ಡಿಡಿ ಸೋಮಶೇಖರ್ ಬಿರಾದಾರ್ ಅವರೇ ಈ ಪ್ರಕರಣದ ಬಿಗ್‍ಬಾಸಾ…!!?
ರಣಬೇಟೆ ನ್ಯೂಸ್
ಗಂಗಾವತಿ.ಆ.29: ಕಳೆದ ಮೂರು ದಿನಗಳ ಹಿಂದೆ ನಗರದ ಕನಕಗಿರಿ ರಸ್ತೆ ಬಳಿಯ ಆಹಾರ ಇಲಾಖೆಯ ಸರಕಾರಿ ಉಗ್ರಾಣದಲ್ಲಿ ವಶಪಡಿಸಿಕೊಂಡ ನೂರಾರು ಕ್ವಿಂಟಾಲ್ ಅಕ್ಕಿ ಪ್ರಕರಣದ ಹಿಂದೆ ಆಹಾರ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಮಾತುಗಳು ಆಹಾರ ಇಲಾಖೆ, ನ್ಯಾಯಬೆಲೆ ಅಂಗಡಿಗಳ ಹಾಗೂ ಪಡಿತರ ಅಕ್ಕಿ ಅಕ್ರಮ ದಂಧೆಕೋರರ ವಲಯದಲ್ಲಿ ಕೇಳಿಬರುತ್ತಿದೆ.

ಗಂಗಾವತಿ ನಗರದ ಆಹಾರ ಇಲಾಖೆಯ ಸರಕಾರಿ ಉಗ್ರಾಣದಲ್ಲಿ ದುಬೈ, ಯುಎಇ ಮೂಲದ ಖಾಸಗಿ ಕಂಪನಿಯ ಲಾಲ್ ಎನ್ನುವ ಬ್ರ್ಯಾಂಡ್‍ವೊಂದರ ಚೀಲದಲ್ಲಿ ಪಡಿತರ ಅಕ್ಕಿಗಳನ್ನು ತುಂಬಿ ಸಾಗಿಸುವಾಗ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಕ್ಕಿ ಕಳ್ಳರು ಸದ್ಯಕ್ಕೆ ಈ ದಂಧೆಯಲ್ಲಿ ಆಹಾರ ಪ್ರಮುಖ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂಬ ಸತ್ಯವನ್ನು ಬಾಯಿಬಿಡುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ ಉಗ್ರಾಣದ ಮ್ಯಾನೇಜರ್ ಸೋಮಶೇಖರ್ ಬುಡ್ಡಣ್ಣವರ್ ಅಮಾನತ್ತಾಗಿದ್ದು, ಉಮಾಶಂಕರ್ ರೈಸ್‍ಮಿಲ್, ಲಾರಿ ಚಾಲಕ ಹಾಗೂ ಮಾಲೀಕನ ಮೇಲೆ ಪ್ರಕರಣ ದಾಖಲಾಗಿದೆ. ಕಳೆದ ಹಲವು ವರ್ಷಗಳಿಂದ ಎಗ್ಗಿಲ್ಲದೇ ಸಾಗುತ್ತಿದ್ದ ಈ ದಂಧೆಯು ಈಗ ನೇರವಾಗಿ ಸರಕಾರಿ ಗೋಡೌನ್‍ಗೆ ಕಾಲಿಟ್ಟಿದೆ. ಕಳೆದ ಆರು ತಿಂಗಳ ಹಿಂದಿನ ಜಿಲ್ಲಾಧಿಕಾರಿಗಳ ಆದೇಶವನ್ನೇ ನೆಪವಾಗಿಟ್ಟುಕೊಂಡ ದಂಧೆಕೋರರು ನೇರವಾಗಿ ಗೋದಾಮಿನಿಂದ ಹಲವಾರು ಬಾರಿ ನೂರಾರು ಕ್ವಿಂಟಾಲ್ ಅಕ್ಕಿಯನ್ನು ಲೂಟಿ ಮಾಡಿದ್ದಾರೆ. ಆದರೆ, ಇತ್ತೀಚಿಗೆ ನಡೆದ ಪ್ರಕರಣದಲ್ಲಿ ಖಾಸಗಿ ಚೀಲಗಳ ಪ್ರವೇಶದಿಂದಾಗಿ ಲೂಟಿ ಕಾರ್ಯ ಬಯಲಾಗಿದೆ. ಈ ದಂಧೆಯ ಹಿಂದಿನ ಪ್ರಮುಖ ರೂವಾರಿ ಯಾರು ಎಂಬುವುದು ಹುಡುಕುತ್ತಾ ಹೊರಟರೇ ಎಲ್ಲರ ಬೆರಳು ಆಹಾರ ಇಲಾಖೆಯ ಉಪ ನಿರ್ದೇಶಕ ಸೋಮಶೇಖರ್ ಬಿರಾದಾರ್ ಕಡೆ ತೋರುತ್ತವೆ.

ಅಷ್ಟಕ್ಕೂ ಈ ಪ್ರಕರಣದಲ್ಲಿ ಕೇಳಿಬಂದ ಆರೋಪಗಳೇನು…?
ಗಂಗಾವತಿಯಲ್ಲಿ ನಡೆದ ಪಡಿತರ ಅಕ್ಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಪ್ರಕರಣದಲ್ಲಿ ಆಹಾರ ಇಲಾಖೆಯ ಉಪ ನಿರ್ದೇಶಕ ಸೋಮಶೇಖರ್ ಬಿರಾದಾರ್ ಅವರೇ ಬಿಗ್‍ಬಾಸ್ ಎನ್ನಲಾಗುತ್ತಿದೆ. ಆದರೆ ಪ್ರಕರಣದಿಂದ ನುಣುಚಿಕೊಳ್ಳಲು ಗಂಗಾವತಿ ಆಹಾರ ಉಗ್ರಾಣದ ಮ್ಯಾನೇಜರ್ ಸೋಮಶೇಖರ್ ಬುಡ್ಡಣ್ಣವರ್ ಅವರನ್ನು ಬಲಿಕೊಡಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಹಿಂದೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಸೋಮಶೇಖರ್ ಬಿರಾದಾರ್ ಅವರು ಕಳೆದ ಆರೇಳು ತಿಂಗಳಿಂದ ಕೊಪ್ಪಳ ಜಿಲ್ಲೆಯ ಆಹಾರ ಇಲಾಖೆಯ ಉಪನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಸ್ಥಾನಕ್ಕೆ ಬರಲು ಸೋಮಶೇಖರ್ ಬಿರಾದಾರ್ ಅವರು ಆಹಾರ ಮತ್ತು ನಾಗರಿಕ ಪೂರೈಕೆ ಗ್ರಾಹಕರ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ 20 ಲಕ್ಷ ರೂಪಾಯಿಗಳ ಲಂಚ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಮಾತುಗಳನ್ನು ಸ್ವತಃ ಬಿರಾದಾರ್ ಅವರೇ ತಮ್ಮ ತಾಲೂಕು ವ್ಯಾಪ್ತಿಯ ಆಹಾರ ಇಲಾಖೆಯ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದಾರೆ. ಹೀಗಾಗಿ ಆ 20 ಲಕ್ಷ ರೂಪಾಯಿಗಳ ವಸೂಲಾತಿಗಾಗಿ ಜಿಲ್ಲೆಯ ಪ್ರತಿ ನ್ಯಾಯಬೆಲೆ ಅಂಗಡಿಯಿಂದ ಐದು ಕ್ವಿಂಟಾಲ್ ಅಕ್ಕಿಯನ್ನು ಆರಂಭದಲ್ಲಿಯೇ ಮುಂಗಡವಾಗಿ ಪಡೆದಿದ್ದಾರೆ ಎಂಬ ಆರೋಪಗಳಿವೆ. ಈ ಕಾರ್ಯಕ್ಕೆ ಆಯಾ ತಾಲೂಕಿನ ಶಿರಸ್ತೆದಾರ್ ಹಾಗೂ ಆಹಾರ ನಿರೀಕ್ಷಕರನ್ನು ಬಳಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹೀಗೆ ಸಂಗ್ರಹಿಸಿದ ಅಕ್ಕಿಯನ್ನು ಕ್ಯಾಶ್ ಮಾಡಿಕೊಳ್ಳುವ ಉದ್ದೇಶದಿಂದ ಗಂಗಾವತಿಯ ಗೋದಾಮು ಮೂಲಕ ಅಕ್ಕಿಯನ್ನು ಖಾಸಗಿಯವರಿಗೆ (ಬಿರಾದಾರ್ ಅವರ ಸಹೋದರ ಸಂಬಂಧಿಗೆ) ಸಾಗಿಸುವ ಯೋಜನೆ ರೂಪಿಸಲಾಗಿತ್ತು. ಯೋಜನೆ ಪ್ರಕಾರ ಬಿರಾದಾರ್ ಅವರು ಸಂಗ್ರಹಿಸಿದ್ದ ಅಂದಾಜು 675 ಕ್ವಿಂಟಾಲ್ ಅಕ್ಕಿಯನ್ನು ಡಿಸಿ ಆದೇಶದ ನೆಪದಲ್ಲಿ ಈಗಾಗಲೇ ರವಾನಿಸಿ ಬಿರಾದಾರ್ ಅವರಿಗೆ ಅಂದಾಜು 20 ಲಕ್ಷಕ್ಕೂ ಅಧಿಕ ಹಣವನ್ನು ಮುಟ್ಟಿಸಲಾಗಿದೆ ಎನ್ನಲಾಗುತ್ತಿದೆ. ಯಾವಾಗ ಈ ಯೋಜನೆ ಯಶಸ್ವಿಯಾಯಿತೋ ಆವಾಗ ಮೈಮರೆತ ಅಧಿಕಾರಿಗಳು ಹಾಗೂ ಪಡಿತರ ದಂಧೆಕೋರರು ನಿರ್ಭೀತಿಯಿಂದ ಖಾಸಗಿ ಕಂಪನಿಯ ಚೀಲಗಳೊಂದಿಗೆ ಗೋದಾಮಿಗೆ ನುಗ್ಗಿ ಅಕ್ಕಿಯನ್ನು ತುಂಬಲು ಹೋಗಿ ರಾದ್ಧಾಂತ ಮಾಡಿಕೊಂಡಿದ್ದಾರೆ. ಇನ್ನು ಜಿಲ್ಲೆಯ ನಾಲ್ಕು ಆಹಾರ ಇಲಾಖೆಯ ಗೋದಾಮಿಗೆ ಇಬ್ಬರೇ ಮ್ಯಾನೇಜರ್‍ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿಗಳ ಕೊರತೆಯ ನೆಪದಲ್ಲಿ ದಂಧೆಕೋರರ ಆಪ್ತರನ್ನೇ ಹೊರಗುತ್ತಿಗೆ ನೌಕರರನ್ನಾಗಿ ನೇಮಿಸಿಕೊಂಡು ಲೂಟಿಕಾರ್ಯ ಮಾಡಲಾಗುತ್ತಿದೆ. ಅಖಂಡ ಗಂಗಾವತಿ ತಾಲೂಕಿನಲ್ಲಿ ಒಟ್ಟು 135 ನ್ಯಾಯಬೆಲೆ ಅಂಗಡಿಗಳಿವೆ ಎನ್ನಲಾಗುತ್ತಿದೆ. ಪ್ರತಿ ನ್ಯಾಯಬೆಲೆ ಅಂಗಡಿಯಿಂದ ಐದು ಕ್ವಿಂಟಾಲ್‍ನಂತೆ ಒಟ್ಟು 675 ಕ್ವಿಂಟಾಲ್ ಅಕ್ಕಿಯನ್ನು ಡಿಡಿ ಬಿರಾದಾರ್ ಅವರ ಹೆಸರಲ್ಲಿ ಸಂಗ್ರಹಿಸಿರುವ ಮಾಹಿತಿಯಿದೆ. ಅದನ್ನೇ ಖಾಸಗಿಯವರಿಗೆ ನೇರವಾಗಿ ಗೋದಾಮಿನಿಂದಲೇ ರವಾನಿಸಿ ಹಣ ಎತ್ತುವಳಿ ಮಾಡಲಾಗಿದೆ ಎಂಬುವುದು ಸದ್ಯಕ್ಕೆ ಈ ಪಡಿತರ ಪ್ರಕರಣದಲ್ಲಿ ಜೋರಾಗಿ ಕೇಳಿಬರುತ್ತಿರುವ ಮಾತುಗಳು.
ಈ ಪ್ರಕರಣದಲ್ಲಿ ಯಾವುದೇ ಅಧಿಕಾರಿಯ ತೇಜೋವಧೆ ಅಥವಾ ನಿರಾಧಾರ ಆರೋಪ ಮಾಡುವ ಉದ್ದೇಶ ನಮ್ಮದಲ್ಲ. ಆದರೆ, ಕಳೆದ ಒಂದೂವರೆ ತಿಂಗಳಿಂದ ಪಡಿತರ ಅಕ್ಕಿ ಅಕ್ರಮ ಸಾಗಣೆ ದಂಧೆಕೋರರ ವಿರುದ್ಧ ಸರಣಿ ವರದಿ ಮಾಡುತ್ತಿರುವ ರಣಬೇಟೆ ವೆಬ್‍ನ್ಯೂಸ್‍ಗೆ ನಂಬಲಾರ್ಹ ಮೂಲಗಳಿಂದ ದೊರೆತ ಮಾಹಿತಿ ಹಾಗೂ ದಾಖಲೆಗಳನ್ನು ಆಧರಿಸಿ ಈ ವರದಿಯನ್ನು ಪ್ರಕಟಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆಯ ಉಪನಿರ್ದೇಶಕ ಸೋಮಶೇಖರ್ ಬಿರಾದಾರ್ ಅವರು ಸ್ಪಷ್ಟನೆ ನೀಡಬೇಕಿದೆ.
ಇನ್ನಾದರೂ ಜಿಲ್ಲಾಧಿಕಾರಿಗಳು ಎಚ್ಚೆತ್ತು ಸ್ವತಃ ರಂಗಕ್ಕೆ ಇಳಿದು ಈ ಪ್ರಕರಣದ ಅಸಲಿ ಸತ್ಯವನ್ನು ಬಯಲಿಗೆಳೆಯಬೇಕಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಹಾರ ಇಲಾಖೆಯ ಅಧಿಕಾರಿಗಳೇ ಉಗ್ರಾಣದಲ್ಲಿ ಹೆಗ್ಗಣದಂತೆ ಮುಕ್ಕುತ್ತಿದ್ದಾರೆ. ಪಡಿತರ ಅಕ್ಕಿ ಅಕ್ರಮ ಸಾಗಣೆ ದಂಧೆಕೋರರ ಮತ್ತು ಆಹಾರ ಇಲಾಖೆಗಳ ಆಯಾಕಟ್ಟಿನ ಅಧಿಕಾರಿಗಳ ಅಕ್ರಮ ಮೈತ್ರಿ ಬಡವರ ಅನ್ನಕ್ಕೆ ಕನ್ನ ಹಾಕುತ್ತಿದೆ. ಈ ಜಾಲವು ನಿಯಂತ್ರಣ ಮೀರಿ ಬೆಳೆಯುತ್ತಿದ್ದು ಇದಕ್ಕೆ ಶಾಶ್ವತ ಕಡಿವಾಣ ಹಾಕುವ ಕಾರ್ಯವನ್ನು ಜಿಲ್ಲಾಧಿಕಾರಿಗಳು ಮಾಡಲಿ ಎಂಬುವುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.