ಫಲಿಸಿತು ಪತ್ನಿಯ ಪೂಜಾಫಲ
ರಣಬೇಟೆ ನ್ಯೂಸ್ ಕೊಪ್ಪಳ
ತಮ್ಮ ಪತಿಗೆ ವಿಧಿಸಿದ್ದ ಶಿಕ್ಷೆ ನ್ಯಾಯಾಲಯದಿಂದ ಮುಕ್ತಿ ದೊರೆಯುವಂತೆ ಆಗಲಿ ಎಂದು ಜನಾರ್ಧನರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ಅವರು ರಾಜ್ಯದ ಮತ್ತು ಹೊರ ರಾಜ್ಯದ ವಿವಿಧ ದೇವಾಲಯಗಳಲ್ಲಿ ಸಲ್ಲಿಸಿದ ಪೂಜೆಗೆ ಫಲ ದೊರೆತಿದೆ. ತಮ್ಮಪತಿಗೆ ಶಿಕ್ಷೆಯಿಂದ ಬಿಡುಗಡೆ ದೊರೆಯಲಿ ಎಂದು ಲಕ್ಷ್ಮಿ ಅರುಣಾ ಜನಾರ್ಧನ್ ರೆಡ್ಡಿಯವರು ಆನೆಗುಂದಿಯ ಅಂಜನಾದ್ರಿ ಬೆಟ್ಟದ ಆಂಜನೇಯನಿಗೆ ಪೂಜೆ ಸಲ್ಲಿಸಿ, ಪಟ್ಟಾನಬಿರಾಮನ ದೇವಸ್ಥಾನದಲ್ಲಿ ರಾಮಾಯಣದ ಸುಂದರಕಾಂಡದ ಕೋಟಿ ಬರಹಕ್ಕೆ ಸಂಕಲ್ಪ ಮಾಡಿದ್ದರು.ಉಡುಪಿಯ ಕೃಷ್ಣನ ದರ್ಶನವನ್ನು ಪಡೆದು, ಪುತ್ತಿಗೆ ಶ್ರೀಗಳ ಆಶೀರ್ವಾದವನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಶತ್ರು ಹಾಗೂ ಸಂಕಷ್ಟಗಳ ನಿವಾರಣೆಗಾಗಿ ಹೋಮ ಮಾಡಿಸಿದ್ದಾರೆ. ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು.

ಇಷ್ಟಾರ್ಥವನ್ನು ಪೂರೈಸುವ ಅಸ್ಸಾಂನ ಕಾಮಾಖೀನಿ ದೇವಿಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು.ಜೂ. 10ನೇ ರಂದು ನಡೆಯುವ ವಿಚಾರಣೆಯಲ್ಲಿ ನ್ಯಾಯ ದೇವತೆ ಕೃಪಾಕಟಾಕ್ಷ ದೊರೆಯಲಿ ಎಂಬ ಆಶಯದೊಂದಿಗೆ ದೈವಗಳ ಮೊರೆಹೋಗಿದ್ದ ಅವರಿಗೆ ದೇವರು ವರ ಕೊಟ್ಟಿದ್ದು, ಇಂದು ತೆಲಂಗಾಣ ಹೈಕೋರ್ಟ್ ಶಿಕ್ಷೆಗೆ ತಡೆಯಜ್ಞೆ ನೀಡಿದೆ.ಕುಟುಂಬದ ಸದಸ್ಯರು ಮತ್ತು ಆತ್ಮೀಯ ಸ್ನೇಹಿತರು ಅಂತರನ್ನು ಕಾಯ್ದುಕೊಂಡಿರುವ ಈ ಸಂದರ್ಭದಲ್ಲಿ ಶ್ರೀಮತಿ ಲಕ್ಷ್ಮಿ ಅರುಣ ಜನಾರ್ದನ್ ರೆಡ್ಡಿ ಅವರು ಎದೆಗುಂದದೆ ಕಾರ್ಯಕರ್ತರಲ್ಲಿ ಹುಮ್ಮಸ್ಸನ್ನು ಮೂಡಿಸಿ, ಸ್ವತಹ ಪ್ರತಿಯೊಂದು ದೇವಸ್ಥಾನಕ್ಕೆ ಹೋಗಿ ಪೂಜೆ ಹವನಗಳನ್ನು ಮಾಡಿ ಪತಿಯ ಬಿಡುಗಡೆಗಾಗಿ ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದರು.
ಸಾವಿರಾರು ಕಾರ್ಯಕರ್ತರ ಆಶಯ, ಹಾಗೂ ದೇವರ ಕೃಪೆಯಿಂದ ಇಂದು ಜನಾರ್ದನ್ ರೆಡ್ಡಿ ಅವರಿಗೆ ನೀಡಿರುವ ಶಿಕ್ಷೆಗೆ ಹೈಕೋರ್ಟ್ ತಡೆ ಆಜ್ಞೆಯನ್ನು ನೀಡಿದ್ದು ಕಾರ್ಯಕರ್ತರಲ್ಲಿ ಹುಮ್ಮಸ್ಸು ಏರ್ಪಟ್ಟಿದೆ, ಅನೇಕ ಕಡೆಗಳಲ್ಲಿ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.ಒಟ್ಟಾರೆಯಾಗಿ ಏಕಾಂಗಿ ಹೋರಾಟ ನಡೆಸಿದ ಶ್ರೀ ಲಕ್ಷ್ಮಿ ಜನಾರ್ದನ್ ರೆಡ್ಡಿ ಅವರ ಪೂಜಾ ಫಲ ಮತ್ತು ಕಾರ್ಯಕರ್ತರ ಆಶಯ ದೇವರು ಈಡೇರಿಸಿದ್ದಾನೆ ಎಂದು ಹೇಳಬಹುದು.