ರಣಬೇಟೆ ನ್ಯೂಸ್ ಗಂಗಾವತಿ.
ತಾಲೂಕು ವ್ಯಾಪ್ತಿಯ ಪ್ರತಿ ಗ್ರಾಮದಲ್ಲಿ ಹಾಲು, ಔಷಧಿ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಅಬಕಾರಿ ನಿರೀಕ್ಷಕ ವಿಠ್ಠಲ ಪಿರಂಗಣ್ಣನ ಕೃಪಾಶೀರ್ವಾದದಿಂದ ಪ್ರತಿ ಹಳ್ಳಿ, ಪ್ರತಿ ಗಲ್ಲಿ ಗಲ್ಲಿಗಳಲ್ಲೂ ಸಟ್ಟಸರ ಹೊತ್ತಿನಲ್ಲಿಯೂ ಮದ್ಯ ದೊರೆಯುತ್ತದೆ ಎಂದರೆ ಅಕ್ರಮ ಮದ್ಯ ಮಾರಾಟದ ಅಂಧಾ ದರ್ಬಾರ್ ಹೇಗಿದೆ ಎಂಬುವುದನ್ನು ಒಮ್ಮೆ ಊಹಿಸಿಕೊಳ್ಳಿ. ರಾಷ್ಟ್ರಪಿತ ಮಹಾತ್ಮಗಾಂಧಿಯ ಮದ್ಯ ಮುಕ್ತ ಗ್ರಾಮದ ಕನಸಿಗೆ ಕೊಳ್ಳಿ ಇಟ್ಟ ಕೀರ್ತಿ ಅಬಕಾರಿ ನಿರೀಕ್ಷಕ ವಿಠ್ಠಲ್ ಪಿರಂಗಣ್ಣನಿಗೆ ಸಲ್ಲಬೇಕು.
ಗಂಗಾವತಿ ತಾಲೂಕು ವ್ಯಾಪ್ತಿಯ ಪ್ರತಿ ಗ್ರಾಮದಲ್ಲಿ 5 ರಿಂದ 6 ಅಕ್ರಮ ಮದ್ಯ ಮಾರಾಟದ ಅಡ್ಡೆಗಳಿವೆ. ಇವು ಬೆಳ್ಳಂಬೆಳಿಗ್ಗೆ ದಂಧೆ ಆರಂಭಿಸಿದರೆ ಮಧ್ಯರಾತ್ರಿಯವರೆಗೂ ಕಾರ್ಯನಿರತವಾಗಿರುತ್ತವೆ. ಪ್ರತಿ ಮನೆಯಲ್ಲೂ ಕೂಡ ಲಕ್ಷಾಂತರ ಮೌಲ್ಯದ ಅಕ್ರಮ ಮದ್ಯ ಸಂಗ್ರಹಣೆ ಇದೆ. ಯಾವುದೇ ರೀತಿಯ ಕಾನೂನಿನ ಭಯವಿಲ್ಲದೇ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಇವರೆಲ್ಲರ ಅಂಧಾ ದರ್ಬಾರಿಗೆ ಶ್ರೀರಕ್ಷೆಯಾಗಿ ಕಾಯುತ್ತಿರುವುದೇ ಅಬಕಾರಿ ನಿರೀಕ್ಷಕ ವಿಠ್ಠಲ್ ಪಿರಂಗಣ್ಣನವರ್. ಸದ್ಯಕ್ಕೆ ಮೊಹರಂ ಹಬ್ಬದ ಆಚರಣೆ ನಿಮಿತ್ಯ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಸುವ್ಯವಸ್ಥೆ, ಶಾಂತಿ ಪಾಲನೆಗಾಗಿ ಮತ್ತು ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿ ಸುರೇಶ ಬಿ.ಇಟ್ನಾಳ್ ಅವರು ಜುಲೈ 05ರ ಬೆಳಿಗ್ಗೆ 6 ಗಂಟೆಯಿಂದ ಜುಲೈ 07ರ ರಾತ್ರಿ 11 ಗಂಟೆಯವರೆಗೆ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರನ್ವಯ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಆದರೆ, ಈ ಆದೇಶಕ್ಕೆ ಅಬಕಾರಿ ನಿರೀಕ್ಷಕ ವಿಠ್ಠಲ್ ಪಿರಂಗಣ್ಣನ ವ್ಯಾಪ್ತಿಯಲ್ಲಿ ಕವಡೆ ಕಾಸಿನ ಕಿಮ್ಮತ್ತು ಇಲ್ಲ.
ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರೂ ಕೂಡ ಗಂಗಾವತಿ ತಾಲೂಕು ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲಿ ಮದ್ಯ ಮಾರಾಟ ಎಗ್ಗಿಲ್ಲದೇ ಸಾಗುತ್ತಿದೆ. ಈ ಕುರಿತಂತೆ ವಿಠ್ಠಲ್ ಪಿರಂಗಣ್ಣನವರನ್ನು ವಿಚಾರಿಸಿದರೆ ಥೇಟ್ ಅಮಾಯಕರಂತೆ “ಹೌದಾ…ಸರ್,,,,? ಎಲ್ಲೆಲ್ಲಿ ಮಾರಾಟ ಮಾಡುತ್ತಿದ್ದಾರೆ…? ಸ್ವಲ್ಪ ವಿಳಾಸ ಕೊಡಿ. ನಮ್ಮ ಸಿಬ್ಬಂದಿಯನ್ನು ಕಳುಹಿಸುತ್ತೇನೆ” ಎಂದು ಅತೀ ವಿನಯವಾಗಿ ಉತ್ತರಿಸುತ್ತಾರೆ. ನಂತರ ಸಂಬಂಧಿಸಿದ ಅಕ್ರಮ ಮದ್ಯದ ಅಂಗಡಿಗಳಿಗೆ ಮಾಹಿತಿ ನೀಡಿ ದೂರು ನೀಡಿದವರ ವಿರುದ್ಧವೇ ಮಾರಾಟಗಾರರನ್ನು ಎತ್ತಿಕಟ್ಟುತ್ತಾರೆ. ಹೀಗಾಗಿ ಗ್ರಾಮಗಳಲ್ಲಿ ಸಾಕಷ್ಟು ಬಡಿದಾಟ ಹಾಗೂ ಹೊಡೆದಾಟದಂತಹ ಪ್ರಕರಣಗಳು ನಡೆದಿವೆ. ಗಂಗಾವತಿ ಸಮೀಪದ ವಡ್ಡರಹಟ್ಟಿ ಕ್ಯಾಂಪ್ ಒಂದರಲ್ಲಿಯೇ 6 ಅಕ್ರಮ ಮದ್ಯ ಮಾರಾಟದ ಅಡ್ಡೆಗಳಿವೆ. ಒಬ್ಬನದ್ದೇ ಎರಡು ಅಡ್ಡೆಗಳಿವೆ. ಗ್ರಾಮ ಪ್ರವೇಶದ ತಲಬಾಗಿಲಿಗೆ ಎಣ್ಣೆ ಅಂಗಡಿಯನ್ನು ತೆರೆದುಕೊಂಡು ಕುಳಿತಿರುವ ಈತ ಮನೆಯಲ್ಲಿಯೂ ಕೂಡ ಮಾರಾಟ ಮಾಡುತ್ತಾನೆ. ಈ ಗ್ರಾಮದಲ್ಲಿ ಕಲ್ಲುಬಂಡೆಯಂತಿದ್ದ ಹದಿಹರೆಯದ ಯುವಕರು ಈತನ ಎಣ್ಣೆ ಏಟಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಈ ಗ್ರಾಮ ವ್ಯಾಪ್ತಿಯಲ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶ್ರಮಿಕ ವರ್ಗದವರಾದ ರೈತರು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಹಗಲೆಲ್ಲ ದುಡಿದು ರಾತ್ರಿಯಲ್ಲ ಕುಡಿದು ಈತನ ಖಜಾನೆ ತುಂಬಿಸುತ್ತಿದ್ದಾರೆ. ಈ ಬಗ್ಗೆ ವಿಠ್ಠಲ್ ಪಿರಂಗಣ್ಣವರಿಗೆ ಮೌಖಿಕವಾಗಿ ದೂರು ನೀಡಿ ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ಇಂತಿಂತವರು ನಿಮ್ಮ ಬಗ್ಗೆ ದೂರು ನೀಡಿದ್ದಾರೆ. ಅವರ ಬಾಯಿ ಮುಚ್ಚಿಸಿ ಎಂದು ದಂಧೆಕೋರರಿಗೆ ಮಾಹಿತಿ ರವಾನಿಸಿ ಪಿರಂಗಣ್ಣ ಕೈತೊಳೆದುಕೊಂಡಿದ್ದಾರೆ. ಇನ್ನು ಶರಣಬಸವೇಶ್ವರ ಕ್ಯಾಂಪ್, ಹೇರೂರು, ಕೆಸರಹಟ್ಟಿ, ಆರ್ಹಾಳ, ಜಂತಕಲ್, ವಿರುಪಾಪುರನಂತಹ ಗ್ರಾಮಗಳಲ್ಲಿ ಎಣ್ಣೆ ಹಾವಳಿ ಮಿತಿಮೀರಿದೆ. ಇದೆಲ್ಲದರ ಬಗ್ಗೆ ಪಿರಂಗಣ್ಣನವರ ಗಮನ ಸೆಳೆದರೆ ಮತ್ತೆ ಅದೇ ಅಮಾಯಕರಂತೆ “ಏನ್ ಮಾಡೋದು ಸಾರ್,,,ಸರಕಾರ ನಮಗೆ ಟಾರ್ಗೆಟ್ ನೀಡಿದೆ. ಅದನ್ನ ನಾವ್ ರೀಚ್ ಮಾಡಲೇಬೇಕು” ಎಂದು ಸರಕಾರದ ಖರ್ಚಿಗೆ ತಾನೇ ಹಣ ಸಂಗ್ರಹಿಸಿ ನೀಡುತ್ತಿದ್ದಾನೇನೋ ಎಂಬಂತೆ ಮಾತನಾಡುತ್ತಾರೆ.
ಒಟ್ಟಿನಲ್ಲಿ ತಾಲೂಕಿನಾದ್ಯಂತ ಓಸಿ, ಇಸ್ಪೇಟ್, ಇನ್ನಿತರ ಅಕ್ರಮ ಅನೈತಿಕ ದಂಧೆಗಳಿಂದಾಗಿ ಯುವಕರು ಮತ್ತು ಅವರ ಕುಟುಂಬ ಆರ್ಥಿಕವಾಗಿ ಹಡಾಲೆದ್ದು ಹೋಗಿರಬಹುದು. ಆದರೆ ಈ ಅಕ್ರಮ ಮದ್ಯ ಮಾರಾಟದಿಂದಾಗಿ ಹದಿಹರೆಯದ ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದ್ಯಾವುದೂ ವಿಠ್ಠಲ ಪಿರಂಗಣ್ಣವರಿಗೆ ಸಂಬಂಧವಿಲ್ಲ. ಆತನದ್ದು ಏನಿದ್ದರೂ ಸರಕಾರಕ್ಕೆ ರೆವಿನ್ಯೂ ನೀಡುವುದು ಮತ್ತು ತನ್ನ ರೆವಿನ್ಯೂ ಹೆಚ್ಚಿಸಿಕೊಳ್ಳುವುದಷ್ಟೇ ಮುಖ್ಯ. ಇಂತಹ ಅಧಿಕಾರಿಗಳಿಂದಾಗಿ ಗ್ರಾಮಗಳ ಸ್ವಾಸ್ಥ್ಯ ಎಗ್ಗುಟ್ಟಿ ಹೋಗುತ್ತಿದೆ. ಹದಿಹರೆಯದ ಯುವಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಗಾಂಧಿ ಕಂಡ ಮದ್ಯಮುಕ್ತ ಗ್ರಾಮದ ಕನಸು ಕನಸಾಗಿ ಉಳಿದಿದೆ.