‘ದೈತ್ಯ’ ಕಡತದ ಕೆಳಗೆ ಸತ್ತ ಸತ್ಯ!

ಅಧಿಕಾರಿಗಳ ಅಸಲಿ ಆಟಕ್ಕೆ ಎಡಿಸಿ, ಎಸಿ ಅಂಗಳದಲ್ಲೇ ತೂಗುಕತ್ತಿ!

ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಅ:27 ( ಸಂಚಿಕೆ -08)

ಕೊಪ್ಪಳ ತಾಲೂಕಿನ ದದೇಗಲ್ ಗ್ರಾಮದ ಸರ್ವೆ ನಂಬರ್ 69/*/3 ರ ಸುಮಾರು 05-22 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಹರಿಯುತ್ತಿದ್ದ ನೈಸರ್ಗಿಕ ಸರ್ಕಾರಿ ಹಳ್ಳವನ್ನು ಮಣ್ಣು ಹಾಕಿ ಸಂಪೂರ್ಣವಾಗಿ ಮುಚ್ಚಿ, ಅನಧಿಕೃತವಾಗಿ ಲೇಔಟ್ ನಿರ್ಮಿಸಿರುವ ಅಕ್ರಮ ಪ್ರಕರಣ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
​ಸರ್ಕಾರಿ ಹಳ್ಳವನ್ನು ನುಂಗಿ ಅನಧಿಕೃತ ಲೇಔಟ್ ನಿರ್ಮಿಸಿರುವ ಭೂಮಾಫಿಯಾ ವಿರುದ್ಧ ಸಾಮಾಜಿಕ ಕಾರ್ಯಕರ್ತರಾದ ಕೆ. ಬಿ. ಮ್ಯಾಗಳಮನಿ ಅವರು ಸಲ್ಲಿಸಿದ್ದ ದೂರಿನ ಅನ್ವಯ, ಕಂದಾಯ ಇಲಾಖೆಯ ಕೆಳಹಂತದ ವರದಿಗಳಲ್ಲಿ ವ್ಯತ್ಯಾಸಗಳಿರುವುದನ್ನು ಅಪರ ಜಿಲ್ಲಾಧಿಕಾರಿಗಳಾದ ಸಿದ್ದರಾಮೇಶ್ವರ ಅವರು ಗಂಭೀರವಾಗಿ ಪರಿಗಣಿಸಿದ್ದರು. ಗ್ರಾಮ ಆಡಳಿತಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರ ವರದಿಗಳಲ್ಲಿನ ವ್ಯತ್ಯಾಸವನ್ನು ಬೆಟ್ಟುಮಾಡಿದ್ದ ಅಪರ ಜಿಲ್ಲಾಧಿಕಾರಿಗಳು, ಪ್ರಕರಣವನ್ನು ಮರುಪರಿಶೀಲಿಸಿ ನಿಯಮಾನುಸಾರ ತನಿಖೆ ನಡೆಸಿ ಹೊಸದಾಗಿ ಅನುಫಾಲನಾ ವರದಿ ಸಲ್ಲಿಸುವಂತೆ ತಹಶೀಲ್ದಾರರಿಗೆ ಕಡಕ್ ಆದೇಶ ನೀಡಿದ್ದರು.


​ಎಡಿಸಿ ಆದೇಶಕ್ಕೂ ಕ್ಯಾರೆ ಅನ್ನದ ತಹಶೀಲ್ದಾರ್!
ಆದರೆ, ಅಪರ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿ ಅಕ್ಟೋಬರ್ ತಿಂಗಳು ಬಂದರೂ, ತಾಲೂಕು ದಂಡಾಧಿಕಾರಿಗಳಾದ ಬಸವರಾಜ್ ತೆನ್ನಳ್ಳಿ ಅವರು ಈ ಪ್ರಕರಣವನ್ನು ಮುಕ್ತಯಾ ಮಾಡದೆ, ಅನುಪಾಲನಾ ವರದಿಯನ್ನೂ ಸಲ್ಲಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಮೇಲಧಿಕಾರಿಗಳ ಆದೇಶವನ್ನೇ ಗಾಳಿಗೆ ತೂರಿ, ಪ್ರಕರಣವನ್ನು ನೆಪಮಾತ್ರಕ್ಕೆ ಬಾಕಿ ಉಳಿಸಿಕೊಳ್ಳುವ ಮೂಲಕ ಅಕ್ರಮ ಎಸಗಿದ ಭೂಗಳ್ಳರಿಗೆ ಪರೋಕ್ಷವಾಗಿ ಸಾತ್ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.


​ಅಪರ ಜಿಲ್ಲಾಧಿಕಾರಿಗಳು ಹಾಗೂ ಎಸಿ ಅವರಿಗೆ ದೂರು ನೀಡಲು ನಿರ್ಧಾರ:
ಉನ್ನತ ಅಧಿಕಾರಿಗಳ ಸ್ಪಷ್ಟ ನಿರ್ದೇಶನವಿದ್ದರೂ ಕರ್ತವ್ಯ ಲೋಪ ಎಸಗಿ, ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿರುವ ಕೊಪ್ಪಳ ತಾಲೂಕು ದಂಡಾಧಿಕಾರಿ (ತಹಶೀಲ್ದಾರ್) ಬಸವರಾಜ್ ತೆನ್ನಳ್ಳಿ ಅವರ ವಿರುದ್ಧ ಅಪರ ಜಿಲ್ಲಾಧಿಕಾರಿಗಳಿಗೆ ಹಾಗೂ ಉಪ ವಿಭಾಗಾಧಿಕಾರಿಗಳಿಗೆ ಅಧಿಕೃತವಾಗಿ ದೂರು ನೀಡಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಕೆ. ಬಿ. ಮ್ಯಾಗಳಮನಿ ತಿಳಿಸಿದ್ದಾರೆ.
​ಅಧಿಕಾರಿಗಳ ಈ ಅನುಮಾನಾಸ್ಪದ ನಡೆ ಹಾಗೂ ಕಡತಗಳ ಕಣ್ಣಾಮುಚ್ಚಾಲೆ ಆಟಕ್ಕೆ ಹಿರಿಯ ಅಧಿಕಾರಿಗಳು ತಕ್ಷಣವೇ ಕಡಿವಾಣ ಹಾಕಿ, ಸರ್ಕಾರಿ ಹಳ್ಳದ ಜಾಗವನ್ನು ತೆರವುಗೊಳಿಸಿ ನೈಸರ್ಗಿಕ ನೀರು ಹರಿಯಲು ಅನುವು ಮಾಡಿಕೊಡುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

ಸಂಚಿಕೆ ಮುಂದುವರೆಯುತ್ತದೆ…..

error: Content is protected !!
Scroll to Top