12 ಬಾರಿ ರಕ್ತದಾನ ಮಾಡಿ ಪ್ರಾಣ ಕಾಪಾಡಿದ ಪೊಲೀಸ್ ಪೇದೆ ಅಮರೇಶ
ಗಂಗಾವತಿ.ಆ.19: ರಕ್ತದಾನ ಮಹಾದಾನ, ಅನಾರೋಗ್ಯ ಹಾಗೂ ಅಪಘಾತದಂತ ತುರ್ತು ಸಂದರ್ಭದಲ್ಲಿ ಒಂದೊಂದು ಹನಿ ರಕ್ತವೂ ಪ್ರಾಣ ರಕ್ಷಕವಾಗಬಲ್ಲದು. ಆದ್ದರಿಂದ ಪ್ರತಿಯೊಬ್ಬರೂ ತಪ್ಪದೇ ರಕ್ತದಾನ ಮಾಡುವಂತೆ ಪುಂಖಾನು ಪುಂಖವಾಗಿ ಭಾಷಣ ಮಾಡುವವರು ತಾವು ರಕ್ತದಾನ ಮಾಡುವ ಸಂದರ್ಭ ಬಂದರೆ ನೂರಾರು ನೆಪ ಹೇಳಿ ಜಾರಿಕೊಳ್ಳುತ್ತಾರೆ. ಆದರೆ ನಗರದ ಸಂಚಾರಿ ಪೊಲೀಸ್ ಠಾಣೆಯ ಪೇದೆಯೊಬ್ಬರು ರಕ್ತದಾನ ಮಾಡುವ ಯಾವುದೇ ಸಂದರ್ಭಗಳಲ್ಲಿ ನೆಪ ಹೇಳದೆ ಸೇವೆಯೇ ನಮ್ಮ ಪರಮೋಚ್ಚ ಧರ್ಮ ಎಂಬ ನಿಯಮ ಪಾಲಿಸುತ್ತಾ ಆದರ್ಶ ಪ್ರಾಯರಾಗಿದ್ದಾರೆ.
ಗಂಗಾವತಿ ಸಂಚಾರಿ ಪೊಲೀಸ್ ಠಾಣೆಯ ಪೇದೆ ಅಮರೇಶ.ಎಸ್.ತಲ್ಲೂರು ಎಂಬುವವರು ರಕ್ತದಾನಕ್ಕಾಗಿ ಸದಾ ಸಿದ್ದರಾಗಿರುತ್ತಾರೆ. ಇವರು ತುರ್ತು ಸಂದರ್ಭಗಳಲ್ಲಿ ಇಲ್ಲಿಯವರಗೂ 12 ಬಾರಿ ರಕ್ತದಾನ ಮಾಡಿ ರೋಗಿಗಳ ಪ್ರಾಣ ಕಾಪಾಡಿದ್ದಾರೆ. ಆ.19ರ ಮಂಗಳವಾರದಂದು ನಗರದ ಮಲ್ಲನಗೌಡ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರ ಗರ್ಭಕೋಶದ ಶಸ್ತ್ರಚಿಕಿತ್ಸೆಗೆ ಗೋಫಿ ಬ್ಲಡ್ ಬ್ಯಾಂಕಿನಲ್ಲಿ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ರಕ್ತದ ಅಗತ್ಯವಿರುವ ರೋಗಿಗಳ ಸಂಬಂಧಿಕರು ಒಂದು ಫೋನ್ ಮಾಡಿದರೆ ಸಾಕು ಎಷ್ಟೇ ಕೆಲಸದ ಒತ್ತಡದಲ್ಲಿದ್ದರೂ ಕೂಡ ತಕ್ಷಣವೇ ಬಂದು ರಕ್ತದಾನ ಮಾಡುತ್ತಾರೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಶಿಸ್ತಿನ ಸಿಪಾಯಿಯಂತೆ ಕಾರ್ಯನಿರ್ವಸುತ್ತಿರುವ ಇವರು ಸದ್ಯಕ್ಕೆ ಗಂಗಾವತಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಈ ನಿಸ್ವಾರ್ಥ ಸೇವೆ ನಿರಂತರವಾಗಿರಲಿ. ಇವರ ಈ ಸೇವಾ ಮನೋಭಾವ ಅನುಕರಣೀಯ ಎಂಬುದು ಇವರ ಆಪ್ತವಲಯದವರ ಮೆಚ್ಚುಗೆಯ ಮಾತುಗಳು.