ಪತ್ರಕರ್ತರ ಸಂಕಷ್ಟದ ಕಡಲಿಗೆ, ದಾರಿ ತೋರುವ ಧ್ರುವತಾರೆ

“ಪತ್ರಿಕೋದ್ಯಮದ ಕತ್ತಲೆಗೆ ಸೂರ್ಯನ ಕಿರಣ ಮಲ್ಲಿಕಾರ್ಜುನ ಬಂಗ್ಲೆ”

ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಮೇ: 25

ಕೊಪ್ಪಳ : ಸಮಾಜದ ಅರಿವಿನ ದೀಪವನ್ನು ಹಿಡಿದು ಕತ್ತಲೆಯನ್ನು ಸೀಳುತ್ತಾ ಸಾಗುವವನು ಪತ್ರಕರ್ತ. ಆತ ಸಂವಿಧಾನದ ನಾಲ್ಕನೇ ಅಂಗ ಎಂದು ವೇದಿಕೆಗಳ ಮೇಲೆ ಹೂಮಾಲೆ ಹಾಕಿಸಿಕೊಂಡು ಭಾಷಣ ಮಾಡುವ ಪ್ರಭುಗಳ ಧ್ವನಿಯನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ, ಅಂತರಂಗದ ಆಳದಲ್ಲಿ ಯೋಚಿಸಿದರೆ, ಆ ನಾಲ್ಕನೇ ಅಂಗ ಎಲ್ಲಿಯೂ ಸಂವಿಧಾನದ ಪುಟಗಳಲ್ಲಿ ದಾಖಲಾಗಿಲ್ಲ. ಆತನು ಕೇವಲ ವ್ಯವಸ್ಥೆಯ ಅನುಕೂಲಕ್ಕಾಗಿ ಸೃಷ್ಟಿಸಲ್ಪಟ್ಟ ಒಂದು ಸಾಂಕೇತಿಕ ಪಾತ್ರ ಮಾತ್ರ. ತಾನು ಉರಿಯುತ್ತಾ ಜಗತ್ತಿಗೆ ಬೆಳಕನ್ನು ತೋರುವ ದೀಪದ ತಳಭಾಗದಲ್ಲಿ, ಕತ್ತಲೆಯ ದಟ್ಟವಾದ ಪದರಗಳು ಆವರಿಸಿಕೊಂಡಿವೆ. ಆ ಕತ್ತಲೆಯಲ್ಲೇ ಜೀವಿಸುತ್ತಿರುವ ಪತ್ರಕರ್ತನ ವ್ಯಥೆಯನ್ನು ಅರಿಯುವವರು ಯಾರು?
​ಪತ್ರಕರ್ತನ ಜೀವನವೆಂದರೆ ಒಂದು ವಿಚಿತ್ರವಾದ ವಿಪರ್ಯಾಸ. ಸಮಾಜದ ತಪ್ಪುಗಳನ್ನು ತಿದ್ದುವ ಕೈಗಳಿಗೆ, ಸ್ವತಃ ತನ್ನ ಬದುಕಿನ ದೈನಂದಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಶಕ್ತಿಯಿಲ್ಲ. ಅಧಿಕಾರದಲ್ಲಿರುವವರಿಗೆ ಪತ್ರಕರ್ತ ಕೇವಲ ತಮ್ಮ ಪ್ರಚಾರದ ಒಂದು ಸಾಧನ. ಅಧಿಕಾರ ಪೂರ್ಣಗೊಂಡ ನಂತರ, ಇವರ ಕಷ್ಟಗಳ ಕಡೆಗೆ ತಿರುಗಿಯೂ ನೋಡದಷ್ಟು ಅಸಂವೇದನಾಶೀಲವಾಗಿಬಿಡುತ್ತದೆ ನಮ್ಮ ರಾಜಕೀಯ ವ್ಯವಸ್ಥೆ.

ಕತ್ತಲ ಬಾಳಿನ ಬೆಳಕಿನ ಕಣಜ ಪತ್ರಕರ್ತರ ಪಾಲಿನ ಆಶಾಕಿರಣ ಮಲ್ಲಿಕಾರ್ಜುನ ಬಂಗಲೆ.

ಈ ಅರಾಜಕತೆಯ ನಡುವೆ, ಒಬ್ಬ ವ್ಯಕ್ತಿ ಧರ್ಮದ ದಾರಿಯನ್ನು ತುಳಿಯುತ್ತಿದ್ದಾನೆ ಆತನೇ ಮಲ್ಲಿಕಾರ್ಜುನ ಬಂಗಲೆ. ಇವರ ಹೆಸರು ‘ಬಂಗಲೆ’ ಎಂದು ಅನ್ವರ್ಥಕವಾಗಿ ಕೇಳಿಸಿದರೂ, ಅವರ ಬದುಕು ಇರುವುದು ಸಾಮಾನ್ಯ ಮಧ್ಯಮ ವರ್ಗದ ಸಂಘರ್ಷದ ನೆಲದಲ್ಲಿ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪದ ಮಣ್ಣಿನಲ್ಲಿ ಹುಟ್ಟಿ, ತಾತ-ಮುತ್ತಾತಂದಿರ ಕಾಲದಿಂದಲೂ ಬಂಗಲೆಗಳನ್ನು ಕಾಯುವ ಕಾಯಕದಲ್ಲಿ ಬದುಕಿದ ಕುಟುಂಬದ ಹಿನ್ನೆಲೆ ಅವರಲ್ಲಿದೆ. ಸಂಕಷ್ಟಗಳ ನಡುವೆಯೇ ಮಾಸಪತ್ರಿಕೆಯನ್ನು ನಡೆಸಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮೆಟ್ಟಿಲುಗಳನ್ನು ಹತ್ತಿ, ವ್ಯವಸ್ಥೆಯೊಳಗಿನ ಸತ್ಯಾಸತ್ಯತೆಯನ್ನು ಹತ್ತಿರದಿಂದ ಕಂಡವರು ಅವರು.
​ಸಂಘಟನೆಗಳ ರಾಜಕೀಯದಲ್ಲಿ ಸತ್ಯಕ್ಕೆ ಜಾಗವಿಲ್ಲ, ಅಲ್ಲಿ ಬಡಪತ್ರಕರ್ತನ ನ್ಯಾಯದ ಕಂಠಕ್ಕೆ ತುರ್ತು ಸ್ಪಂದನೆ ಸಿಗುವುದಿಲ್ಲ ಎಂದು ಅವರಿಗೆ ಅರ್ಥವಾಯಿತು. 2022-23ರ ಮೇ 25ರಂದು ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಎಂಬ ಹೊಸದೊಂದು ಸಂಘಟನೆಯನ್ನು ಹುಟ್ಟುಹಾಕಿದರು. ಅದು ಕೇವಲ ಒಂದು ನೋಂದಣಿ ಪುಸ್ತಕದ ಹೆಸರಲ್ಲ; ಅದು ನೂರಾರು ಪತ್ರಕರ್ತರ ಅಸ್ತಿತ್ವದ ಪ್ರಶ್ನೆಯಾಗಿತ್ತು ರಾಜ್ಯಾದ್ಯಂತ ಪತ್ರಕರ್ತರನ್ನು ಒಗ್ಗೂಡಿಸುತ್ತಾ, ಅವರ ಬದುಕಿನ ಮೂಲಭೂತ ಹಕ್ಕುಗಳಾದ ಮಾಸಾಶನ, ಬಸ್ ಪಾಸ್ ಮತ್ತು ಕಾರ್ಮಿಕ ಇಲಾಖೆಯ ಸವಲತ್ತುಗಳಿಗಾಗಿ ಬೀದಿಗೆ ಇಳಿದು ಹೋರಾಡುತ್ತಿದ್ದಾರೆ.


​ಇಂದು ಕರ್ನಾಟಕ ರಾಜ್ಯದ ಪತ್ರಕರ್ತರ ಸಂಘಟನೆಗಳ ‘ಮಹಾ ಒಕ್ಕೂಟ’ದ ರಾಜ್ಯಾಧ್ಯಕ್ಷರಾಗಿ ಅವರ ಆಯ್ಕೆಯಾಗಿರುವುದು, ಅವರ ಪ್ರಾಮಾಣಿಕ ಹೋರಾಟಕ್ಕೆ ಸಿಕ್ಕ ಬೆಲೆ. ಮಲ್ಲಿಕಾರ್ಜುನ ಬಂಗಲೆಯವರನ್ನು ಗಮನಿಸಿದರೆ, ಒಬ್ಬ ಮನುಷ್ಯ ತನ್ನ ಸುತ್ತಲಿನವರ ನೋವನ್ನು ತನ್ನದಾಗಿಸಿಕೊಂಡಾಗ ಎಂತಹ ಶಕ್ತಿಯಾಗಿ ಬೆಳೆಯಬಲ್ಲ ಎಂಬುದಕ್ಕೆ ನಿದರ್ಶನ ಸಿಗುತ್ತದೆ. ಅವರ ದಾರಿ ಮುಳ್ಳಿನದ್ದಾಗಿರಬಹುದು, ಆದರೆ ಆ ದಾರಿಯಲ್ಲಿ ನಡೆಯುವ ಪ್ರತಿ ಹೆಜ್ಜೆಯೂ ಒಂದು ಸಂಸ್ಕೃತಿಯನ್ನು, ಒಂದು ಮೌಲ್ಯವನ್ನು ನಿರ್ಮಿಸುತ್ತಿದೆ.
​ರಣಬೇಟೆಯ ಆಶಯವೇನೆಂದರೆ, ಈ ಹೋರಾಟ ಬರೀ ಕೂಗಾಗದೆ, ವ್ಯವಸ್ಥೆಯ ಬದಲಾವಣೆಯ ತಳಪಾಯವಾಗಲಿ. ಪತ್ರಕರ್ತನ ಕತ್ತಲೆಯ ಬದುಕು ಮಲ್ಲಿಕಾರ್ಜುನ ಬಂಗಲೆಯವರಂತಹವರ ಮಾರ್ಗದರ್ಶನದಲ್ಲಿ ಬೆಳಕಿನ ಕಡೆಗೆ ಸಾಗಲಿ. ಯಾಕೆಂದರೆ, ಪತ್ರಕರ್ತ ಆಳುವವರ ಕನ್ನಡಿಯಾಗಬಾರದು, ಬದಲಾಗಿ ಪ್ರಭುತ್ವವನ್ನು ಎಚ್ಚರಿಸುವ ಧ್ವನಿಯಾಗಬೇಕು.

ಪತ್ರಕರ್ತರ ಕತ್ತಲೆಯ ಬದುಕಿನಲ್ಲಿ ಸೂರ್ಯೋದಯದ ಭರವಸೆಯನ್ನು ಬಿತ್ತುತ್ತಿರುವ, ನಮ್ಮ ಹೋರಾಟದ ದಾರಿದೀಪವಾದ ರಾಜ್ಯಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಬಂಗಲೆ ಅವರ ನಿಷ್ಕಲ್ಮಶ ಸೇವೆಯನ್ನು ಸ್ಮರಿಸುತ್ತಾ, ಈ ಲೇಖನವನ್ನು ಅವರಿಗೆ ಗೌರವಪೂರ್ವಕವಾಗಿ ಅರ್ಪಿಸುತ್ತಿದ್ದೇನೆ. ಪತ್ರಕರ್ತರ ಏಳಿಗೆಗಾಗಿ ತಾವು ಕೈಗೊಂಡಿರುವ ಈ ಕ್ರಾಂತಿಕಾರಿ ಪಯಣದಲ್ಲಿ ನಾವೆಲ್ಲರೂ ಸದಾ ನಿಮ್ಮೊಂದಿಗೆ ಹೆಜ್ಜೆ ಹಾಕುತ್ತೇವೆ.
​ತಮ್ಮ ನಾಯಕತ್ವದಲ್ಲಿ ಪತ್ರಕರ್ತರ ಸಮಸ್ಯೆಗಳು ಬಗೆಹರಿದು, ಎಲ್ಲರ ಬಾಳು ಸುಗಮವಾಗಲಿ ಎಂಬುದೇ ನಮ್ಮೆಲ್ಲರ ಆಶಯ.
​ಮುತ್ತು ದೊಡ್ಮನೆ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಕೊಪ್ಪಳ
ಸಂಪಾದಕ, ರಣಬೇಟೆ ವೆಬ್ ನ್ಯೂಸ್ ಕೊಪ್ಪಳ

error: Content is protected !!
Scroll to Top