ಪಿಡಿಒ ಹಾಗೂ ಕರಾವಸೂಲಿಗಾರನ ‘ಸ್ವಯಂಕೃತ ಅಪರಾಧ’ ಬಯಲು!

ಹಿರೇಸಿಂದೋಗಿ ಪಂಚಾಯತಿಯಲ್ಲಿ ‘ಕರ’ ಸುಲಿಗೆಯ ರಕ್ತಚರಿತ್ರೆ!

ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಜು:23

ಕೊಪ್ಪಳದ ಆ ಧೂಳು ಹಿಡಿದ ರಸ್ತೆಗಳಲ್ಲಿ, ಬೆವರು ಹರಿಸಿ ಜೀವನ ನಡೆಸೋ ಬಡ ಪಟಾಲಂಗೆ ‘ಅಧಿಕಾರ’ ಅನ್ನೋದು ಯಾವತ್ತೂ ಒಂದು ರೀತಿಯ ಭಯ. ಆ ಭಯವನ್ನೇ ಬಂಡವಾಳ ಮಾಡಿಕೊಳ್ಳೋಕೆ ಅಂತಾನೇ ಪಂಚಾಯತಿ ಕುರ್ಚಿಗಳ ಮೇಲೆ ಕೆಲವರು ಕೂತಿರ್ತಾರೆ.
​ಹಿರೇಸಿಂದೋಗಿ ಗ್ರಾಮ ಪಂಚಾಯತಿ ಅನ್ನೋ ಈ ಗ್ರಾಮದಲ್ಲಿ ನಡೀತಿರೋದು ಸಾಧಾರಣ ಕಥೆಯಲ್ಲ. ಅಲ್ಲಿ ಕುಳಿತಿರೋ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಸಜ್ಜನ್ ಮತ್ತು ಆ ಕರಾವಸೂಲಿಗಾರ ಮಂಜುನಾಥ ಶಹಪುರ್ ಸೇರಿಕೊಂಡು ಆಡ್ತಿರೋ ಆಟ ನೋಡಿದ್ರೆ, ಅಬ್ಬಾ ಕಾನೂನು ಅನ್ನೋದು ಇವರ ಮನೆ ಆಸ್ತಿ ತರ ಕಾಣ್ತಿದೆ!


​ಏನಿದು ‘ಕೈ’ಚಳಕದ ಅಸಲಿ ಕಥೆ?
​ಕಾನೂನು ಚೀರಾಡಿ ಚೀರಾಡಿ ಹೇಳ್ತಿದೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳು 2025′ ರ ನಿಯಮ 18 ಮತ್ತು ಕೋಷ್ಟಕ-1 ರ ನಿಯಮ 9(2), 9(3) ಪ್ರಕಾರ, ನಾಗರಿಕರು ತನ್ನ ಆಸ್ತಿ ವರ್ಗಾವಣೆ ಮಾಡಿಸಿಕೊಡಪ್ಪಾ ಅಂತ ಬಂದ್ರೆ, ಆತನ ನೋಂದಾಯಿತ ದಾಖಲೆಯಲ್ಲಿರೋ ಮುದ್ರಾಂಕ ಶುಲ್ಕದ ಮೇಲಷ್ಟೇ ಶೇಕಡಾ 2% ರಷ್ಟು ಶುಲ್ಕ ತಗೋಬೇಕು.
​ಆದರೆ ಈ ಮಹಾಶಯರು ಏನು ಮಾಡಿದ್ರು ಗೊತ್ತಾ?
​ಖರೀದಿ ಪತ್ರದ ಇಡೀ ಮೊತ್ತಕ್ಕೆ 3% ರಷ್ಟು ಕರ ಎತ್ತೋಕೆ ಶುರು ಮಾಡಿದ್ರು! ಅಂದರೆ, ಕಷ್ಟಪಟ್ಟು ಆಸ್ತಿ ತಗೊಂಡೋನ ಜೇಬಿಗೆ ನೆರಳು ಬೆಳಕಿನ ಆಟದಲ್ಲೇ ಕನ್ನ ಹಾಕೋದು. ಬಡವಂಗೆ ಕಾನೂನು ಗೊತ್ತಿಲ್ಲ, ಕೇಳೋರಿಲ್ಲ ಅನ್ನೋ ಅಹಂಕಾರ.


ತಮ್ಮದೇ ಅಕ್ಷರಗಳಲ್ಲಿ ‘ತಪ್ಪು’ ಒಪ್ಪಿಕೊಂಡ ‘ಹಿಂಬರಹ’!
​ಆದರೆ, ಪಾಪದ ಕೊಡ ತುಂಬಿದಾಗ ಬಣ್ಣ ಬಯಲಾಗಲೇಬೇಕಲ್ಲ? ಈ ಅಕ್ರಮದ ಗಬ್ಬು ವಾಸನೆ ಹೊಡೆದಾಗ ದೂರು ತಲುಪಿದ್ದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅಲ್ಲಿಂದ ನೋಟೀಸ್ ಹಾರಿ ಬರ್ತಿದ್ದಂತೆ, ನಮ್ಮ ಪ್ರಕಾಶ್ ಸಜ್ಜನ್ ಮತ್ತು ಮಂಜುನಾಥ ಶಹಪುರ್ ಹಿಂಬರಹ ನೀಡಿದರು.
“ನಮ್ಮ ಕಾರ್ಯಾಲಯದಲ್ಲಿ ಹಿಂದಿನಿಂದಲೂ ಖರೀದ ಪತ್ರದಲ್ಲಿದ್ದ ಮೊತ್ತಕ್ಕೆ 3% ತೆಗೆದುಕೊಳ್ಳುತ್ತಾ ಬಂದಿದ್ದು… ಇನ್ನು ಮುಂದೆ ನಿಯಮದ ಪ್ರಕಾರ 2% ತೆಗೆದುಕೊಳ್ಳಲಾಗುತ್ತದೆ”
​ಅಬ್ಬಾ! ಎಂಥಾ ಬಂಡಧೈರ್ಯ! “ನಾವು ಇಷ್ಟು ದಿನ ಕದ್ದು ತಿಂತಿದ್ವಿ, ಈಗ ಸಿಕ್ಕಿಬಿದ್ದಿದ್ದೀವಿ, ಇನ್ಮೇಲೆ ಸರಿಯಾಗಿ ಇರ್ತೀವಿ” ಅಂತ ಸ್ವಹಸ್ತದಿಂದ ಬರೆದುಕೊಟ್ಟಿದ್ದಾರೆ! ತಮ್ಮದೇ ಸಹಿಯೊಂದಿಗೆ ಅಕ್ರಮವನ್ನು ಒಪ್ಪಿಕೊಂಡ ಮೇಲೆಯೂ ಇವರು ಪಂಚಾಯತಿ ಕುರ್ಚಿಯಲ್ಲಿ ಕೂರಬೇಕಾ?


​ಸಿಇಒ ಸಾಹೇಬ್ರೆ… ಇನ್ನೇಕೆ ತಡ? ಅಮಾನತು ಮಾಡಿ!
​ಈಗ ಪ್ರಶ್ನೆ ಇರೋದು ಕೊಪ್ಪಳ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳ ಮುಂದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993 ರ ಅಡಿಯಲ್ಲಿ ಪಂಚಾಯತಿಗಳ ಆಡಳಿತವನ್ನು ಸರಿದಾರಿಗೆ ತರುವುದು ನಿಮ್ಮ ಕರ್ತವ್ಯ. ನಿಯಮ 9(2), 9(3) ಹಾಗೂ ನಿಯಮ 18 ನ್ನು ಹೆಜ್ಜೆ ಹೆಜ್ಜೆಗೂ ತುಳಿದು, ಸಾರ್ವಜನಿಕರನ್ನು ಸುಲಿಗೆ ಮಾಡಿದ ಈ ಇಬ್ಬರನ್ನೂ ತಕ್ಷಣವೇ ಸೇವೆಯಿಂದ ಅಮಾನತು ಮಾಡಲೇಬೇಕು.
ಅಮಾನತುಗೊಳಿಸಿ, ಇವರ ಮೇಲೆ ಸೂಕ್ತ ಇಲಾಖಾ ತನಿಖೆ ನಡೆಸಿ ಶಿಸ್ತು ಕ್ರಮ ಜರುಗಿಸಬೇಕು.
ಇಷ್ಟು ದಿನ ಬಡ ಜನರಿಂದ ನಿಯಮಬಾಹಿರವಾಗಿ ಕಿತ್ತುಕೊಂಡ ಹೆಚ್ಚುವರಿ ಹಣವನ್ನು ವಾಪಸ್ ಆ ಆಸ್ತಿ ಮಾಲೀಕರ ಜೇಬಿಗೆ ತಲುಪಿಸುವಂತೆ ಆದೇಶ ಹೊರಡಿಸಬೇಕು.
​ಸಾಕ್ಷಿ ನಿಮ್ಮ ಕಣ್ಣೆದುರೇ ಇದೆ. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಿ ಮನೆಗೆ ಕಳುಹಿಸ್ತೀರಾ ಅಥವಾ ‘ಸಹೋದ್ಯೋಗಿ ಪ್ರೇಮ’ ತೋರಿ ಸುಮ್ಮನೆ ಕೂರ್ತೀರಾ? ಜನ ಎಲ್ಲವನ್ನೂ ನೋಡ್ತಿದ್ದಾರೆ!

ಮುಂದುವರೆಯುತ್ತದೆ….

error: Content is protected !!
Scroll to Top