ಕಾಮುಕರ ಖಾಯಂ ಅಡ್ಡೆಯಂತಾದ ವೃಕ್ಷ ಉದ್ಯಾನವನ

ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಹೆಸರಿನ ಉದ್ಯಾನವನದಲ್ಲಿ ಇದೆಂತಾ ಅಹಸ್ಯ..!

ರಣಬೇಟೆ ನ್ಯೂಸ್ ಕೊಪ್ಪಳ.ಆ.14: ತಾಲೂಕಿನ ರುದ್ರಾಪುರ, ಕಾಸನಕಂಡಿ ಸಮೀಪದ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಹೆಸರಿನ ಈ ವೃಕ್ಷ ಉದ್ಯಾನವನದಲ್ಲಿ ಬೆಳಂಬೆಳಿಗ್ಗೆ ನೀವೊಮ್ಮೆ ವಾಯು ವಿಹಾರಕ್ಕೆ ಹೋದರೆ ಹಸುರಿನ ವನಸಿರಿ ಕಾಣುವ ಬದಲು ಪ್ಲಾಸ್ಟಿಕ್, ಕಸ, ಮದ್ಯದ ಬಾಟಲಿ, ಪೌಚುಗಳ ಜತೆಗೆ ಕಾಂಡೋಮ್ ಗಳು ಅಹಸ್ಯವಾಗಿ ನಿಮ್ಮ ಕಣ್ಣಿಗೆ ರಾಚುತ್ತವೆ. ಪ್ರಕೃತಿಯ ಮಡಿಲಲ್ಲಿ ಬೆಳೆದ ಹೂ, ಬಳ್ಳಿ, ಗಿಡ, ಮರಗಳ ನಡುವೆ ಹದಿಹರೆಯದ ಬೆತ್ತಲೆ ದೇಹಗಳು ನುಲಿಯುತ್ತಿರುತ್ತವೆ. ಪ್ರಕೃತಿಯ ಸಂರಕ್ಷಣೆಯ ಪಾಠ ಹೇಳಿಕೊಡಬೇಕಾದ ಮಹಾಮಾತೆ ಸಾಲು ಮರದ ತಿಮ್ಮಕ್ಕ ಹೆಸರಿನ ಈ ಉದ್ಯಾನವನ ಸದ್ಯಕ್ಕೆ ಪುಂಡಪೋಕರಿಗಳ, ಕಾಮುಕರ ಅನೈತಿಕ ಚಟುವಟಿಕೆಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ.


ಒಟ್ಟು 125 ಎಕರೆ ಪ್ರದೇಶದಲ್ಲಿ ಈ ಉದ್ಯಾನವನವನ್ನು 2018 ರಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಹಾಗೂ ಆರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆರ್.ಶಂಕರ್ ಉದ್ಘಾಟಿಸಿದ್ದರು. ಪರಿಸರ ಸಂರಕ್ಷಣೆ ಪ್ರಜ್ಞೆ ಬೆಳೆಸುವ ಸದುದ್ದೇಶದಿಂದ ನಿರ್ಮಾಣವಾದ ಈ ಉದ್ಯಾನವನ ಸದ್ಯಕ್ಕೆ ಪಾಳುಬಿದ್ದು ಪಡ್ಡೆಗಳ ಅನೈತಿಕ ಚಟುವಟಿಕೆಗಳ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ.
ಬೆಳಿಗ್ಗೆ 9 ಗಂಟೆಯ ನಂತರ ಇಲ್ಲಿಗೆ ಲಗ್ಗೆ ಇಡುವ ಯುವಕ, ಯುವತಿಯರಲ್ಲಿ ಅಪ್ರಾಪ್ತರೇ ಹೆಚ್ಚು.
ವೃಕ್ಷ ಉದ್ಯಾನವನ ಪ್ರವೇಶಕ್ಕೆ ಆರಣ್ಯ ಇಲಾಖೆ ಶುಲ್ಕ ನಿಗದಿಪಡಿಸಿದ ಹಣ ಪಾವತಿಸಿ ಒಮ್ಮೆ ಒಳ ಹೊಕ್ಕರೆ ಈ ಜೋಡಿಗಳು ಹೊರಬೀಳುವುದು ಸಂಜೆಯ ನಂತರವೇ. ಅಲ್ಲಿಯವರೆಗೂ ಇವರ ಹುಚ್ಚಾಟಕ್ಕೆ ಕಡಿವಾಣವೇ ಇರುವುದಿಲ್ಲ. ರಜಾ ದಿನಗಳಲ್ಲಿ ಇಲ್ಲಿಗೆ ಬರುವ ಪ್ರವಾಸಿಗರು ಯುವಜೋಡಿಗಳ ಹುಚ್ಚಾಟ ನೋಡಲಾಗದೆ ಕಣ್ಮಚ್ಚಿಕೊಂಡು ಹೋಗಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಉದ್ಯಾನವನ ಅವ್ಯವಸ್ಥೆಗೆ ಹಿಡಿಶಾಪ ಹಾಕುವಂತಾಗಿದೆ.
ಈ ಉದ್ಯಾನವನವನದ ನಿರ್ವಹಣೆಗಾಗಿ ಸರ್ಕಾರದಿಂದ ಅದೆಷ್ಟು ಅನುದಾನ ಬರುತ್ತದೆಯೋ ಗೊತ್ತಿಲ್ಲ. ಆದರೆ ಆ ಅನುದಾನ ಸದ್ಬಳಕೆಯಾದ ಯಾವ ಕುರುಹು ಇಲ್ಲಿ ಕಾಣುವುದಿಲ್ಲ. ಇಲ್ಲಿನ ಸಿಬ್ಬಂದಿ ಪ್ರವೇಶ ಶುಲ್ಕದ ಸಂಗ್ರಹಣೆಗೆ ತೋರುವ ಶ್ರದ್ಧೆಯನ್ನು ಉದ್ಯಾನವನ ಅಭಿವೃದ್ಧಿಗೆ ಹಾಗೂ ಪಡ್ಡೆ ಹುಡುಗರ ನಿಯಂತ್ರಣಕ್ಕೆ ತೋರಿದ್ದರೆ ಸಾಲುಮರದ ತಿಮ್ಮಕ್ಕನ ಹೆಸರಿನ ಈ ಉದ್ಯಾನವನಕ್ಕೆ ಇಂತಹ ದುಃಸ್ಥಿತಿ ಬರುತ್ತಿರಲಿಲ್ಲ.
ಅಂದ ಹಾಗೆ ಕಳೆದ ಮೇ 07 ರಂದು ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯವು ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಮತ್ತು ರೂ. ಐದು ಸಾವಿರ ರೂಗಳ ದಂಡವನ್ನು ವಿಧಿಸಿ ಆದೇಶಿಸಿತ್ತು. ಈ ಪ್ರಕರಣದಲ್ಲಿ ಆರೋಪಿಯು ಬಾಧಿತಳನ್ನು ಪುಸಲಾಯಿಸಿ 2022ರ ಆಗಸ್ಟ್ 13 ರಂದು ಇದೇ ಸಾಲು ಮರದ ತಿಮ್ಮಕ್ಕ ಪಾರ್ಕನಲ್ಲಿ ಪ್ರಥಮ ಬಾರಿ ಸಂಭೋಗ ಮಾಡಿದ್ದ ಎಂಬುದನ್ನು ಪ್ರಸ್ತಾಪಿಸಲಾಗಿತ್ತು. ಇಷ್ಟೆಲ್ಲಾ ಅನೈತಿಕ, ಅಕ್ರಮ ಚಟುವಟಿಕೆಗಳ ತಾಣವಾಗಿ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನ ಕುಖ್ಯಾತಿ ಗಳಿಸಲು ಕಾರಣರಾದ ಸಂಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಜರುಗದಿರುವುದು ವಿಪರ್ಯಾಸ.
ಜತೆಗೆ ಇನ್ನೊಂದು ಆಘಾತಕಾರಿ ಸಂಗತಿ ಏನೆಂದರೆ..?. ಇಲ್ಲಿಗೆ ಬರುವ ಯುವ ಜೋಡಿಗಳನ್ನು ಸದ್ದಿಲ್ಲದೆ ಬೆನ್ನು ಹತ್ತುವ ಪುಂಡರ ಪಡೆಗಳು, ಪೊದೆಗಳಲ್ಲಿ ಮೈಮರೆಯುವ ಜೋಡಿಗಳ ಎಲ್ಲಾ ಅನೈತಿಕ ಚಟುವಟಿಕೆಗಳನ್ನು ಚಿತ್ರೀಕರಣ ಮಾಡಿಕೊಳ್ಳುತ್ತಾರೆ. ನಂತರ ತಮ್ಮ ಕೆಲಸ ಮುಗಿಸಿ ಹೊರಡಲು ಮುಂದಾಗುವ ಜೋಡಿಗಳನ್ನು ತಡೆಯುವ ಈ ಪುಂಡರ ಪಡೆ, ತಾವು ಚಿತ್ರಿಸಿದ ವಿಡಿಯೋಗಳನ್ನು ತೋರಿಸಿ ಹೆದರಿಸಿ ಅವರಿಂದ ಸಿಕ್ಕಷ್ಟು ದೋಚುತ್ತಾರೆ ಎಂಬ ಆರೋಪಗಳೂ ಇವೆ. ಈ ಬಗ್ಗೆ ಸಂತ್ರಸ್ತ ಜೋಡಿಗಳು ದೂರು ನೀಡುವ ಧೈರ್ಯ ಮಾಡುವುದಿಲ್ಲ. ಹಾಗಾಗಿ ಪುಂಡರ ಪಡೆಯೊಂದು ಇದನ್ನೇ ನಿತ್ಯ ಕಸುಬು ಮಾಡಿಕೊಂಡಿದೆ ಎನ್ನಲಾಗುತ್ತಿದೆ.
ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ. ಹಾದಿ ತಪ್ಪುತ್ತಿರುವ ಯುವಕ, ಯುವತಿಯರಿಗೆ, ಅಪ್ರಾಪ್ತರಿಗೆ ಕಾನೂನಿನ ಭಯ ಮೂಡಿಸಬೇಕಿದೆ. ಸಾರ್ವಜನಿಕರ, ಪರಿಸರ ಪ್ರಿಯರ ನೆಮ್ಮದಿಯ ತಾಣವಾಗಬೇಕಿದ್ದ ಉದ್ಯಾನವನದ ಇಂದಿನ ಈ ದುಃಸ್ಥಿತಿಗೆ ಕಾರಣರಾದ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಾಮೂಹಿಕ ಅಮಾನತು ಮಾಡಬೇಕು. ಇಲ್ಲವೇ ಸಾಮೂಹಿಕ ವರ್ಗಾವಣೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ

error: Content is protected !!
Scroll to Top