ಬಡವರ ಪಡಿತರ ಅಕ್ಕಿ ಮಕ್ಕುತ್ತಿರುವ ಕಾಂಗ್ರೆಸ್ ಹುಳುಗಳು ಯಾರು..?
ರಣಬೇಟೆ ನ್ಯೂಸ್ ಕೊಪ್ಪಳ.ಆ.20: ಬಡವರ ಪಾಲಿನ ಅಕ್ಕಿಯನ್ನು ಉಳ್ಳವರು ದೋಚಿಕೊಂಡು ಕೋಟಿ, ಕೋಟಿ ಹಣ ಲೂಟಿ ಮಾಡುತ್ತಿದ್ದಾರೆ. ಸಾಲದೆಂಬಂತೆ ಇಲ್ಲಿ ದುಡಿದ ಹಡಬಿ ಹಣದಿಂದಲೇ ಜನಪ್ರತಿನಿಧಿಗಳ ಸಾಮೀಪ್ಯ ಸಾಧಿಸಿ ಸರ್ಕಾರಿ ಅಧಿಕಾರಿಗಳನ್ನು ತಮ್ಮ ನಿಯಂತ್ರಣ ದಲ್ಲಿಟ್ಟುಕೊಂಡು ಸರ್ವಾಧಿಕಾರಿಗಳಂತೆ ಮರೆಯುತ್ತಿದ್ದಾರೆ.
ಪಡಿತರ ಅಕ್ಕಿ ಅಕ್ರಮ ದಂಧೆಯ ಜಾಲ ಅದೆಷ್ಟರ ಮಟ್ಟಿಗೆ ಬಲವಾಗಿ ಬೇರೂರಿದೆ ಎಂದರೆ, ಆಹಾರ ಇಲಾಖೆಯ ಅಧಿಕಾರಿಗಳು ಇವರ ತಂಟೆಗೆ ಹೋಗಲು ಹೆದರುತ್ತಾರೆ. ತಮಗೆ ಸಹಕಾರ ನೀಡುವ ಆಹಾರ ಇಲಾಖೆಯ ಅಧಿಕಾರಿಗಳಿಗೆ ರಾಜಾತಿಥ್ಯ ನೀಡಿ ಕೈತುಂಬಾ ತಿಂಗಳ ಮಾಮೂಲಿ ನೀಡಿ ಗೌರವಿಸುವ ದಂಧೆಕೋರರು, ಇವರ ಅಡ್ಡ ಕಸುಬಿಗೆ ಸಹಕರಿಸದ ಅಧಿಕಾರಿಗಳನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಾರೆ. ಸ್ಥಳೀಯ ಶಾಸಕ, ಸಚಿವರ ಹೆಸರಿನಲ್ಲಿ ಅಧಿಕಾರಿಗಳನ್ನು ಏಕವಚನದಲ್ಲೇ ನಿಂದಿಸುತ್ತಾರೆ ಎಂದು ಆಹಾರ ಇಲಾಖೆಯ ಕೆಲ ಅಧಿಕಾರಿಗಳೇ ತಮ್ಮ ದುಃಖ ತೋಡಿಕೊಂಡಿದ್ದಾರೆ. ಈ ದಂಧೆಕೋರರು ಜಿಲ್ಲೆಯ ಗಂಗಾವತಿ, ಕಾರಟಗಿ, ಕನಕಗಿರಿ, ಕುಷ್ಟಗಿ, ತಾವರಗೇರಾ ಭಾಗದಲ್ಲಿ ಈ ದಂಧೆಕೋರರು ಒಂದು ವ್ಯವಸ್ಥಿತ ಜಾಲವನ್ನೇ ರಚಿಸಿಕೊಂಡಿದ್ದಾರೆ. ಕೆಲ ನ್ಯಾಯಬೆಲೆ ಅಂಗಡಿಗಳಿಂದಲೇ ಕನಿಷ್ಠ 20% ಅಕ್ಕಿ ನೇರವಾಗಿ ದಂಧೆಕೋರರ ಗೋದಾಮುಗಳಿಗೆ ತಲುಪುತ್ತದೆ. ಇನ್ನುಳಿದಂತೆ ಮಂಡಾಳು ಬಟ್ಟಿ ವ್ಯಾಪಾರಿಗಳ ಸೋಗಿನಲ್ಲಿ ಪಡಿತರದಾರರಿಂದ ಅಕ್ಕಿ ಖರೀದಿಸುವ ಖದೀಮರು ಅವೆಲ್ಲವನ್ನೂ ಒಂದೆಡೆ ಸಂಗ್ರಹಿಸುತ್ತಾರೆ. ನಂತರ ಅಲ್ಲಿಂದ ಪ್ರಮುಖ ಕಿಂಗ್ ಪಿನ್ ದಂಧೆಕೋರರ ಗೋದಾಮಿಗೆ ಅಕ್ಕಿ ರವಾನೆಯಾಗುತ್ತದೆ. ನಂತರ ರಾಜ್ಯದ ವಿವಿಧೆಡೆ ಅಕ್ಕಿ ಸಾಗಾಟವಾಗುತ್ತದೆ.
ಇನ್ನೊಂದು ಅಚ್ಚರಿಯ ವಿಷಯ ಏನೆಂದರೆ ಕಲ್ಯಾಣ ಕರ್ನಾಟಕ ಭಾಗದ ಮಾಜಿ ಸಚಿವರ ತಾಯಿಯ ಹೆಸರಿನಲ್ಲಿ ಚಾಲ್ತಿಯಲ್ಲಿರುವ ಏಜೆನ್ಸಿಯೊಂದು ಇದೇ ಅಕ್ಕಿ ಕಳ್ಳರಿಂದ ಖರೀದಿಸಿ ಮತ್ತೆ ಸರ್ಕಾರಕ್ಕೆ ಮಾರಾಟ ಮಾಡುತ್ತದೆ ಎಂದರೆ ಈ ದಂಧೆಯ ವ್ಯಾಪ್ತಿ ಅದೆಂತಹದ್ದು ಎಂಬುದು ಅರ್ಥವಾಗುತ್ತದೆ. ಹೀಗೆ ಶಾಸಕ, ಸಚಿವ, ಮಾಜಿ, ಹಾಲಿಗಳ ಸಹಕಾರದಿಂದಲೇ ಈ ಪಡಿತರ ಅಕ್ಕಿ ಅಕ್ರಮ ದಂಧೆಕೋರರು ಅಕ್ಕಿಯಲ್ಲಿನ ಹುಳುಗಳಾಗಿದ್ದಾರೆ. ಜಿಲ್ಲೆಯ ಗಂಗಾವತಿ, ಕಾರಟಗಿ, ಕನಕಗಿರಿ, ಕುಷ್ಟಗಿ, ತಾವರಗೇರಾ ಭಾಗದಲ್ಲಿ ಒಂದು ವ್ಯವಸ್ಥಿತ ಜಾಲವನ್ನೇ ರಚಿಸಿಕೊಂಡಿರುವ ಈ ದಂಧೆಕೋರರು ಹೆದರುವುದು ಇವರ ಅಕ್ಕಿ ಸಾಗಾಟದ ವಾಹನಗಳನ್ನು ಮಾಲು ಸಹಿತ ಹಿಡಿದಾಗ ಮಾತ್ರ. ಹಾಗಂತ ಇವರು ಹೆದರುವುದು ಕಾನೂನಿಗೆ ಅಲ್ಲ. ಒಮ್ಮೆ ಇವರ ವಾಹನ ಮಾಲು ಸಮೇತ ಸಿಕ್ಕಿಬಿದ್ದರೆ ಅಡಿಯಿಂದ ಮುಡಿವರೆಗೆ ಲಂಚ ನೀಡಿ ವಾಹನವನ್ನು ಹೊರ ತರಲು ಕನಿಷ್ಠ 12 ಲಕ್ಷ ರೂಪಾಯಿ ಖರ್ಚಾಗುತ್ತದೆ….
ಪಡಿತರ ಲೋಕದ ಪಾಪಿಗಳ ಕಥೆ ಮುಂದುವರೆಯತ್ತದೆ