ಖಾಕಿ-ಖಾದಿ-ಅಧಿಕಾರಶಾಹಿಯ ಕತ್ತಲ ಕೋಣೆಯಲ್ಲಿ ಹಳ್ಳ ನುಂಗಿದ ಭೂಬೂತಗಳ ‘ದೃಷ್ಟಿ’ ಸೀಳಿದ ರಣಬೇಟೆ ಎಕ್ಸ್‌ಕ್ಲೂಸಿವ್ ಧಮಾಕಾ!
ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಜು:1 ವಿಶೇಷ ತನಿಖಾ ವರದಿ-6
ಕೊಪ್ಪಳ: ರಾತ್ರಿ ಕತ್ತಲಾಗುತ್ತಿದ್ದಂತೆ ಆ ಕತ್ತಲ ಕೋಣೆಯಲ್ಲಿ ಹಣದ ಕಂತೆಗಳು ಮೇಜಿನ ಕೆಳಗಿನಿಂದ ಕೈ ಬದಲಾಗುತ್ತಿದ್ದವು. ಕಣ್ಣುಮುಚ್ಚಿ ಕುಳಿತಿದ್ದ ಅಧಿಕಾರಶಾಹಿಯ ಅಹಂಕಾರದ ಮದಕ್ಕೆ, ನಿಸರ್ಗದ ಆಕ್ರಂದನ ಕೇಳಿಸಲೇ ಇಲ್ಲ. ಕೊಪ್ಪಳ ತಾಲೂಕಿನ ದದೇಗಲ್ ಗ್ರಾಮದ ಸರ್ವೆ ನಂಬರ್ 69/3ರ ಪಕ್ಕದಲ್ಲಿ ಶತಮಾನಗಳಿಂದ ನಿಸರ್ಗದ ಜೀವನಾಡಿಯಾಗಿ ಹರಿಯುತ್ತಿದ್ದ ಆ ಸರ್ಕಾರಿ ಹಳ್ಳವನ್ನು ರಾತ್ರೋರಾತ್ರಿ ಮಣ್ಣು ಮುಚ್ಚಿ, ಅದರ ಮೇಲೆ ಅಕ್ರಮದ ಅರಮನೆ ಕಟ್ಟಲು ಹೊರಟ ಭೂಗಳ್ಳರ ಅಟ್ಟಹಾಸಕ್ಕೆ ನಾವು ಮೊದಲ ಭಾಗದಲ್ಲಿ ಮರಣಶಾಸನ ಬರೆದಿದ್ದೆವು. ‘ರಣಬೇಟೆ’ ಎತ್ತಿದ ಮಹಾ ಸ್ಫೋಟಕ ಸರಣಿ ವರದಿಗಳ ಏಟಿಗೆ ತಹಶೀಲ್ದಾರರು ನೀಡಿದ್ದ ಆ ನೋಟಿಸ್ ಕೇವಲ ಆರಂಭವಷ್ಟೇ ಆಗಿತ್ತು. ಈಗ ಇಡೀ ಹಗರಣದ ಅಸ್ತಿಪಂಜರವೇ ಹೊರಬಿದ್ದಿದೆ!

ಹೌದು, ಕಾಗದಪತ್ರಗಳು ಸುಳ್ಳು ಹೇಳುವುದಿಲ್ಲ, ಅಧಿಕಾರಿಯ ಲಂಚದ ಹಸಿವು ಎಷ್ಟೇ ಇದ್ದರೂ ದಾಖಲೆಗಳ ಸತ್ಯವನ್ನು ಹೂತುಹಾಕಲು ಸಾಧ್ಯವಿಲ್ಲ. ಭೂ ದಾಖಲೆಗಳ ಉಪನಿರ್ದೇಶಕರ ಕಚೇರಿಯಿಂದ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶರಣಪ್ಪ ಅವರಿಗೆ ದಿನಾಂಕ 29-06-2026 ರಂದು ರವಾನೆಯಾಗಿರುವ ಆ ಅಧಿಕೃತ ಪತ್ರ ಈಗ ನೇರವಾಗಿ ನಮ್ಮ ಮೇಜಿನ ಮೇಲಿದೆ. ಈ ಪತ್ರದಲ್ಲಿ ಅಡಗಿರುವ ಸತ್ಯ ಎಂತಹವರನ್ನೂ ಬೆಚ್ಚಿಬೀಳಿಸುತ್ತದೆ. ಸಾಮಾಜಿಕ ಹೋರಾಟಗಾರರಾದ ಶ್ರೀ ಕೆ.ಬಿ.ಮ್ಯಾಗಳಮನಿ ಅವರು ದಿನಾಂಕ 07-04-2026 ರಂದು ನೀಡಿದ ದೂರಿನ ಮೇರೆಗೆ ನಡೆದ ಜಂಟಿ ಜಮೀನು ಸರ್ವೇಯ ವರದಿ ಅಧಿಕೃತವಾಗಿ ಸಾಬೀತುಪಡಿಸಿದೆ—*ದದೇಗಲ್ ಗ್ರಾಮದ ಸರ್ವೆ ನಂಬರ್ 69/3 ರ ಪಶ್ಚಿಮ ಭಾಗದಲ್ಲಿದ್ದ ಸರ್ಕಾರಿ ಹಳ್ಳವನ್ನು ಬರೋಬ್ಬರಿ 1 ಎಕರೆ 15 ಗುಂಟೆಯಷ್ಟು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ! ಒತ್ತುವರಿ ಮಾಡಿಕೊಂಡಿದ್ದಲ್ಲದೆ, ಅಲ್ಲಿ ದರ್ಪದಿಂದ ಕಾಂಪೌಂಡ್ ಗೋಡೆಯನ್ನು ನಿರ್ಮಿಸಲಾಗಿತ್ತು. ಆ ಕಾಂಪೌಂಡ್ ಈಗ ಧರಾಶಾಹಿಯಾಗಿದೆ, ಆದರೆ ಹಳ್ಳದ ಒಳಗೆ ಮುಚ್ಚಿರುವ ಸಮಾಧಿಯ ಆಟ ಇನ್ನೂ ಮುಗಿದಿಲ್ಲ.

ಆಯುಕ್ತ ಶರಣಪ್ಪ ಅವರೇ ಕರಡು ವಿನ್ಯಾಸಕ್ಕೆ ಸಹಿ ಬಿದ್ದರೆ ನೀವೂ ನೇರ ಹೊಣೆ!
ಈಗ ಚೆಂಡು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶರಣಪ್ಪ ಅವರ ಅಂಗಳದಲ್ಲಿದೆ. ಭೂಗಳ್ಳರು ಸರ್ಕಾರಿ ಹಳ್ಳವನ್ನು ನುಂಗಿ ನೀರು ಕುಡಿದಿರುವುದು ತಾಂತ್ರಿಕ ತನಿಖೆಯಿಂದ ಜಗಜ್ಜಾಹೀರಾಗಿದೆ. ಪರಿಸ್ಥಿತಿ ಹೀಗಿರುವಾಗ, ಅದೇ ಸರ್ವೆ ನಂಬರ್ 69/3 ರಲ್ಲಿ ಅಕ್ರಮವಾಗಿ ಲೇಔಟ್ ನಿರ್ಮಿಸಲು ಹೊಂಚು ಹಾಕುತ್ತಿರುವ ಶರವೇಗದ ಮಾಫಿಯಾಗೆ ಪ್ರಾಧಿಕಾರವು ಕರಡು ವಿನ್ಯಾಸ ಅನುಮೋದನೆ ನೀಡಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದೆಯೇ? ರಣಬೇಟೆ ಸ್ಪಷ್ಟವಾಗಿ ಎಚ್ಚರಿಸುತ್ತಿದೆ ಹಳ್ಳದ 1 ಎಕರೆ 15 ಗುಂಟೆ ಒತ್ತುವರಿ ತೆರವು ಕಾರ್ಯ ಸಂಪೂರ್ಣವಾಗಿ ಮುಗಿದು, ನೈಸರ್ಗಿಕ ಹಳ್ಳವು ಯಥಾಸ್ಥಿತಿಗೆ ಬರುವವರೆಗೂ ಯಾವುದೇ ಕಾರಣಕ್ಕೂ ಈ ಕರಡು ವಿನ್ಯಾಸಕ್ಕೆ ಅನುಮೋದನೆ ನೀಡಬಾರದು. ಒಂದು ವೇಳೆ ಕಣ್ಣುಮುಚ್ಚಿ ಸಹಿ ಹಾಕಿದ್ದೇ ಆದಲ್ಲಿ, ಭೂಗಳ್ಳರ ಅಕ್ರಮ ಕೂಟದಲ್ಲಿ ನೀವೂ ಒಬ್ಬರು ಎಂದು ರಣಬೇಟೆ ತಾರ್ಕಿಕ ಅಂತ್ಯದವರೆಗೂ ಸುದ್ದಿಯ ಚಾಟಿ ಬೀಸಬೇಕಾಗುತ್ತದೆ, ನೆನಪಿರಲಿ!

ಕಂದಾಯ ನಿರೀಕ್ಷಕ ಸುರೇಶ್ ಅವರೇ… ನಿಮ್ಮ ಮೇಲಿರುವ ಆ ‘ಅನುಮಾನದ ನೆರಳು’ ಏನು?
ಯಾವ ಅಧಿಕಾರಿಯು ಸರ್ಕಾರದ ಆಸ್ತಿಯನ್ನು ರಕ್ಷಿಸಬೇಕಿತ್ತೋ, ಅದೇ ಕಂದಾಯ ನಿರೀಕ್ಷಕರಾದ ಸುರೇಶ್ ಅವರ ನಡೆ ಈಗ ತೀವ್ರ ಅನುಮಾನಗಳಿಗೆ ಕಾರಣವಾಗಿದೆ. ಸ್ಥಳೀಯ ಮೂಲಗಳ ಪ್ರಕಾರ ಮತ್ತು ತನಿಖೆಯ ಆಳದಲ್ಲಿ ಸಿಕ್ಕ ಸುಳಿವುಗಳ ಪ್ರಕಾರ, ಕಂದಾಯ ನಿರೀಕ್ಷಕ ಸುರೇಶ್ ಅವರು ಬಹಿರಂಗವಾಗಿಯೇ ಭೂಕಬಳಿಕೆದಾರರ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂಬ ದಟ್ಟವಾದ ಶಂಕೆ ವ್ಯಕ್ತವಾಗಿದೆ. ಸರ್ಕಾರಿ ಹಳ್ಳದ ಒತ್ತುವರಿಯನ್ನು ಕಣ್ಣಾರೆ ಕಂಡೂ ಕಾಣದಂತೆ ನಟಿಸಿದ ಇವರ ನಿಗೂಢ ನಡೆಗಳ ಹಿಂದೆ ಯಾವ ‘ಕಂತೆ’ಗಳ ಪ್ರಭಾವವಿದೆ? ಮಾನ್ಯ ಅಪರ ಜಿಲ್ಲಾಧಿಕಾರಿಗಳು ಈ ಕೂಡಲೇ ಮಧ್ಯಪ್ರವೇಶಿಸಿ, ಕಂದಾಯ ನಿರೀಕ್ಷಕ ಸುರೇಶ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಬೇಕು. ಕರ್ತವ್ಯ ಲೋಪ ಎಸಗಿದ ಇಂತಹ ಅಧಿಕಾರಿಗಳ ಅಸಲಿ ಮುಖವಾಡ ಕಳಚಬೇಕಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ‘ದೃಷ್ಟಿ ಎನ್ ಕ್ಲೇವ್’ ನಕಲಿ ನಕ್ಷೆಯ ದಂಧೆ!
ಭೂಗಳ್ಳರ ದರ್ಪ ಕೇವಲ ಭೂಮಿಯ ಮೇಲಷ್ಟೇ ಅಲ್ಲ, ಡಿಜಿಟಲ್ ಜಗತ್ತಿನಲ್ಲೂ ಸಾರ್ವಜನಿಕರನ್ನು ವಂಚಿಸಲು ಜಾಲ ಹೆಣೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ “ದೃಷ್ಟಿ ಎನ್ ಕ್ಲೇವ್” ಹೆಸರಿನ ನಕಲಿ ಬಡಾವಣೆಯ ನಕ್ಷೆಯನ್ನು ಹರಿಬಿಡಲಾಗಿದೆ. ಅದಕ್ಕೆ ಈಗಾಗಲೇ ಕರಡು ಅನುಮೋದನೆಯಾಗಿದೆ ಎಂದು ಸುಳ್ಳು ಬಿಂಬಿಸಿ, ಸಾರ್ವಜನಿಕರ ಬೆವರಿನ ದುಡ್ಡನ್ನು ಲೂಟಿ ಮಾಡಲು ಮುಗ್ಧ ಜನರಿಗೆ ವಂಚಿಸಲಾಗುತ್ತಿದೆ. ಬಿದ್ದಿರುವ ಕಾಂಪೌಂಡ್ ಮತ್ತು ಒತ್ತುವರಿಯ ಸುಳಿಯಲ್ಲಿ ಸಿಲುಕಿರುವ ಭೂಮಿಗೆ ಯಾವುದೇ ಅನುಮೋದನೆ ಸಿಕ್ಕಿಲ್ಲ ಎನ್ನುವುದೇ ಕಟು ಸತ್ಯ! ಪ್ರಾಧಿಕಾರದ ಅಧಿಕಾರಿಗಳೇ, ಈ ನಕಲಿ ನಕ್ಷೆಯ ದಂಧೆಯನ್ನು ಗಮನದಲ್ಲಿಟ್ಟುಕೊಂಡು ವಂಚಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಮತ್ತು ಅವರ ಕರಡು ಅನುಮೋದನೆಯ ಪ್ರಸ್ತಾವನೆಯನ್ನು ಶಾಶ್ವತವಾಗಿ ಕಸದ ಬುಟ್ಟಿಗೆ ಎಸೆಯಬೇಕು.
ಪ್ರಕೃತಿಯ ಒಡಲನ್ನು ಸೀಳಿ ಕಟ್ಟುವ ಯಾವುದೇ ಸಾಮ್ರಾಜ್ಯವೂ ಹೆಚ್ಚು ದಿನ ಉಳಿಯುವುದಿಲ್ಲ. ರಣಬೇಟೆಯು ಈ ಹಗರಣದ ಬೇಟೆಯನ್ನು ನಿಲ್ಲಿಸುವುದಿಲ್ಲ. ಒತ್ತುವರಿಯಾದ ಪ್ರತಿ ಇಂಚು ಜಾಗವೂ ಮುಕ್ತವಾಗಿ, ನೈಸರ್ಗಿಕ ಹಳ್ಳವು ಮತ್ತೆ ಹರಿಯುವವರೆಗೂ, ಅಕ್ರಮ ಎಸಗಿದ ಅಧಿಕಾರಿಗಳು ಮತ್ತು ಭೂಮಾಫಿಯಾದ ಬೆನ್ನಟ್ಟಿ ಬೇಟೆಯಾಡುವುದು ನಿಶ್ಚಿತ.
ಸಂಚಿಕೆ ಮುಂದುವರೆಯುತ್ತದೆ…

