ಪ್ರಕರಣ ದಾಖಲಿಸಲು ನಗರ ಠಾಣಾ ಪೋಲೀಸರ ಹಿಂದೇಟು!
ರಣಬೇಟೆ ನ್ಯೂಸ್ ಗಂಗಾವತಿ.ಜೂ.25: ನಗರದ ಮುಜಾವರ್ ಕ್ಯಾಂಪಿನ ಕುಟುಂಬವೊಂದರ ಕೌಟುಂಬಿಕ ಜಗಳದಲ್ಲಿ ಮಧ್ಯ ಪ್ರವೇಶಿಸಿದ ಏಳು ಜನರ ಯುವಕರ ತಂಡವೊಂದು ಓರ್ವ ಮಹಿಳೆ ಸೇರಿದಂತೆ ಮೂವರು ಯುವಕರ ಮೇಲೆ ಚಾಕು, ಬಡಿಗೆಗಳಿಂದ ಮಾರಣಾಂತಿಕ ದಾಳಿ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮದುವೆ ವಿಷಯಕ್ಕೆ ಸಂಬಂಧಿಸಿದಂತೆ ನಗರದ ಮುಜಾವರ್ ಕ್ಯಾಂಪಿನ ಕುಟುಂಬವೊಂದರಲ್ಲಿ ಕಳೆದ ಶುಕ್ರವಾರದಂದು ವಾಗ್ವಾದ ನಡೆಯುತ್ತಿದ್ದ ವೇಳೆ ಅದೇ ವಾರ್ಡಿನ ಯುವಕರ ಗುಂಪೊಂದು ಮಧ್ಯ ಪ್ರವೇಶಿಸಿ ಯುವಕನೊಬ್ಬನ ಮೇಲೆ ಚಾಕುವಿನಿಂದ ಮಾರಣಾಂತಿಕ ದಾಳಿ ಮಾಡಿದೆ. ತಡೆಯಲು ಹೋದ ಯುವಕನ ತಾಯಿಯ ಮೇಲೂ ಈ ದುಷ್ಕರ್ಮಿಗಳು ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದ್ದಾರೆ. ಸಾಲದೆಂಬಂತೆ ಇಬ್ಬರು ಸ್ಥಳೀಯರ ಮೇಲೂ ಚಾಕುವಿನಿಂದ ಬೇಕಾಬಿಟ್ಟಿ ದಾಳಿ ನಡೆಸಿ ಗಾಯಗೊಳಿಸಿದ್ದಾರೆ. ಹಲ್ಲೆಗೊಳಗಾದ ನಾಲ್ವರಲ್ಲಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದ್ದು, ಆತನನ್ನು ಕೊಪ್ಪಳದ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಸದ್ಯಕ್ಕೆ ಆತನ ಪರಿಸ್ಥಿತಿ ಇನ್ನೂ ಗಂಭೀರವಾದ ಕಾರಣ ಆತನನ್ನು ಹುಬ್ಬಳ್ಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಉಳಿದ ಮೂವರು ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ. ಇಷ್ಷೆಲ್ಲಾ ದೊಡ್ಡ ಗಲಾಟೆ ನಡೆದು ಪರಿಸ್ಥಿತಿ ಗಂಭೀರವಾದರೂ ಕೂಡ ನಗರ ಠಾಣಾ ಪೋಲಿಸರು ಪ್ರಕರಣ ದಾಖಲಿಸಿಕೊಳ್ಳದೆ ಹೊಂದಾಣಿಕೆ ಮಾಡುವ ಪ್ರಯತ್ನ ನಡೆಸಿದ್ದಾರೆ ಎಂಬುದು ಗಾಯಾಳುಗಳ ಸಂಬಂಧಿಕರ ಆರೋಪವಾಗಿದೆ. ಸ್ಥಳೀಯ ಪ್ರಭಾವಿ ಜನಪ್ರತಿನಿಧಿಯೊಬ್ಬರ ಒತ್ತಡಕ್ಕೆ ಮಣಿದ ಪೋಲಿಸರು ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆ ಎನ್ನಲಾಗುತ್ತಿದೆ.