ಪ್ರಭಾವಿಗಳ ಕೈಚಳಕಕ್ಕೆ ಮರುಳಾಯ್ತಾ ಐಜಿ ನೇತೃತ್ವದ ಪೊಲೀಸ್ ತಂಡ…?
ಕೊಪ್ಪಳ.ಆ.02: ಗಂಗಾವತಿ, ಕಾರಟಗಿ, ಕನಕಗಿರಿ, ಕುಷ್ಟಗಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪಡಿತರ ಅಕ್ಕಿಯ ಕಳ್ಳ ದಂಧೆಯ ಕುರಿತಂತೆ ನಮ್ಮ ರಣಬೇಟೆ ಪತ್ರಿಕೆಯು “ಜಿಲ್ಲೆಯಾದ್ಯಂತ ಮತ್ತೆ ಆರಂಭವಾಗಿದೆ ಪಡಿತರ ಅಕ್ಕಿ ಕಳ್ಳರ ಅಬ್ಬರ”. “ಹೊಸ ಮುಖವಾಡ ತೊಟ್ಟು ಮತ್ತೆ ದಂಧೆಗಿಳಿದ ಹಳೆಯ ದಂಧೆಕೋರರು” ಎಂಬ ತಲೆಬರಹದಡಿ ವಿಸ್ತೃತ ಸುದ್ದಿಯೊಂದನ್ನು ಜುಲೈ 15ರಂದು ಪ್ರಕಟಿಸಿತ್ತು. ಸದ್ಯಕ್ಕೆ ಸುದ್ದಿ ಜಿಲ್ಲೆಯಾದ್ಯಂತ ಸಂಚಲನವನ್ನು ಸೃಷ್ಟಿಸಿತ್ತು. ಸಾಲದೆಂಬಂತೆ ಆಹಾರ ಇಲಾಖೆಯ ಅಧಿಕಾರಿಗಳನ್ನು ಬಡಿದೆಬ್ಬಿಸಿತ್ತು. ಆದರೆ ಇತ್ತೀಚೆಗೆ ಕಳೆದೆರಡು ದಿನಗಳ ಹಿಂದೆ ಕಾರಟಗಿ ಪಟ್ಟಣ ಬಳಿಯ ರೈಸ್ ಮಿಲ್ಲೊಂದರ ಮೇಲೆ ನಡೆದಿದೆ ಎನ್ನಲಾದ ಬಳ್ಳಾರಿ ಐಜಿ ತಂಡದ ದಾಳಿಯು ಹಲವು ಸಂಶಯಗಳನ್ನು ಮೂಡಿಸಿದೆ. ಈ ಪ್ರಕರಣದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ಆಹಾರ ಇಲಾಖೆಯ ಹಿರಿಯ, ಕಿರಿಯ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕೂ ನಡೆದದ್ದೇನು..?: ಒಂದು ಮಾಹಿತಿಯ ಪ್ರಕಾರ ನಮ್ಮ ರಣಬೇಟೆ ಪತ್ರಿಕೆಯು ಪ್ರಕಟಿಸಿದ ವರದಿಯ ಮಾಹಿಯನ್ನಾಧರಿಸಿ ಬಳ್ಳಾರಿಯ ಐಜಿ ನೇತೃತ್ವದಲ್ಲಿ ಪೊಲೀಸ್ ತಂಡವೊಂದು, ಸ್ಥಳೀಯ ಪೊಲೀಸ್ ರಿಗಾಗಲಿ, ಆಹಾರ ಇಲಾಖೆಯ ಅಧಿಕಾರಿಗಳಿಗಾಗಲಿ ಯಾವುದೇ ಮಾಹಿತಿಯನ್ನು ನೀಡದೆ ಕಾರಟಗಿ ಹೊರವಲಯದ ಬೂದಗುಂಪಾ ರಸ್ತೆಯ ವ್ಹೇ ಬ್ರಿಜ್ ಸಮೀಪದ ರೈಸ್ ಮಿಲ್ ಒಂದರ ಮೇಲೆ ದಾಳಿ ಮಾಡಿ 70 ರಿಂದ 80 ಟನ್ ಪಡಿತರ ಅಕ್ಕಿ ಹಾಗೂ 6 ಲಕ್ಷ ಚಿಲ್ಲರೆ ನಗದು ಮೊತ್ತವನ್ನು ವಶಪಡಿಸಿಕೊಂಡ ಬಗ್ಗೆ ಪಡಿತರ ಕಳ್ಳ ಸಾಗಣೆ ದಂಧೆಕೋರರಲ್ಲಿ ಭರ್ಜರಿ ಚರ್ಚೆಯಾಗುತ್ತಿದೆ. ವಿಪರ್ಯಾಸವೆಂದರೆ ಈ ಬಗ್ಗೆ ಆಹಾರ ಇಲಾಖೆಯ ಉಪ ನಿರ್ದೇಶಕರಿಗಾಗಲಿ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ಈ ಬಗ್ಗೆ ಕಾರಟಗಿ, ಗಂಗಾವತಿ ಪೋಲೀಸರೂ ಬಾಯ್ಬಿಡುತ್ತಿಲ್ಲ. ಆದರೆ ದಾಳಿ ನಡೆದಿದ್ದಂತೂ ಸತ್ಯ ಎನ್ನುವುದು ಅಧಿಕಾರಿಗಳ ಖಚಿತ ನುಡಿ.
ಪ್ರಭಾವಿಗಳ ಒತ್ತಡಕ್ಕೆ ಮಣಿದರಾ ಅಧಿಕಾರಿಗಳು..?
ನಂಬಲರ್ಹ ಮೂಲಗಳ ಮಾಹಿತಿ ಪ್ರಕಾರ ಐಜಿ ತಂಡದಿಂದ ದಾಳಿಗೊಳಗಾದ ರೈಸ್ ಮಿಲ್ ನ ಮಾಲೀಕ ಕಾಂಗ್ರೆಸ್ ನ ಆಯಕಟ್ಟಿನ ಹುದ್ದೆಯಲ್ಲಿರುವ ಪ್ರಭಾವಿ ಮುಖಂಡನದ್ದು. ಈ ಮಿಲ್ ನ ಉಸ್ತುವಾರಿಯನ್ನು ಯರಡೋಣಾ ಗ್ರಾಮದ ಪ್ರಮುಖ ವೀರನೊಬ್ಬ ನೋಡಿಕೊಳ್ಳುತ್ತಾನೆ. ಪಡಿತರ ಅಕ್ರಮ ದಂಧೆಯು ಈತನ ನೆರಳಿನಲ್ಲೇ ನಡೆಯುತ್ತದೆ ಎನ್ನಲಾಗುತ್ತಿದೆ. ಕಾರಟಗಿಯ ಇನ್ನೊಬ್ಬ ಪಡಿತರ ದಂಧೆಕೋರರನಿಗೆ ಆತನ ತಮ್ಮನೇ ಉಸ್ತುವಾರಿ. ಐಜಿ ತಂಡದ ದಾಳಿಯ ನಂತರ ಈತ ಎದೆನೋವಿನಿಂದ ಮಂಜಿನಂತಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾನೆ ಎಂಬ ಮಾಹಿತಿಯಿದೆ. ಸದ್ಯಕ್ಕೆ ಈ ದಾಳಿಯ ನಂತರದ ವಿದ್ಯಮಾನಗಳು ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ. ಯಾಕೆಂದರೆ ಆಹಾರ ಇಲಾಖೆಯ ಉಪ ನಿರ್ದೇಶಕರಿಗಾಗಲಿ ಸ್ಥಳೀಯ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ ಗುಟ್ಟಾಗಿಟ್ಟಿದ್ದಲ್ಲದೇ, ಈ ದಾಳಿಯ ಕುರಿತಂತೆ ಒಂದೇ ಒಂದು ಪ್ರಕರಣ ದಾಖಲಿಸದೆ ಐಜಿ ನೇತೃತ್ವದ ಪೊಲೀಸ್ ತಂಡ ಏನು ಸಾಧಸಲು ಹೊರಟಿದೆ ಎಂಬುದು ಎಂಥಹ ಶತಮೂರ್ಖರಿಗಾಗಲಿ ಅರ್ಥವಾಗುತ್ತದೆ. ಸಣ್ಣಪುಟ್ಟ ದಂಧೆಕೋರರನ್ನು ಹಿಡಿದು ಪ್ರಕರಣ ದಾಖಲಿಸಿ ಈ ಅಕ್ರಮ ಪಡಿತರ ದಂಧೆಗೆ ಕಡಿವಾಣ ಹಾಕುವ ಪ್ರಯತ್ನ ನಡೆದಿದೆ ಎಂದು ಬಿಂಬಿಸಿಕೊಳ್ಳುವ ಆಹಾರ ಇಲಾಖೆಯ ಅಧಿಕಾರಿಗಳಿಂದ ನ್ಯಾಯ ದೊರೆಯುವುದಿಲ್ಲ ಎಂದು ಮೇಲಾಧಿಕಾರಿಗಳಿಗೆ ದೂರು ನೀಡಿದರೆ, ಇವರೂ ಕೂಡ ಅವರ ಅಪ್ಪನಂತಹವರು ಎಂಬುದು ಈ ಪ್ರಕರಣದಿಂದ ಸಾಬೀತಾದಂತಾಗಿದೆ.
ನಿರೀಕ್ಷಿಸಿ ಮುಂದಿನ ವರದಿಯಲ್ಲಿ
ಅಮಾಯಕನಲ್ಲ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ರೆಡ್ಡಿ ಶ್ರೀನಿವಾಸ.
ಪಡಿತರ ದಂಧೆ ನಿಮ್ದು, ಮರಳು ದಂಧೆ ನಂದು..!
ಪ್ರಭಾವಿ ಮುಖಂಡರ ಕಳ್ಳ ಕಸುಬುಗಳ ಸಂಪೂರ್ಣ ವಿವರ.