ಕೋಳೂರಿನಿಂದ ಬೋಚನಹಳ್ಳಿಯವರೆಗೆ ಅಕ್ರಮದ ಜಾಲ!

ಶೇಖರಪ್ಪ ಮಡಿವಾಳರಗೆ ಯಾರಪ್ಪ ಗಾಡ್ ಫಾದರ್?!

ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಅ:22

ಕೊಪ್ಪಳ : ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿಯಮಾವಳಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕಾನೂನುಬಾಹಿರ ವರ್ಗಾವಣೆ ಮತ್ತು ಪ್ರಭಾರ ನಿಯೋಜನೆ ನಡೆಸಿರುವ ಹಗರಣವು ಈಗ ಒಂದೊಂದಾಗಿ ಹೊರಬೀಳುತ್ತಿದೆ.
​ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯವು 2025-26ನೇ ಸಾಲಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಾರ್ವತ್ರಿಕ ಹಾಗೂ ವಿಶೇಷ ಪ್ರಕರಣಗಳ ವರ್ಗಾವಣೆ ಪ್ರಕ್ರಿಯೆಯನ್ನು ಅಧಿಕೃತ ವೇಳಾಪಟ್ಟಿಯಂತೆ (ಸುತ್ತೋಲೆ ಸಂಖ್ಯೆ: ಕೆಆರ್‌ಸಿ-ಜಿಪಿಎ/ಪಿಡಿಒ/50/2025) ಪೂರ್ಣಗೊಳಿಸಿ ಆದೇಶ ಹೊರಡಿಸಿತ್ತು. ಈ ಸರ್ಕಾರದ ಆದೇಶದನ್ವಯ ಕೊಪ್ಪಳ ತಾಲೂಕಿನ ಕೋಳೂರು ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ಅಧಿಕಾರಿಯಾಗಿ ಶೇಖರಪ್ಪ ಮಡಿವಾಳರ ಅವರನ್ನು ನಿಯಮಾನುಸಾರ ವರ್ಗಾವಣೆ ಮಾಡಲಾಗಿತ್ತು.
​ಆದರೆ, ಸರ್ಕಾರದ ನಿಯಮಗಳನ್ನು ಮತ್ತು ಆಯುಕ್ತಾಲಯದ ನಿರ್ದೇಶನಗಳನ್ನು ಕಡೆಗಣಿಸಿರುವ ಕೊಪ್ಪಳ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರದಿ ಅವರು, ಶೇಖರಪ್ಪ ಮಡಿವಾಳ ಅವರನ್ನು ಕೋಳೂರು ಗ್ರಾಮ ಪಂಚಾಯಿತಿಗೆ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದರು, ಮುಂದುವರೆದು ಕಾನೂನುಬಾಹಿರವಾಗಿ ಬೋಚನಹಳ್ಳಿ ಗ್ರಾಮ ಪಂಚಾಯಿತಿಗೆ ಪ್ರಭಾರ/ವರ್ಗಾವಣೆ ಮಾಡಿ ತಮ್ಮ ಜವಾಬ್ದಾರಿಯಿಂದ ಕೈಚೆಲ್ಲಿಕೊಂಡಿದ್ದಾರೆ.

ಹಗರಣಗಳ ಸರಮಾಲೆ ಹಾಗೂ ಬೆನ್ನಿಗೆ ನಿಂತಿರುವ ಪ್ರಭಾವಿಗಳು:
​ಕೋಳೂರು ಗ್ರಾಮ ಪಂಚಾಯಿತಿಗೆ ವರ್ಗಾವಣೆಗೊಂಡಿರುವ ಶೇಖರಪ್ಪ ಮಡಿವಾಳ ಅವರ ಹಿನ್ನೆಲೆಯನ್ನು ಪರಿಶೀಲಿಸಿದರೆ ಈ ವರ್ಗಾವಣೆಯ ಒಳಗುಟ್ಟು ಬಯಲಾಗುತ್ತದೆ. ಇವರ ವಿರುದ್ಧ ‘ಇ-ಸ್ವತ್ತು’ ಹಗರಣ ಹಾಗೂ 15ನೇ ಹಣಕಾಸು ಯೋಜನೆಯ ಅನುದಾನ ದುರುಪಯೋಗದ ಗಂಭೀರ ಆರೋಪಗಳಿವೆ. ಈಗಾಗಲೇ ಇವರ ವಿರುದ್ಧ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಸರ್ಕಾರದ ಹಂತದಲ್ಲಿಯೂ ವಿವಿಧ ಪ್ರಕರಣಗಳು ದಾಖಲಾಗಿವೆ. ಅಷ್ಟೇ ಅಲ್ಲದೆ, ಇವರ ವಿರುದ್ಧ ಲೋಕಾಯುಕ್ತದಲ್ಲಿಯೂ ಗಂಭೀರ ಪ್ರಕರಣ ದಾಖಲಾಗುವ ಅಂತಿಮ ಹಂತದಲ್ಲಿದೆ.
​ಇಷ್ಟೆಲ್ಲಾ ಗಂಭೀರ ಆರೋಪಗಳು ಮತ್ತು ಕಡತಗಳ ಅಕ್ರಮಗಳು ಕಣ್ಣಮುಂದೆ ಇದ್ದರೂ, ಇವರ ಹಿಂದೆ ಕೆಲವು ಉನ್ನತ ಮಟ್ಟದ ಅಧಿಕಾರಿಗಳ ಕೈಚಳಕವಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಸರ್ಕಾರದ ಮಟ್ಟದಲ್ಲಿ “ದಾಖಲೆ ಸಮೇತ ದೂರು ನೀಡಿದರೆ ಕೂಡಲೇ ಪರಿಗಣಿಸಿ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು” ಎಂದು ಪದೇಪೇದೆ ಸುತ್ತೋಲೆಗಳನ್ನು ಹೊರಡಿಸಲಾಗುತ್ತದೆ. ಆದರೆ, ಕಳಂಕಿತ ಅಧಿಕಾರಿಯ ವಿರುದ್ಧ ದಾಖಲೆ ಸಹಿತ ಹತ್ತಾರು ದೂರುಗಳು ಸಲ್ಲಿಕೆಯಾಗಿದ್ದರೂ ಯಾವುದೇ ಕ್ರಮ ಜರುಗಿಸದೆ ಮೀನಾಮೇಷ ಎಣಿಸುತ್ತಿರುವುದು ವ್ಯವಸ್ಥೆಯ ಲೋಪಕ್ಕೆ ಹಿಡಿದ ಕನ್ನಡಿಯಾಗಿದೆ.

ಹಗರಣಗಳ ‘ಸರದಾರ’ನಿಗೆ ಮತ್ತೆ ಕೋಳೂರಿನ ರಾಜಮರ್ಯಾದೆ!
​ಇಲ್ಲಿಗೆ ಕಥೆ ಮುಗಿಯಲಿಲ್ಲ! ಶೇಖರಪ್ಪ ಮಡಿವಾಳ ಅವರನ್ನು ಕೋಳೂರಿನಿಂದ ಬೋಚನಹಳ್ಳಿಗೆ ಸಾಗಹಾಕಿ, ಅವರ ಜಾಗಕ್ಕೆ ಕೋಳೂರು ಗ್ರಾಮ ಪಂಚಾಯಿತಿಗೆ ಕರೆತಂದು ಕೂರಿಸಿದ್ದು ಯಾರನ್ನು ಗೊತ್ತಾ? ಬಸವರಾಜ ಕಿರದಿ ಎಂಬ ಮತ್ತೊಬ್ಬ ಮಹಾ ಕಳಂಕಿತ ಅಧಿಕಾರಿಯನ್ನು!
​ಈ ಬಸವರಾಜ ಕಿರದಿಯ ಹಿಸ್ಟರಿ ನೋಡಿದರೆ ಇಡೀ ವ್ಯವಸ್ಥೆಯೇ ನಾಚಿಕೆಯಿಂದ ತಲೆಬಾಗಬೇಕು! ಇವರ ಮೇಲೆ ಸಾಲು ಸಾಲು ಹಗರಣಗಳ ಆರೋಪಗಳಿವೆ. ನಿಯಮಗಳನ್ನು ಗಾಳಿಗೆ ತೂರಿದ್ದಕ್ಕೆ ಈ ಹಿಂದೆ ಹಲವಾರು ಬಾರಿ ಅಮಾನತು ಶಿಕ್ಷೆ ಅನುಭವಿಸಿದ ಘಟಾನುಘಟಿ ಈತ. ವಿಪರ್ಯಾಸ ಅಂದರೆ, ಇದೇ ಬಸವರಾಜ ಕಿರದಿ ಈ ಹಿಂದೆ ಇದೇ ಕೋಳೂರು ಗ್ರಾಮ ಪಂಚಾಯಿತಿಯಲ್ಲಿದ್ದುಕೊಂಡು ಬ್ರಹ್ಮಾಂಡ ಹಗರಣಗಳನ್ನು ಮಾಡಿ, ಸಿಕ್ಕಿಬಿದ್ದು ರಾದ್ಧಾಂತ ಸೃಷ್ಟಿಸಿದ್ದ!
​ಈಗ ಅದೇ ‘ಹಗರಣಗಳ ಸರದಾರ’ನನ್ನು ತಂದು ಮತ್ತೆ ಅದೇ ಕೋಳೂರು ಪಂಚಾಯತಿಯ ಕುರ್ಚಿಯಲ್ಲಿ ಕೂಡಿಸಿರುವುದರ ಹಿಂದೆ ಇರುವ ಅಸಲಿ ಮರ್ಮವೇನು? ಹಳೆಯ ಕಡತಗಳನ್ನು ಮುಚ್ಚಿಹಾಕಲು, ಅಕ್ರಮದ ಸಾಕ್ಷ್ಯಗಳನ್ನು ಸುಟ್ಟುಹಾಕಲು ಮತ್ತು ತಮಗೆ ಬೇಕಾದವರನ್ನು ಬಚಾವ್ ಮಾಡಲು ಇಬ್ಬರು ಕಳಂಕಿತರನ್ನು ಬಳಸಿಕೊಂಡು ಈ ರೀತಿ ‘ಪ್ರಭಾರ ದಂಧೆ’ ನಡೆಸಲಾಗುತ್ತಿದೆಯೇ?

ಆಯುಕ್ತಾಲಯದ ಸುತ್ತೋಲೆಗೆ ಬೆಲೆಯಿಲ್ಲವೇ?
​ಪಂಚಾಯತ್ ರಾಜ್ ಆಯುಕ್ತಾಲಯವು ದಿನಾಂಕ 16.09.2025 ರಂದು ಹೊರಡಿಸಿದ ಸುತ್ತೋಲೆಯಲ್ಲಿ, “ವರ್ಗಾವಣೆಗೊಂಡ ಅಧಿಕಾರಿಗಳನ್ನು ಆಯಾ ತಾಲೂಕು ಪಂಚಾಯಿತಿ ಇಒಗಳು ಕರ್ತವ್ಯದಿಂದ ಬಿಡುಗಡೆ ಮಾಡಿ, ಅವರು ಹೊಸದಾಗಿ ವರ್ಗಾವಣೆಯಾದ ಗ್ರಾಮ ಪಂಚಾಯಿತಿಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕು” ಎಂದು ಸ್ಪಷ್ಟವಾಗಿ ನಿರ್ದೇಶನ ನೀಡಿತ್ತು. ಆದರೂ ಇಒ ದುಂಡಪ್ಪ ತುರದಿ ಅವರು ಈ ಸುತ್ತೋಲೆಯನ್ನು ಉಲ್ಲಂಘಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
​ಕೋಳೂರು ಗ್ರಾಮ ಪಂಚಾಯಿತಿಗಳಲ್ಲಿ ನಡೆದಿರುವ ಆರ್ಥಿಕ ಅಕ್ರಮಗಳು ಹಾಗೂ ಭ್ರಷ್ಟಾಚಾರದ ಕಡತಗಳನ್ನು ಮುಚ್ಚಿಹಾಕಲು ಮತ್ತು ತಮ್ಮವರನ್ನು ರಕ್ಷಿಸಲು ಈ ರೀತಿಯ ನಿಯಮಬಾಹಿರ ಪ್ರಭಾರ ದಂಧೆ ನಡೆಸಲಾಗುತ್ತಿದೆ ಎಂಬ ಸತ್ಯ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ.
​ಈ ದಂಧೆಗೆ ಕಡಿವಾಣ ಹಾಕಲು ಮಾನ್ಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿಯವರು ಇಂತಹ ಭ್ರಷ್ಟ ಮತ್ತು ಕಳಂಕಿತ ಅಧಿಕಾರಿಯ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳುತ್ತಾರೆಯೇ? ಅಥವಾ ಈ ಅಕ್ರಮಗಳ ಕಡತಗಳು ಹೀಗೆಯೇ ಧೂಳು ತಿನ್ನುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ!

ಮುಂದಿನ ಸಂಚಿಕೆಯಲ್ಲಿ

ಕೋಳೂರು ವ್ಯಾಪ್ತಿಯ ಲೇಔಟ್‌ ಹಬ್‌ನಲ್ಲಿ ಈ ಸ್ವತ್ತು ಹಗರಣ ಒಂದು ಈ ಸ್ವತ್ತಿಗೆ ಎಷ್ಟು ಗೊತ್ತೇ?

15 ನೇ ಹಣಕಾಸಿನ ಹಗರಣ ಮಾಡಿದ್ದು ಉಣ್ಣೋ ಮಾರಾಯ!

error: Content is protected !!
Scroll to Top