ರಣಬೇಟೆ ನ್ಯೂಸ್
ಕೊಪ್ಪಳ.ಸೆ.4:ಪ್ರತಿಭೆ ಎನ್ನುವುದು ಯಾರೊಬ್ಬರ ಸೊತ್ತಲ್ಲ, ಕಲೆ ಎಲ್ಲರಲ್ಲೂ ಅಡಗಿರುತ್ತದೆ. ಅಪ್ಪಿಕೊಳ್ಳುವುದು ಕೆಲವರನ್ನು ಮಾತ್ರ. ಕಲೆ ಮತ್ತು ಸಂಗೀತ ಎನ್ನುವುದು ದೈವದತ್ತವಾದ ಕೊಡುಗೆ. ಕೆಲವೊಮ್ಮೆ ರಕ್ತಗತವಾಗಿಯೂ ಬಂದಿರುತ್ತದೆ. ಹೀಗೆ ತಾಯಿಯ ಸಂಗೀತ ಆಸಕ್ತಿ ಮತ್ತು ಗಾಯನ ಕಲೆಯಿಂದ ಪ್ರೇರೆಪಿತಗೊಂಡ ಸಿದ್ದಲಿಂಗ ಸ್ವಾಮಿ ಸಂಗೀತ ಕ್ಷೇತ್ರದಲ್ಲಿ ಮೊದಲ ಹೆಜ್ಜೆಯೊಂದಿಗೆ ವಿದ್ಯಾಭ್ಯಾಸದ ಜೊತೆಗೆ ಸಂಗೀತ ಅಭ್ಯಾಸ ಮಾಡುತ್ತಾ ಅವಕಾಶ ಒದಗಿದಾಗಲೆಲ್ಲಾ ಸಂಗೀತ ಕಾರ್ಯಕ್ರಮ ನೀಡಿ ಸೈ ಎನಿಸಿಕೊಂಡಿದ್ದಾನೆ ಈ ಬಾಲಕ.
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಹಿರೇಹಡಗಲಿಯ ಚನ್ನವೀರಯ್ಯ ಮತ್ತು ರಾಜೇಶ್ವರಿ ದಂಪತಿಯ ಸುಪುತ್ರ ಸಿದ್ದಲಿಂಗಸ್ವಾಮಿ ಹಿರೇಮಠ. ಪ್ರಸ್ತುತ ಹೊಳಲು ಗ್ರಾಮದ ಸಾಧನಾ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಾನೆ. ಸಂಗೀತ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ಈತ ಓದಿನ ಜೊತೆಗೆ ಗಾಯನ, ತಬಲಾ ವಾದನ ಮತ್ತು ಹಾರ್ಮೋನಿಯಂ ನುಡಿಸುವುದನ್ನು ಕರಗತ ಮಾಡಿಕೊಂಡಿದ್ದಾನೆ. ತಾಯಿ ರಾಜೇಶ್ವರಿಯವರ ಕಲಾಸಕ್ತಿ ಮಗನಲ್ಲೂ ಅಭಿರುಚಿ ಹೆಚ್ಚಿಸಿ ಇಂದು ಸಂಗೀತ ಕ್ಷೇತ್ರದಲ್ಲಿ ಭರವಸೆಯ ಬಾಲ ಕಲಾವಿದನಾಗಿ ಬೆಳೆಯುತ್ತಿದ್ದಾನೆ.

ಬಹುಮುಖ ಪ್ರತಿಭೆ ಸಿದ್ದಲಿಂಗಸ್ವಾಮಿ: ಗಾಯಕ ಸಿದ್ದಲಿಂಗ ಸ್ವಾಮಿಯು ಸ್ಥಳೀಯ ಧಾರ್ಮಿಕ ಕಾರ್ಯಕ್ರಮ, ಪುರಾಣದ ಪ್ರವಚನ ಮತ್ತು ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಧ್ವನಿಯಾಗಿ ಭಾವಗೀತೆ, ಭಕ್ತಿಗೀತೆ, ಜಾನಪದ ಹಾಡುಗಳು ಮತ್ತು ಭಜನಾ ಹಾಡುಗಳನ್ನು ಹಾಡುವ ಮೂಲಕ ಹಳ್ಳಿಗರ ಹೃದಯ ಗೆದ್ದಿದ್ದಾನೆ. ಗಾಯನ ಅಷ್ಟೇ ಅಲ್ಲದೆ ತಬಲಾ ವಾದನ ಮತ್ತು ಹಾರ್ಮೋನಿಯಂ ನುಡಿಸುವ ಮೂಲಕ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾನೆ. ಕ್ರೀಡೆಯಲ್ಲೂ ನಿರಾಸಕ್ತಿ ತೋರದೆ ಕ್ರಿಕೆಟ್, ಕೆರಮ್ ಮತ್ತು ಸೆಟ್ಲಕಾಕ್ ಗಳಂತಹ ಆಟೋಟಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಿದ್ದಾನೆ. ಸುಮಾರು ಎರಡು ಮೂರು ವರ್ಷಗಳಿಂದ ಸಂಗೀತ ಅಭ್ಯಾಸ ಮಾಡುತಿದ್ದು, ಮುಂಡರಗಿಯ ಬಸವರಾಜ ಅವರ ಮಾರ್ಗದರ್ಶನದಲ್ಲಿ ಸಂಗೀತ ಸಾಧನೆಯನ್ನು ಮುಂದುವರೆಸಿದ್ದಾನೆ. ಕುಟುಂಬದ ಸಹಕಾರದಿಂದ ಜಿಲ್ಲಾ ಮತ್ತು ತಾಲ್ಲೂಕು ಹಾಗೂ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾನೆ. ಪ್ರಚಲಿತ ವಿದ್ಯಮಾನಗಳಿಗೂ ಹೊಂದಿಕೊಂಡು ಆನ್ಲೈನ್ ಸಂಗೀತ ಕಾರ್ಯಕ್ರಮ, ರಸಪ್ರಶ್ನೆ ಕಾರ್ಯಕ್ರಮ, ಪ್ರವಚನಗಳಂತಹ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದಾನೆ.
ಕಲೆಗೆ ಒಲಿದ ಪ್ರಶಂಸೆ: ಬಾಲ ಗಾಯಕನಾದ ಸಿದ್ದಲಿಂಗಸ್ವಾಮಿಯು ಸ್ವಾಮಿಯು ಅನೇಕ ಮಠ ಮಾನ್ಯದ ಸಂಗೀತ ಕಾರ್ಯಕ್ರಮ, ಪ್ರವಚನ ಕಾರ್ಯಕ್ರಮ ಮತ್ತು ಕೊಪ್ಪಳದಲ್ಲಿ ನಡೆದ ಯುಗಾದಿ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಂಸೆಗೆ ಪಾತ್ರರಾಗಿದ್ದಾನೆ. ಇನ್ನೂ ಅನೇಕ ಪ್ರತಿಭಾ ಕಾರಂಜಿ, ಕಲೋತ್ಸವ ಹಾಗೂ ಶಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾನೆ. ಬಾಲ ಕಲಾವಿದನ ಸೇವೆ ಗುರುತಿಸಿ ಅನೇಕ ಪೂಜ್ಯರು ಶುಭ ಹಾರೈಸಿದ್ದು, ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿ ಸಿದ್ದಲಿಂಗಸ್ವಾಮಿ ಹಿರೇಮಠ ಬಾಲ ಗಾಯಕನ ಕಲೆಯನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಕುಟುಂಬದ ಹಿರಿಯರನ್ನು ನೋಡಿ ವೈದಿಕ ಮತ್ತು ಪೂಜಾ ವಿಧಾನಗಳಲ್ಲೂ ಭಾಗಿಯಾಗಿ ಧಾರ್ಮಿಕ ಕಾರ್ಯಕ್ರಮದಲ್ಲೂ ಭಾಗಿಯಾಗುತ್ತಾ ಓದಿನ ಜೊತೆಗೆ ಸಂಗೀತ ಅಭ್ಯಾಸ ಮುಂದುವರೆಸಿದ್ದಾನೆ. ಮುಂದಿನ ದಿನಗಳಲ್ಲಿ ಸಂಗೀತ ಕ್ಷೇತ್ರದಲ್ಲಿ ಉತ್ತಮ ಕಲಾವಿದನಾಗಿ ಹೊರಹೊಮ್ಮಲಿ ಎಂಬುದು ನಮ್ಮ ಆಶಯ.
ಕೋಟ್
ನನಗೆ ಸಂಗೀತ ಆಸಕ್ತಿ ಇದ್ದು ಸಂಗೀತ ಅಭ್ಯಾಸ ಕೂಡ ಮಾಡಿದ್ದೆ ಮುಂದುವರೆಸಲಾಗಲಿಲ್ಲ. ನನ್ನ ಮಗನಿಗೆ ಚಿಕ್ಕಂದಿನಿಂದಲೂ ಕಲಾಸಕ್ತಿ ಮತ್ತು ಕ್ರಿಯಾತ್ಮಕ ಚಿಂತನೆಗಳಿದ್ದವು ಪ್ರೋತ್ಸಾಹಿಸಿದೆವು. ಹಾಗಾಗಿ ಸಂಗೀತದ ಜೊತೆಗೆ ಓದು ಮುಂದುವರೆಸಿದ್ದಾನೆ. ಸಂಗೀತ ಕ್ಷೇತ್ರದ ಹಿರಿಯರ ಆಶಿರ್ವಾದ ಆತನಿಗೆ ಇರಲಿ.
ರಾಜೇಶ್ವರಿ ಹಿರೇಮಠ
ಬಾಲ ಗಾಯಕನ ತಾಯಿ
ಕೋಟ್
ನಾನು 7ನೇ ತರಗತಿಯಲ್ಲಿ ಓದುತ್ತಿದ್ದೇನೆ. ನನ್ನ ತಾಯಿಯಿಂದ ಸಂಗೀತದ ಆಸಕ್ತಿ ನನ್ನಲ್ಲಿ ಮೂಡಿತು. ಸದ್ಯಕ್ಕೆ ಗುರುಗಳ ಮಾರ್ಗದರ್ಶನದಲ್ಲಿ ಸಂಗೀತ ಅಭ್ಯಾಸ ಮುಂದುವರೆಸಿದ್ದೇನೆ. ಬಿಡುವಿನ ಸಮಯದಲ್ಲಿ ಸಂಗೀತ ಕಾರ್ಯಕ್ರಮಕ್ಕೆ ಹೋಗುತ್ತೇನೆ. ಪ್ರತಿದಿನವೂ 2 ಗಂಟೆಗಳ ಕಾಲ ಸಂಗೀತ ಅಭ್ಯಾಸ ಮಾಡುತ್ತೇನೆ.
ಸಿದ್ದಲಿಂಗಸ್ವಾಮಿ ಹಿರೇಮಠ
ಬಾಲ ಗಾಯಕ