ಕಳಪೆ ರಸ್ತೆಗಳ ಬಿಲ್ ಬಿಡುಗಡೆಗೆ ಅಧಿಕಾರಿಗಳ ‘ಡಬಲ್ ಗೇಮ್’ ಸಿಇಒ ಮರುತನಿಖಾ ಆದೇಶದ ವಿರುದ್ಧ ಲೋಕಾಯುಕ್ತಕ್ಕೆ ದೂರು!
ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಜು:22 (ಸಂಚಿಕೆ – 2)
ಕೊಪ್ಪಳ : ಇದು ಕೊಪ್ಪಳ ಜಿಲ್ಲಾ ಪಂಚಾಯತ್‌ನ ಅಧಿಕೃತ ಕಡತಗಳ ಗರ್ಭದಿಂದ ಹೊರಬಿದ್ದಿರುವ ಕಹಿಸತ್ಯ! ಮುಖ್ಯಮಂತ್ರಿಗಳ ವಿಶೇಷ ಅನುದಾನದ ಲೆಕ್ಕ ಶೀರ್ಷಿಕೆ 5054 ರಡಿ ನಡೆದ 23 ರಸ್ತೆ ಕಾಮಗಾರಿಗಳ ಮಹಾ ಹಗರಣದ ತನಿಖೆ ಈಗ ಯಾವ ಹಂತಕ್ಕೆ ಬಂದು ನಿಂತಿದೆ ಗೊತ್ತಾ?
ತನಿಖೆಗೆ ಹೋದ ಅಧಿಕಾರಿಗಳು ಕಳಪೆ ಕಾಮಗಾರಿಯ ಜಾತಕವನ್ನು ಕಣ್ಣೆದುರೇ ಕಂಡರೂ “ಎಲ್ಲವೂ ಸರಿಯಾಗಿದೆ, ಬಿಲ್ ಪಾವತಿಸಬಹುದು” ಅಂತ ‘ಡಬಲ್ ಗೇಮ್’ ವರದಿ ಕೊಟ್ಟಿದ್ದನ್ನು ಸಾರ್ವಜನಿಕರು ಮತ್ತು ಸಾಮಾಜಿಕ ಕಾರ್ಯಕರ್ತರು ಹಿಡಿದು ಸಿಇಒ ಕಚೇರಿಗೆ ಅಪ್ಪಳಿಸಿದ್ದರು. ಈಗ ಕೊಪ್ಪಳ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತೊಂದು “ಅಧಿಕೃತ ಜ್ಞಾಪನಾ ಪತ್ರ” (ದಿನಾಂಕ: 17/07/2026) ಹೊರಡಿಸಿ ಮರುತನಿಖೆಗೆ ಆದೇಶಿಸಿದ್ದಾರೆ!
ಆದರೆ, ಈ ಜ್ಞಾಪನಾ ಪತ್ರದ ಸಾಲು ಸಾಲುಗಳನ್ನು ಸೂಕ್ಷ್ಮವಾಗಿ ಓದಿದರೆ, ಒಳಗಡೆ ಭ್ರಷ್ಟ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಅನುದಾನ ಹರಿಸಲು ಹೆಣೆದಿರುವ ಚಾಲಾಕಿತನ ಎದ್ದು ಕಾಣುತ್ತಿದೆ!

ಸ್ವಂತ ಕೆಳಗಿನ ಅಧಿಕಾರಿಗಳಿಂದಲೇ ಮತ್ತೆ ಮರುತನಿಖೆಯ ನಾಟಕ!
ಪತ್ರದ ಕೋಷ್ಟಕವನ್ನು ಒಮ್ಮೆ ನೋಡಿ ಗೆಳೆಯರೇ… ಕನಕಗಿರಿ, ಗಂಗಾವತಿ, ಕೊಪ್ಪಳ, ಯಲಬುರ್ಗಾ ತಾಲೂಕುಗಳ ಪರಿಶೀಲನೆಗೆ ಮತ್ತೆ ಆಯಾ ತಾಲೂಕಿನ ಇಒ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಎಇಇ ಗಳನ್ನೇ ಹಾಕಿದ್ದಾರೆ! ಈ ಹಿಂದೆ ಇದೇ ಕೆಳಹಂತದ ಅಧಿಕಾರಿಗಳು ತನಿಖೆ ನಡೆಸಿ ಭ್ರಷ್ಟರನ್ನು ರಕ್ಷಿಸಲು ‘ಡಬಲ್ ಗೇಮ್’ ವರದಿ ಕೊಟ್ಟಿರಲಿಲ್ಲವೇ? ತಮ್ಮದೇ ಸಬಾರ್ಡಿನೇಟ್ ಗಳ ಮೇಲೆ ಸಿಇಒ ಅವರಿಗೆ ಇಷ್ಟೊಂದು ಮಮಕಾರವೇಕೆ? ಸ್ವತಂತ್ರ ತಾಂತ್ರಿಕ ತಜ್ಞರು ಅಥವಾ ನಿವೃತ್ತ ನ್ಯಾಯಾಧೀಶರ ತನಿಖೆಗೆ ಆದೇಶಿಸಲು ಇವರಿಗಿರುವ ಹಿಂಜರಿಕೆ ಏನು?
ಮೂಲದಲ್ಲೇ ಕಳಪೆಯಾದ ರಸ್ತೆಗೆ ಭಾಗಶಃ ಬಿಲ್ ಪಾವತಿಯ ರಹಸ್ಯ!
ಜ್ಞಾಪನಾ ಪತ್ರದ ಮಧ್ಯಭಾಗದಲ್ಲಿ ಸಿಇಒ ಬರೆದಿರುವ ಸಾಲುಗಳನ್ನು ನೋಡಿ: “ನ್ಯೂನ್ಯತೆಗಳು ಇದ್ದಲ್ಲಿ ಸದರಿ ನ್ಯೂನ್ಯತೆಗಳಿಗೆ ಎಷ್ಟು ಮೊತ್ತದ ಅನುದಾನವನ್ನು ತಡೆಹಿಡಿದು ಸಂದಾಯ ಮಾಡಬಹುದಾದ ಅನುದಾನದ ನಿಖರತೆಯನ್ನು ದಾಖಲಿಸಿ ವರದಿ ಪಡೆಯುವುದು…”
ಮಹಾಸ್ವಾಮಿ! ರಸ್ತೆಯ ತಳಪಾಯದಲ್ಲೇ ಮರ್ಮ್-3 ಜಲ್ಲಿಕರಣ ಹಾಕಿಲ್ಲ, ರಸ್ತೆ ಮುಗಿಯುವ ಮುನ್ನವೇ ಗುಂಡಿ ಬಿದ್ದಿದೆ, ಚರಂಡಿ ಕಟ್ಟಿಲ್ಲ! ಹೀಗೆ ಮೂಲ ಕಾಮಗಾರಿಯೇ ಸಂಪೂರ್ಣ ಕಳಪೆಯಾಗಿದ್ದರೂ, “ಆ ಲೋಪದ ಮೊತ್ತವನ್ನು ಮೈನಸ್ ಮಾಡಿ ಉಳಿದ ಬಿಲ್ ಪಾವತಿಸಿ” ಎಂದು ಶಿಫಾರಸು ಮಾಡಲು ದಾರಿ ಮಾಡಿಕೊಟ್ಟಿರುವುದರ ಹಿಂದಿನ ಆಂತರಿಕ ಉದ್ದೇಶವೇನು? ಇದು ಭ್ರಷ್ಟರಿಗೆ ಹಿಂಬಾಗಿಲ ಮೂಲಕ ಕೋಟಿ ಕೋಟಿ ಹಣ ಸಂದಾಯ ಮಾಡುವ ಪ್ಲಾನ್ ಅಲ್ಲವೇ?
ಹಳೆಯ ವರದಿಯ ಲೋಪಗಳನ್ನು ಸರಿಪಡಿಸದೇ ಮುಚ್ಚುಮರೆ!
ಈ ಹಿಂದೆ 3ನೇ ತನಿಖಾ ತಂಡ ಮತ್ತು ಸ್ಥಳೀಯ ಇಂಜಿನಿಯರ್‌ಗಳು ನೀಡಿದ್ದ ದೃಢೀಕರಣದ ವಿರುದ್ಧ ಯಾವುದೇ ಶಿಸ್ತುಕ್ರಮ ಕೈಗೊಳ್ಳದೆ, ಅದೇ ಕಳಪೆ ಕಡತಗಳನ್ನು ಇಟ್ಟುಕೊಂಡು “ಎಷ್ಟು ಬಿಲ್ ಹಿಡಿದಿಡಬೇಕು, ಎಷ್ಟು ಬಿಡುಗಡೆ ಮಾಡಬಹುದು” ಎಂದು ವರದಿ ಕೇಳಿರುವುದು ಸರ್ಕಾರದ ಅನುದಾನ ನಿಯಮಾವಳಿಗಳಿಗೆ ಸಂಪೂರ್ಣ ವಿರುದ್ಧವಾಗಿದೆ.

ಜಿಪಂ ಕಚೇರಿಯಲ್ಲೊಬ್ಬ ‘ಬಂಗಾರದ ಮೊಟ್ಟೆ ಇಡುವ ಕೋಳಿ’ ಕಾಯುವ ಕಾವಲುಗಾರ!
ಇಡೀ ಕೊಪ್ಪಳ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಈ 23 ರಸ್ತೆ ಕಾಮಗಾರಿಗಳ ಹಗರಣದ ಕರಾಳ ಕಥೆ ಇಲ್ಲಗೇ ಮುಗಿಯುವುದಿಲ್ಲ ಈ ಕಚೇರಿ ಇಂದು ಕೆಲವು ಪ್ರಭಾವಿ ಗುತ್ತಿಗೆದಾರರ ಪಾಲಿಗೆ ‘ಬಂಗಾರದ ಮೊಟ್ಟೆ ಇಡುವ ಕೋಳಿ’ಯಾಗಿ ಬದಲಾಗಿದೆ!
ಜಿಲ್ಲಾ ಪಂಚಾಯತಿಯ ಅತ್ಯಂತ ಸೂಕ್ಷ್ಮ ಮತ್ತು ಕೀ-ಪೋಸ್ಟ್ ಹುದ್ದೆಯಲ್ಲಿ ಕುಳಿತಿರುವ ಒಬ್ಬ ಪ್ರಭಾವಿ ಅಧಿಕಾರಿಯ ಆಟ ಇಲ್ಲಿದೆ ನೋಡಿ
ಈ ಉನ್ನತ ಆಸಾಮಿಗೆ ಜಿಪಂಗೆ ಕೋಟಿ ಕೋಟಿ ಅನುದಾನ ತರುವ ಸಾರ್ವಜನಿಕರ ಹಿತಾಸಕ್ತಿಗಿಂತ, ಕಳಪೆ ಕಾಮಗಾರಿ ನಡೆಸಿ ಕೋಟಿ ಲೂಟಿ ಹೊಡೆಯುವ ಗುತ್ತಿಗೆದಾರರ ಜೊತೆಗಿನ ನಿಕಟ-ಪೂರ್ವ ಸಂಪರ್ಕವೇ ಹೆಚ್ಚಾಗಿದೆ!
ಸಾರ್ವಜನಿಕರು ಮತ್ತು ಸಾಮಾಜಿಕ ಕಾರ್ಯಕರ್ತರು ಇಂಚಿಂಚೂ ತಾಂತ್ರಿಕ ಸಾಕ್ಷ್ಯಗಳನ್ನು ಹಿಡಿದುಕೊಂಡು ನ್ಯಾಯಕ್ಕಾಗಿ ದೂರು ನೀಡಲು ಹೋದರೆ, ಈ ಪ್ರಭಾವಿ ಅಧಿಕಾರಿ ಅದನ್ನು ಬುಡಮೇಲು ಮಾಡಲು ಸದ್ದಿಲ್ಲದೆ ತಂತ್ರ ಹೆಣೆಯುತ್ತಿದ್ದಾನೆ. ದೂರುದಾರರಿಗೆ ಸಿಗಬೇಕಾದ ನ್ಯಾಯವನ್ನು ತಡೆದು, ಒಳಗಿರುವ ಭ್ರಷ್ಟಾಧಿಕಾರಿಗಳೊಂದಿಗೆ ಕೈ ಮಿಲಾಯಿಸಿ ಇಡೀ ತನಿಖೆಯ ದಿಕ್ಕನ್ನೇ ತಪ್ಪಿಸುವ ಮಹಾಪಾಪಕ್ಕೆ ಈತ ಕಾರಣನಾಗಿದ್ದಾನೆ!
ಸಿಇಒ ಆಫೀಸಿನಲ್ಲೇ ನಡೀತಿದ್ಯಾ ‘ದಲಾಳಿ’ ಕಾರುಬಾರು..?
ಇಡೀ ಕೊಪ್ಪಳ ಜಿಲ್ಲಾ ಪಂಚಾಯತಿಯ ಆಡಳಿತ ಯಂತ್ರ ಇವತ್ತು ಸಾರ್ವಜನಿಕರ ಹಿತಾಸಕ್ತಿ ಕಾಯುವ ಬದಲು, ಕಳಪೆ ಕೆಲಸ ಮಾಡಿದ ಭ್ರಷ್ಟ ಗುತ್ತಿಗೆದಾರರ ಪಾಲಿಗೆ ‘ಬಂಗಾರದ ಮೊಟ್ಟೆ ಇಡುವ ಕೋಳಿ’ಯಾಗಿದೆ!
ಸಾರ್ವಜನಿಕ ವಲಯದಲ್ಲಿ ಈಗ ಕೇಳಿಬರುತ್ತಿರುವ ತೀವ್ರ ಟೀಕೆ ಎಂದರೆ ಕಚೇರಿಯ ಕೇಸ್ ವರ್ಕರ್‌ನಿಂದ ಹಿಡಿದು, ಸಹಾಯಕ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿಗಳು ಇಡೀ ಆಡಳಿತ ಸರಣಿಯೇ ರಾಜಕೀಯ ಪ್ರಭಾವಿಗಳ ಕೈಗೊಂಬೆಯಾಗಿದೆ!
ಸಾರ್ವಜನಿಕರ ತೆರಿಗೆ ಹಣ ಕೊಳ್ಳೆಯಾಗುತ್ತಿದ್ದರೆ, ಈ ಅಧಿಕಾರಿಗಳ ಪಡೆ ಜನರಿಗೆ ನ್ಯಾಯ ಕೊಡಿಸುವ ಬದಲು ಬಹಿರಂಗವಾಗಿಯೇ ಗುತ್ತಿಗೆದಾರರ ಪರವಾಗಿ ಮಾತನಾಡುವ ದಲಾಳಿ ಸ್ಥಿತಿಗೆ ತಲುಪಿರುವುದು ನಿಜಕ್ಕೂ ಶೋಚನೀಯ!

ಲೋಕಾಯುಕ್ತ ಕಾಯ್ದೆಯ ನೇರ ಉಲ್ಲಂಘನೆ!
ಸಾರ್ವಜನಿಕರ ತೆರಿಗೆ ಹಣ ಪೋಲಾಗದಂತೆ ತಡೆಯುವುದು ಜಿಲ್ಲಾ ಪಂಚಾಯತ್ ಮುಖ್ಯಸ್ಥರ ಪ್ರಥಮ ಕರ್ತವ್ಯ. ಕಳಪೆ ಕಾಮಗಾರಿಗಳ ಸಂಪೂರ್ಣ ತಡೆಹಿಡಿಯುವ ಬದಲು, ಬಿಡುಗಡೆಗೆ ಅನುಕೂಲವಾಗುವಂತೆ ಜ್ಞಾಪನಾ ಪತ್ರ ಬರೆಯುವುದು ಹಗರಣಕ್ಕೆ ಪರೋಕ್ಷ ಪ್ರೇರಣೆ ನೀಡಿದಂತೆ ಅಲ್ಲವೇ?
ದೂರುದಾರರು ಮತ್ತು ಕೊಪ್ಪಳದ ಜನತೆ ಈ ಜ್ಞಾಪನಾ ಪತ್ರದ ಕಳ್ಳಾಟವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ.
ಈ 23 ಕಾಮಗಾರಿಗಳು ಸಂಪೂರ್ಣವಾಗಿ ಗುಣಮಟ್ಟದ ಮಟ್ಟಕ್ಕೆ ಬರುವವರೆಗೆ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ತನಿಖೆಯಾಗುವವರೆಗೆ ಯಾವುದೇ ಕಾರಣಕ್ಕೂ ಭಾಗಶಃ ಅಥವಾ ಪೂರ್ಣ ಪ್ರಮಾಣದ ಅನುದಾನವನ್ನು ಬಿಡುಗಡೆ ಮಾಡಬಾರದು!
ಒಂದು ವೇಳೆ ಈ ಜ್ಞಾಪನಾ ಪತ್ರದ ನೆಪವೊಡ್ಡಿ, ಕೆಳಹಂತದ ಅಧಿಕಾರಿಗಳ ಚಾಲಾಕಿ ವರದಿಯನ್ನು ನಂಬಿ ಗುತ್ತಿಗೆದಾರರಿಗೆ ಸರ್ಕಾರಿ ಹಣ ಬಿಡುಗಡೆಗೊಳಿಸಿದ್ದೇ ಆದಲ್ಲಿ, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಂಜಿನಿಯರ್‌ಗಳನ್ನು ನೇರ ಆರೋಪಿಗಳನ್ನಾಗಿ ಮಾಡಿ ಬೆಂಗಳೂರಿನ ಕರ್ನಾಟಕ ಲೋಕಾಯುಕ್ತ ನಿಬಂಧಕರ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುವುದು ನಿಶ್ಚಿತ!
ಸರ್ಕಾರದ ಕೋಟ್ಯಾಂತರ ರೂಪಾಯಿ ಉಳಿಸುತ್ತೀರೋ ಅಥವಾ ತನಿಖಾ ಜ್ಞಾಪನಾ ಪತ್ರದ ಹೆಸರಿನಲ್ಲಿ ಭ್ರಷ್ಟರ ಖಜಾನೆ ತುಂಬಿಸುತ್ತೀರೋ? ನಿರ್ಧಾರ ನಿಮಗೇ ಬಿಟ್ಟಿದ್ದು ಮಾನ್ಯ ಸಿಇಒ ಅವರೇ!
ಮುಂದುವರೆಯುತ್ತದೆ…

