ತಿಂಗಳು ಗತಿಸಿದರು ಒಂಬಡ್ಸ್‌ಪರ್ಸನ್ ಪತ್ರಕ್ಕೆ ಕಿಮ್ಮತ್ತಿಲ್ಲದ ಆಡಳಿತ ವೈಖರಿ!
ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಡಿ:19 ಸಂಚಿಕೆ-2
ಕೊಪ್ಪಳ ಜಿಲ್ಲಾ ಪಂಚಾಯತ್ ಎನ್ನುವುದು ಈಗ ಅಕ್ಷರಶಃ ‘ಅಲಿಬಾಬಾ ಮತ್ತು 40 ಮಂದಿ ಕಳ್ಳರ’ ಅಡ್ಡೆಯಾಗಿ ಬದಲಾಗಿದೆ. ಇಲ್ಲಿ ಹಗರಣಗಳು ನಡೆಯುವುದು ಕಾಮನ್, ಆದರೆ ಆ ಹಗರಣ ಮಾಡಿದವರೇ ಈಗ ‘ನ್ಯಾಯ’ ಹೇಳುವ ಕುರ್ಚಿಯಲ್ಲಿ ಕುಳಿತಿರುವುದು ಈ ಜಿಲ್ಲೆಯ ದೌರ್ಭಾಗ್ಯ!
ಹಳೆಯ ‘ಯೋಜನಾ ನಿರ್ದೇಶಕ’ ಈಗಿನ ‘ಉಪ ಕಾರ್ಯದರ್ಶಿ’: ಟಿ. ಕೃಷ್ಣಮೂರ್ತಿ ಎಂಬ ಮಾಯಾವಿ!
ಈ ಇಡೀ ನರೇಗಾ ಲೂಟಿಯ ಅಸಲಿ ಆಟ ಶುರುವಾಗಿದ್ದೇ ಟಿ. ಕೃಷ್ಣಮೂರ್ತಿ ಅವರು ಜಿಲ್ಲಾ ಯೋಜನಾ ನಿರ್ದೇಶಕರಾಗಿದ್ದ ಕಾಲದಲ್ಲಿ! ಕುಕನೂರು ತಾಲೂಕಿನ 11 ಪಂಚಾಯತಿಗಳಲ್ಲಿ ಕೋಟಿ ಕೋಟಿ ಹಣ ಮಾಯವಾಗುತ್ತಿದ್ದಾಗ, ಆಡಿಟ್ ವರದಿಗಳು ಕೂಗಿ ಹೇಳುತ್ತಿದ್ದಾಗ ಈ ಕೃಷ್ಣಮೂರ್ತಿಯವರು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡಿದ್ದರು. ಅತಿಯಾದ ಭ್ರಷ್ಟಾಚಾರಕ್ಕೆ ಇವರ ಕಾಲದಲ್ಲೇ ಮುಹೂರ್ತ ಫಿಕ್ಸ್ ಆಗಿತ್ತು ಎಂಬುದು ಈಗ ಹಗಲು ದೀವಿಗೆಯಂತೆ ಸ್ಪಷ್ಟವಾಗಿದೆ. ವಿಪರ್ಯಾಸ ನೋಡಿ, ಲೂಟಿಗೆ ರಹದಾರಿ ಮಾಡಿಕೊಟ್ಟ ಅದೇ ಕೃಷ್ಣಮೂರ್ತಿಗಳು ಈಗ ಅದೇ ಜಿಲ್ಲಾ ಪಂಚಾಯತ್‌ನ ಉಪ ಕಾರ್ಯದರ್ಶಿಯಾಗಿ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ! ಅಂದರೆ, ಕಳ್ಳತನದ ತನಿಖೆ ಮಾಡಬೇಕಾದವರೇ ಈಗ ಕಳ್ಳರನ್ನು ರಕ್ಷಿಸುವ ‘ಕೋಟೆ’ಯ ಮುಖ್ಯಸ್ಥರಾಗಿದ್ದಾರೆ. ಇದು ಹಳ್ಳ ಹಿಡಿಯುತ್ತಿರುವ ಆಡಳಿತಕ್ಕೆ ಹಿಡಿದ ಕನ್ನಡಿ.

ಸಿಇಒ ವರ್ಣಿತಾ ನೇಗಿಯವರೇ, ನಿಮ್ಮ ಮೂಗಿನಡಿಯೇ ಇದೆ ‘ಕಳ್ಳರ ಜಾಲ’!
ವರ್ಣಿತಾ ನೇಗಿಯವರೇ, ನೀವು ಬರೆಯುವ ಪತ್ರಗಳು ದಾರಿ ಮಧ್ಯೆಯೇ ಕಳೆದುಹೋಗುತ್ತಿರುವುದಕ್ಕೆ ಈಗ ಕಾರಣ ಸಿಕ್ಕಿದೆ. ನಿಮ್ಮ ಕೆಳಗೆ ಉಪ ಕಾರ್ಯದರ್ಶಿಯಾಗಿ ಕುಳಿತಿರುವ ಕೃಷ್ಣಮೂರ್ತಿಯವರಿಗೆ ತಮ್ಮ ಹಳೆಯ ‘ಪಾಪದ ಕೊಡ’ ತುಂಬುವುದು ಇಷ್ಟವಿಲ್ಲ. ಹಾಗಾಗಿಯೇ ಒಂಬಡ್ಸ್‌ಪರ್ಸನ್ ಕಳುಹಿಸಿದ 11-12-2025 ರ ಎರಡನೇ ಪತ್ರ ಕೂಡ ನಿಮ್ಮ ಟೇಬಲ್ ತಲುಪದಂತೆ ತಡೆಯಲಾಗುತ್ತಿದೆ.
ಶರಣಪ್ಪ, ಆನಂದ್ ಗುರೂರು, ಸುರೇಶ್ ದೇಸಾಯಿ, ಬಸವನಗೌಡ ಮತ್ತು ಮಹೇಶ್ ಗೊರಂಟ್ಲಿ ಎಂಬ ಈ ‘ಪಂಚರತ್ನ’ಗಳಿಗೆ ಕೃಷ್ಣಮೂರ್ತಿಯವರೇ ಅಲಿಖಿತ ಅಭಯ ನೀಡಿದ್ದಾರೆ ಎಂಬ ಅನುಮಾನ ದಟ್ಟವಾಗಿದೆ. ಒಬ್ಬ ಉಪ ಕಾರ್ಯದರ್ಶಿ ಮನಸ್ಸು ಮಾಡಿದರೆ ಫೈಲುಗಳನ್ನು ಮಲಗಿಸಬಹುದು ಅಥವಾ ಸುಡಬಹುದು ಎಂಬುದಕ್ಕೆ ಈ ವಿಳಂಬವೇ ಸಾಕ್ಷಿ!

ಇಒ ಸಂತೋಷ್ ಪಾಟೀಲರ ‘ವೀಕ್ಲಿ ಡ್ರಾಮಾ’ ಮತ್ತು ಕೃಷ್ಣಮೂರ್ತಿಯವರ ‘ರಿಮೋಟ್ ಕಂಟ್ರೋಲ್’!
ಕುಕನೂರು ಇಒ ಸಂತೋಷ್ ಪಾಟೀಲ್ ಅವರು ನಡೆಸುವ ಪ್ರತಿ ವಾರದ ಸಭೆಗಳು ಕೇವಲ ‘ಐವಾಶ್’ ಆಗಿ ಉಳಿದಿವೆ. ಅಲ್ಲಿ ಪೂರಕ ದಾಖಲೆಗಳ ಚರ್ಚೆ ನಡೆಯಲ್ಲ, ಬದಲಾಗಿ ‘ಯಾರನ್ನು ಹೇಗೆ ಉಳಿಸಬೇಕು’ ಎಂಬ ಸ್ಕೆಚ್ ಸಿದ್ಧವಾಗುತ್ತದೆ. ಇವತ್ತಿಗೂ 11 ಪಂಚಾಯತಿಗಳ PDOಗಳು ಸೊಕ್ಕಿನಿಂದ ದಾಖಲೆ ಕೊಡದೆ ಓಡಾಡುತ್ತಿದ್ದಾರೆ ಎಂದರೆ, ಅವರ ಹಿಂದೆ ಕೃಷ್ಣಮೂರ್ತಿಯಂತಹ ‘ದೊಡ್ಡ ತಲೆಗಳು’ ಇವೆ ಎಂದೇ ಅರ್ಥ.
ಈ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು.
ವರ್ಣಿತಾ ನೇಗಿಯವರೇ, ನಿಮ್ಮ ಕೆಳಗಿನ ಅಧಿಕಾರಿಗಳೇ ಭ್ರಷ್ಟಾಚಾರದ ಕೂಪದಲ್ಲಿ ಮಿಂದು ಬಂದವರಾಗಿರುವಾಗ, ನಿಮ್ಮ ‘ಮಂದ ಆಡಳಿತ’ ಈ ಜಿಲ್ಲೆಯನ್ನು ಎಲ್ಲಿಗೆ ಕೊಂಡೊಯ್ಯುತ್ತಿದೆ? ಕೃಷ್ಣಮೂರ್ತಿಯವರ ಹಳೆಯ ಹಗರಣಗಳನ್ನು ಕೆದಕಿ, ಅವರನ್ನು ಮತ್ತು ಅವರ ಪಟಾಲಂ ಅನ್ನು ಮೊದಲು ಕಿತ್ತೆಸೆಯಿರಿ. ಇಲ್ಲವಾದರೆ ಕೊಪ್ಪಳ ಜಿ.ಪಂ. ಎನ್ನುವುದು ಭ್ರಷ್ಟರ ಸುರಕ್ಷಿತ ತಾಣವಾಗಿ ಇತಿಹಾಸದ ಪುಟ ಸೇರುತ್ತದೆ!
ಕಳ್ಳನ ಕೈಗೇ ತಿಜೋರಿ ಕೀಲಿ ಕೊಟ್ಟರೆ ಏನಾಗುತ್ತದೋ, ಈಗ ಕೊಪ್ಪಳ ಜಿಲ್ಲಾ ಪಂಚಾಯತ್‌ನಲ್ಲಿ ಅದೇ ಆಗುತ್ತಿದೆ
07 ತಾಲೂಕಿನ ಇಒಗಳು ಜಿಲ್ಲಾಪಂಚಾಯತ್ ಆಯಾಕಟ್ಟಿನ ಹುದ್ದೆಯಲ್ಲಿರುವ ಅಧಿಕಾರಿಯ ಕೃಪಾಕಟಾಕ್ಷದಿಂದ ಭ್ರಷ್ಟಾಚಾರಕ್ಕೆ ತಯಾರಾಗುತ್ತಿದ್ದು ಅವರ ಮುಖವಾಡವನ್ನು ಮುಂದಿನ ಸಂಚಿಕೆಯಲ್ಲಿ ಸಮಾಜದ ಮುಂದೆ ಕಳಚುತ್ತೇನೆ ಸ್ವಲ್ಪದಿನ ಕಾಯಿರಿ ಕಾಲಾಯ ತಸ್ಮೈ ನಮಃ

