ದಲಿತ ಸಮುದಾಯದ ಪವರ್ ಬ್ರಾಂಡ್ ಗಾಳೆಪ್ಪ ಪೂಜಾರ್
ರಣಬೇಟೆ ನ್ಯೂಸ್ ಕೊಪ್ಪಳ.ಆ.29: ಹಸಿವು, ಬಡತನ, ಅವಮಾನ ಸಾಮಾಜಿಕ ಶೋಷಣೆಗಳ ನಡುವೆ ಎದೆಗುಂದದೆ ಅವಿರತ ಹೋರಾಟ ಹಾಗೂ ಸಂಘರ್ಷದಿಂದ ಬದುಕು ಕಟ್ಟಿಕೊಂಡು ತನ್ನ ವ್ಯಕ್ತಿತ್ವವನ್ನು ಸಮಾಜಮುಖಿಯಾಗಿ ಮತ್ತೊಬ್ಬರಿಗೆ ಮಾದರಿಯಾಗುವಂತೆ ಜೀವನ ರೂಪಿಸಿಕೊಳ್ಳುವುದು ಸಣ್ಣ ಮಾತಲ್ಲ. ಹಾಗೆ ತನ್ನನ್ನು ಕಡೆಗಣಿಸಿದವರ ಮಧ್ಯೆ ಪ್ರಭಾವಿ ರಾಜಕೀಯ ದಲಿತ ಮುಖಂಡರಾಗಿ ಬೆಳದು ದೃಢವಾಗಿ ನಿಂತವರು ಗಾಳೆಪ್ಪ ಹನುಮಂತಪ್ಪ ಪೂಜಾರ್.

ಪ್ರಸ್ತುತ ಇವರ ಹೆಸರು ಕೊಪ್ಪಳ ಜಿಲ್ಲೆಯಲ್ಲಿ ದಲಿತ ಸಮುದಾಯದ ಪವರ್ ಬ್ರಾಂಡ್ ಗಾಳೆಪ್ಪ ಪೂಜಾರ್ ಎಂದೇ ಜನಜನಿತ. ಸತತ ಮೂವತ್ತು ವರ್ಷಗಳಿಂದ ದಲಿತ ಸಂಘರ್ಷ ಸಮಿತಿಯಲ್ಲಿ ಸಮಾಜಿಕ ನ್ಯಾಯಗೋಸ್ಕರ ಹಗಲಿರುಳು ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು ಗಾಳೆಪ್ಪ ಹನುಮಂತಪ್ಪ ಪೂಜಾರ್. ಮೂಲತಃ ಕೊಪ್ಪಳ ಜಿಲ್ಲೆಯ ದದೇಗಲ್ ಗ್ರಾಮದಲ್ಲಿ ಹನುಮಂತಪ್ಪ ಪೂಜಾರ್, ಬಸಮ್ಮ ಹನುಮಂತಪ್ಪ ಪೂಜಾರ್ ದಂಪತಿಗಳಿಗೆ ಜನಿಸಿದ ಇವರು ಬಾಲ್ಯದಲ್ಲಿಯೇ ಬಡತನದ ಬೆಗೆಯಲ್ಲಿ ಬೆಂದವರು. ಇಬ್ಬರು ಸಹೋದರರು ದುರ್ಗಪ್ಪ, ದೇವರಾಜ್, ಇಬ್ಬರು ಸಹೋದರಿಯರು ಅನಿತಾ ಮತ್ತು ದೇವಮ್ಮರೊಂದಿಗೆ ತುಂಬು ಕುಟುಂಬದಲ್ಲಿ ಬೆಳೆದ ಇವರು ಪಿಯುಸಿ ವರೆಗೂ ವ್ಯಾಸಂಗ ಮಾಡಿದ್ದಾರೆ. ಅನಾನುಕೂಲತೆ ಹಾಗೂ ಆರ್ಥಿಕ ಮುಗ್ಗಟ್ಟಿನಿಂದಾಗಿ ಶಿಕ್ಷಣ ಮುಂದುವರಿಸಲಾಗಲಿಲ್ಲ. ಪತ್ನಿ ಶಿವಮ್ಮ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇವರಿಗೆ
ನಾಲ್ಕು ಜನ ಮಕ್ಕಳು.

ಅವರಲ್ಲಿ ಹಿರಿಯ ಮಗನಾದ ಪ್ರತಾಪ್ ಪೂಜಾರ್ ಸದ್ಯಕ್ಕೆ ಅಪ್ಪನ ಗರಡಿಯಲ್ಲಿ ಬೆಳೆಯುತ್ತಿದ್ದಾನೆ. ಅಪ್ಪನ ಆಶಯದಂತೆ ವ್ಯಾಪಾರ, ವಹಿವಾಟಿನ ಜತೆಗೆ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾನೆ. ತಾನೂ ಕೂಡ ಅಪ್ಪ, ಅಮ್ಮನಂತೆ ರಾಜಕೀಯ ಬೆಳೆಯಬೇಕು. ಆ ಮೂಲಕ ಜನಸೇವೆಯಲ್ಲಿ ನಿರತನಾಗಬೇಕು ಎಂಬುದು ಪ್ರತಾಪ್ ಪೂಜಾರ್ ನ ಆಶಯವಾಗಿದೆ.
ಗಾಳೆಪ್ಪ ಪೂಜಾರ್ ಅವರು ಬೆಳೆದು ಬಂದ ಹಾದಿ: ಶೈಕ್ಷಣಿಕವಾಗಿ ಸೋತು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳದ ಗಾಳೆಪ್ಪ ಪೂಜಾರ್ ಅವರು ದಲಿತ ಸಂಘರ್ಷ ಸಮಿತಿಯಲ್ಲಿ ಸಮಾಜಿಕ ಹೋರಾಟಗಳಲ್ಲಿ ಧುಮುಕಿದರು. ನಿರಂತರ ಹಲವು ಹೋರಾಟಗಳ ಪ್ರತಿಫಲವಾಗಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಬಸವರಾಜ್ ಹಿಟ್ನಾಳರ ಆಪ್ತ ವಲಯದಲ್ಲಿ ಗುರುತಿಸಿಕೊಂಡರು. ನಂತರದ ದಿನಗಳಲ್ಲಿ ಕೆ.ಬಸವರಾಜ್ ಹಿಟ್ನಾಳ್ ಅವರ ಸರಳತೆ, ಸ್ನೇಹ ಮನೋಭಾವಕ್ಕೆ ಪ್ರಭಾವಿತರಾಗಿ ಅವರನ್ನೇ ತಮ್ಮ ರಾಜಕೀಯ ಗುರುವಾಗಿ ಸ್ವೀಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಸರಳ, ಸಜ್ಜನ ಕೆ.ಬಸವರಾಜ್ ಹಿಟ್ನಾಳ್ ಅವರ ಕೃಪಾಶಿರ್ವಾದದಿಂದ ಇವರ ಕುಟುಂಬದ ಸದಸ್ಯರು ಸಾಮಾನ್ಯ ಮೀಸಲಾತಿಯಲ್ಲಿ ಸತತ ಮೂರು ಬಾರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಪಟ್ಟವನ್ನು ತಮ್ಮದಾಗಿಕೊಂಡಿದ್ದಾರೆ. ಮೊದಲು ಗಾಳೆಪ್ಪ ಅವರ ತಾಯಿ ಬಸಮ್ಮ ಹನುಮಂತಪ್ಪ ಪೂಜಾರ್ ಅವರು ಕೋಳೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಂತರ ಎರಡನೇ ಬಾರಿಗೆ ಅವರ ಪತ್ನಿ ಶಿವಮ್ಮ ಗಂಡ ಗಾಳಪ್ಪ ಪೂಜಾರ್ ಅವರು ಅಧ್ಯಕ್ಷರಾಗಿ ಜನಸೇವೆ ಮೂಲಕ ಜನಮನ ಗೆದ್ದು, ಮೂರನೇ ಅವಧಿಗೂ ಕೂಡ ಪ್ರಸ್ತುತ ಕೋಳೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಪ್ರಜಾಸೇವೆ ಮುಂದುವರಿಸಿದ್ದಾರೆ. ಸದ್ಯಕ್ಕೆ ಪೂಜಾರ್ ಕುಟುಂಬ ಜನಸೇವೆಯ ಮೂಲಕ ಈ ಭಾಗದ ಮುಂಚೂಣಿ ನಾಯಕರಾಗಿ ಜನರ ಮನದಲ್ಲಿ ಅಚ್ಚಳಿಯದೆ ಉಳಿದಿದೆ.

ಕೊಪ್ಪಳ ಜಿಲ್ಲೆಯ ಪೊಲಿಟಿಕಲ್ ಪವರ್ ಹೌಸ್ ಎಂದೇ ಖ್ಯಾತಿ ಪಡೆದ ಹಿಟ್ನಾಳ್ ಕುಟುಂಬದ ಗರಡಿಯಲ್ಲಿ ಬೆಳೆದು, ರಾಜಕೀಯ ತಂತ್ರಗಾರಿಕೆಯಲ್ಲಿ ಪಳಗಿರುವ ಗಾಳೆಪ್ಪ ಅವರೆಂದರೆ ಮಾಜಿ ಶಾಸಕ ಕೆ.ಬಸವರಾಜ್ ಹಿಟ್ನಾಳ್ ಅವರಿಗೆ ಎಲ್ಲಿಲ್ಲ ಪ್ರೀತಿ ಹಾಗೂ ವಿಶ್ವಾಸ. ಗಾಳೆಪ್ಪ ಅವರ ನಿಯತ್ತು, ಪಕ್ಷ ನಿಷ್ಠೆ ಹಾಗೂ ಸಂಘಟನಾ ಶಕ್ತಿಯ ಗುರುತಿಸಿರುವ ಹಿರಿಯರು, ಶಾಸಕ ಕೆ.ರಾಘವೇಂದ್ರ ಇಟ್ನಾಳ್ ಹಾಗೂ ಸಂಸದ ಕೆ.ರಾಜಶೇಖರ್ ಅವರಂತೆ ಗಾಳೆಪ್ಪ ಅವರನ್ನು ಕೂಡ ಬೆನ್ನು ತಟ್ಟಿ ರಾಜಕೀಯ ಬೆಳವಣಿಗೆಗೆ ಪ್ರೋತ್ಸಾಹಿಸಿದ್ದಾರೆ. “ನನ್ನ ರಾಜಕೀಯ ಬದುಕಿನ ಮಹಾಗುರು ನಮ್ಮ ಹಿರಿಯರಾದ ಮಾಜಿ ಶಾಸಕ ಕೆ.ಬಸವರಾಜ್ ಹಿಟ್ನಾಳ್ ಅವರ ಕೃಪಾಶಿರ್ವಾದವೇ ಇಂದಿನ ನನ್ನ ರಾಜಕೀಯ ಏಳ್ಗೆಗೆ ಕಾರಣ” ಎಂಬುದು ಗಾಳೆಪ್ಪನವರ ಭಾವೋದ್ವೇಗದ ನುಡಿ.
ಮಾದಿಗ ಸಮಾಜದ ಒಳ ಮೀಸಲಾತಿ ವಿಚಾರವಾಗಿ ಇವರ ಶ್ರಮ ನಿರಂತರವಾಗಿದೆ. ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಯೋಜನೆಯ ಅಡಿಯಲ್ಲಿ ಕೋಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 1603 (ಒಂದು ಸಾವಿರದ ಆರು ನೂರಾ ಮೂರು) ಶೌಚಾಲಯಗಳನ್ನು ನಿರ್ಮಾಣ ಮಾಡಿರುವ ಹೆಗ್ಗಳಿಕೆಯಿದೆ. ಕೋಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳೂ ಅಭಿವೃದ್ಧಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿವೆ.

ಜಲ ಜೀವನ್ ಮಷೀನ್ ಅನುಷ್ಠಾನದಲ್ಲಿ ಜನವರಿ 26ರ ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ 24/7 ನಿರಂತರ ಕುಡಿಯುವ ನೀರು ಸರಬರಾಜು ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಕೋಳೂರು ಗ್ರಾಮ ಪಂಚಾಯಿತಿಯನ್ನು ಗುರುತಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಸನ್ಮಾನಿಸಿ ಗೌರವ ಪ್ರಶಸ್ತಿಯನ್ನು ಕೂಡ ನೀಡಲಾಗಿದೆ. ಗಾಳೆಪ್ಪ ಪೂಜಾರ್ ಅವರು ಸತತ ನಾಲ್ಕು ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಮತ್ತು ದೌರ್ಜನ್ಯ ನಿಯಂತ್ರಣ ಕಮಿಟಿಯ ಸದಸ್ಯರಾಗಿ, ಟ್ಯಾಕ್ಸಿಕ್ಯಾಬ್ ಸಮಿತಿಯಲ್ಲು ನಿರಂತರ 20 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಪಕ್ಷದ ಎಸ್.ಸಿ ಘಟಕದ ಜಿಲ್ಲಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಪರ ಹಗಲಿರುಳು ದುಡಿಯುತ್ತಿದ್ದಾರೆ.

ಪ್ರಸ್ತುತ ಕೊಪ್ಪಳ ಜಿಲ್ಲೆಯ ಪ್ರಭಾವಿ ದಲಿತ ಮುಖಂಡ ಮುಂಚೂಣಿ ಪಟ್ಟಿಯಲ್ಲಿರುವ ಗಾಳೆಪ್ಪ ಪೂಜಾರ್ ಅವರು ಮುಂಬರುವ ದಿನಗಳಲ್ಲಿ ಹಿರೇಸಿಂಧೋಗಿ ಮತ್ತು ಅಳವಂಡಿ ಜಿಲ್ಲಾ ಪಂಚಾಯತಿ ಕ್ಷೇತ್ರದ ಪ್ರಬಲ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ. ರಾಜಕೀಯ ಗುರುಗಳಾದ ಕೆ.ಬಸವರಾಜ ಹಿಟ್ನಾಳ್, ಶಾಸಕ ರಾಘವೇಂದ್ರ ಹಿಟ್ನಾಳ್, ಸಂಸದ ರಾಜಶೇಖರ ಹಿಟ್ನಾಳ್ ಅವರ ಆಶಿರ್ವಾದದಿಂದ ಭವಿಷ್ಯದಲ್ಲಿ ರಾಜಕೀಯವಾಗಿ ಉತ್ತಮ ಸ್ಥಾನ ಲಭಿಸುವ ವಿಶ್ವಾಸ ಗಾಳೆಪ್ಪ ಪೂಜಾರ್ ಅವರಿಗಿದೆ. ಇವರ ಹೋರಾಟ ಮನೋಭಾವ, ಶೋಷಿತರ ಪರ ಕಾಳಜಿ, ಸಂಘಟನಾ ಶಕ್ತಿ ಹಾಗೂ ಪಕ್ಷ ನಿಷ್ಠೆ ಇವರ ರಾಜಕೀಯ ಏಳ್ಗೆಗೆ ಬುನಾದಿಯಾಗಲಿ. ಸರ್ವ ಸಮುದಾಯಗಳ ಸೇವೆಗೆ ಆ ಭಗವಂತ ಉತ್ತಮ ಅವಕಾಶ ಕಲ್ಪಿಸಲಿ ಎಂಬುದು ರಣಬೇಟೆ ವೆಬ್ ನ್ಯೂಸ್ ನ ಶುಭ ಹಾರೈಕೆ.