ಜಿಲ್ಲೆಯಾದ್ಯಂತ ಮತ್ತೆ ಆರಂಭವಾಗಿದೆ ಪಡಿತರ ಅಕ್ಕಿ ಕಳ್ಳರ ಅಬ್ಬರ

ಹೊಸ ಮುಖವಾಡ ತೊಟ್ಟು ಮತ್ತೆ ದಂಧೆಗಿಳಿದ ಹಳೆಯ ದಂಧೆಕೋರರು

ರಣಬೇಟೆ ನ್ಯೂಸ್ ಕೊಪ್ಪಳ.ಜು.15: ಜಿಲ್ಲೆಯಾದ್ಯಂತ ಪಡಿತರ ದಂಧೆಕೋರರ ಹಾವಳಿ ಮಿತಿಮೀರಿದ್ದು, ಯಾರ ಭಯವೂ ಇಲ್ಲದೇ ರಾಜರೋಷವಾಗಿ ಅಕ್ಕಿ ಸಂಗ್ರಹಿಸಿ ವಾಹನಗಳಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಆಹಾರ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಕ್ರಮ ಕೈಗೊಳ್ಳದೇ ಬೇಜವಾಬ್ದಾರಿ ವರ್ತನೆ ತೋರುವ ಮೂಲಕ ದಂಧೆಕೋರರಿಗೆ ನೇರವಾಗಿಯೇ ಸಹಕಾರ ಮಾಡುತ್ತಿದ್ದಾರೆ.
ಕಳೆದ 5 ವರ್ಷಗಳ ಹಿಂದೆ ಕೊಪ್ಪಳ ಜಿಲ್ಲೆಯಲ್ಲಿ ಪಡಿತರ ಅಕ್ಕಿ ದಂಧೆಕೋರರಿಗೆ ಸುವರ್ಣ ಯುಗವಾಗಿತ್ತು. ಜಿಲ್ಲೆಯ ತಾಲೂಕಿಗೆ ಒಬ್ಬರಂತೆ ಈ ದಂಧೆಯನ್ನು ಬಹಿರಂಗವಾಗಿಯೇ ನಿಭಾಯಿಸುತ್ತಿದ್ದರು. ಆದರೆ, ಇತ್ತೀಚಿನ ಕೆಲ ವರ್ಷಗಳ ಹಿಂದೆ ದಂಧೆಕೋರರ ಪುಂಗಿ ಬಂದಾಗಿತ್ತು. ಆದರೆ, ಸಿದ್ದರಾಮಯ್ಯನವರ ನೇತೃತ್ವದ ಸರಕಾರದಲ್ಲಿ ಮತ್ತೆ ಈ ಅಡ್ಡ ಕಸುಬು ಆರಂಭವಾಗಿದ್ದು ಹೊಸ ಮುಖಗಳ ಅಬ್ಬರ ಹೆಚ್ಚಾಗಿದೆ. ಅಸಲಿ ವಿಷಯ ಏನೆಂದರೆ ಈ ಹೊಸ ಮುಖಗಳ ಹಿಂದೆ ಹಳೆಯ ಕುಳಗಳೇ ಮತ್ತೆ ದಂಧೆ ಆರಂಭಿಸಿದ್ದಾರೆ. ಇದು ಆಹಾರ ಇಲಾಖೆಯ ಎಲ್ಲಾ ಅಧಿಕಾರಿಗಳಿಗೂ ತಿಳಿದ ಸತ್ಯ. ಆದರೂ ಕೂಡ ಯಾವೊಬ್ಬ ಅಧಿಕಾರಿಯೂ ಈ ದಂಧೆಗೆ ಕಡಿವಾಣ ಹಾಕುವ ಧೈರ್ಯ ತೋರುತ್ತಿಲ್ಲ. ಯಾಕೆಂದರೆ, ಈ ಅಧಿಕಾರಿಗಳಿಗೆ ತಿಂಗಳ ಸಂಬಳ ಬರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ದಂಧೆಕೋರರು ನೀಡುವ ವಂತಿಗೆ ತಪ್ಪದೇ ಬರುತ್ತದೆ. ಹೀಗಾಗಿ ಆಹಾರ ಇಲಾಖೆಯ ಎಲ್ಲಾ ಅಧಿಕಾರಿಗಳು ತಿಂದುಂಡು ನಿರುಮ್ಮಳವಾಗಿದ್ದಾರೆ.


ಕೊಪ್ಪಳ ಜಿಲ್ಲೆಯ ಗಂಗಾವತಿ, ಕಾರಟಗಿ, ತಾವರಗೇರೆ ಪ್ರಮುಖ ಪಡಿತರ ಅಕ್ಕಿ ಸಂಗ್ರಹಣೆ ಮತ್ತು ರಪ್ತು ಕೇಂದ್ರಗಳಾಗಿದ್ದು, ಗಂಗಾವತಿಯಲ್ಲಿ ಎರಡು ಪ್ರಮುಖ ಪಡಿತರ ಅಕ್ಕಿ ಸಂಗ್ರಹಣ ಕೇಂದ್ರಗಳಾದ ಕಿಲ್ಲಾ ಏರಿಯಾ ಹಾಗೂ ಶರಣಬಸವೇಶ್ವರ ಕ್ಯಾಂಪಿನಲ್ಲಿ. ಸಾಧಿಕ್ ಮನಿಯಾರ್, ಭಾಷಾ ಮನಿಯಾರ್, ಮಹ್ಮದ್ ಮನಿಯಾರ್, ಗೌಸ್ ಚಾಟಿ, ರಾಜಭಕ್ಷಿ ಗೋನಾಳ, ಗನಿಸಾಬ್, ಮುರ್ತುಜಾ, ಗೌಸ್‍ಪೀರಾ ಎಂಬುವವರು ಅಕ್ಕಿ ಸಂಗ್ರಹಣೆಯನ್ನು ಮಾಡುತ್ತಾರೆ. ಗಂಗಾವತಿ ನಗರದ ಕಿಲ್ಲಾ ಏರಿಯಾದಲ್ಲಿ ಒಟ್ಟು ನಾಲ್ಕು ಅಕ್ಕಿ ಸಂಗ್ರಹ ಕೇಂದ್ರಗಳಿವೆ. ಇಲ್ಲಿಂದ ಕಾರಟಗಿಗೆ ಪ್ರತಿದಿನ ಕನಿಷ್ಠ 20 ರಿಂದ 30 ಟನ್ ಅಕ್ಕಿ ರಫ್ತಾಗುತ್ತದೆ. ಉಳಿದ 20 ಟನ್ ಅಕ್ಕಿ ಶರಣಬಸವೇಶ್ವರ ಕ್ಯಾಂಪ್‍ನಿಂದ ಕಾರಟಗಿಗೆ ರಫ್ತಾಗುತ್ತದೆ. ಏನಿಲ್ಲವೆನಿಂದರೂ ಗಂಗಾವತಿ ನಗರ ಒಂದರಿಂದಲೇ ಕಾರಟಗಿಗೆ ದಿನನಿತ್ಯ 50 ಟನ್ ಪಡಿತರ ಅಕ್ಕಿ ಸಾಗಟವಾಗುತ್ತದೆ.

ಕಾರಟಗಿಯಲ್ಲಿ ಕಳೆದ ಹಲವು ವರ್ಷಗಳಿಂದ ಇದೇ ದಂಧೆಯಲ್ಲಿ ಪಳಗಿ ಕೋಟ್ಯಾಂತರ ರೂಪಾಯಿ ಲೂಟಿ ಮಾಡಿ ಇತ್ತೀಚೆಗೆ ರೈಸ್ ಮಿಲ್ ಖರೀದಿಸಿರುವ ಅಕ್ಕಿ ಗಿರಣಿ ಮಾಲೀಕ ಸೇರಿದಂತೆ ಕಾಂಗ್ರೆಸ್ ಮುಖಂಡನೆಂದು ಹೇಳಿಕೊಳ್ಳುವ ಪುಡಿ ರಾಜಕಾರಣಿಯೊಬ್ಬರು ಈ ಅಕ್ರಮ ದಂಧೆಯನ್ನು ನಿಭಾಯಿಸುತ್ತಿದ್ದಾರೆ. ಗಂಗಾವತಿಯಿಂದ ಬರುವ ಪಡಿತರ ಅಕ್ಕಿಯನ್ನು ಬೂದಗುಂಪಾದ ಗೋಡೌನ್ ಒಂದರಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಇವೆಲ್ಲವನ್ನು ಅಶೋಕ್ ಲೈಲ್ಯಾಂಡ್ ಲಾರಿಗಳ ಮೂಲಕ ಸಾಗಾಟ ಮಾಡಲಾಗುತ್ತದೆ. ಈ ಎಲ್ಲಾ ಲಾರಿಗಳಿಗೆ ಚೀಲವೊಂದಕ್ಕೆ 50 ಪೈಸೆಯಂತೆ ಕಮಿಷನ್ ಪಡೆದು ಪರ್ಮಿಟ್ ಕೊಡಿಸಲು ಮಾರ್ವಾಡಿಗಳಿದ್ದಾರೆ. ಇವರು ತಾವರಗೇರಾ, ಮಂಡ್ಯ, ರಾಯಚೂರು, ಗೋವಾ, ಮಹಾರಾಷ್ಟ್ರ, ಇಲಕಲ್‍ನಂತಹ ಪ್ರಮುಖ ನಗರಗಳಿಗೆ ದರ ನಿಗದಿಪಡಿಸಿ ಸಾಗಾಣಿಕೆಗೆ ಸಹಕರಿಸುತ್ತಾರೆ. ಗಂಗಾವತಿಯಲ್ಲಿ ಕೆಲವು ವರ್ಷಗಳ ಹಿಂದೆ ಭಾರೀ ಹಾವಳಿ ಎಬ್ಬಿಸಿದ್ದ ಗೋಪಾಲ್ ಎಂಬ ದಲ್ಲಾಳಿಯೊಬ್ಬ ಇಲಕಲ್‍ನಲ್ಲಿ ತನ್ನ ಹಳೆ ದಂಧೆಯನ್ನು ಮತ್ತೆ ಆರಂಭಿಸಿದ್ದಾನೆ. ಹೀಗೆ ಹಳೆಯ ದಂಧೆಕೋರರೆಲ್ಲ ಹೊಸ ಮುಖಗಳನ್ನು ಇಟ್ಟುಕೊಂಡು ಭರ್ಜರಿಯಾಗಿ ದಂಧೆ ಆರಂಭಿಸಿದ್ದಾರೆ.


ಈ ಹಿಂದೆ ಕೊಪ್ಪಳ ಆಹಾರ ಇಲಾಖೆ ಉಪ ನಿರ್ದೇಶಕರಾಗಿದ್ದ ಮಲ್ಲಿಕಾರ್ಜುನ ಎಲ್ಲವನ್ನೂ ವ್ಯವಸ್ಥಿತವಾಗಿ ಸಂಭಾಳಿಸಿಕೊಂಡು ಹೊರಟಿದ್ದ. ಯಾವಾಗ ಆತನಿಗೆ ದಂಧೆಕೋರರಿಂದ ಆದಾಯ ಕಡಿಮೆಯಾಯಿತೋ ಆವಾಗಲೇ ಒಮ್ಮೆ ದೊಡ್ಡದೊಂದು ರೈಡ್ ಮಾಡಿದ ನಾಟಕ ಮಾಡಿ ದಂಧೆಯನ್ನು ಹಳ್ಳ ಹಿಡಿಸಿ ವರ್ಗವಾಗಿ ಹೋಗಿದ್ದ. ಈಗ ಅದೇ ಜಾಗಕ್ಕೆ ಬಂದು ಒಕ್ಕರಿಸಿರುವ ಸೋಮಶೇಖರ ಬಿರದಾರ್ ಎಂಬ ಅಧಿಕಾರಿ ಕಳೆದ ಆರು ತಿಂಗಳಿಂದ ಒಂದೇ ಒಂದು ಪ್ರಕರಣ ದಾಖಲಿಸಿಲ್ಲ. ವಿಪರ್ಯಾಸವೇನೆಂದರೆ ಕಳೆದ 2011ರಿಂದ ಇಲ್ಲಿಯವರೆಗೆ ಕೇವಲ 10 ರಿಂದ 30 ಪ್ರಕರಣಗಳು ಮಾತ್ರ ದಾಖಲಾಗಿವೆ.

ಅವು ಕೂಡ ಅಮಾಯಕ ಆಟೋ ಚಾಲಕರ ಮೇಲೆ ಹಾಗೂ ಮಂಡಾಳ ಬಟ್ಟಿಯ ಬಡ ಕೂಲಿಕಾರ್ಮಿಕರ ಮೇಲೆ ಹೊರತು ಯಾವುದೇ ಅಡ್ಡ ಕಸುಬಿಗಳ ಮೇಲೆ ಅಲ್ಲ ಎಂಬುವುದು ವಿಪರ್ಯಾಸ. ಸದ್ಯಕ್ಕೆ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಸೋಮಶೇಖರ ಬಿರಾದಾರ್ ಈ ಹಿಂದಿನ ಅಧಿಕಾರಿ ಮಲ್ಲಿಕಾರ್ಜುನ ಅವರ ಹಾದಿಯಲ್ಲಿಯೇ ಆರಾಮವಾಗಿ ಸಾಗುತ್ತಿದ್ದಾರೆ. ದಂಧೆಕೋರರಿಂದ ಸಂದಾಯವಾಗುತ್ತಿರುವ ತಿಂಗಳ ಮಾಮೂಲಿಯನ್ನು ಸಂಬಳದಂತೆ ಪಡೆಯುವುದು ರೂಢಿಸಿಕೊಂಡಿದ್ದಾರೆ. ಗಂಗಾವತಿ ನಗರದ ಆಹಾರ ನಿರೀಕ್ಷಕರಾದ ಶೇಖರಪ್ಪ, ನಾಗರತ್ನಮ್ಮ, ಶಿರಸ್ತೆದಾರ ಸುಹಾಸ್ ಕೂಡ ಪಡಿತರ ಅಕ್ಕಿ ದಂಧೆಕೋರರ ಕೈಗೊಂಬೆಯಂತಾಗಿದ್ದಾರೆ. ನೀವೊಮ್ಮೆ ಸುಹಾಸ್ ಎಂಬುವ ಪುಣ್ಯಾತ್ಮನಿಗೆ ಈ ದಂಧೆಯ ಬಗ್ಗೆ ಮಾಹಿತಿ ನೀಡಲು ಕರೆ ಮಾಡಿ ನೋಡಿ “ನಾನೊಬ್ಬನೇ ಇಲ್ಲಿ ಅಧಿಕಾರಿ ಅಲ್ಲ ಸರ್. ಬೇರೆಯವರೂ ಇದ್ದಾರೆ. ಅವರಿಗೆ ಕರೆ ಮಾಡಿ. ಇಲ್ಲದಿದ್ದರೆ 112ಗೆ ಕರೆ ಮಾಡಿ” ಎಂದು ಸಲಹೆ ನೀಡಿ ಕೈತೊಳೆದುಕೊಳ್ಳುತ್ತಾನೆ. ಸಾಲದೆಂಬಂತೆ ಆಯಾ ಏರಿಯಾದ ದಂಧೆಕೋರರಿಗೆ ಎಚ್ಚರಿಕೆ ನೀಡಿ ತಪ್ಪಿಸಿಕೊಳ್ಳುವಂತೆ ಸೂಚಿಸುತ್ತಾನೆ. ಇದು ಕೊಪ್ಪಳ ಜಿಲ್ಲೆಯ ಎಲ್ಲಾ ತಾಲೂಕುಗಳ ಆಹಾರ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಯಾಗಿದೆ. ಬಡವರ ಹೊಟ್ಟೆ ಸೇರಬೇಕಾದ ಅನ್ನ, ದಂಧೆಕೋರರ ಪಾಲಾಗುತ್ತಿದೆ. ಸದ್ಯಕ್ಕೆ ಈ ದಂಧೆಯಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ದಂಧೆಕೋರರು ಸಮಪಾಲು ಭಾಗಿದಾರರಂತೆ ಕಾರ್ಯನಿರ್ವಹಿಸುತ್ತಿದ್ದಾರೆ.

ಗ್ಯಾರಂಟಿ ಅಧ್ಯಕ್ಷ ಅಮಾಯಕ ರೆಡ್ಡಿ ಶ್ರೀನಿವಾಸರ ಗಮನಕ್ಕಿಲ್ಲವೇ…?

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಮೇಲಿಂದ ಮೇಲೆ ಅಧಿಕಾರಿಗಳ ಸಭೆ ಮಾಡುತ್ತಿದ್ದಾರೆ. ಸಾಲದೆಂಬಂತೆ ಇನ್ನು ಮುಂದೆ ನ್ಯಾಯಬೆಲೆ ಅಂಗಡಿಗಳು ತಿಂಗಳ ಪೂರ್ತಿ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಪಡಿತರ ವಿತರಿಸಬೇಕು ಎಂಬ ಫಾರ್ಮಾನು ಹೊರಡಿಸಿದ್ದಾರೆ. ಆದರೆ, ತಮ್ಮದೇ ಜಿಲ್ಲೆಯ ತಮ್ಮದೇ ಗ್ರಾಮದ ಅಕ್ಕಪಕ್ಕದ ತಾಲೂಕುಗಳಾದ ಕಾರಟಗಿ, ಗಂಗಾವತಿಯಲ್ಲಿ ತಮ್ಮದೇ ಪಕ್ಷದ ಪ್ರಮುಖ ಮುಖಂಡರುಗಳು ಅಕ್ರಮ ಪಡಿತರ ದಂಧೆ ನಡೆಸುತ್ತಿದ್ದಾರೆ ಎಂಬುವುದು ಇವರ ಗಮನಕ್ಕಿಲ್ಲವೇ…? ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಅಷ್ಟಕ್ಕೂ ಮೇಲಿಂದ ಮೇಲೆ ಸಭೆ ನಡೆಸುವ ರೆಡ್ಡಿ ಶ್ರೀನಿವಾಸ್, ಒಮ್ಮೆಯಾದರೂ ಆಹಾರ ಇಲಾಖೆ ಉಪನಿರ್ದೇಶಕ ಸೋಮಶೇಖರ ಬಿರಾದಾರ್ ಹಾಗೂ ತಾಲೂಕ ಆಹಾರ ನಿರೀಕ್ಷಕರ ಸಭೆ ಕರೆದು ಪಡಿತರ ದಂಧೆಯ ಕಡಿವಾಣದ ಬಗ್ಗೆ ಚರ್ಚಿಸಿದ್ದಾರೆಯೇ…? ಎಂಬುವುದು ಮಿಲಿಯನ್ ಡಾಲರ್ ಪ್ರಶ್ನೆ. ಈ ದಂಧೆಯಲ್ಲಿ ಎಲ್ಲರೂ ಸಹಭಾಗಗಿಗಳೇ. ಎಲ್ಲರಿಗೂ ಸಮಬಾಳು, ಸಮಪಾಲು ಎಂಬ ಸಿದ್ದಾಂತದಲ್ಲಿ ಈ ದಂಧೆಯನ್ನು ವ್ಯವಸ್ಥಿತವಾಗಿ ನಿಭಾಯಿಸಿಕೊಂಡು ಹೋಗಲಾಗುತ್ತಿದೆರ. ಈ ಕಳ್ಳರ ಸಂತೆಯಲ್ಲಿ ಅಮಾಯಕ ಆಟೋ ಚಾಲಕರು ಹಾಗೂ ಮಂಡಾಳ ಬಟ್ಟಿಯ ಮಾಲೀಕರು ಅಸಲಿ ಕಳ್ಳರಂತೆ ಬಿಂಬಿತವಾಗುತ್ತಿರುವುದು ವಿಪರ್ಯಾಸ.

error: Content is protected !!
Scroll to Top