ರಣಬೇಟೆ ನ್ಯೂಸ್ ಕೊಪ್ಪಳ.ಆ.04: ನಗರದ ತಾಲೂಕು ದಂಡಾಧಿಕಾರಿ ಕಚೇರಿ ಕಟ್ಟಡ ಪ್ರವೇಶ ದ್ವಾರ ಮುಂಭಾಗದ ಮೇಲ್ವಚಾವಣಿ ಮಂಗಳವಾರ ಸಂಜೆ ವೇಳೆ ಕುಸಿದಿದೆ.
ಕಾರ್ಯನಿಮಿತ್ತ ನೂರಾರು ಜನ ದಿನನಿತ್ಯ ಈ ಕಚೇರಿಗೆ ಆಗಮಿಸುತ್ತಾರೆ. ತಹಶೀಲ್ದಾರರ ಕಾರು ಕೂಡ ಇಲ್ಲೇ ನಿಲ್ಲುತ್ತದೆ. ಕಟ್ಟಡ ಪ್ರವೇಶ ದ್ವಾರ ಮುಂಭಾಗದ ಮೇಲ್ವಚಾವಣಿ ಏನಾದರೂ ಕಚೇರಿ ಸಮಯದಲ್ಲಿ ಕುಸಿದಿದ್ದರೆ ಭಾರೀ ಅನಾಹುತ ಆಗುವ ಸಾಧ್ಯತೆ ಇತ್ತು. ಸಂಜೆ ವೇಳೆ ಕುಸಿದ ಕಾರಣ ಅನಾಹುತ ತಪ್ಪಿದಂತಾಗಿದೆ. ಹಲವು ದಶಕಗಳ ಪುರಾತನ ಕಟ್ಟಡ ಇದಾಗಿದ್ದು ಭಾಗಶಃ ಶಿಥಿಲಾವಸ್ಥೆ ತಲುಪಿದೆ. ಈ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು, ನೌಕರರು ನಿತ್ಯ ಜೀವ ಭಯದಲ್ಲಿ ದಿನ ಕಳೆಯುವಂತಾಗಿದೆ. ಸದ್ಯಕ್ಕೆ ಸಂಭವಿಸಬಹುದಾದ ಅವಘಡವೊಂದು ತಪ್ಪಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಶಿಥಿಲಗೊಂಡ ಕಟ್ಟಡದ ದುರಸ್ತಿಗೆ ಮುಂದಾಗಬೇಕು ಅಥವಾ ಕಚೇರಿಯನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂಬುದು ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಗೂ ಸಾರ್ವಜನಿಕರ ಒತ್ತಾಯವಾಗಿದೆ.
