ಅಕ್ರಮ ಎಸಗಿದ ಉಪ ಪ್ರಾಚಾರ್ಯರ ರಕ್ಷಣೆಗೆ ನಿಂತರಾ ಬಿಇಓ ಶೇಖರಪ್ಪ?

ಕಾರಣ ಕೇಳುವ ನೋಟಿಸ್’ ಹಿಂದಿರುವ ಆ ಅಸಲಿ ತಂತ್ರಗಾರಿಕೆಯ ಇನ್‌ಸೈಡ್ ಸ್ಟೋರಿ ಇಲ್ಲಿದೆ ನೋಡಿ..!

ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಜೂ:30 (ಸಂಚಿಕೆ-2)

​ಕೊಪ್ಪಳದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ಆ ‘ಕ್ಯೂಆರ್ ಕೋಡ್’ ಮತ್ತು ಖಾಸಗಿ ಜೆರಾಕ್ಸ್ ಅಂಗಡಿಯ ಒಳ ಒಪ್ಪಂದದ ಲೂಟಿ ದಂಧೆಯನ್ನು ನಾವು ಬಯಲಿಗೆಳೆದ ಬೆನ್ನಲ್ಲೇ ಶಿಕ್ಷಣ ಇಲಾಖೆಯ ಆವರಣದಲ್ಲಿ ದೊಡ್ಡ ನಡುಕ ಶುರುವಾಗಿದೆ. ಆದರೆ, ಈ ಹಗರಣ ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಈಡಾಗುತ್ತಿದ್ದಂತೆ, ಪಕ್ಕದಲ್ಲೇ ಕುಳಿತಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶೇಖರಪ್ಪ ಅವರು ಉಪ ಪ್ರಾಚಾರ್ಯರಾದ ವಿ.ಜಿ. ಸುಡಿಮಠ ಅವರನ್ನು ರಕ್ಷಿಸಲು ಹೊಸದೊಂದು ತಂತ್ರಗಾರಿಕೆಗೆ ಕೈಹಾಕಿದ್ದಾರಾ? ಹೌದು ಎನ್ನುತ್ತಿವೆ ಇಲಾಖೆಯ ಒಳಗಿನಿಂದ ಸಿಕ್ಕಿರುವ ಈ ಹೊಸ ದಾಖಲೆಗಳು ಮತ್ತು ಪ್ರಸ್ತುತ ವಿದ್ಯಮಾನಗಳು!
​ಅಧಿಕಾರಿಗಳು ಅಕ್ರಮ ಎಸಗಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಬದಲು, ಕಾಗದದ ಮೇಲೆ ಕಣ್ಣೊರೆಸುವ ತಂತ್ರ ಹೂಡಿ ಪ್ರಕರಣವನ್ನು ಹಳ್ಳ ಹಿಡಿಸಲು ಯತ್ನಿಸುತ್ತಿರುವುದು ಈಗ ಜಗಜ್ಜಾಹೀರಾಗಿದೆ.


​ನೋಟಿಸ್ ನೀಡಿದ್ದು ಹೌದು… ಆದರೆ ದಿನಾಂಕದ ಆಟ ಗಮನಿಸಿದಿರಾ?
​ನಮ್ಮ ಕೈಸೇರಿರುವ ಬಿಇಓ ಕಚೇರಿಯ ಅಧಿಕೃತ ಪತ್ರದ ಪ್ರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಉಪ ಪ್ರಾಚಾರ್ಯರಾದ ವಿ.ಜಿ. ಸುಡಿಮಠ ಅವರಿಗೆ “ಕಾರಣ ಕೇಳುವ ನೋಟಿಸ್” ಜಾರಿ ಮಾಡಲಾಗಿದೆ. ಪತ್ರದಲ್ಲಿ ಕ್ಯೂಆರ್ ಕೋಡ್ ಅಳವಡಿಸಿ, ಹನುಮಾನ್ ಎಂಟರ್‌ಪ್ರೈಸಸ್ ಅಂಗಡಿಯೊಂದಿಗೆ ಸೇರಿಕೊಂಡು ಪ್ರತಿ ವಿದ್ಯಾರ್ಥಿಗೆ 300 ರೂ. ವಸೂಲಿ ಮಾಡುತ್ತಿರುವುದು ನಿಯಮಬಾಹಿರ ಮತ್ತು ಕರ್ನಾಟಕ ನಾಗರಿಕ ಸೇವಾ ನಡತೆ ನಿಯಮಾವಳಿಗಳ ಉಲ್ಲಂಘನೆ ಎಂದು ಸ್ಪಷ್ಟವಾಗಿ ಒಪ್ಪಿಕೊಳ್ಳಲಾಗಿದೆ.
​ಆದರೆ, ಇಲ್ಲಿರುವ ಅಸಲಿ ಆಟ ಇರುವುದೇ ದಿನಾಂಕಗಳಲ್ಲಿ! ಮಾನ್ಯ ಬಿಇಓ ಅವರು ಈ ನೋಟಿಸ್ ಸಿದ್ಧಪಡಿಸಿದ ದಿನಾಂಕ: 15-06-2026.
​ನೋಟಿಸ್‌ನಲ್ಲಿ “ನೋಟಿಸ್ ತಲುಪಿದ 3 ದಿನಗಳ ಒಳಗಾಗಿ ಸಮಾಜಾಯಿಷಿ ನೀಡಬೇಕು” ಎಂದು ಕಡಕ್ ಆಗಿ ಬರೆಯಲಾಗಿದೆ.
​ಆದರೆ, ಈ ನೋಟಿಸ್‌ಗೆ ಉಪ ಪ್ರಾಚಾರ್ಯ ವಿ.ಜಿ. ಸುಡಿಮಠ ಅವರು ಸಹಿ ಮಾಡಿ ಸ್ವೀಕರಿಸಿದ ದಿನಾಂಕ ನೋಡಿ 17-06-2026.
​ಅಂದರೆ, 15ನೇ ತಾರೀಖು ಸಿದ್ಧವಾದ ನೋಟಿಸ್ 17ನೇ ತಾರೀಖು ಸಿನಿಕತನದಿಂದ ತಲುಪುತ್ತದೆ. ಮೂರು ದಿನದ ಗಡುವು ಮುಗಿಯುವ ಮುನ್ನವೇ ಪ್ರಕರಣವನ್ನು ತಣ್ಣಗಾಗಿಸಲು ಮತ್ತು ಮೇಲಧಿಕಾರಿಗಳಾದ ಡಿಡಿಪಿಐ ಅವರ ಕಣ್ಣಿಗೆ ತಾವೇನೋ ದೊಡ್ಡ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ತೋರಿಸಿಕೊಳ್ಳಲು ಬಿಇಓ ಶೇಖರಪ್ಪ ಅವರು ಆಡುತ್ತಿರುವ ನಾಟಕವಿದು ಎಂದು ಪಾಲಕರು ಆರೋಪಿಸುತ್ತಿದ್ದಾರೆ.


ಜೂನ್ 30 ಬಂದರೂ ಡಿಡಿಪಿಐಗೆ ತಲುಪದ ವರದಿ! ಅಧಿಕಾರಿಗಳು ಕಚೇರಿಯಲ್ಲೇ ಇಲ್ಲ!
​ಈಗ ಈ ಹಗರಣದ ಅಸಲಿ ತಂತ್ರಗಾರಿಕೆ ಮತ್ತಷ್ಟು ನಗ್ನವಾಗಿ ಬಯಲಾಗಿದೆ. ಕಾರಣ ಕೇಳುವ ನೋಟಿಸ್ ಜಾರಿಯಾಗಿ ದಿನಗಳೇ ಉರುಳಿವೆ. ಇಂದು 30-06-2026 ಬಂದರೂ, ಪ್ರಸ್ತುತ ಇಲ್ಲಿಯ ತನಕ ಬಿಇಓ ಕಚೇರಿಯಿಂದ ಮಾನ್ಯ ಡಿಡಿಪಿಐ ಅವರಿಗೆ ಯಾವುದೇ ಅಧಿಕೃತ ತನಿಖಾ ವರದಿಯನ್ನು ಸಲ್ಲಿಕೆ ಮಾಡಲಾಗಿಲ್ಲ!
​ಹಗರಣದ ಬಗ್ಗೆ ಏನಾಯಿತು ಎಂದು ದೂರುದಾರರು ಬಿಇಓ ಕಚೇರಿಗೆ ವಿಚಾರಿಸಲು ಹೋದರೆ ಅಲ್ಲಿ ಸಿಗುತ್ತಿರುವುದು ಕೇವಲ ಹಾರಿಕೆ ಉತ್ತರಗಳು ಮತ್ತು ಸಬೂಬುಗಳು. ದೂರುದಾರರು ಕಚೇರಿಗೆ ಹೋದಾಗಲೆಲ್ಲಾ “ಬಿಇಓ ಅವರು ಕಚೇರಿಯಲ್ಲಿ ಇಲ್ಲ” ಎಂಬ ಸಿದ್ಧ ಉತ್ತರ ಸಿಗುತ್ತಿದೆ. ಅಷ್ಟೇ ಅಲ್ಲ, “ವರದಿ ಸಿದ್ಧವಾಗಿದೆ, ಆದರೆ ಬಿಇಓ ಅವರ ಸಹಿಯಾಗಿಲ್ಲ” ಎಂದು ಹೇಳುತ್ತಾ ದಿನ ದೂಡಲಾಗುತ್ತಿದೆ.


ವಿಷಯ ನಿರ್ವಾಹಕರ ಘೋರ ನಿರ್ಲಕ್ಷ್ಯ!
​ಈ ಇಡೀ ಪ್ರಕರಣ ಹೀಗೆ ನನೆಗುದಿಗೆ ಬೀಳಲು ಕೇವಲ ಮೇಲಧಿಕಾರಿಗಳಷ್ಟೇ ಅಲ್ಲ, ಬಿಇಓ ಕಚೇರಿಯ ಸಂಬಂಧಪಟ್ಟ ವಿಷಯ ನಿರ್ವಾಹಕರು ನೇರ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬಡ ಹೆಣ್ಣುಮಕ್ಕಳ ಭವಿಷ್ಯಕ್ಕೆ ಕುತ್ತು ತಂದಿರುವ, ಬಡ ಪಾಲಕರ ಜೇಬಿಗೆ ಕತ್ತರಿ ಹಾಕಿರುವ ಇಂತಹ ಸೂಕ್ಷ್ಮ ಪ್ರಕರಣವನ್ನು ಇಟ್ಟುಕೊಂಡು ವಿಷಯ ನಿರ್ವಾಹಕರು ಅತ್ಯಂತ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕಡತವನ್ನು ಮುಂದೆ ಸಾಗಿಸದೆ, ಮೇಲಧಿಕಾರಿಗಳ ಸಹಿ ಮಾಡಿಸದೆ ಫೈಲನ್ನು ಧೂಳು ಹಿಡಿಸುತ್ತಿರುವುದರ ಹಿಂದೆ ಯಾವ ‘ಅದೃಶ್ಯ ಹಸ್ತ’ ಮತ್ತು ಆಮಿಷ ಕೆಲಸ ಮಾಡುತ್ತಿದೆ?
​ಮಾನ್ಯ ಬಿಇಓ ಶೇಖರಪ್ಪ ಅವರೇ ಮತ್ತು ಕಚೇರಿಯ ಸಿಬ್ಬಂದಿಗಳೇ, ಕೇವಲ ನೋಟಿಸ್ ನೀಡಿ ಕಡತಗಳನ್ನು ಮುಚ್ಚಿಹಾಕುವ ಕಾಲ ಮುಗಿದುಹೋಗಿದೆ. ಮಾನ್ಯ ಉಪನಿರ್ದೇಶಕರು ಈಗಾಗಲೇ 12-06-2026 ರಂದೇ ಈ ಬಗ್ಗೆ ಮೌಖಿಕ ಆದೇಶ ನೀಡಿದ್ದರೂ, ಸ್ಥಳೀಯ ಬಿಇಓ ಕಚೇರಿ ಇಷ್ಟು ಮಂದಗತಿಯಲ್ಲಿ ನಾಟಕವಾಡುತ್ತಿರುವುದು ಯಾರನ್ನು ರಕ್ಷಿಸಲು?
​ಬಡ ಹೆಣ್ಣುಮಕ್ಕಳ ಮತ್ತು ಪಾಲಕರ ಆಕ್ರೋಶ ಈಗ ಕಟ್ಟೆಯೊಡೆದಿದೆ. ಕಚೇರಿಯ ಒಳಗಿನ ಈ ‘ವರದಿ’ ತಂತ್ರಗಾರಿಕೆ ಹೀಗೆಯೇ ಮುಂದುವರಿದರೆ, ಬಿಇಓ ಕಚೇರಿಗೆ ಬೀಗ ಹಾಕಿ ಧರಣಿ ಕೂರುವುದು ಗ್ಯಾರಂಟಿ.
​ಈ ‘ನೋಟಿಸ್ ಮತ್ತು ಸಹಿ’ ಇಲ್ಲದ ನಾಟಕಕ್ಕೆ ಮಾನ್ಯ ಡಿಡಿಪಿಐ ಹಾಗೂ ಸಿಇಓ ಅವರು ಯಾವಾಗ ಬ್ರೇಕ್ ಹಾಕುತ್ತಾರೆ?
​ಕಾದು ನೋಡೋಣ…!

ಮುಂದುವರೆಯುತ್ತದೆ…..

error: Content is protected !!
Scroll to Top