ಲೆಕ್ಕ ಶೀರ್ಷಿಕೆ 5054 ರಡಿ 23 ರಸ್ತೆ ಕಾಮಗಾರಿಗಳ ಹಗರಣದ ಆರೋಪ

ಕಳಪೆ ರಸ್ತೆಗೂ ಬಿಲ್ ಪಾಸ್ ಮಾಡೋ ಹೊಂಚು..!

ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಜೂ:13

ಇದು ಕೊಪ್ಪಳ. ಕಲ್ಲು ಮುಳ್ಳುಗಳ ನಾಡಷ್ಟೇ ಅಲ್ಲ, ಬಿಳಿ ಶರ್ಟು ಧರಿಸಿದ ಕೆಲವು ಭ್ರಷ್ಟ ಅಧಿಕಾರಿಗಳ ಪಾಲಿಗೆ ಕೋಟ್ಯಾಂತರ ರೂಪಾಯಿ ಹಣವನ್ನು ಲೂಟಿ ಹೊಡೆಯುವ ಚಿನ್ನದ ಗಣಿ..! ಹೌದು ಗೆಳೆಯರೇ, ನಿಮ್ಮ ಕಣ್ಣೆದುರೇ ಸರ್ಕಾರಿ ಹಣ ಹೆಂಗೆಲ್ಲಾ ನೀರಾವಿಯಾಗುತ್ತೆ, ಇಲಾಖೆಯ ಒಳಗಿರುವ ಬಿಳಿ ಇಲಿಗಳು ಹೆಂಗೆಲ್ಲಾ ಕಡತಗಳನ್ನು ಕದಿಯುತ್ತವೆ ಅನ್ನೋದಕ್ಕೆ ಇಲ್ಲೊಂದು ಜ್ವಲಂತ ಸಾಕ್ಷಿ ಸಿಕ್ಕಿದೆ.

ಕೊಪ್ಪಳದ ಇತಿಹಾಸವನ್ನು ಒಮ್ಮೆ ತಿರುವಿ ಹಾಕಿ ನೋಡಿ… ಇಲ್ಲಿನ ಕಾರ್ಯಪಾಲಕ ಅಭಿಯಂತರರ ಕಚೇರಿ, ಕೆ.ಆರ್.ಐ.ಡಿ.ಎಲ್ ನಲ್ಲಿ ಈ ಹಿಂದೆ ನಡೆದ ಕೋಟ್ಯಾಂತರ ರೂಪಾಯಿಗಳ ಭ್ರಷ್ಟಾಚಾರದ ಕರಾಳ ಹಗರಣಗಳು ಇಡೀ ರಾಜ್ಯಮಟ್ಟದಲ್ಲಿ ಸುದ್ದಿಯಾಗಿದ್ದು ನಮಗೆಲ್ಲರಿಗೂ ಗೊತ್ತಿದೆ. ಕೇವಲ ಕಾಗದದ ಮೇಲೆ ಕಳಪೆ ರಸ್ತೆಗಳನ್ನು ತೋರಿಸಿ, ನೂರಾರು ಕೋಟಿ ಸಾರ್ವಜನಿಕ ಹಣವನ್ನು ಕೊಳ್ಳೆ ಹೊಡೆದು, ನೂರಾರು ಕೋಟಿ ಅಕ್ರಮ ಆಸ್ತಿ ಮಾಡಿಕೊಂಡಿರುವ ಸಿಬ್ಬಂದಿಗಳ ನೆಟ್‌ವರ್ಕ್ ಕೊಪ್ಪಳದಲ್ಲಿ ಹೆಂಗೆ ಬೇರೂರಿದೆ ಅನ್ನೋದಕ್ಕೆ ಈಗ ಸಿಕ್ಕಿರುವ ಮುಖ್ಯಮಂತ್ರಿಗಳ ವಿಶೇಷ ಅನುದಾನ ಬ್ರಹ್ಮಾಸ್ತ್ರದಂತಹ ಕಡತಗಳೇ ಸಾಕ್ಷಿ!

ಕಥೆ ಶುರುವಾಗೋದು ಮುಖ್ಯಮಂತ್ರಿಗಳ ವಿಶೇಷ ಅನುದಾನದ ಲೆಕ್ಕ ಶೀರ್ಷಿಕೆ 5054 ರ ಅಡಿಯಲ್ಲಿ. ಇಡೀ ಕೊಪ್ಪಳ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರೋಬ್ಬರಿ 23 ರಸ್ತೆ ಕಾಮಗಾರಿಗಳ ಹಂಚಿಕೆಯಾಗಿತ್ತು. ಸರ್ಕಾರ ಕೋಟಿ ಕೋಟಿ ರೂಪಾಯಿ ಹಣವನ್ನು ರಸ್ತೆ ಸುಧಾರಣೆಗಾಗಿ ಬಿಡುಗಡೆ ಮಾಡಿತ್ತು. ಆದರೆ, ಗುತ್ತಿಗೆದಾರರು ಮತ್ತು ಇಲಾಖೆಯ ಇಂಜಿನಿಯರ್‌ಗಳು ಸೇರಿಕೊಂಡು ಅಲ್ಲಿ ಮಾಡಿದ್ದೇನು ಗೊತ್ತಾ? ರಸ್ತೆಯ ಹೆಸರಿನಲ್ಲಿ ಕೇವಲ ಮಣ್ಣು ಮತ್ತು ಕಳಪೆ ಡಾಂಬರು ಬಳಿದು ಇಡೀ ವ್ಯವಸ್ಥೆಗೆ ಬೆಂಕಿ ಇಟ್ಟಿದ್ದರು! ಕಾಮಗಾರಿಗಳು ಸಂಪೂರ್ಣ ಕಳಪೆ ಎಂದು ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾದಾಗ, ಕೊಪ್ಪಳ ಜಿಲ್ಲಾ ಪಂಚಾಯತ್‌ನ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಎಚ್ಚೆತ್ತುಕೊಂಡರು. ತಕ್ಷಣವೇ ಒಂದು ಅಧಿಕೃತ ಜ್ಞಾಪನಾ ಪತ್ರ ಹೊರಡಿಸಿ ಗಂಗಾವತಿ, ಕನಕಗಿರಿ, ಯಲಬುರ್ಗಾ, ಕುಕನೂರು, ಕುಷ್ಟಗಿ ಮತ್ತು ಕೊಪ್ಪಳ ತಾಲ್ಲೂಕಿನ ಇಒ ಹಾಗೂ ತಮ್ಮದೇ ಇಲಾಖೆಯ ಎಇಇ,ಗಳನ್ನೊಳಗೊಂಡ ದೊಡ್ಡ ತನಿಖಾ ತಂಡವನ್ನೇ ಅಖಾಡಕ್ಕಿಳಿಸಿದರು.


​ಅಧಿಕಾರಿಗಳಿಗೆ ಸಿಇಒ ಕೊಟ್ಟಿದ್ದ ಟಾಸ್ಕ್ ಸಿಂಪಲ್ ಆಗಿತ್ತು:
​ಸ್ಥಳಕ್ಕೆ ಹೋಗಿ, ಅಂದಾಜು ಪತ್ರಿಕೆಯ ಪ್ರಕಾರ ಕೆಲಸ ನಡೆದಿದ್ಯಾ ನೋಡಿ, ಜಿಪಿಎಸ್ ಆಧಾರಿತ ಫೋಟೋ ತಗೊಂಡು ಬನ್ನಿ.
​ಅಳತೆ ಪುಸ್ತಕದಲ್ಲಿ ಚೆಕ್ ಮೆಜರ್ಮೆಂಟ್ ಮಾಡಿದ ಮಹಾಶಯರ ಹೆಸರು ಯಾರು ಅಂತ ಪತ್ತೆ ಮಾಡಿ.
​ಬಿಲ್ ಪಾವತಿಗೆ ಶಿಫಾರಸು ಮಾಡಿರುವ 3ನೇ ತನಿಖಾ ತಂಡದ ವರದಿ ಅಸಲಿಯೋ ಅಥವಾ ನಕಲಿಯೋ ಅನ್ನೋದನ್ನ ಜಾಲಾಡಿ!


ವರದಿಯಲ್ಲಿನ ‘ಡಬಲ್ ಗೇಮ್’ ಮತ್ತು ಭ್ರಷ್ಟರ ರಕ್ಷಣೆ..!
​ಆದರೆ ಅಸಲಿ ಆಟ ಶುರುವಾಗಿದ್ದೇ ಇಲ್ಲಿ. ತನಿಖೆಗೆ ಹೋದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಿದರು. ಆ ವರದಿಯ ಒಂದು ಪುಟದಲ್ಲಿ, ರಸ್ತೆಯ ಉದ್ದ ಮತ್ತು ಅಗಲದಲ್ಲಿ ಭಾರಿ ಕೊರತೆಯಿದೆ, ರೋಲಿಂಗ್ ಸರಿಯಾಗಿ ಮಾಡಿಲ್ಲ, ಸೈಡ್ ಶೋಲ್ಡರ್ ಮತ್ತು ಕಲ್ವರ್ಟ್ ನಿರ್ಮಾಣದಲ್ಲಿ ಭೀಕರ ತಾಂತ್ರಿಕ ದೋಷಗಳಿವೆ ಅಂತ ತಾವೇ ಬರೆದುಕೊಂಡಿದ್ದಾರೆ.
​ಆದರೆ, ಅದೇ ವರದಿಯ ಕೊನೆಯ ‘ಷರಾ’ ಅಂಕಣಕ್ಕೆ ಬರುವಷ್ಟರಲ್ಲಿ ಇವರ ಭ್ರಷ್ಟಾಚಾರದ ಜಲಾವೃತ ಬುದ್ಧಿ ಕೆಲಸ ಮಾಡಿದೆ! ಅಲ್ಲಿ ಲಿಖಿತವಾಗಿ ಏನು ಬರೆದಿದ್ದಾರೆ ಗೊತ್ತಾ? “ಕಾಮಗಾರಿಯು ಪ್ರಗತಿಯಲ್ಲಿದೆ ಹಾಗೂ ಅಳತೆ ಪುಸ್ತಕದಲ್ಲಿನ ದಾಖಲೆಗಳ ಪ್ರಕಾರ ಮಾಡಲಾಗಿರುತ್ತದೆ” ಅಂತ ಸಹಿ ಹಾಕಿಬಿಟ್ಟಿದ್ದಾರೆ!
​ಎಂತಹ ನಾಟಕ ಗೆಳೆಯರೇ ಇದು? ಕಣ್ಣೆದುರೇ ಕಳಪೆ ಕಾಮಗಾರಿ ಎದ್ದು ಕಾಣುತ್ತಿದ್ದರೂ, ಲಿಖಿತವಾಗಿ ಎಲ್ಲವೂ ಸರಿಯಾಗಿದೆ ಎಂದು ಪ್ರಮಾಣೀಕರಿಸುವ ಇವರ ಈ ‘ಡಬಲ್ ಸ್ಟ್ಯಾಂಡರ್ಡ್’ ಆಟದ ಹಿಂದಿರುವ ರಹಸ್ಯವೇನು? ಗುತ್ತಿಗೆದಾರರನ್ನು ಮತ್ತು ತಮ್ಮದೇ ಇಲಾಖೆಯ ಭ್ರಷ್ಟ ಆಸಾಮಿಗಳನ್ನು ಲೋಕಾಯುಕ್ತನ ಕಣ್ಣಿನಿಂದ ಪಾರು ಮಾಡಲು ಇವರು ಹೆಣೆದ ಅದ್ಭುತ ಜಾಲ ಇದು!
​ಕೊಪ್ಪಳದ ಕೆ.ಆರ್.ಐ.ಡಿ.ಎಲ್ ಕಚೇರಿಯಲ್ಲಿ ಈ ಹಿಂದೆ ನಡೆದ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರದ ಕರಾಳ ಇತಿಹಾಸ ಇಡೀ ರಾಜ್ಯಕ್ಕೆ ಗೊತ್ತಿದೆ. ಕೇವಲ ಕಳಪೆ ರಸ್ತೆಗಳನ್ನು ತೋರಿಸಿ ನೂರಾರು ಕೋಟಿ ಸಾರ್ವಜನಿಕ ಹಣವನ್ನು ಕೊಳ್ಳೆ ಹೊಡೆದು, ಅಕ್ರಮ ಆಸ್ತಿ ಮಾಡಿಕೊಂಡಿರುವ ಸಿಬ್ಬಂದಿಗಳ ನೆಟ್‌ವರ್ಕ್ ಇಂದಿಗೂ ಸಕ್ರಿಯವಾಗಿದೆ


ಸಿಇಒ ಮುಂದಿದೆ ಲೋಕಾಯುಕ್ತದ ಭೀತಿ..!
​ಈಗ ಈ ಮಹಾ ಹಗರಣದ ಕಡತಗಳು ಸಿಇಒ ಅವರ ಮೇಜಿನ ಮೇಲಿವೆ. ಸಾರ್ವಜನಿಕ ವಲಯದಿಂದ ಮತ್ತು ಸಾಮಾಜಿಕ ಕಾರ್ಯಕರ್ತರಿಂದ ನೇರವಾದ ಲಿಖಿತ ದೂರು ಹಾಗೂ ಸಾಕ್ಷ್ಯಗಳು ಸಲ್ಲಿಕೆಯಾಗಿವೆ. ದೂರುದಾರರು ಸಿಇಒ ಅವರಿಗೆ ಅತ್ಯಂತ ಕಡಕ್ ಆಗಿ ಮೂರು ಬೇಡಿಕೆಗಳನ್ನು ಇಟ್ಟಿದ್ದಾರೆ.
​ ಈ 23 ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕೊಡಲು ಹೊರಟಿರುವ ಯಾವುದೇ ಬಾಕಿ ಅನುದಾನ ಅಥವಾ ಬಿಲ್ ಪಾವತಿಯನ್ನು ತಕ್ಷಣವೇ ಸಂಪೂರ್ಣವಾಗಿ ತಡೆಹಿಡಿಯಬೇಕು.
​ ಸ್ಥಳೀಯ ಅಧಿಕಾರಿಗಳು ಭ್ರಷ್ಟರ ಜೊತೆ ಶಾಮೀಲಾಗಿರುವುದರಿಂದ, ಈ ತನಿಖಾ ವರದಿಯನ್ನು ನಿವೃತ್ತ ನ್ಯಾಯಾಧೀಶರಿಗೆ ನೀಡಬೇಕು ಮತ್ತು ಅವರ ನೇತೃತ್ವದಲ್ಲಿ ಹೊಸದಾಗಿ ಉನ್ನತ ಮಟ್ಟದ ತನಿಖೆ ನಡೆಸಬೇಕು.
​ಅಂತಿಮವಾಗಿ, ಈ ದೂರು ಪತ್ರದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಸ್ಥರಿಗೆ ಒಂದು ಗಂಭೀರ ಕಾನೂನಾತ್ಮಕ ಎಚ್ಚರಿಕೆಯನ್ನೂ ನೀಡಲಾಗಿದೆ. ಒಂದು ವೇಳೆ ಈ ಲಿಖಿತ ದೂರನ್ನು ನಿರ್ಲಕ್ಷಿಸಿ, ಅಧಿಕಾರಿಗಳ ಕಳಪೆ ವರದಿಯನ್ನು ನಂಬಿ ಗುತ್ತಿಗೆದಾರರಿಗೆ ಸರ್ಕಾರಿ ಹಣ ಬಿಡುಗಡೆ ಮಾಡಿದರೆ, ಹಗರಣಕ್ಕೆ ನೇರ ಪ್ರೇರಣೆ ನೀಡಿದ ಆರೋಪದ ಮೇಲೆ ಬೆಂಗಳೂರಿನ ಕರ್ನಾಟಕ ಲೋಕಾಯುಕ್ತ ನಿಬಂಧಕರಲ್ಲಿ ಸಿಇಒ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗುವುದು ನಿಶ್ಚಿತ!
​ಈಗ ಚಂಡು ಸಿಇಒ ಅವರ ಅಂಗಳದಲ್ಲಿದೆ. ಅವರು ಭ್ರಷ್ಟರನ್ನು ರಕ್ಷಿಸುತ್ತಾರೋ ಅಥವಾ ಸಾರ್ವಜನಿಕರ ತೆರಿಗೆ ಹಣವನ್ನು ಕಾಪಾಡುತ್ತಾರೋ ಕಾದು ನೋಡಬೇಕಿದೆ.

23 ತನಿಖಾ ವರದಿಗಳ ತಾಂತ್ರಿಕ ಲೋಪಗಳ ಸಂಪೂರ್ಣ ವಿವರ ಮತ್ತು ಅಧಿಕಾರಿಗಳ ‘ಡಬಲ್ ಗೇಮ್’ ಭ್ರಷ್ಟರ ರಕ್ಷಣಾ ಜಾಲದ ಹಸಿಬಿಸಿ ಕಥೆ

“ಚಿಂಚೋಳಿಕರ ಹಾದಿಯಲ್ಲೇ ಒಬ್ಬರು ಮತ್ತು ಕಳಕಪ್ಪನ ಹಾದಿಯಲ್ಲಿ ಮತ್ತೊಬ್ಬರು ಲೂಟಿಗೆ ನಿಂತಿದ್ದಾರೆ. ಅಲ್ಲಿನ ಪ್ರತಿ ಸಿಬ್ಬಂದಿಯ ಆಸ್ತಿ ತನಿಖೆಯಾದರೆ ಇಡೀ ಗ್ಯಾಂಗಿನ ಅಸಲಿ ಜಾತಕವೇ ಬಯಲಾಗುತ್ತದೆ… ಹಸಿಬಿಸಿ ವಿವರಗಳಿಗಾಗಿ ನಿರೀಕ್ಷಿಸಿ ಮುಂದಿನ ಸಂಚಿಕೆಯಲ್ಲಿ!”

error: Content is protected !!
Scroll to Top