ನಗರದ ನಡು ಬೀದಿಯಲ್ಲೇ ಯುವಕನೊಬ್ಬನ ಬರ್ಬರ ಕೊಲೆ..!

ಪ್ರೇಮಪಾಶಕ್ಕೊಳಗಾದ ಯುವಕರ ನಡುವಿನ ದ್ವೇಷ ಕೊಲೆಯಲ್ಲಿ ಅಂತ್ಯ.

ರಣಬೇಟೆ ನ್ಯೂಸ್‌ ಕೊಪ್ಪಳ .ಆ.04: ಯುವತಿಯೊಬ್ಬಳೊಂದಿಗಿನ ಪ್ರೇಮಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರ ನಡುವಿನ ದ್ವೇಷ ಭೀಕರ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಭಾನುವಾರ ರಾತ್ರಿ ನಗರದಲ್ಲಿ ನಡೆದಿದೆ. ನಗರದ 3ನೇ ವಾರ್ಡಿನ ನಿರ್ಮಿತಿ ಕೇಂದ್ರದ ಬಳಿಯ ಮಸೀದಿ ಎದುರು 26 ವರ್ಷದ ಗವಿಸಿದ್ದಪ್ಪ ನಾಯಕ ಎಂಬ ಯುವಕನನ್ನು ಸಾದಿಕ್ ಎಂಬ ಯುವಕ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನಂತರ ನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಈ ಪ್ರಕರಣದಲ್ಲಿ ಸಹಕಾರ ನೀಡಿದ ಸಾದಿಕ್ ಸ್ನೇಹಿತರು ತಲೆ ಮರೆಸಿಕೊಂಡಿದ್ದಾರೆ.


ಭಾನುವಾರ ರಾತ್ರಿ ಘಟನೆ ನಡೆದಿದ್ದು, ಕೊಲೆಯಾದ ಸ್ಥಳದಲ್ಲಿ ರಕ್ತ ಮಡುಗಟ್ಟಿದೆ. ಮೃತ ದೇಹದ ಬಳಿ ಮಚ್ಚು, ಲಾಂಗುಗಳು ದೊರೆತಿವೆ. ಕೊಲೆಯಾದ ಯುವಕ ಗವಿಸಿದ್ದಪ್ಪ ಹಲವು ತಿಂಗಳುಗಳಿಂದ ಮುಸ್ಲಿಂ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಮುಸ್ಲಿಂ ಯುವತಿಯೊಂದಿಗೆ ಓಡಿ ಹೋಗಿ ಮದುವೆ ಆಗುವ ಪ್ರಯತ್ನವನ್ನೂ ಮಾಡಿದ್ದ. ಆದರೆ ಮನೆಯಲ್ಲಿ ಹಿರಿಯರು ಗವಿಸಿದ್ದಪ್ಪನಿಗೆ ಬುದ್ದಿ ಹೇಳಿ ಹುಡುಗಿ ಅಪ್ರಾಪ್ತಳಿದ್ದು ಮದುವೆಯಾದರೆ ಜೈಲಿಗೆ ಹೋಗಬೇಕಾಗುತ್ತದೆ ಎಂದು ತಿಳಿ ಹೇಳಿ ಪ್ರಕರಣವನ್ನು ಅಲ್ಲಿಗೆ ತಿಳಿಗೊಳಿಸಿದ್ದರು. ಆದರೂ ಗವಿಸಿದ್ದಪ್ಪ ಯುವತಿಯೊಂದಿಗೆ ಪ್ರೀತಿಯನ್ನು ಮುಂದುವರೆಸಿದ್ದ ಎನ್ನಲಾಗುತ್ತಿದೆ. ಇದೇ ಯುವತಿಯನ್ನು ಸಾದಿಕ್ ಎಂಬ ಮುಸ್ಲಿಂ ಯುವಕ ಕೂಡಾ ಪ್ರೀತಿಸುತ್ತಿದ್ದ. ಈ ವಿಷಯವಾಗಿ ಇಬ್ಬರು ಯುವಕರ ನಡುವೆ ಹಲವು ದಿನಗಳಿಂದ ಮುಸುಕಿನ ಗುದ್ದಾಟ ನಡೆದಿತ್ತು. ವಿಕೋಪಕ್ಕೆ ಹೋದ ಈ ಇಬ್ಬರ ಜಗಳ ಈಗ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.
ಭಾನುವಾರ ರಾತ್ರಿ ಬೈಕ್ ನಲ್ಲಿ ಬರುತ್ತಿದ್ದ ಗವಿಸಿದ್ದಪ್ಪನ್ನು ಸಾದಿಕ್ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಈತನಿಗೆ ನಾಲ್ಕೈದು ಜನ ಯುವಕರು ಸಹಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. 
ಪೊಲೀಸರ ತನಿಖೆಯ ನಂತರವಷ್ಟೇ ಖಚಿತ ಮಾಹಿತಿ ಹೊರ ಬೀಳಬೇಕಿದೆ.
ನಗರದ 3ನೇ ವಾರ್ಡಿನ ನಿರ್ಮಿತಿ ಕೇಂದ್ರದ ಬಳಿಯ ಮಸೀದಿ ಎದುರಿನ ಜನನಿಬೀಡ ಪ್ರದೇಶದಲ್ಲಿ ಬರ್ಬರ ಕೊಲೆ ನಡೆದದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕೊಲೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಸ್‌ಪಿ ಡಾ.ರಾಮ ಅರಸಿದ್ದಿ ಪ್ರಕರಣದ ಕುರಿತು ಮಾಹಿತಿ ಪಡೆದರು. ಕೊಲೆಗೆ ನಿಖರ ಕಾರಣ ಇನ್ನು ತಿಳಿದಿಲ್ಲ. ಆದರೆ ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿಡಿಗೊಡಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

error: Content is protected !!
Scroll to Top