ಅಷ್ಟಕ್ಕೂ ಈ ಜುಬೇರ ಯಾರು..? ಆತನಿಗೆ ಸರ್ಕಾರಿ ಗೋದಾಮಿನಲ್ಲೇನು ಕೆಲಸ…?
ರಣಬೇಟೆ ನ್ಯೂಸ್
ಗಂಗಾವತಿ, ಆ.31: ಕಳೆದ ಆರು ದಿನಗಳ ಹಿಂದೆ ನಗರದ ಕನಕಗಿರಿ ರಸ್ತೆ ಬಳಿಯ ಆಹಾರ ಇಲಾಖೆಯ ಸರಕಾರಿ ಉಗ್ರಾಣದಲ್ಲಿ ವಶಪಡಿಸಿಕೊಂಡ ನೂರಾರು ಕ್ವಿಂಟಾಲ್ ಅಕ್ಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ತಲೆದಂಡವಾಗಿದೆ. ಸದರಿ ಪ್ರಕರಣದ ಕುರಿತು ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿ ತನಿಖಾ ತಂಡ ರಚಿಸಿ ಆದೇಶ ಹೊರಡಿಸಲಾಗಿದೆ.

ಸದ್ಯಕ್ಕೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಹಾಗೂ ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಅವರ ನೇತೃತ್ವದಲ್ಲಿ ಕೊಪ್ಪಳ ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಹಾಗೂ ಗಂಗಾವತಿ ನಗರಸಭೆ ಪೌರಾಯುಕ್ತ ವಿರೂಪಾಕ್ಷಿಮೂರ್ತಿ ಅವರ ತಂಡ ತನಿಖೆ ಆರಂಭಿಸಿದೆ. ಸರಕಾರದ ಒಂದು ಆದೇಶದ ಪ್ರಕಾರ ಆಹಾರ ಉಗ್ರಾಣಕ್ಕೆ ಅಧಿಕಾರಿಗಳನ್ನು ಹೊರತುಪಡಿಸಿ ಮೂರನೇ ವ್ಯಕ್ತಿ ಅಥವಾ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಆದರೆ, ಕಳೆದ ಹಲವು ವರ್ಷಗಳಿಂದ ಜುಬೇರ್ ಎಂಬ ವ್ಯಕ್ತಿ ಇಲ್ಲಿ ತಾನೇ ಮುಖ್ಯ ಅಧಿಕಾರಿ ಎಂಬಂತೆ ಕಾರ್ಯನಿರ್ವಹಿಸುತ್ತಿದ್ದಾನೆ. ಈತನಿಲ್ಲದೇ ಗೋದಾಮಿನಲ್ಲಿ ಏನೂ ನಡೆಯುವುದಿಲ್ಲ. ಯಾಕೆಂದರೆ, ಅಧಿಕಾರಿಗಳೂ ಕೂಡ ಈತನಿಲ್ಲದೇ ಮುಂದಡಿ ಇಡುವುದಿಲ್ಲ. ಅಷ್ಟಕ್ಕೂ ಈತ ಗೋದಾಮಿಗೆ ಸರಕಾರದಿಂದ ನೇಮಕಗೊಂಡ ಅಥವಾ ಹೊರಗುತ್ತಿಗೆ ನೌಕರದಾರನೂ ಅಲ್ಲ. ಈತನೊಬ್ಬ ಉಗ್ರಾಣದ ವ್ಯವಸ್ಥಾಪಕರು ನೇಮಿಸಿಕೊಂಡ ಮಾಮೂಲಿ ಸಹಾಯಕ ಮಾತ್ರ. ಆದರೆ, ಈತನಿಲ್ಲದೇ ಉಗ್ರಾಣದಲ್ಲಿ ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ವಿಪರ್ಯಾಸವೆಂದರೆ ಹಗಲಿರುಳು ಗೋದಾಮಿನಲ್ಲಿ ಕಾರ್ಯನಿರ್ವಹಿಸುವ ಈತನಿಗೆ ಕನಿಷ್ಠ ವೇತನವೂ ಕೂಡ ಇಲ್ಲ. ಆದರೆ ಈ ವ್ಯಕ್ತಿ ಕೋಟಿಗಳಲ್ಲಿ ತೂಗುತ್ತಾನೆ. ಆಂಧ್ರದಲ್ಲಿ ತನ್ನ ಬಂಧುಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಬೇನಾಮಿ ಆಸ್ತಿ ಮಾಡಿಕೊಂಡಿದ್ದಾನೆ. ಸಾಲದೆಂಬಂತೆ ಗಂಗಾವತಿ ಹಾಗೂ ಇನ್ನಿತರೆಡೆ ಆಸ್ತಿಯೂ ಕೂಡ ಮಾಡಿದ್ದಾನೆ. ಒಂದು ಮೂಲಗಳ ಪ್ರಕಾರ ಈತನ ಒಂದು ತಿಂಗಳ ಆದಾಯ ಕನಿಷ್ಠವೆಂದರೂ 8 ರಿಂದ 10 ಲಕ್ಷ ರೂಪಾಯಿ ಎನ್ನಲಾಗುತ್ತಿದೆ. ಆಹಾರ ಉಗ್ರಾಣದ ಯಕಶ್ಚತ್ ಒಬ್ಬ ಗೋದಾಮು ಮ್ಯಾನೇಜರ್‍ನ ಸಹಾಯಕನಿಗೆ ಪ್ರತಿ ತಿಂಗಳು ಈ ಮಟ್ಟಿಗಿನ ಆದಾಯ ಇದೆಯೆಂದರೆ ಇನ್ನೂ ಇಲಾಖಾ ಅಧಿಕಾರಿಗಳ ತಿಂಗಳ ಆದಾಯ ಎಷ್ಟಿರಬಹುದು…? ನೀವೇ ಊಹಿಸಿ. ಒಂದು ಮೂಲಗಳ ಪ್ರಕಾರ ಕಳೆದ ಆರು ತಿಂಗಳ ಹಿಂದೆ ಡಿಡಿಯಾಗಿ ಅಧಿಕಾರ ಸ್ವೀಕರಿಸಿದ ಸೋಮಶೇಖರ ಬಿರಾದಾರ್ ಅವರು 70 ಲಕ್ಷಕ್ಕೂ ಅಧಿಕ ಹಣ ಲೂಟಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಮಾತನ್ನು ಬೇರೆ ಯಾರೂ ಹೇಳಿದ್ದಲ್ಲ. ಆಹಾರ ಇಲಾಖೆಯ ಲೆಕ್ಕಪತ್ರ ಸಿಬ್ಬಂದಿ ಖಚಿತವಾಗಿ ಹೇಳಿದ ಮಾಹಿತಿ ಇದು.

ಇನ್ನೂ ವಿಪರ್ಯಾಸವೆಂದರೆ ಆಗಷ್ಟ್ 30ರಂದು ಗಂಗಾವತಿಯ ಕನಕಗಿರಿ ರಸ್ತೆಯ ಆಹಾರ ಉಗ್ರಾಣಕ್ಕೆ ಭೇಟಿ ನೀಡಿದ ತನಿಖಾ ತಂಡದ ಜೊತೆಗೆ ಇದೇ ಜುಬೇರ್ ಮುಂಚೂಣಿಯಾಗಿ ನಿಂತು ಮಾಹಿತಿ ನೀಡುತ್ತಿದ್ದ. ಅಳ್ಳೆತ್ತಿಯ ಮೇಲೆ ಒಂದು ಕೂಲಿಂಗ್ ಗ್ಲಾಸ್ ಸಿಕ್ಕಿಸಿಕೊಂಡು ಕೈಯಲ್ಲೊಂದು ತಾಡಪತ್ರೆ ಚೀಲ ಹಿಡಿದುಕೊಂಡು ಈತ ಅಧಿಕಾರಿಗಳಿಗೆ ವಿವರಣೆ ನೀಡುತ್ತಿದ್ದರೆ ಈತನೇ ಗೋದಾಮು ಮ್ಯಾನೇಜರ್ ಏನೋ ಎಂಬ ಅನುಮಾನ ಮೂಡಿಸುವಂತಿತ್ತು. ಇಷ್ಟೆಲ್ಲಾ ತನಿಖೆ ಮಾಡುತ್ತಿರುವ ತನಿಖಾ ತಂಡ ಇದೇ ಜುಬೇರ್‍ನನ್ನು ಎದುರಿಗೆ ಕೂಡಿಸಿಕೊಂಡು ಒಮ್ಮೆ ಗಟ್ಟಿಯಾಗಿ ವಿಚಾರಿಸಿದರೆ ಆತ ಬಾಯಿ ಬಿಡುವ ಸತ್ಯವನ್ನು ಕೇಳಿ ತನಿಖಾ ತಂಡವೇ ಬೆಚ್ಚಿಬೀಳುವುದರಲ್ಲಿ ಆಶ್ಚರ್ಯವಿಲ್ಲ. ಯಾಕೆಂದರೆ ಆಹಾರ ಇಲಾಖೆಯ ಅಧಿಕಾರಿಗಳಿಂದ ಹಿಡಿದು ಅಕ್ಕಿ ದಂಧೆಕೋರರಿಗೆ ಹಾಗೂ ತಿಂಗಳ ಮಾಮೂಲು ಪಡೆಯುವ ಕೆಲವರಿಗೆ ಈತನೇ ಪ್ರಮುಖ ಮಧ್ಯವರ್ತಿ. ಸದಾ ಹುಕುಂ ಮೇರಿ ಆಕಾ ಎಂದು ಎಲ್ಲಾ ರೀತಿಯ ಸೇವೆಗೆ ಸಿದ್ಧನಿರುವ ಈತನ ನಯ ವಿನಯಕ್ಕೆ ಮರುಳಾಗದವರು ಯಾರು ಇಲ್ಲ. ಇನ್ನಾದರೂ ತನಿಖಾ ತಂಡ ಈತನ ಬಗ್ಗೆ ಗಮನ ಹರಿಸಿ ವಿಚಾರಣೆಗೆ ಒಳಪಡಿಸಿದರೆ ಪಡಿತರ ಲೋಕದ ಪಾಪದ ದಂಧೆಗಳ ಅಸಲಿ ಸತ್ಯ ಬಯಲಾಗಲಿದೆ. ಈ ನಿಟ್ಟಿನಲ್ಲಿ ತನಿಖಾ ತಂಡ ಒಮ್ಮೆ ಪ್ರಯತ್ನಿಸಲಿ ಎಂಬುವುದು ಪತ್ರಿಕೆಯ ಸಲಹೆಯಾಗಿದೆ.