ರಣಬೇಟೆ ನ್ಯೂಸ್ ಕೊಪ್ಪಳ ಅ.04: ನಕಲಿ ಪತ್ರಕರ್ತರ ಹಾವಳಿಯಿಂದ ನೈಜ ಪತ್ರಕರ್ತರನ್ನೂ ಕೂಡ ಜನ ಅನುಮಾನದಿಂದ ನೋಡುವಂತಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಬೇಸರ ವ್ಯಕ್ತಪಡಿಸಿದ್ದಾರೆ. ಗಂಗಾವತಿ ನಗರದ ಮಂಥನ ಸಭಾಂಗಣದಲ್ಲಿ ಭಾನುವಾರದಂದು ನಡೆದ ಪತ್ರಿಕಾ ದಿನಾಚರಣೆ ಹಾಗೂ ಗ್ರಂಥಾಲಯದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ್ದ ಅವರು ಈ ಮೇಲಿನಂತೆ ಬೇಸರ ವ್ಯಕ್ತಪಡಿಸಿದ್ದರು. ಆದರೆ ನಕಲಿ ಪತ್ರಕರ್ತರು ಯಾರು…?. ನೈಜ ಪತ್ರಕರ್ತರು ಯಾರು ಎಂದು ಬಿಡಿಸಿ ಹೇಳಬೇಕಾಗಿತ್ತು. ಆದರೆ ಆ ಕೆಲಸ ಮಾಡಲಿಲ್ಲ. ರಾಜ್ಯಮಟ್ಟದ ದಿನ ಪತ್ರಿಕೆ ಹಾಗೂ ಟಿವಿ ಚಾನಲ್ ಗಳಲ್ಲಿ ಬಿಡಿ ಸುದ್ದಿಗಾರರಾಗಿ ಬದುಕಿಗೆ ಆರ್ಥಿಕ ಭದ್ರತೆ ಇಲ್ಲದೆ ಕೆಲಸ ಮಾಡುತ್ತಿರುವವರು ನೈಜ ಪತ್ರಕರ್ತರಾ…?. ಕೊರಳಿಗೆ ಐಡಿ ಕಾರ್ಡ್ ನೇತಾಕಿಕೊಂಡು ಕೈಯಲ್ಲೊಂದು ಲೋಗೋ ಹಿಡಿದು ಮದುವೆ ಮನೆಯಲ್ಲಿ ಗಂಡಿನ ಕಡೆಯವರಂತೆ ಓಡಾಡುವರಾ..?. ಅಷ್ಟಕ್ಕೂ ನೈಜ ಪತ್ರಕರ್ತರು ಎಂದರೆ ಯಾರು…?
ರಾಜ್ಯಮಟ್ಟದ ಕನ್ನಡ ದಿನಪತ್ರಿಕೆಗಳ ಭಾಗಶಃ ವರದಿಗಾರರಾದರೂ ಗ್ರಾಮೀಣ ಭಾಗದ ಜನ ಸಮಸ್ಯೆ, ರೈತರ ಸಮಸ್ಯೆ, ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರದ ವರದಿಯನ್ನಾದರೂ ಮಾಡುತ್ತಾರೆ. ಪ್ರತಿದಿನವೂ ಸುದ್ದಿಗಾಗಿ ಅರೆ ಹೊಟ್ಟೆಯಲ್ಲೇ ಅಲೆಯುತ್ತಾರೆ. ಆದರೆ ಟಿವಿ ಮಾಧ್ಯಮದ ವರದಿಗಾರರು ಲೋಗೋ ಹಿಡಿದು ಶೋ ಕೊಟ್ಟದ್ದು ಬಿಟ್ಟರೆ ಸಮಾಜಿಕ ಕಳಕಳಿಯ ವರದಿಗಳ ಪ್ರಸಾರವಾದದ್ದು ಅಷ್ಟಕ್ಕಷ್ಟೇ. ಇವರಿಗೆ ನಡೆದು ಹೋದ ಘಟನೆಗಳ ಫಾಲೋಅಪ್ ಮಾಡುವುದಷ್ಟೇ ವರದಿಗಾರಿಕೆ ಎಂಬಂತಾಗಿದೆ. ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯುವ ಪ್ರಗತಿ ಪರಿಶೀಲನಾ ಸಭೆ ಅಥವಾ ಇನ್ಯಾವೋ ಸಭೆಗಳಲ್ಲಿ ಈ ಟಿವಿ ಮಾಧ್ಯಮದವರ ಅಬ್ಬರ ನೋಡಬೇಕು. ಅಬ್ಬಬ್ಬಾ ಅಧಿಕಾರಿಗಳು ಇವರ ಚಾಕರಿ ಮಾಡುವಷ್ಟರಲ್ಲೇ ಸುಸ್ತಾಗಿ ಬಿಡುತ್ತಾರೆ. ಅಷ್ಟೆಲ್ಲಾ ಬಿಲ್ಡಪ್ ಕೊಡುವ ಇವರ ಒಂದು ಸುದ್ದಿ ಚಾನಲ್ ನಲ್ಲಿ ಪ್ರಸಾರವಾಗುತ್ತಾ ಅಂದ್ರೆ ನೋ ಚಾನ್ಸ್. ಸಭೆಯಲ್ಲಿ ಏನು ನಡೆಯಿತು ಎಂದು ತಿಳಿಯಲು ಮತ್ತದೆ ದಿನ ಪತ್ರಿಕೆಗಳನ್ನೇ ಜನ ನೋಡಬೇಕು.
ಇನ್ನೂ ಯೂಟ್ಯೂಬ್ ಚಾನಲ್, ವೆಬ್ ನ್ಯೂಜ್ ಗಳ ವರದಿಗಾರರನ್ನು ನಕಲಿ ಪತ್ರಕರ್ತರು ಎಂದು ಶಾರಾ ಬರೆಯುವ ಇವರು ಆ ಸೋಕಾಲ್ಡ್ ನಕಲಿ ವರದಿಗಾರರು ಮಾಡುವಷ್ಟು ವಿಸ್ತೃತವಾದ ವರದಿಗಳನ್ನು ಯಾವತ್ತಾದರೂ ಮಾಡಿದ್ದಾರೆಯೇ…?. ಮೈ ತುಂಬಾ ನೆಪ ಹಾಗೂ ಅಹಂ ಹೊತ್ತು ತಿರುಗುವ ಇವರ ಸುದ್ದಿಗಳನ್ನೂ ಕೂಡ ವೆಬ್ ಸೈಟಲ್ಲೇ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಟಿವಿ ಚಾನಲ್ ಗಳಲ್ಲಿ ಪ್ರಸಾರವಾಗದ ಸುದ್ದಿಗಳು ಅವರದೇ ವೆಬ್ ಸೈಟಲ್ಲೇ ಬರುವ ಲಿಂಕ್ ಗಳನ್ನು ಶೇರ್ ಮಾಡಿ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಕಾರ್ಪೊರೇಟ್ ಕಂಪನಿಗಳ ಬ್ರಾಂಡ್ ಎಂಬ ಕೋಣದ ಮೇಲೆ ಕುಳಿತಿರುವ ಇವರು ಅಂಬಾರಿಯ ಮೇಲೆ ಕುಳಿತ ಭ್ರಮೆಯಲ್ಲಿದ್ದಾರೆ. ಒಮ್ಮೆ ಆ ಬ್ರಾಂಡಿಂದ ಹೊರಬಿದ್ದರೆ ಇವರದ್ದು ಎಂಬ ಒಂದೇ ಒಂದು ಐಡೆಂಟಿಟಿ ಇರೋದಿಲ್ಲ.
ಅಷ್ಟಕ್ಕೂ ನೈಜ ಪತ್ರಕರ್ತರು ಎಂದರೆ ಯಾರು ಗೊತ್ತೆ..?. ಸ್ವಂತ ದಿನಪತ್ರಿಕೆ ಮಾಡಿ ಹಗಲಿರುಳು ಶ್ರಮವಹಿಸಿ ತನ್ನದೇ ಆದ ಒಂದು ಪತ್ರಕರ್ತರ ಬಳಗ ಮಾಡಿಕೊಂಡು ತನ್ನದೇ ಬ್ರಾಂಡ್ ಒಂದು ಹುಟ್ಟು ಹಾಕ್ತಾನಲ್ಲ ಆತ ನಿಜವಾದ ನೈಜ ಪತ್ರಕರ್ತ. ಆರ್ಥಿಕವಾಗಿ ಸದೃಢವಾಗಿದ್ದವರು ದಿನಪತ್ರಿಕೆ ಮಾಡುತ್ತಾರೆ. ಆದರೆ ಆರ್ಥಿಕವಾಗಿ ಸಬಲರಲ್ಲದವರು ಯೂಟ್ಯೂಬ್, ವೆಬ್ ಸೈಟಲ್ಲೇ ತಮ್ಮ ಸಾಮಾಜಿಕ ಬದ್ದತೆ ಮೆರೆಯುತ್ತಾರೆ. ಅಂಥಹವರು ಅದ್ಹೇಗೆ ನಕಲಿ ಪತ್ರಕರು ಆಗುತ್ತಾರೆ…?. ಇದೆಲ್ಲ ವಿಚಾರಗಳು ಚರ್ಚೆಯಾಗಲಿ ಎಂಬ ಸದುದ್ದೇಶದಿಂದ ಇಷ್ಟೆಲ್ಲ ಬರೆಯಬೇಕಾಯಿತು. ಸದ್ಯದ ಪರಿಸ್ಥಿತಿಯಲ್ಲಿ ನಕಲಿಗಳು ನೈಜತೆಯ ಮುಖವಾಡ ತೊಟ್ಟು ಅಬ್ಬರಿಸುತ್ತಿದ್ದಾರೆ. ಯಾಕೆಂದರೆ ಅವರಿಗೆ ಯೂಟ್ಯೂಬ್, ವೆಬ್ ಸೈಟಿನ ಅಸಲಿ ನೈಜ ಸುದ್ದಿಗಳು ಕನಸಲ್ಲೂ ಕಾಡುತ್ತವೆ. ಜನ ಮುದ್ರಣ ಮಾಧ್ಯಮ ಬಿಟ್ಟರೆ ಅತಿ ಹೆಚ್ಚು ನಂಬುವುದು ಇವೇ ಯೂಟ್ಯೂಬ್, ವೆಬ್ ಸೈಟನ ಸುದ್ದಿಗಳನ್ನೇ. ಸಾಮಾಜಿಕ ನ್ಯಾಯ ಬೇಡುವ ಸಾರ್ವಜನಿಕರು ಮೊದಲು ಕದ ಬಡಿಯುವುದು ಇದೇ ಯೂಟ್ಯೂಬ್, ವೆಬ್ ಸೈಟಗಳನ್ನ ಎಂಬುದೇ ಸದ್ಯದ ವಾಸ್ತವ ಸತ್ಯ. ಇನ್ನೂ ಬ್ಲ್ಯಾಕ್ ಮೇಲ್, ವೈಟ್ ಮೇಲ್ ಎಂಬುದು ಎಲ್ಲಾ ರಂಗದಲ್ಲೂ ಇದೆ. ಆ ಮನೋಭಾವದವರು ಬಹಳ ದಿನ ವೃತ್ತಿಯಲ್ಲಿ ಉಳಿದ ಇತಿಹಾಸ ಇಲ್ಲ. ಇನ್ನಾದರೂ ಕೆಲ ಟಿವಿ ಮಾಧ್ಯಮದ ವರದಿಗಾರರು ಅಂಬಾರಿಯ ಮೇಲೆ ಕುಳಿತ ಭ್ರಮೆಯಿಂದ ಹೊರಬರಲಿ.
