ಪಡಿತರ ಲೋಕದ ಪಾಪಿಗಳು : 02

ನಮ್ಮ ಹಿಂದೆ ಅಧಿಕಾರಿಗಳ ದಂಡೇ ಇದೆ. ಇವರೇನು ಕಿತ್ತಿಕೊಳ್ಳುತ್ತಾರೆ:ವೀರನಾಗ

ಸಿಂಗಂ ನಂತೆ ಅಬ್ಬರಿಸಿ, ಮಂಗಂ ನಂತಾದ ಸೋಮಶೇಖರ್ ಬಿರಾದರ್*

ರಣಬೇಟೆ ನ್ಯೂಸ್ ಗಂಗಾವತಿ.ಆ.22: ಕಳೆದ ಒಂದು ತಿಂಗಳಿನಿಂದ ನಮ್ಮ ರಣಬೇಟೆ ವೆಬ್ ನ್ಯೂಸ್ ನಿರಂತರವಾಗಿ ಪಡಿತರ ದಂಧೆ ಕುರಿತಂತೆ ಸರಣಿ ವರದಿಗಳನ್ನು ಮಾಡುತ್ತಿದೆ. ವರದಿಯಿಂದ ಬೆಚ್ಚಿದ ದಂಧೆಕೋರರು ಕೆಲ ದಿನಗಳ ಮಟ್ಟಿಗೆ ದಂಧೆ ಸ್ಥಗಿತಗೊಳಿಸಿದ್ದರು. ನಂತರ ಆಹಾರ ಹಾಗೂ ಪೋಲಿಸ್ ಇಲಾಖೆಯ ಆಯಾ ಕಟ್ಟಿನ ಅಧಿಕಾರಿಗಳನ್ನು ಸಂತೃಪ್ತಿಗೊಳಿಸಿ ಮತ್ತೆ ತಮ್ಮ ದಂಧೆ ಆರಂಭಿಸಿದ್ದಾರೆ. ಕಾರಟಗಿ ಮೂಲದ ಪ್ರಮುಖ ದಂಧೆಕೋರನೊಬ್ಬ “ನಮ್ಮ ಹಿಂದೆ ಅಧಿಕಾರಿಗಳ ದಂಡೇ ಇದೆ. ಇವರೇನು ಕಿತ್ತಿಕೊಳ್ಳುತ್ತಾರೆ” ಎಂದು ತನ್ನ ಅಡ್ಡಕಸುಬಿ ವಲಯದಲ್ಲಿ ಕೊಚ್ಚಿಕೊಳ್ಳುತ್ತಿದ್ದಾನೆ ಎನ್ನಲಾಗುತ್ತಿದೆ.
ನಿಜ ಇಂತಹ ಅಡ್ಡಕಸುಬಿಗಳು ಈ ಮಟ್ಟಿಗೆ ಇಷ್ಟು ನಿರ್ಭೀತಿಯಿಂದ ದಂಧೆ ಮಾಡಬೇಕೆಂದರೆ ಪ್ರಮುಖ ಇಲಾಖೆಗಳ ಆಯಾ ಕಟ್ಟಿನ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಬೆಂಗಾವಲು ಇದ್ದೇ ಇರುತ್ತದೆ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಯವರ ಹೆಸರಿನಲ್ಲಿ ಇವರು ಯಾರನ್ನಾದರೂ ಯಾಮಾರಿಸುತ್ತಾರೆ. ಅಥವಾ ಹೆದರಿಸುತಾರೆ ಎಂಬುದು ಕಾರಟಗಿ, ಗಂಗಾವತಿ, ಕನಕಗಿರಿ, ತಾವರಗೇರಾ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಕೇಳಿ ಬರುತ್ತಿರುವ ಮಾತು. ನಮ್ಮ ರಣಬೇಟೆ ವೆಬ್ ನ್ಯೂಸ್ ನ ಸರಣಿ ವರದಿಯಿಂದ ಎಚ್ಚೆತ್ತಂತೆ ನಟಿಸಿ ಮೂರ್ನಾಲ್ಕು ಕಡೆ ದಾಳಿ ಮಾಡಿ ಪ್ರಕರಣ ದಾಖಲಿಸುವ ನಾಟಕ ಮಾಡಿದ ಆಹಾರ ಇಲಾಖೆಯ ಉಪ ನಿರ್ದೇಶಕ ಸೋಮಶೇಖರ್ ಬಿರಾದರ್ ಅವರು ಸಿಂಗಂ ನಂತೆ ಅಬ್ಬರಿಸಿದ್ದರು. ನಂತರ ದಂಧೆಕೋರರು ಪ್ರಭಾವದಿಂದಾಗಿ ಸದ್ಯಕ್ಕೆ ಮಂಗಂ ನಂತಾಗಿದ್ದಾರೆ. ಸದ್ಯಕ್ಕೆ ಪಡಿತರ ಅಕ್ಕಿ ಸಂಗ್ರಹಿಸಲು ಸಣ್ಣಪುಟ್ಟ ದಂಧೆಕೋರರು ಹಿಂದೇಟು ಹಾಕುತ್ತಿದ್ದಾರೆ. ಇವರಿಂದ ಖರೀದಿಸುತ್ತಿದ್ದ ಎರಡನೇ ಹಂತದ ದಂಧೆಕೋರರು ತಮ್ಮ ಗೋದಾಮುಗಳನ್ನು ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದಾರೆ. ಸಾಲದೆಂಬಂತೆ ಪ್ರತಿ ತಿಂಗಳು ಹಂಚುವ ಮಾಮೂಲಿನ ಬಜೆಟ್ ಕೂಡ ಹೆಚ್ಚಳವಾಗಿದೆ. ಹೀಗಾಗಿ ಕೆಲವರು ಸದ್ಯಕ್ಕೆ ಈ ದಂಧೆಯಿಂದ ವಿಮುಖರಾಗುತ್ತಿದ್ದಾರೆ ಎಂಬ ಮಾಹಿತಿಗಳಿವೆ.
ಈ ಪಡಿತರ ಅಕ್ರಮ ದಂಧೆಯನ್ನು ಮತ್ತೊಮ್ಮೆ ವ್ಯವಸ್ಥಿತವಾಗಿ ಆರಂಭಿಸಲು ಕಾರಟಗಿ ಹಾಗೂ ಗಂಗಾವತಿಯ ಪ್ರಮುಖ ಅಕ್ಕಿ ಹುಳುಗಳು ಯೋಜನೆ ರೂಪಿಸುತ್ತಿವೆ. ಕಾರಟಗಿಯ ದಂಧೆಕೋರನೊಬ್ಬ ಸಚಿವ ತಂಗಡಗಿಯವರ ಅತ್ಯಾಪ್ತ ವಲಯದಲ್ಲಿದ್ದು, ಕಾಂಗ್ರೆಸ್ ಪಕ್ಷದ ಪ್ರಮುಖ ಹುದ್ದೆಯಲ್ಲಿದ್ದಾನೆ. ಈ ಪಡಿತರ ಅಕ್ರಮ ದಂಧೆಗೆ ಈತನೇ ಕಿಂಗ್ ಪಿನ್. ಆದರೆ ಈತ “ನನಗೇನೂ ಗೊತ್ತಿಲ್ಲ…ಇತ್ತೀಚೆಗೆ ಆರು ತಿಂಗಳಿಂದ ಈ ದಂಧೆಯ ಬಗ್ಗೆ ಕೇಳುತ್ತಿದ್ದೇನೆ ಎಂದು ಅಮಾಯಕನಂತೆ ಮಾತಾಡುತ್ತಾನೆ. ಕಾರಟಗಿಯಲ್ಲಿ ಇಬ್ಬರು ಈ ದಂಧೆಯನ್ನು ನಿಭಾಯಿಸುತ್ತಾರೆ. ಅವರ ಸಂಪೂರ್ಣ ಜಾತಕವನ್ನು ಹೆಸರು, ದಾಖಲೆಗಳ ಸಮೇತ ಬಹಿರಂಗ ಪಡಿಸಲಿದ್ದೇವೆ.

(ಪಡಿತರ ಲೋಕದ ಪಾಪಿಗಳ ಕಥೆ ಮುಂದುವರೆಯತ್ತದೆ)

error: Content is protected !!
Scroll to Top