ರಣಬೇಟೆ ನ್ಯೂಸ್ ಕೊಪ್ಪಳ .ಜು.08: ಸಮೀಪದ ಭಾಗ್ಯನಗರ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ವೇಳೆ ಸುರೇಶ ಬಬಲಾದ ಎಂಬ ಬಕಾಸುರ ಕೋಟ್ಯಂತರ ರೂಪಾಯಿ ಅವ್ಯವಹಾರ ಮಾಡಿದ್ದಾನೆ. ಈ ಕುರಿತಂತೆ ಆತನ ಮೇಲೆ ಸಾಕಷ್ಟು ಆರೋಪಗಳಿವೆ. ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕಾದ ರಾಜ್ಯ ಸರಕಾರವು ಈತನ ಲೂಟಿ ಕಾರ್ಯವನ್ನು ಮೆಚ್ಚಿ ಮುಂಬಡ್ತಿ ನೀಡಿ ಸದ್ಯಕ್ಕೆ ಕೊಪ್ಪಳ ನಗರಸಭೆಗೆ ಪೌರಾಯುಕ್ತರನ್ನಾಗಿ ನೇಮಕ ಮಾಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸುರೇಶ ಬಬಲಾದ ಹಾಗೂ ಭಾಗ್ಯನಗರ ಪಟ್ಟಣ ಪಂಚಾಯಿತಿಯ ಲೆಕ್ಕ ಸಹಾಯಕ ಮತ್ತು ಕರವಸೂಲಿಗಾರರಾದ ಕನಕಪ್ಪ ಚಲವಾದಿ ಮತ್ತು ಹೇಮಪ್ಪ ಅಡವಳ್ಳಿ ಎಂಬ ಮೂವರು ಮಹಾನುಭಾವರು ಸೇರಿ ಸಾಕಷ್ಟು ಅಂದಾದುಂದಿಯನ್ನು ಮಾಡಿ ಲೂಟಿ ಮಾಡಿದ್ದಾರೆ. ವಸೂಲಾತಿ ಮತ್ತು ಆಕ್ಷೇಪಣೆ ಮೊತ್ತವನ್ನು ಸರಕಾರಕ್ಕೆ ಜಮಾ ತಿರುವಳಿ ಕ್ರಮಕ್ಕಾಗಿ ಕರ್ನಾಟಕ ಪುರಸಭೆಗಳ ಅಧಿನಿಯಮ 1964ರ ನಿಯಮ 295 (1) ಮತ್ತು (3) ಹಾಗೂ 296 ಉಪಪ್ರಕರಣ ಕಲಂ (1), (2) ಮತ್ತು (3) ಮತ್ತು 297 ಉಪಪ್ರಕರಣ ನಿಯಮಗಳನ್ನು ಉಲ್ಲಂಘನೆ ಮಾಡಿ ರೂ.1,31,14,883/- (ಒಂದು ಕೋಟಿ ಮೂವತ್ತೊಂದು ಲಕ್ಷ ಹದಿನಾಲ್ಕು ಸಾವಿರ ಎಂಟು ನೂರು ಎಂಬತ್ತ್ಮೂರು ರೂಪಾಯಿ) ಮೊತ್ತವನ್ನು ತಿರುವಳಿ ಮಾಡದೇ ಕರ್ತವ್ಯಲೋಪ ಎಸಗಿರುವ ಆರೋಪ ಇವರ ಮೇಲಿದೆ.

ಇವರ ವಿರುದ್ಧ ಇರುವ ದೂರುಗಳು: ಕೊಪ್ಪಳ ತಾಲೂಕಿಗೆ ಒಳಪಡುವ ಭಾಗ್ಯನಗರ ಪಟ್ಟಣ ಪಂಚಾಯಿತಿಯ ವಸೂಲಾತಿ ಮತ್ತು ಆಕ್ಷೇಪಣೆ ಮೊತ್ತವು ಕರ್ನಾಟಕ ಪುರಸಭೆಯ ಅಧಿನಿಯಮ 1964ರ ನಿಯಮ 289 (1) ಹಾಗೂ 293ರಂತೆ ಲೆಕ್ಕಪರಿಶೋಧನೆಯ ವರದಿಯಲ್ಲಿ ಭಾರೀ ಪ್ರಮಾಣದ ಕಂಡಿಕೆಗಳು ಬಾಕಿಯಿರುವುದು ಕಂಡುಬಂದಿದೆ. 2015-16ರಿಂದ 2023-24ನೇ ಸಾಲಿನವರೆಗೆ ಅಡಿಟ್ ವರದಿಯಲ್ಲಿನ ಆಕ್ಷೇಪಣೆ ಮತ್ತು ವಸೂಲಾತಿ ಕಂಡಿಕೆಗಳು ಮುಂದುವರೆದಿದ್ದು ಇದು ಗಂಭೀರವಾದ ಕರ್ತವ್ಯಲೋಪವಾಗಿದೆ. 2015-16ರಲ್ಲಿ ಆಕ್ಷೇಪಣೆ ಕಂಡಿಕೆ ಮೊತ್ತ ರೂ.2,83,198/-ಗಳ ವಸೂಲಾತಿ ಕಂಡಿಕೆಯಲ್ಲಿ ಸೊನ್ನೆ ವಸಲಾತಿ ಮೊತ್ತ ಕೂಡ ಸೊನ್ನೆಯಾಗಿರುತ್ತದೆ. ಈ ರೀತಿ ಕರ್ನಾಟಕ ಪುರಸಭೆ ಅಧಿನಿಯಮ 1964ರ ನಿಯಮ 296ರ ಪ್ರಕರಣದಂತೆ ಅಥವಾ ನಿರ್ಲಕ್ಷ್ಯತೆಯಿಂದ ಅಥವಾ ದುರ್ನಡತೆಯಿಂದ ಉಂಟಾದ ಕಾನೂನುಬಾಹೀರ ಸಂದಾಯ ಅಥವಾ ನಷ್ಟಕ್ಕೆ (ಪೌರಾಡಳಿತ, ನಿರ್ದೇಶಕನು) ಅಧಿಬಾರ ಅಥವಾ ಹೊಣೆ ಹೋರಿಸತಕ್ಕದ್ದು. ಹೀಗೆ ಸಾಕಷ್ಟು ಅವ್ಯವಹಾರದ ಆರೋಪಗಳು ಈತನ ಮೇಲಿದೆ.

ಈ ಪ್ರಕರಣಗಳ ಬಗ್ಗೆ ಸಂಬಂಧಿಸಿದಂತೆ ಎಲ್ಲಾ ಅಂಶಗಳನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ ಬಬಲಾದ ಲೆಕ್ಕ ಸಹಾಯಕ ಕನಕಪ್ಪ ಚಲುವಾದಿ, ಕರವಸೂಲಿಗಾರ ಹೇಮಪ್ಪ ಅಡವಳ್ಳಿಯವರು ವಸೂಲಾತಿ ಮತ್ತು ಆಕ್ಷೇಪಣಾ ಮೊತ್ತವನ್ನು ಸರಕಾರಕ್ಕೆ ಜಮಾ ತಿರುವಳಿ ಕ್ರಮಕ್ಕಾಗಿ ಕರ್ನಾಟಕ ಪುರಸಭೆಗಳ ಅಧಿನಿಯಮ 1964ರ ನಿಯಮ 295 (1) ಮತ್ತು (3) ಹಾಗೂ 296 ಉಪಪ್ರಕರಣ ಕಲಂ (1), (2) ಮತ್ತು (3) ಮತ್ತು 297 ಉಪಪ್ರಕರಣ ನಿಯಮಗಳನ್ನು ಉಲ್ಲಂಘನೆ ಮಾಡಿ ರೂ.1,31,14,883/- (ಒಂದು ಕೋಟಿ ಮೂವತ್ತೊಂದು ಲಕ್ಷ ಹದಿನಾಲ್ಕು ಸಾವಿರ ಎಂಟು ನೂರು ಎಂಬತ್ತ್ಮೂರು ರೂಪಾಯಿ) ಮೊತ್ತವನ್ನು ತಿರುವಳಿ ಮಾಡದೇ ಕರ್ತವ್ಯಲೋಪ ಎಸಗಿರುವ ಆರೋಪ ಇವರ ಮೇಲಿದೆ. ಇಷ್ಟೆಲ್ಲಾ ಆರೋಪಗಳು ಇದ್ದರೂ ಕೂಡ ಸುರೇಶ ಬಬಲಾದ ತನ್ನ ಪ್ರಭಾವ ಬಳಸಿ ಮುಂಬಡ್ತಿ ಪಡೆದು ಸದ್ಯಕ್ಕೆ ಕೊಪ್ಪಳ ನಗರಸಭೆಯ ಪೌರಾಯುಕ್ತರಾಗಿ ನೇಮಕಗೊಂಡಿದ್ದಾನೆ.

ಮೊದಲೇ ಸಾಕಷ್ಟು ಅವ್ಯವಹಾರದಿಂದಾಗಿ ಅಭಿವೃದ್ಧಿ ಕುಂಠಿತಗೊಂಡಿರುವ ಕೊಪ್ಪಳ ನಗರಕ್ಕೆ ಈತನನ್ನು ಪೌರಾಯುಕ್ತನನ್ನಾಗಿ ನೇಮಿಸಿದ್ದು ಕಳ್ಳನ ಕೈಯಲ್ಲಿ ತಿಜೋರಿ ಕೀಲಿ ಕೊಟ್ಟಂತಾಗಿದೆ. ಮತ್ತೊಮ್ಮೆ ಮಟಸ್ತಾಗಿ ಉಣ್ಣಲು ಈತನಿಗೆ ಚಾಪಿ ಹಾಸಿ ಕೊಟ್ಟಂತಾಗಿದೆ. ಕೋಟಿ ಕೋಟಿ ಲೂಟಿ ಮಾಡುವಲ್ಲಿ ಪಳಗಿರುವ ಈತನ ಹೊಟ್ಟೆ ತುಂಬಿಸಲು ಈ ಬಕಾಸುರನ ಹೊಟ್ಟೆ ತುಂಬಿಸಲು ನಗರಸಭೆ ಎಂಬ ಹುಲ್ಲುಗಾವಲಿಗೆ ಬಿಟ್ಟಂತಾಗಿದೆ. ಇನ್ನಾದರೂ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಸಂಸದ ರಾಜಶೇಖರ್ ಹಿಟ್ನಾಳ್ ಹಾಗೂ ಜಿಲ್ಲಾಧಿಕಾರಿಗಳು ಈತನ ಪೂರ್ವಾಪರವನ್ನು ವಿಚಾರಿಸಬೇಕು. ಈ ಹಿಂದೆ ಆತನ ಮೇಲಿರುವ ಪ್ರಕರಣಗಳ ತನಿಖೆ ನಡೆಸಿ ಈತನನ್ನು ಅಮಾನತ್ತಿನಲ್ಲಿ ಇಡಬೇಕು ಎಂಬುವುದು ದೂರುದಾರರಾದ ಮುತ್ತು ದೋಡ್ಮನೆ ಅವರ ಒತ್ತಾಯವಾಗಿದೆ.