ಮುಖ್ಯಲೆಕ್ಕಾಧಿಕಾರಿಯ ‘ಅಮರತ್ವದ’ ಗುಟ್ಟೇನು? ದಕ್ಷ ಅಧಿಕಾರಿ ವರ್ಣಿತ್ ನೇಗಿ ಮೌನವೇಕೆ?
ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಜ:01
ಅದು ಗವಿಸಿದ್ದೇಶ್ವರನ ಪವಿತ್ರ ಭೂಮಿ. ಆದರೆ ಅಲ್ಲಿನ ಜಿಲ್ಲಾ ಪಂಚಾಯತಿಯ ಕಾಂಪೌಂಡ್ ಒಳಗೆ ಸದ್ದಿಲ್ಲದೆ ಒಂದು ಅದೃಶ್ಯ ಸಾಮ್ರಾಜ್ಯವೊಂದು ತಲೆ ಎತ್ತಿ ನಿಂತಿದೆ. ಆ ಸಾಮ್ರಾಜ್ಯದ ಹೆಸರು ಅಮಿನ್ ಅತ್ತಾರ್! ಒಬ್ಬ ಅಧಿಕಾರಿ ಒಂದೇ ಜಿಲ್ಲೆಯ ಕೇಂದ್ರ ಕಚೇರಿಯಲ್ಲಿ, ಅಷ್ಟೂ ಹಣಕಾಸಿನ ಫೈಲುಗಳ ಮೇಲೆ ಕುಳಿತು ಎಷ್ಟು ದಿನ ರಾಜ್ಯಭಾರ ಮಾಡಬಹುದು? ಸರ್ಕಾರದ ನಿಯಮಗಳ ಪ್ರಕಾರ ಎರಡು-ಮೂರು ವರ್ಷಕ್ಕೆ ಜಾಗ ಖಾಲಿ ಮಾಡಬೇಕಾದ ಜಾಗದಲ್ಲಿ, ಅತ್ತಾರ್ ಸಾಹೇಬರು ಕಳೆದ ಐದು ವರ್ಷಗಳಿಂದ ಅಚಲವಾಗಿ ಕುಳಿತಿದ್ದಾರೆ. ವರ್ಗಾವಣೆ ಗಾಳಿ ಇವರ ಕಿಟಕಿಗೂ ಸೋಕುತ್ತಿಲ್ಲ ಎಂದರೆ ಅದರ ಹಿಂದಿರುವ ಕಾಣದ ಕೈಗಳು ಯಾರದ್ದು?

ಹಿಂದಿನ ಸಿಇಒ ಪೌಜಿಯಾ ತರುಣಂ ಪತ್ರಕ್ಕೆ ಏನಾಯ್ತು?
ಈ ಹಿಂದೆ ಕೊಪ್ಪಳದಲ್ಲಿ ದಕ್ಷವಾಗಿ ಕೆಲಸ ಮಾಡಿದ್ದ ಪೌಜಿಯಾ ತರುಣಂ ಅವರು ಈ ‘ಲೆಕ್ಕದ ಆಟ’ವನ್ನು ಹಿಡಿಯಲು ಪ್ರಯತ್ನಿಸಿದ್ದರು. “ಈ ಮನುಷ್ಯ ಹಲವು ವರ್ಷದಿಂದ ಇಲ್ಲೇ ಬೀಡು ಬಿಟ್ಟಿದ್ದಾನೆ, ಆಡಳಿತಾತ್ಮಕ ಹಿತದೃಷ್ಟಿಯಿಂದ ಇವರನ್ನು ಕೂಡಲೇ ಎತ್ತಂಗಡಿ ಮಾಡಿ” ಎಂದು ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದರು. ಆದರೆ ಮಜಾ ನೋಡಿ… ಆ ಪತ್ರ ಬೆಂಗಳೂರಿನ ವಿಧಾನಸೌಧ ತಲುಪಲೇ ಇಲ್ಲ! ಜಿಲ್ಲಾ ಪಂಚಾಯತಿಯ ಯಾವುದೋ ಮೂಲೆಯ ಕಸದ ಬುಟ್ಟಿಯಲ್ಲಿ ಆ ಪತ್ರ ಹೂತುಹೋಯಿತೋ ಅಥವಾ ಅತ್ತಾರ್ ಅವರ ಪ್ರಭಾವದ ಮುಂದೆ ಅದು ಕಮರಿ ಹೋಯಿತೋ ಗೊತ್ತಿಲ್ಲ. ಪಾರದರ್ಶಕ ಆಡಳಿತ ಬಯಸಿದ್ದ ಒಬ್ಬ ಮಹಿಳಾ ಅಧಿಕಾರಿಯ ಧ್ವನಿಯನ್ನು ಇಲ್ಲಿ ಹತ್ತಿಕ್ಕಲಾಯಿತೇ?

ಕಪಿಮುಷ್ಠಿಯಲ್ಲಿ ಲೆಕ್ಕಾಚಾರ, ಭ್ರಷ್ಟಾಚಾರಕ್ಕೆ ರಹದಾರಿ?
ಒಬ್ಬನೇ ಅಧಿಕಾರಿ ಐದು ವರ್ಷಗಳ ಕಾಲ ಜಿಲ್ಲೆಯ ಅಷ್ಟೂ ಆರ್ಥಿಕ ವ್ಯವಹಾರಗಳ ‘ಮುಖ್ಯ ಲೆಕ್ಕಾಧಿಕಾರಿ’ ಜಿಲ್ಲಾ ಪಂಚಾಯತಿಯಲ್ಲಿ ಮುಂದುವರಿದರೆ ಏನಾಗುತ್ತದೆ? ಇಡೀ ಜಿಲ್ಲೆಯ ಪಂಚಾಯತ್ ರಾಜ್ ವ್ಯವಸ್ಥೆಯ ನಾಡಿಮಿಡಿತ ಇವರ ಕಪಿಮುಷ್ಠಿಯಲ್ಲಿ ಸಿಕ್ಕಿಹಾಕಿಕೊಂಡಿದೆ. ಫೈಲುಗಳು ಓಡಬೇಕೆಂದರೆ ಅತ್ತಾರ್ ಅವರ ಕೃಪಾಕಟಾಕ್ಷ ಇರಲೇಬೇಕು ಎಂಬ ಮಾತು ಜಿಲ್ಲಾ ಪಂಚಾಯತಿಯ ಪಡಸಾಲೆಗಳಲ್ಲಿ ಗುಸುಗುಸು ಎನ್ನಿಸುತ್ತಿದೆ. ಒಂದೇ ಕಚೇರಿಯಲ್ಲಿ ಇಷ್ಟು ದೀರ್ಘಕಾಲ ಬೀಡು ಬಿಟ್ಟಿರುವುದು ಕೇವಲ ಆಡಳಿತಾತ್ಮಕ ಹಿನ್ನಡೆಯಲ್ಲ, ಇದು ಭ್ರಷ್ಟಾಚಾರದ ಕೂಪಕ್ಕೆ ದಾರಿಯೋ ಎಂಬ ಸಂಶಯ ಸಾರ್ವಜನಿಕರಲ್ಲಿ ಮೂಡುತ್ತಿದೆ.

ಪ್ರಾಮಾಣಿಕತೆಯ ಮುಖವಾಡದ ಹಿಂದೆ ವರ್ಣಿತ್ ನೇಗಿ ಅವರ ಮೌನವೇಕೆ?
ಇನ್ನು ಈಗಿನ ಸಿಇಒ ವರ್ಣಿತ್ ನೇಗಿ ಅವರ ವಿಷಯಕ್ಕೆ ಬರೋಣ. ಜಿಲ್ಲೆಯಲ್ಲಿ ನೇಗಿ ಅವರ ಬಗ್ಗೆ ಒಳ್ಳೆಯ ಹೆಸರಿದೆ, ‘ಪ್ರಾಮಾಣಿಕ ಅಧಿಕಾರಿ’ ಎಂಬ ಹಣೆಪಟ್ಟಿಯೂ ಇದೆ. ಆದರೆ ಪ್ರಶ್ನೆ ಇರುವುದು ಇಲ್ಲಿಯೇ—ಒಬ್ಬ ದಕ್ಷ ಅಧಿಕಾರಿ ತನ್ನ ಕಣ್ಣೆದುರೇ ನಿಯಮಗಳು ಗಾಳಿಗೆ ತೂರಿ ಹೋಗುತ್ತಿದ್ದರೆ ಯಾಕೆ ಮೌನಕ್ಕೆ ಶರಣಾಗಿದ್ದಾರೆ? ಅಮಿನ್ ಅತ್ತಾರ್ ಅಂತಹ ಅಧಿಕಾರಿಗಳು ಐದು ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಭದ್ರವಾಗಿ ನೆಲೆಯೂರಿದ್ದರೂ ನೇಗಿ ಅವರು ಯಾಕೆ ‘ತಲೆ ಕೆಡಿಸಿಕೊಳ್ಳುತ್ತಿಲ್ಲ’?
ನೇಗಿ ಅವರಂತಹ ಅಧಿಕಾರಿಗಳು ಮನಸ್ಸು ಮಾಡಿದರೆ ವ್ಯವಸ್ಥೆಯಲ್ಲಿ ಅಡಗಿರುವ ಇಂತಹ ‘ಕಿಂಗ್ ಪಿನ್’ಗಳ ಬೇರುಗಳನ್ನು ಒಂದೇ ಕ್ಷಣದಲ್ಲಿ ಅಲ್ಲಾಡಿಸಬಹುದು. ಸರ್ಕಾರದ ಮಟ್ಟದಲ್ಲಿ ಪ್ರಭಾವ ಬೀರಿ, ಹೂತುಹೋಗಿರುವ ಹಳೆಯ ಕಡತಗಳನ್ನು ಮೇಲೆತ್ತಿ, ಆಡಳಿತದಲ್ಲಿ ಹೊಸ ಚೈತನ್ಯ ತರಬಹುದು. ಆದರೆ ಜಿಲ್ಲೆಯ ಆರ್ಥಿಕ ಪಾರದರ್ಶಕತೆಯ ಕೀಲಿ ಕೈ ಒಬ್ಬನೇ ವ್ಯಕ್ತಿಯ ಬಳಿ ಇರುವುದು ಗೊತ್ತಿದ್ದೂ ವರ್ಣಿತ್ ನೇಗಿ ಅವರು ಕಣ್ಣು ಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ರಣಬೇಟೆಯ ಕೊನೆಯ ಮಾತು…
ಸರ್ಕಾರಿ ನಿಯಮಗಳ ಪ್ರಕಾರ ಗ್ರೂಪ್ ‘ಎ’ ಅಧಿಕಾರಿಗಳು ನಿರ್ದಿಷ್ಟ ಅವಧಿಯ ನಂತರ ವರ್ಗಾವಣೆಯಾಗಲೇಬೇಕು. ಸರ್ಕಾರಿ ನೌಕರಿ ಎನ್ನುವುದು ಜನಸೇವೆಗೆ ಇರುವ ಪವಿತ್ರ ವೇದಿಕೆಯಾಗಬೇಕಿತ್ತೇ ಹೊರತು, ವೈಯಕ್ತಿಕ ಸಾಮ್ರಾಜ್ಯ ಕಟ್ಟುವ ಮೈದಾನವಾಗಬಾರದಿತ್ತು. ಆದರೆ ಇಲ್ಲಿ ನಿಯಮಗಳು ಮಕಾಡೆ ಮಲಗಿವೆ. ಅತ್ತಾರ್ ಸಾಹೇಬರೇ, ಐದು ವರ್ಷಗಳ ಕಾಲ ಒಂದೇ ಕುರ್ಚಿಗೆ ಅಂಟಿಕೊಂಡು ಕುಳಿತು ಜಿಲ್ಲೆಯ ಹಣಕಾಸಿನ ನಾಡಿಮಿಡಿತವನ್ನು ನಿಮ್ಮ ಬೆರಳ ತುದಿಯಲ್ಲಿ ಇಟ್ಟುಕೊಂಡಿದ್ದೀರಿ ಸರಿ, ಆದರೆ ನೆನಪಿಡಿ… ಕಾಲ ಎಲ್ಲವನ್ನೂ ಲೆಕ್ಕ ಇಟ್ಟಿರುತ್ತದೆ. ಜನಸಾಮಾನ್ಯರ ತೆರಿಗೆ ಹಣದ ಪ್ರತಿ ಪೈಸೆಗೂ ಉತ್ತರ ಕೊಡಬೇಕಾದ ದಿನ ಬಂದೇ ಬರುತ್ತದೆ.
ಈಗ ಚೆಂಡು ಸರ್ಕಾರದ ಅಂಗಳದಲ್ಲಿದೆ. ಸಚಿವರು ಮತ್ತು ಕಾರ್ಯದರ್ಶಿಗಳು ಇಂದಿಗೂ ಆ ‘ನಾಪತ್ತೆಯಾದ’ ಪತ್ರವನ್ನು ಹುಡುಕುತ್ತಾರೋ ಅಥವಾ ಅತ್ತಾರ್ ಅವರ ‘ಪ್ರಭಾವ’ಕ್ಕೆ ಮಣಿದು ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುತ್ತಾರೋ ಕಾದು ನೋಡಬೇಕಿದೆ. ಕೊಪ್ಪಳ ಜಿಲ್ಲಾ ಪಂಚಾಯತಿಯ ಈ ಕತ್ತಲ ಕೋಣೆಯಲ್ಲಿ ಇನ್ನೂ ಏನೇನು ಹೂತು ಹೋಗಿದೆಯೋ? ‘ರಣ ಬೇಟೆ’ಯ ತನಿಖೆ ಇಲ್ಲಿಗೆ ನಿಲ್ಲುವುದಿಲ್ಲ. ಅಧಿಕಾರದ ಅಮಲಿನಲ್ಲಿರುವವರ ಮುಖವಾಡ ಕಳಚುವವರೆಗೂ ನಮ್ಮ ಈ ಬೇಟೆ ಮುಂದುವರಿಯುತ್ತದೆ!

