ಅನ್ನರಾಮಯ್ಯನಾಗಿ ಹಸಿವು ನೀಗಿದ, ದಲಿತರಾಮಯ್ಯನಾಗಿ ಸಮಾನತೆ ಸಾರಿದ ಅಭೂತಪೂರ್ವ ಚೇತನದ ಅನಾವರಣ.
ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಮೇ :28
ಕೊಪ್ಪಳ: ಇಂದು ಸೂರ್ಯ ಮುಳುಗುವ ಹೊತ್ತಿಗೆ, ಸಿದ್ದರಾಮಯ್ಯನವರ ಅಧಿಕಾರದ ಸೂರ್ಯನೂ ಅಸ್ತಂಗತವಾಯಿತು. ಅವರು ರಾಜೀನಾಮೆ ಪತ್ರಕ್ಕೆ ಸಹಿ ಹಾಕಿ ಹೊರಬರುತ್ತಿದ್ದಂತೆಯೇ, ರಾಜ್ಯದ ಮೂಲೆಮೂಲೆಗಳಲ್ಲಿ ಕೇಳಿಬರುತ್ತಿರುವ ಬಿಕ್ಕಳಿಕೆಯ ಶಬ್ದಗಳು ಕೇವಲ ರಾಜಕೀಯ ಸೋಲಲ್ಲ, ಅದೊಂದು ಯುಗಾಂತ್ಯದ ಆರ್ತನಾದ.
ಅವರು ಅಧಿಕಾರ ಕಳೆದುಕೊಂಡದ್ದಕ್ಕೆ ರಾಜ್ಯ ಅಳುತ್ತಿಲ್ಲ ಬದಲಿಗೆ, ತಮ್ಮ ಮನೆಯ ಹಿರಿಯಣ್ಣನೊಬ್ಬ ದೂರವಾಗುತ್ತಿದ್ದಾನಲ್ಲ ಎಂಬ ನೋವು ಜನರ ಕಣ್ಣುಗಳಲ್ಲಿ ಮಡುಗಟ್ಟಿದೆ. ನೆನಪಿಸಿಕೊಳ್ಳಿ, ಆ ಹಸಿವಿನ ದಿನಗಳನ್ನು! ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿದ್ದ ಬಡವನ ಪಾಲಿಗೆ ‘ಅನ್ನಭಾಗ್ಯ’ವಾಗಿ ಅವರು ಬಂದಾಗ, ಆ ಬಡವನ ಮನೆಯ ಒಲೆ ಹತ್ತಿ ಉರಿಯಿತು. ಅಂದು ಆ ಒಲೆಯಲ್ಲಿ ಅರಳಿದ ಬಡವನ ಮುಗುಳುನಗೆಯೇ ಸಿದ್ದರಾಮಯ್ಯನವರ ಅತಿದೊಡ್ಡ ಶಕ್ತಿ. ಕೇವಲ ಮನುಷ್ಯನನ್ನಲ್ಲ, ಅವರ ಬದುಕಿನ ಆಸರೆಯನ್ನೇ ಕಳೆದುಕೊಂಡ ದೀನದಲಿತರ ನೋವು, ಇವತ್ತು ರಸ್ತೆಗಳಲ್ಲಿ ಅಶ್ರುವಾಗಿ ಹರಿಯುತ್ತಿದೆ.ಆ ಕಣ್ಣೀರು ಸ್ವಾರ್ಥದ್ದಲ್ಲ, ಬದಲಿಗೆ ತಾವು ನಂಬಿದ ಜನರಿಗೆ ಇನ್ನು ಮುಂದೆ ನೇರವಾಗಿ ಕೈಜೋಡಿಸಲು ಸಾಧ್ಯವಿಲ್ಲವಲ್ಲ ಎಂಬ ಅಸಹಾಯಕತೆಯ ನೋವು.

ಸಿದ್ದರಾಮಯ್ಯನವರೂ ಜನರ ಬದುಕಿನೊಂದಿಗೆ ಬೆರೆತಿದ್ದರು. ‘ಗ್ಯಾರಂಟಿ ರಾಮಯ್ಯ’ನಾಗಿ ಮನೆಮನೆಗೆ ಭರವಸೆಯಾಗಿ ಹೋದರು,’ಅನ್ನರಾಮಯ್ಯ’ನಾಗಿ ಹಸಿವಿನ ಸಂಕೋಲೆ ಮುರಿಯಲು ಯತ್ನಿಸಿದವರು, ‘ರೈತರಾಮಯ್ಯ’ನಾಗಿ ಭೂಮಿಯ ಒಡಲನ್ನು ಹಸನು ಮಾಡಿದರು.’ದಲಿತರಾಮಯ್ಯ’ನಾಗಿ ಸಮಾನತೆಯ ಕನಸು ಕಂಡವರು, ಆದರೆ ಇಂದು, ಅದೇ ಜನರು ಅವರ ನಿರ್ಗಮನವನ್ನು ನೋಡಿ ಮರುಗುತ್ತಿದ್ದಾರೆ. ಸತ್ತವರನ್ನೋ ಅಥವಾ ಸೋತವರನ್ನೋ ನೋಡಿ ಅಳುವ ಮಂದಿಯ ನಡುವೆ, ಸಿದ್ದರಾಮಯ್ಯನವರ ಬಗೆಗಿನ ಈ ಅಳುವಿಗೆ ಒಂದು ಕಾರಣವಿದೆ. “ನಮ್ಮ ಕಷ್ಟಕ್ಕೆ ಮಿಡಿದವರು, ನಮ್ಮ ಹಸಿವಿಗೆ ಸ್ಪಂದಿಸಿದವರು ಇಂದು ದೂರವಾಗುತ್ತಿದ್ದಾರೆ” ಎಂಬ ಅತೀವವಾದ ವಿಷಾದ. ‘ಇಂದಿರಾ ಕ್ಯಾಂಟೀನ್’ನಲ್ಲಿ ತುತ್ತು ಅನ್ನ ತಿಂದು, ಹಸಿವು ನೀಗಿಸಿಕೊಂಡ ದಿನಗಳಲ್ಲಿ ಅವರು ಕಂಡದ್ದು ಮುಖ್ಯಮಂತ್ರಿಯನ್ನಲ್ಲ, ತಮ್ಮ ಮಗನನ್ನು. ‘ಕ್ಷೀರಭಾಗ್ಯ’ದ ಮೂಲಕ ಶಾಲೆಯ ಮಕ್ಕಳ ಮುಖದಲ್ಲಿ ಮೂಡಿದ ನಗು, ಇಂದು ಕಣ್ಣೀರಿನ ಮಳೆಯಲ್ಲಿ ಮರೆಯಾಗುತ್ತಿದೆ. “ಈತ ನಮ್ಮವನಾಗಿದ್ದ, ನಮ್ಮ ಹಸಿವನ್ನು ಅರಿತಿದ್ದ,” ಎಂಬ ಸತ್ಯ ಈಗ ಪ್ರತಿ ಮನೆಮನೆಯಲ್ಲೂ ಪ್ರತಿಧ್ವನಿಸುತ್ತಿದೆ.

ರಾಜಕೀಯವೆಂದರೆ ಕೇವಲ ಅಧಿಕಾರದ ದಾಟಲ್ಲ, ಅದು ಮನುಷ್ಯನ ಬದುಕನ್ನು ಸ್ಪರ್ಶಿಸುವ ಕಲೆ ಎಂದು ಸಿದ್ದರಾಮಯ್ಯ ತೋರಿಸಿಕೊಟ್ಟಿದ್ದರು. ಅಧಿಕಾರದಿಂದ ಇಳಿದು ಬರುವಾಗ ಅವರ ಕೈಯಲ್ಲಿ ಯಾವುದೇ ಸಾಮ್ರಾಜ್ಯವಿರಲಿಲ್ಲ, ಆದರೆ ದಶಲಕ್ಷ ಜನರ ಹರಕೆಯಿತ್ತು. ಅವರ ಪಾದಕ್ಕೆ ಬಿದ್ದು ಅಳುತ್ತಿರುವ ಈ ಜನಸಾಮಾನ್ಯರು ಕೇವಲ ಬೆಂಬಲಿಗರಲ್ಲ ಅವರು ಸಿದ್ದರಾಮಯ್ಯ ಎನ್ನುವ ಮನುಷ್ಯನ ಹೃದಯದೊಂದಿಗೆ ತಂತಮ್ಮ ಬದುಕನ್ನು ಬೆಸೆದುಕೊಂಡವರು.ಚಿತ್ರದಲ್ಲಿ ನೋಡಿದಾಗ, ಇದು ಕೇವಲ ಒಂದು ರಾಜೀನಾಮೆಯಲ್ಲ, ಅದೊಂದು ಮೌನ ವ್ಯಥೆಯ ಕಥೆಯೆಂದು ಅನ್ನಿಸುತ್ತದೆ.
ಇಂದು ಆಡಳಿತದ ಸೌಧ ಖಾಲಿಯಾಗಿದೆ. ಆದರೆ, ರಾಜ್ಯದ ಬಡವರ ಮನೆಗಳಲ್ಲಿ, ಕೃಷಿಕರ ಹೊಲಗಳಲ್ಲಿ, ವಿದ್ಯಾರ್ಥಿಗಳ ಕಣ್ಣುಗಳಲ್ಲಿ ಸಿದ್ದರಾಮಯ್ಯನವರ ಕೆಲಸದ ಕುರುಹುಗಳು ಜೀವಂತವಾಗಿವೆ.

ಅಧಿಕಾರ ಹೋಗಿರಬಹುದು, ಆದರೆ ಅವರು ನೀಡಿದ ಬದುಕಿನ ಹಾದಿ—ಅದು ಎಂದಿಗೂ ಅಳಿಯದ ಕಾವ್ಯ. ಬದುಕಿನ ಕೊನೆಯವರೆಗೂ ಜನಸೇವೆ ಮಾಡಿದವರನ್ನು ಕಾಲ ಮರೆತರೂ, ಅವರು ಮಾಡಿದ ಒಳಿತನ್ನು ಈ ಮಣ್ಣು ಎಂದಿಗೂ ಮರೆಯಲಾರದು.ಸತ್ತವರನ್ನೋ ಅಥವಾ ಸೋತವರನ್ನೋ ನೋಡಿ ಅಳುವ ಮಂದಿಯ ನಡುವೆ, ಸಿದ್ದರಾಮಯ್ಯನವರ ಬಗೆಗಿನ ಈ ಅಳುವಿಗೆ ಒಂದು ಕಾರಣವಿದೆ “ನಮ್ಮ ಕಷ್ಟಕ್ಕೆ ಮಿಡಿದವರು, ನಮ್ಮ ಹಸಿವಿಗೆ ಸ್ಪಂದಿಸಿದವರು ಇಂದು ದೂರವಾಗುತ್ತಿದ್ದಾರೆ” ಎಂಬ ಅತೀವವಾದ ವಿಷಾದ.
ಅಧಿಕಾರವೆಂಬುದು ಒಂದು ಕರ್ತವ್ಯದ ಸಂಕೋಲೆ ಎಂದು ಅವರು ಬದುಕಿ ತೋರಿಸಿದರು. ಅವರು ಬಿಟ್ಟು ಬಂದ ಕುರ್ಚಿ ಬರಿದಾಗಿರಬಹುದು, ಆದರೆ ಜನರ ಮನಸ್ಸಿನಲ್ಲಿ ಅವರು ಸೃಷ್ಟಿಸಿದ ಆ ಅಚ್ಚೊತ್ತಿದ ಚಿತ್ರ ಅಳಿಸಲಾಗದದ್ದು. ಕಾಲದ ಹರಿವಿನಲ್ಲಿ ಎಲ್ಲವೂ ಕರಗಿ ಹೋಗಬಹುದು, ಆದರೆ ಸಿದ್ದರಾಮಯ್ಯನವರ ಈ ಭಾವುಕ ನಿರ್ಗಮನ ಮತ್ತು ಅವರು ಅಂದು ಜನರ ಕಣ್ಣೀರು ಒರೆಸಲು ನಡೆಸಿದ ಹೋರಾಟಗಳು ಕರ್ನಾಟಕದ ಇತಿಹಾಸದ ಪುಟಗಳಲ್ಲಿ ಒಂದು ಮರೆಯಲಾಗದ ಕಾವ್ಯವಾಗಿ ಉಳಿಯಲಿದೆ.
ನನ್ನ ರಾಜೀನಾಮೆ ಮುಖ್ಯಮಂತ್ರಿ ಹುದ್ದೆಗೆ ಮಾತ್ರ, ಸಕ್ರಿಯ ರಾಜಕಾರಣಕ್ಕಲ್ಲ.ನನ್ನ ಜೀವದಲ್ಲಿ ಕೊನೆಯುಸಿರು ಇರುವವರೆಗೆ ಸಾಮಾಜಿಕ ನ್ಯಾಯಕ್ಕಾಗಿ, ಸಂವಿಧಾನದ ಉಳಿವಿಗಾಗಿ ಮತ್ತು ಕೋಮುವಾದದ ವಿರುದ್ಧ ಹೋರಾಟ ಮಾಡುತ್ತೇನೆ. ಶ್ರೀ ಮಾನ್ಯ ಸಿದ್ದರಾಮಯ್ಯ ಮುಖ್ಯಮಂತ್ರಿಗಳು.
ನಾನೊಬ್ಬ ಪತ್ರಕರ್ತನಾಗಿ ರಾಜಕೀಯ ಪಕ್ಷಗಳ ಮಿತಿ ಇಲ್ಲದೆಯೂ, ಒಬ್ಬ ಮನುಷ್ಯನಾಗಿ ಸಮಾಜಕ್ಕೆ ನೀಡಿದ ಕೊಡುಗೆಯನ್ನು ಗೌರವಿಸುವುದು ನಮ್ಮ ಕರ್ತವ್ಯ. ಅಹಿಂದ ನಾಯಕ ಸಿದ್ದರಾಮಯ್ಯನವರು, ತಮ್ಮ ಜನಪರ ಕಾಳಜಿಯ ಮೂಲಕ ಜನಮಾನಸದಲ್ಲಿ ಉಳಿಯುತ್ತಾರೆ. ಅಹಿಂದ ನಾಯಕ ಸಿದ್ದರಾಮಯ್ಯ ,ಶೋಷಿತ ಸಮುದಾಯಗಳ ಗಟ್ಟಿಧ್ವನಿ ಮತ್ತು ದಲಿತರ ಪಾಲಿನ ರಾಮಯ್ಯನವರಿಗೆ ಗೌರವಪೂರ್ವಕ ನಮನಗಳು.

