿ ನಡೆಯುತ್ತಿದೆ ಅಕ್ಷರಶಃ ಲೂಟಿ!
ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಮೇ: 20
ಕೂಕನೂರ: ಇದು ಕೇವಲ ಒಂದು ಹಣಕಾಸಿನ ವರ್ಗಾವಣೆ ಅಲ್ಲ, ಇದು ಪಾರದರ್ಶಕ ಆಡಳಿತದ ಮುಖವಾಡ ಧರಿಸಿ ನಡೆಸಿದ ‘ಡಿಜಿಟಲ್ ಲೂಟಿ’ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬಳಗೇರಿ ಗ್ರಾಮ ಪಂಚಾಯಿತಿಯ ಪಡಸಾಲೆಯಲ್ಲಿ ಕುಳಿತು, ತನ್ನ ಅಧಿಕಾರದ ಮದದಲ್ಲಿ ಮೆರೆಯುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಗೌಡ ನೀಲನಗೌಡ ಮಲ್ಲನಗೌಡ್ರ, ಇದೀಗ ಭ್ರಷ್ಟಾಚಾರದ ಮಸಿಯಲ್ಲಿ ಮೈ-ಕೈ ಮೆತ್ತಿಕೊಂಡಿದ್ದಾರೆ.

ಅಧಿಕಾರದ ದರ್ಪಕ್ಕೆ ಡಿಜಿಟಲ್ ಹಣೆಪಟ್ಟಿ ಪಿಡಿಒ ಹುದ್ದೆ ಎಂದರೆ ಗ್ರಾಮದ ಅಭಿವೃದ್ಧಿಯ ರಥವನ್ನು ಎಳೆಯುವ ಸಾರಥಿ. ಆದರೆ, ಈ ಸಾರಥಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಸುತ್ತಿರುವುದು ‘ಕಮಿಷನ್ ಕುಸ್ತಿ’ ಗುತ್ತಿಗೆದಾರನ ಜೊತೆಗೆ ಇವರು ಮಾಡಿರುವ ಆಟಾಟೋಪಕ್ಕೆ ಸಾಕ್ಷಿಗಳಾಗಿವೆ ಅಂದಿನ ಡಿಜಿಟಲ್ ವಹಿವಾಟುಗಳು.
ಮಾರ್ಚ್ 6, 2026. ಮಧ್ಯಾಹ್ನ 3:03. ಫೋನ್-ಪೇ ಸ್ಕ್ಯಾನರ್ ಸದ್ದಾಗುತ್ತದೆ, 45,000 ರೂಪಾಯಿ ಅಧಿಕಾರಿಯ ಖಾತೆಗೆ ಜಂಪ್ ಆಗುತ್ತದೆ. ಅಷ್ಟಕ್ಕೇ ಮುಗಿಯಿತೇ? ಇಲ್ಲ. ಮಾರ್ಚ್ 11ರ ರಾತ್ರಿ 7:56ಕ್ಕೆ ಮತ್ತೊಂದು ಕಂತು, 54,000 ರೂಪಾಯಿ. ಕೇವಲ ಐದೇ ದಿನದ ಅಂತರದಲ್ಲಿ ಸುಮಾರು 99,000 ರೂಪಾಯಿ ಮೌಲ್ಯದ ಭ್ರಷ್ಟಾಚಾರದ ಸುರಿಮಳೆ! ಇದು ಲಂಚವಲ್ಲದೇ ಮತ್ತೇನು? ಸಾರ್ವಜನಿಕರ ಹಣದಲ್ಲಿ ನಡೆಯುವ ಕಾಮಗಾರಿಗಳ ದರಪಟ್ಟಿಯೋ ಅಥವಾ ಅಧಿಕಾರಿ-ಗುತ್ತಿಗೆದಾರರ ನಡುವಿನ ‘ಹೊಂದಾಣಿಕೆಯ ರಾಜಕೀಯವೋ’? ಇದು ನೈತಿಕತೆಯೇ? ಅಥವಾ ಅಧಿಕಾರದ ದರ್ಪವೇ? ಒಬ್ಬ ಸರ್ಕಾರಿ ಅಧಿಕಾರಿ ತನ್ನ ಕರ್ತವ್ಯದ ಭಾಗವಾಗಿ ಗುತ್ತಿಗೆದಾರರೊಂದಿಗೆ ವ್ಯವಹಾರ ಮಾಡುವುದು ಎಂದರೆ, ಆ ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳು ಯಾವ ಮಟ್ಟದ ಗುಣಮಟ್ಟದಲ್ಲಿ ನಡೆಯುತ್ತಿರಬಹುದು?
ನಮ್ಮ ವ್ಯವಸ್ಥೆ ಎಷ್ಟೊಂದು ಅಧಃಪತನಕ್ಕೆ ಇಳಿದಿದೆಯೆಂದರೆ, ಲಂಚಕ್ಕೂ ಇದೀಗ ‘ಆನ್‌ಲೈನ್’ ದಾರಿ ಹುಡುಕಿಕೊಂಡಿದ್ದಾರೆ! ಕವರ್‌ಗಳಲ್ಲಿ ಹಣ ಪಡೆಯುವ ಕಾಲವೋಯ್ತು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಲಂಚ ಕಣ್ಣೆದುರೇ ಹರಿಯುತ್ತದೆ. ಕಾನೂನಿನ ಚೌಕಟ್ಟಿನಲ್ಲಿದ್ದುಕೊಂಡು, ಸಂವಿಧಾನದ ಪ್ರಮಾಣ ವಚನ ಸ್ವೀಕರಿಸಿದ ಅಧಿಕಾರಿ, ತನ್ನ ಕರ್ತವ್ಯದ ಪಾವಿತ್ರ್ಯತೆಯನ್ನು ನೂರು ರೂಪಾಯಿಯ ಕಮಿಷನ್‌ಗೆ ಒತ್ತೆಯಿಟ್ಟಿದ್ದಾರೆ.
ಗ್ರಾಮ ಪಂಚಾಯಿತಿಯ ಕಡತಗಳು ಇವರ ಕೈಯಲ್ಲಿವೆ, ಆದರೆ ಅವುಗಳಲ್ಲಿ ಸತ್ಯಾಂಶಕ್ಕಿಂತ ಹೆಚ್ಚಾಗಿ ‘ಹಣದ ಹೊಳಪು’ ಕಾಣುತ್ತಿದೆಯೇ? ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆಯೋ ಅಥವಾ ಕೇವಲ ಕಾಗದದ ಮೇಲೆ ‘ಕಮೀಷನ್ ಕಥೆ’ಗಳು ಸೃಷ್ಟಿಯಾಗುತ್ತಿವೆಯೋ ಎನ್ನುವ ಪ್ರಶ್ನೆ ಇದೀಗ ಬಳಗೇರಿಯ ಪ್ರತಿಯೊಬ್ಬ ನಾಗರಿಕನನ್ನೂ ಕಾಡುತ್ತಿದೆ.

ಸಿಇಒ ವರ್ಣಿತಾ ನೇಗಿಯವರೇ, ಇತ್ತ ಗಮನಹರಿಸಿ!
ಕೊಪ್ಪಳ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತಾ ನೇಗಿಯವರೇ, ನಿಮ್ಮ ಆಡಳಿತದ ಅಡಿಯಲ್ಲಿ ಕುಕನೂರು ತಾಲೂಕಿನ ಪಂಚಾಯಿತಿಗಳು ಇಂದು ‘ಕಮಿಷನ್ ದಂಧೆಯ ಕೇಂದ್ರ’ಗಳಾಗಿ ಬದಲಾಗುತ್ತಿವೆಯೇ ಎಂಬ ಅನುಮಾನ ಕಾಡುತ್ತಿದೆ. ಬಳಗೇರಿಯ ಈ ಪಿಡಿಒ ಪ್ರಕರಣ ಕೇವಲ ಹಿಮಪರ್ವತದ ಒಂದು ಸಣ್ಣ ತುಣುಕು ಅಷ್ಟೇ. ಕುಕನೂರು ತಾಲೂಕಿನಾದ್ಯಂತ ಬಹುತೇಕ ಕಡೆ ಇಂತಹ ಭ್ರಷ್ಟಾಧಿಕಾರಿಗಳ ಕಪಿಮುಷ್ಟಿಯಲ್ಲಿ ಪಂಚಾಯಿತಿಗಳು ನರಳುತ್ತಿವೆ.
ಇಂತಹ ಭ್ರಷ್ಟರ ಮೇಲೆ ಕೂಡಲೇ ಕಠಿಣ ಶಿಸ್ತಿನ ಚಾಟಿಯನ್ನು ಬೀಸಿ. ಕೇವಲ ನೋಟಿಸ್‌ಗಳಿಗಷ್ಟೇ ಸೀಮಿತವಾಗದೆ, ಅಮಾನತಿನಂತಹ ಕಠಿಣ ಕ್ರಮ ಕೈಗೊಂಡು ಸಾರ್ವಜನಿಕರಲ್ಲಿ ನಂಬಿಕೆಯನ್ನು ಮೂಡಿಸಿ. ಅಷ್ಟೇ ಅಲ್ಲ, ಕುಕನೂರು ತಾಲೂಕಿನ ಎಲ್ಲಾ ಪಂಚಾಯಿತಿಗಳ ಮೇಲೆ ಒಂದು ತೀಕ್ಷ್ಣವಾದ ಕಣ್ಣಿಡಿ, ಪ್ರತಿಯೊಬ್ಬ ಅಧಿಕಾರಿಯ ವಹಿವಾಟಿನ ಮೇಲೆ ಸೂಕ್ಷ್ಮ ನಿಗಾ ಇರಿಸಿ. ‘ಸೇವಾ ಮನೋಭಾವ’ಕ್ಕಿಂತ ‘ಹಣ ಮಾಡುವ ಮಸಲತ್ತು’ ಹೆಚ್ಚಿರುವ ಅಧಿಕಾರಿಗಳನ್ನು ಬೇರುಸಹಿತ ಕಿತ್ತು ಹಾಕುವ ಅಗತ್ಯ ಈಗಿದೆ.
ಬಳಗೇರಿ ಗ್ರಾಮ ಪಂಚಾಯಿತಿಯ ಕಡತಗಳಲ್ಲಿ ಸತ್ಯಾಂಶಕ್ಕಿಂತ ಹೆಚ್ಚಾಗಿ ಹಣದ ಹೊಳಪು ಕಾಣುತ್ತಿದೆಯೇ? ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆಯೋ ಅಥವಾ ಕೇವಲ ಕಾಗದದ ಮೇಲೆ ‘ಕಮೀಷನ್ ಕಥೆ’ಗಳು ಸೃಷ್ಟಿಯಾಗುತ್ತಿವೆಯೋ? ಈ ಡಿಜಿಟಲ್ ಸಾಕ್ಷ್ಯಗಳು ಕೇವಲ ಅಂಕಿ-ಅಂಶಗಳಲ್ಲ, ಇವು ಭ್ರಷ್ಟಾಚಾರದ ಅಣಕು ಪ್ರದರ್ಶನಗಳು. ವರ್ಣಿತಾ ನೇಗಿಯವರೇ, ಈ ಸಾಕ್ಷ್ಯಗಳ ಮುಂದೆ ಮೌನ ವಹಿಸುವುದು ಎಂದರೆ ಭ್ರಷ್ಟಾಚಾರಕ್ಕೆ ಪರೋಕ್ಷ ಬೆಂಬಲ ನೀಡಿದಂತೆ. ಬಳಗೇರಿಯ ಈ ‘ಡಿಜಿಟಲ್ ಲಂಚಕೋರ’ನಿಗೆ ಕಾನೂನಿನ ಬಿಸಿ ಮುಟ್ಟಿಸಿ. ಇಂತಹ ಕಪ್ಪು ಕುರಿಗಳನ್ನು ಹೆಡೆಮುರಿ ಕಟ್ಟದಿದ್ದರೆ, ನಾಳೆ ಇಡೀ ತಾಲೂಕೇ ಈ ಭ್ರಷ್ಟಾಚಾರದ ಸುಳಿಗೆ ಸಿಲುಕಿ ಹಾಳಾಗುವುದು ಖಂಡಿತ.
ಮುಂದುವರೆಯುತ್ತದೆ…..

